ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್: ತೇಲುವ ನಗರ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಭೂಕಂಪನದಿಂದ ಬೇಸತ್ತಿರುವ ಜಪಾನಿಯರು ಇದೀಗ ತೇಲುವ ನಗರ ಸೃಷ್ಟಿಗೆ ಭಾರಿ ತಯಾರಿ ನಡೆಸಿದ್ದಾರೆ. 2025ರ ವೇಳೆಗೆ ಜಪಾನ್ ದೇಶವು ಭೂಕಂಪನ ಸುದ್ದಿಗಳಿಂದ ಹೊರಬರುವ ಸಾಧ್ಯತೆ ಇದೆ. ಮೇಲಿಂದ ಮೇಲೆ ಸಂಭವಿಸುವ ದುರಂತದಿಂದ ಜಾಣ ಜಪಾನಿ ವಿಜ್ಞಾನಿಗಳು ಸಾಕಷ್ಟು ಕಹಿ ಅನುಭವ ಅನುಭವಿಸಿದ್ದಾರೆ. ಇದೀಗ ಭೂ ಗ್ರಹದಲ್ಲಿ ಶೇ 30ರಷ್ಟು ಮಾತ್ರ ಇರುವ ಭೂ ಪ್ರದೇಶದ ಮೇಲಿನ ಅವಲಂಬನೆಯನ್ನು ಕಡಿದುಕೊಂಡು, ಶೇ 70ರಷ್ಟಿರುವ ಸಮುದ್ರದ ಅಲೆಗಳ ಮೇಲೆ ತೇಲುವ ನಗರ ನಿರ್ಮಾಣಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ವಿನೂತನ ಸಂಶೋಧನೆ ಮಾಡಿ ಪ್ರಪಂಚದ ಗಮನಸೆಳೆಯುವ ಜಪಾನ್ ದೇಶದ ಸಿಮಿಝು ಉದ್ಯಮ ಸಮೂಹವು, `ತೇಲುವ ನಗರ~ ನಿರ್ಮಿಸುವ ಬಗ್ಗೆ ರೂಪುರೇಷೆಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ನೀರಿನಲ್ಲಿ ಬೆಳೆಯುವ ಕಮಲದ ಮಾದರಿಯಲ್ಲಿ ಪೆಸಿಫಿಕ್ ಸಮುದ್ರದ ಅಲೆಗಳ ಮೇಲೆ ಇಂಗಾಲ ಮುಕ್ತ, ಸ್ವಾವಲಂಬಿ ನಗರ ನಿರ್ಮಿಸಲು ಸಿಮಿಝು ಕಾರ್ಯತತ್ಪರವಾಗಿದೆ.

`ಗ್ರೀನ್ ಫ್ಲಾಟ್~ ಶಿರೋನಾಮೆ ಅಡಿಯಲ್ಲಿ ತಲೆ ಎತ್ತಲಿರುವ ತೇಲುವ ನಗರ, ನಿರ್ಮಾಣದ ಪ್ರತಿ ಹಂತವನ್ನು ಪರಿಸರಸ್ನೇಹಿಗೊಳಿಸಲು ಜಪಾನಿ ವಿಜ್ಞಾನಿಗಳು ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ. ಸಮುದ್ರದಾಳದಲ್ಲಿ ದೊರೆಯುವ ಮ್ಯಾಗ್ನೆಸಿಯಂನಿಂದ ತಯಾರಾಗುವ ಅತ್ಯಂತ ಹಗುರವಾದ ಅಲಾಯ್ ಲೋಹ ಬಳಸಿಕೊಂಡು, ಸಮುದ್ರದ ಮೇಲೆ ಒಂದು ಕಿಲೋ ಮೀಟರ್ ವಿಸ್ತಾರದಲ್ಲಿ ಒಂದು ವಸತಿ ಸಮುಚ್ಛಯ  ನಿರ್ಮಿಸುವುದು ಮೊದಲ ಹಂತ. ಈ ಒಂದು ವಿಭಾಗದಲ್ಲಿ 10 ಸಾವಿರದಿಂದ 50 ಜನರು ವಾಸಿಸಲು ಸ್ಥಳಾವಕಾಶವಾಗಲಿದೆ.

ಒಂದು ಘಟಕದ ತೂಕ 7 ಸಾವಿರ ಟನ್. ಜನರಿಗೆ ಆಗತ್ಯವಾಗುವ ಲಘು ಆಹಾರಧಾನ್ಯಗಳನ್ನು ಬೆಳೆದುಕೊಳ್ಳಲು ಒಂದಿಷ್ಟು ಕೃಷಿಭೂಮಿಯನ್ನು ಇದರಲ್ಲೆ ಒದಗಿಸುವ ಯೋಜನೆಯನ್ನು ವಿಜ್ಞಾನಿಗಳು ಹೊಂದಿದ್ದಾರೆ.

ಹಂತಹಂತವಾಗಿ ಒಂದೊಂದೇ ಸಮುಚ್ಚಯವು ಸ್ವತಂತ್ರವಾಗಿ ತೇಲಾಡಿಕೊಂಡಿದ್ದರೂ ಹಲವು ವಸತಿ ವಿಭಾಗಗಳು ಪರಸ್ಪರ ಹೊಂದಿಕೊಂಡಿರುವಂತೆ ನಿರ್ಮಿಸಲಾಗುತ್ತದೆ. ಭೂ ಮೇಲ್ಮೈಗೆ ಸಮತಟ್ಟಕ್ಕೆ ಸರಿಯಾಗಿರುವಂತೆ ಸಮುದ್ರದೊಳಗಿನ ವಸತಿ ವಿಭಾಗದ ಮೇಲ್ಮೈ ಪರಿಸರ ಕೂಡಾ ಇರಲಿದ್ದು, ಇದರ ಮಧ್ಯಭಾಗದಲ್ಲಿ ಅಲಾಯ್ ಲೋಹ, ಕಟ್ಟಿಗೆಗಳಿಂದ ಕೂಡಿದ ಒಂದು ಕಿಲೋ ಮೀಟರ್‌ನಷ್ಟು ಎತ್ತರವಾದ ಅಪಾರ್ಟ್‌ಮೆಂಟ್ ನಿರ್ಮಿಸುವುದು ವಿಜ್ಞಾನಿಗಳ ಯೋಜನೆ. ಹೀಗೆ ಹಲವು ವಸತಿ ವಿಭಾಗಗಳು ಕೂಡಿ ತೇಲುವ ನಗರವಾಗಿ ಗುರುತಿಸಿಕೊಳ್ಳುವುದು. ವರ್ಷಗಳು ಗತಿಸಿದ ಬಳಿಕ ಹಲವು ನಗರ ನಿರ್ಮಾಣವಾಗಿ ಪ್ರತ್ಯೇಕ ದೇಶ ಕೂಡಾ ಸಾಗರದ ಮೇಲೆ ತೇಲಾಡುತ್ತದೆ ಎನ್ನುವುದು ಶಿಮಿಝು ದೂರದೃಷ್ಟಿ.

ತೇಲುವ ನಗರದಲ್ಲಿ ಹುಲ್ಲುಹಾಸು, ಮರಗಳಿರುವುದರಿಂದ ಇದು ಸಂಪೂರ್ಣ ಹಸಿರು ಹೊದಿಕೆಯ ನಗರವಾಗುವುದು. ಇದರಿಂದ ಇಂಗಾಲವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ತೇಲುವ ನಗರದಲ್ಲಿ ತ್ಯಾಜ್ಯಕ್ಕೆ ಅವಕಾಶವೆ ಇಲ್ಲ. ತ್ಯಾಜ್ಯ ನಿರ್ವಹಣೆಯನ್ನು ಸಂಪೂರ್ಣವಾಗಿ ಅಳವಡಿಸಿ, ಅದರಿಂದ ವಿದ್ಯುತ್‌ಶಕ್ತಿ ಉತ್ಪಾದಿಸಲಾಗುತ್ತದೆ. ಸುನಾಮಿಯಂತಹ ಭಾರಿ ಅಲೆಗಳು ಹಾಗೂ ಹವಾಮಾನ ವೈಪರೀತ್ಯದಿಂದ ವಸತಿ ವಿಭಾಗಗಳನ್ನು ರಕ್ಷಿಸಲು ಅಗತ್ಯ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ.

ಸೌರಶಕ್ತಿ ಪಡೆಯುವುದು ಒಂದು ಕಡೆಯಾದರೆ, ಸಿಡಿಲಿನಿಂದ ರಕ್ಷಣೆ ಪಡೆಯಲು ಪ್ರತಿಯೊಂದು ಕಟ್ಟಡ ಮೇಲ್ಭಾಗದಲ್ಲಿ ಸೆಮಿಕಂಡಕ್ಟರ್ ಒಳಗೊಂಡ ಪ್ರತಿಬಂಧಕವನ್ನು ಅಳವಡಿಸುವ ಬಗ್ಗೆ ವಿಜ್ಞಾನಿಗಳು ಚಿಂತನೆ ಮಾಡಿದ್ದಾರೆ.  2025ರ ವೇಳೆಗೆ ಒಂದು ಕಿಲೋ ಮೀಟರ್ ವಿಸ್ತಾರದ ಒಂದು ವಿಭಾಗ ಮಾತ್ರ ನಿರ್ಮಿಸುವ ಗುರಿಯೊಂದಿಗೆ ಶಿಮಿಝು ಕೆಲಸ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT