ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್ ಹಬ್ಬದಲ್ಲಿ ಕಿಮೋನ್ ಸುಂದರಿ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಲಲನೆಯರ ಕಂಗಳಲ್ಲಿ  ತಮ್ಮ ಸಾಂಪ್ರದಾಯಿಕ ಉಡುಗೆ ಉಟ್ಟ ಸಂಭ್ರಮ. ಸಂಸ್ಕೃತಿಯನ್ನೇ ಪ್ರತಿಬಿಂಬಿಸುತ್ತಾ ಫೋಟೊಗೆ ಪೋಸು ಕೊಡುವಾಗ `ಯಾರಿಗೇನು ಕಮ್ಮಿಯಿಲ್ಲ~ ಎಂಬ ಬಿಗುಮಾನ. ಬಂದವರನ್ನು `ಕೊನ್ನಿಚೀವಾ~ ಎಂದು  ಗ್ರೀಟ್ ಮಾಡುತ್ತಾ, ನಗು ಮೊಗದಿಂದಲೇ ಆತಿಥ್ಯ ಮಾಡುತ್ತಿದ್ದರು.

`ನಮ್ಮುಡುಗೆ ನಮಗೇ ಇಷ್ಟ~ ಎಂದು ಲಲನೆಯರು ಬೀಗುತ್ತಿದ್ದರು. ಪುಟ್ಟ ಬಾಲೆಯರಂತೆ ಕಾಣುತ್ತಿದ್ದ ಜಪಾನಿ ಬೊಂಬೆಗಳಂತೆ ಲುಟುಪುಟನೆ ಹೆಜ್ಜೆ ಇಡುತ್ತಿದ್ದರು. ಮೆಲುದನಿಯಲ್ಲಿ ಮಾತನಾಡುತ್ತಲೇ ಪ್ರೀತಿಯಿಂದ ಕೈಗೆ ನೀಡುತ್ತಿದ್ದ  `ಚಾದೋ~ (ಜಪಾನಿ ಟೀ) ಕೂಡ ಅವರ ನಗುವಿನಷ್ಟೇ ಸವಿಯಾಗಿತ್ತು.

`ಜಪಾನ್ ಹಬ್ಬ~ದ ಪೂರ್ವತಯಾರಿಗಾಗಿ ಆಯೋಜಿಸಿದ್ದ  ಕಾರ್ಯಕ್ರಮ ಅದು. ಎಲ್ಲ ಬಾಲೆಯರು ಕಿಮೋನ್ ಧರಿಸಿ ಸಂಭ್ರಮಿಸುತ್ತಿದ್ದರು. 

ಫೆ.19 ರಂದು ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ `ಜಪಾನಿ ಹಬ್ಬ~ ನಡೆಯಲಿದೆ. ಇದನ್ನು ಭಾರತ ಮತ್ತು ಜಪಾನ್ ನಡುವಿನ 60 ವರ್ಷಗಳ ಸಂಬಂಧದ ಕುರುಹಾಗಿ ಆಯೋಜಿಸಲಾಗಿದೆ. ಇದು ಇಂಡೋ-ಜಪಾನೀಸ್ ಸಾಂಸ್ಕೃತಿಕ ಸಂಗಮದ ಪ್ರತೀಕವಾಗಿದೆ.

ಬೆಂಗಳೂರಿನಲ್ಲಿರುವ ಜಪಾನೀಸ್ ಕೌನ್ಸಲೇಟ್ ಕಚೇರಿ, ನವದೆಹಲಿಯ ಜಪಾನ್ ಫೌಂಡೇಶನ್, ಬೆಂಗಳೂರು ವಿಶ್ವವಿದ್ಯಾಲಯ, ನಿಹೊಂಗೊ ಕ್ಯೂಶಿ-ಕೈ ಮೊದಲಾದ ಸಂಸ್ಥೆಗಳ ಆಶ್ರಯದಲ್ಲಿ ಈ ಹಬ್ಬವನ್ನು ಆಯೋಜಿಸಲಾಗಿದೆ.

ಅಂದು ಭಾರತೀಯರೂ ಸೇರಿದಂತೆ ಸುಮಾರು 1500 ಜನರು ಭಾಗವಹಿಸಲಿದ್ದು, ಎರಡೂ ಸಂಸ್ಕೃತಿಗಳ ಪರಸ್ಪರ ಪರಿಚಯ, ವಿನಿಮಯ ಎಲ್ಲವೂ ಇಲ್ಲಿರುತ್ತವೆ ಎಂದು ವಿವರಿಸುತ್ತಾರೆ ಕಾರ್ಯಕ್ರಮ ಆಯೋಜಿಸಿರುವ ಕನಕೊ ತಕೆಮುರ.

ಕಿ ಎಂದರೆ ಧರಿಸು. ಮೊನೊ ಎಂದರೆ ವಸ್ತು (ಥಿಂಗ್). ಅಂದರೆ ವಸ್ತುವನ್ನು ಧರಿಸು ಎಂದರ್ಥ. ಇದು ಸಾಂಪ್ರದಾಯಿಕ ಉಡುಗೆಯಾಗಿದ್ದು, ಹೆಣ್ಣುಮಕ್ಕಳು ಎಲ್ಲ ಸಮಾರಂಭಗಳಲ್ಲಿ ಇದನ್ನು ಧರಿಸುತ್ತಾರೆ. ಜೊತೆಗೆ `ಜೊರೆ~ ಅಥವಾ `ಗೆಟ~ ಎಂಬ ಹೆಸರಿನ ಪಾದರಕ್ಷೆಗಳನ್ನು ಧರಿಸುವುದು ಕಡ್ಡಾಯ.

ಈ ಉಡುಪನ್ನು ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಧರಿಸಲಾಗುತ್ತದೆ. ಫ್ರೀ ಸೈಜ್ ಹೊಂದಿದ್ದು, ಅದರಲ್ಲಿ `ಯುಕಾತ~, `ಕಿಮೊನಿ~ ಎಂಬ ವಿವಿಧ ಬಗೆಯ ದಿರಿಸುಗಳುಂಟು.

ಚಾದೋ ಸೆರಮನಿಗೆ 400 ವರ್ಷ ಇತಿಹಾಸವಿದ್ದು, ಮನೆಗೆ ಬರುವ ಅತಿಥಿಗಳಿಗೆ ಗೌರವಾರ್ಥವಾಗಿ ವಿಶೇಷವಾಗಿ ತಯಾರಿಸಲಾಗುತ್ತದೆ.

ಜಪಾನಿ ಹಬ್ಬದ ದಿನ ಜಪಾನಿ ಚಿತ್ರಕಲೆಯ ಪ್ರದರ್ಶನವಿದ್ದು, ಸುಮಿಯ, ಆರಿಗಾಮಿ, ಕಿರಿಗಾಮಿ, ನಿಗಾಓ ಎ (ಮುಖ ನೋಡಿ ಚಿತ್ರ ಬರೆಯುವುದು) ಮೊದಲಾದ ಕರಕುಶಲ ಕಲೆಗಳ ಪ್ರದರ್ಶನವೂ ಇರುತ್ತದೆ.

ಎರಡು ದೇಶಗಳ ಬಾಂಧವ್ಯ ವೃದ್ಧಿಗೆ ಸೇತುವೆಯಾಗುವ ಈ ಹಬ್ಬದ ಪರಿಕಲ್ಪನೆ ತನ್ನದೇ ವಿಶೇಷತೆಯನ್ನು ಪಡೆದಿದ್ದು, 2005ರಿಂದ ಇದನ್ನು ಆಚರಿಸಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT