ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲಿ ಹಿಮಪಾತ: ಪರಿಹಾರ ಕಾರ್ಯಗಳಿಗೆ ಅಡ್ಡಿ

Last Updated 26 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಟೋಕಿಯೊ (ಡಿಪಿಎ):  ಭೂಕಂಪ ಮತ್ತು ಸುನಾಮಿಯಿಂದ ತತ್ತರಿಸಿರುವ ಜಪಾನ್ ಈಶಾನ್ಯ ಭಾಗದಲ್ಲಿ ಇದೀಗ ಹಿಮಪಾತವಾಗುತ್ತಿರುವುದರಿಂದ ಪರಿಹಾರ ಮತ್ತು ಪುನರ್ ನಿರ್ಮಾಣ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ. ಮತ್ತೊಂದೆಡೆ ಫುಕುಶಿಮಾ ಅಣು ಸ್ಥಾವರ ಸಮೀಪದ ಸಾಗರದ ನೀರಲ್ಲಿ 1,250 ಪಟ್ಟು ಅಧಿಕ ಪ್ರಮಾಣದ ವಿಕಿರಣ ಅಂಶ ಇರುವುದು ಗೊತ್ತಾಗಿದೆ.

ಭೂಕಂಪ, ಸುನಾಮಿಯಿಂದ 3.80 ಲಕ್ಷ ಮಂದಿ ಮನೆ, ಮಠ ಕಳೆದುಕೊಂಡಿದ್ದಾರೆ. 2.40 ಲಕ್ಷ ಮಂದಿ ಈಗಲೂ 1,900 ನಿರಾಶ್ರಿತ ಶಿಬಿರಗಳಲ್ಲೇ ಉಳಿದು ಕೊಂಡಿದ್ದಾರೆ. ಶಾಲೆಗಳು, ನಗರಪಾಲಿಕೆ ಕಟ್ಟಡಗಳಲ್ಲಿ ಅವರು ತಂಗಿದ್ದಾರೆ. ಯಮಗಲಾ ಪ್ರಾಂತ್ಯದ ಕ್ರೀಡಾ ಕೇಂದ್ರವೊಂದರ ತುಂಬ ನಿರಾಶ್ರಿತರೇ ತುಂಬಿಕೊಂಡಿದ್ದಾರೆ. ಹಲವೆಡೆ ಅವರಿಗೆ ನೀರು, ಆಹಾರ, ವಿದ್ಯುತ್‌ನ ಕೊರತೆ ಕಾಡತೊಡಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ತೀವ್ರ ಚಳಿ, ಹಿಮಪಾತ ಪರಿಹಾರ ಕಾರ್ಯಗಳು, ಸ್ವಚ್ಛಗೊಳಿಸುವ ಕಾರ್ಯಗಳಿಗೆ ಅಡ್ಡಿ ಉಂಟುಮಾಡಿದೆ. ‘ನಮಗೆ ಏನು ಕೆಲಸವನ್ನೂ ಮಾಡಲಾರದಷ್ಟು ಚಳಿ ಆವರಿಸಿಕೊಂಡಿದೆ. ಹಿಮಪಾತವೂ ಆಗುತ್ತಿದೆ’ ಎಂದು ನತದೃಷ್ಟರೊಬ್ಬರು ಮಾಧ್ಯಮಕ್ಕೆ ತಿಳಿಸಿದರು.ಈ ಪ್ರಕೃತಿ ವಿಕೋಪದಲ್ಲಿ ಸತ್ತವರ ಸಂಖ್ಯೆ 10,102ಕ್ಕೆ ಏರಿದ್ದು, 17,443 ಮಂದಿ ನಾಪತ್ತೆಯಾಗಿ ದ್ದಾರೆ.

ಸಾಗರದಲ್ಲಿ ವಿಕಿರಣ:  ಫುಕುಶಿಮಾ ಅಣು ವಿದ್ಯುತ್ ಸ್ಥಾವರ ಸಮೀಪದ ಸಾಗರದ ನೀರಲ್ಲಿ ನಿಗದಿತ ಪ್ರಮಾಣಕ್ಕಿಂತ 1,250 ಪಟ್ಟು ಅಧಿಕ ವಿಕಿರಣ ಅಂಶ ಇರುವುದನ್ನು ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪೆನಿ ಕಂಡುಕೊಂಡಿದೆ. ನೀರಲ್ಲಿ ಕಾಣಿಸಿದ ಅತ್ಯಧಿಕ ಪ್ರಮಾಣದ ವಿಕಿರಣ ಅಂಶ ಇದು ನಿಜ. ಆದರೆ ಸಾಗರ ಜೀವಿಗಳಿಗೆ ಇದರಿಂದ ಅಂತಹ ದೊಡ್ಡ ಅಪಾಯ ಎದುರಾಗದು, ಅಯೋಡಿನ್‌ನಲ್ಲಿ ಎಂಟು ದಿನಗಳ ಕಾಲ ವಿಕಿರಣ ಅಂಶ ಇರುತ್ತದೆ.

ಮೀನುಗಳನ್ನು ತಿನ್ನುವ ಸಮಯಕ್ಕೆ ಅವುಗಳ ದೇಹದಲ್ಲಿನ ವಿಕಿರಣ ಅಂಶ ತಗ್ಗಿರುವ ಸಾಧ್ಯತೆ ಇರುತ್ತದೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.ಜಪಾನ್‌ನ ಎಂಜಿನಿಯರ್‌ಗಳು ಯಾವಾಗ ವಿಕಿರಣ ಸೋರಿಕೆಯನ್ನು ತಡೆಯುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಸೋರಿಕೆಯ ಮೂಲದ  ಬಗ್ಗೆ ಸುಳಿವುಗಳು ಸಿಕ್ಕಿದೆ. ಮೊದಲಾಗಿ ರಿಯಾಕ್ಟರ್‌ಗಳನ್ನು ತಂಪುಗೊಳಿಸಿದ ಬಳಿಕವಷ್ಟೇ ಸೋರಿಕೆಯ ಮೂಲವನ್ನು ತಿಳಿಯಬಹುದಷ್ಟೇ ಎಂದು ಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿಯ (ಐಎಇಎ) ತಾಂತ್ರಿಕ ಸಲಹೆಗಾರ ಗ್ರಹಾಂ ಆಂಡ್ರ್ಯೂ ವಿಯೆನ್ನಾದಲ್ಲಿ ತಿಳಿಸಿದ್ದಾರೆ.

ಜಪಾನ್ ಆಹಾರ ಆಮದಿಗೆ ನಿಷೇಧ:
ವಿಕಿರಣ ತಗುಲಿಸಿಕೊಂಡಿರುವ ಸಾಧ್ಯತೆ ಇರುವ ಜಪಾನ್‌ನ ಆಹಾರಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಇದೀಗ ಚೀನಾವೂ ನಿಷೇಧ ವಿಧಿಸಿದೆ. ಹಾಲಿನ ಉತ್ಪನ್ನಗಳು, ಸಾಗರ ಉತ್ಪನ್ನಗಳ ಸಹಿತ ಹಲವು ಬಗೆಯ ಆಹಾರ ಪದಾರ್ಥಗಳ ಆಮದಿಗೆ ನಿಷೇಧ ವಿಧಿಸಲಾಗಿದೆ. ಈಗಾಗಲೇ ಅಮೆರಿಕ, ಸಿಂಗಪುರ, ಆಸ್ಟ್ರೇಲಿಯಾ, ತೈವಾನ್, ಹಾಂಕಾಂಗ್, ಮಕಾವ್ ಮೊದಲಾದ ದೇಶಗಳು ಜಪಾನ್‌ನ ಆಹಾರ ಪದಾರ್ಥಗಳ ಆಮದಿಗೆ ನಿಷೇಧ ವಿಧಿಸಿವೆ.

ಐರೋಪ್ಯ ಸಮುದಾಯದ ಸಹಾಯಹಸ್ತ ಸಾಧ್ಯತೆ: ಭೂಕಂಪ, ಸುನಾಮಿಯಿಂದ ತತ್ತರಿಸಿರುವ ಜಪಾನ್ ಜತೆಗೆ ಐರೋಪ್ಯ ಸಮುದಾಯವು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕು, ಇದರಿಂದ ಜಪಾನ್ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ ಎಂದು ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರುಸೆಲ್ಸ್‌ನಲ್ಲಿ ನಡೆದಸಮಾವೇಶದಲ್ಲಿ ಜಪಾನ್ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಚರ್ಚಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ.

 ಅಣು ಸ್ಥಾವರಗಳ ಸ್ಥಾಪನೆಗೆ ಅಡ್ಡಿ ಇಲ್ಲ (ಬೀಜಿಂಗ್ ವರದಿ):
 ಜಪಾನ್‌ನಲ್ಲಿ ಅಣು ವಿದ್ಯುತ್ ಸ್ಥಾವರಗಳಿಗೆ ಸುನಾಮಿಯಿಂದ ಧಕ್ಕೆ ಒದಗಿದ್ದರಿಂದ ಚೀನಾದ ಅಣು ವಿದ್ಯುತ್ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯೂ ಆಗುವುದಿಲ್ಲ. ಆದರೆ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಚೀನಾ ಸರ್ಕಾರ ಹೇಳಿದೆ.

ಚೀನಾದಲ್ಲಿ ಸದ್ಯ 13 ರಿಯಾಕ್ಟರ್‌ಗಳು ವಿದ್ಯುತ್ ಉತ್ಪಾದಿಸುತ್ತಿದ್ದು, 25 ರಿಯಾಕ್ಟರ್‌ಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೂ 10 ಬೃಹತ್ ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT