ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಬೀನಾ ತಾಜ್ ಕೊಲೆ: ಐವರ ಬಂಧನ

Last Updated 5 ಡಿಸೆಂಬರ್ 2012, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬೊಮ್ಮನಹಳ್ಳಿ ಬಳಿಯ ವಿರಾಟ್ ನಗರದಲ್ಲಿ ನಡೆದಿದ್ದ ಮಹಿಳೆ ಜಬೀನಾ ತಾಜ್ ಕೊಲೆ ಪ್ರಕರಣ ಸಂಬಂಧ ಐದು ಆರೋಪಿಗಳನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.ಕೋಲಾರ ಜಿಲ್ಲೆಯ ಗೌನಪಲ್ಲಿ ಗ್ರಾಮದ ಮಹಮ್ಮದ್ ಫಾರೂಕ್ (30), ಕೇವಲ್ ರಾಮ್ (30), ಆನೇಕಲ್‌ನ ಇಲಿಯಾಸ್ (24), ಲಗ್ಗೆರೆಯ ಅಜಯ್‌ಕುಮಾರ್ (40) ಮತ್ತು ಹೊಸೂರು ರಸ್ತೆಯ ಸಾದಿಕ್ ಬಂಧಿತರು.

ಆರೋಪಿಗಳಿಂದ 280 ಗ್ರಾಂ ಚಿನ್ನಾಭರಣ ಮತ್ತು 37 ಸಾವಿರ ನಗದು ಸೇರಿದಂತೆ ಸುಮಾರು 7.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಆರೋಪಿಗಳ ತಂಡ ನ.23 ರಂದು ಬಾಡಿಗೆ ಮನೆ ಕೇಳುವ ಸೋಗಿನಲ್ಲಿ ಜಬೀನಾ ಅವರ ಮನೆ ಬಳಿ ಹೋಗಿತ್ತು. ಮನೆ ಖಾಲಿ ಇಲ್ಲವೆಂದು ಜಬೀನಾ ಅವರಿಗೆ ಹೇಳಿದ್ದರು.

ಈ ವೇಳೆ ದುಷ್ಕರ್ಮಿಗಳು ಕುಡಿಯಲು ನೀರು ಕೊಡುವಂತೆ ಕೇಳಿದ್ದರು. ಜಬೀನಾ ನೀರು ತರಲು ಒಳಗೆ ಹೋಗುತ್ತಿದ್ದಂತೆ, ಮನೆಗೆ ನುಗ್ಗಿದ ಆರೋಪಿಗಳು ಅವರ ಕೈಕಾಲುಗಳನ್ನು ಕಟ್ಟಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

`ಇತ್ತೀಚೆಗೆ ವ್ಯಕ್ತಿಯೊಬ್ಬ ವೈಯಾಲಿಕಾವಲ್‌ನ ಪವನ್ ಚಿನ್ನಾಭರಣ ಮಳಿಗೆಗೆ ಒಡವೆಗಳನ್ನು ಮಾರಾಟ ಮಾಡುತ್ತಿದ್ದ. ಅನುಮಾನಗೊಂಡ ಆತನನ್ನು ವಿಚಾರಣೆ ನಡೆಸಿದಾಗ ಅವನು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಾ ಭಿನ್ನ ಹೇಳಿಕೆಗಳನ್ನು ನೀಡಲಾರಂಭಿಸಿದ. ಹೀಗಾಗಿ ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿರಾಟ್‌ನಗರದ ಮನೆಯೊಂದರಲ್ಲಿ ದರೋಡೆ ಮಾಡಿದ್ದಾಗಿ ಹೇಳಿದ.

ಅವನು ನೀಡಿದ ಮಾಹಿತಿಯಿಂದ ಉಳಿದ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು' ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿ ಸಾದಿಕ್ ದಲ್ಲಾಳಿಯಾಗಿದ್ದು, ಈತನೇ ಕೃತ್ಯದ ರೂವಾರಿ. ಇತ್ತೀಚೆಗೆ ವಿರಾಟ್‌ನಗರಕ್ಕೆ ಹೋಗಿದ್ದ ಆತ, ಹೆಚ್ಚಿನ ಒಡವೆ ಧರಿಸಿದ್ದ ಜಬೀನಾ ಅವರನ್ನು ನೋಡಿದ್ದ. ಜಬೀನಾ ಮನೆಯಲ್ಲಿ ಒಬ್ಬರೆ ಇದ್ದಾಗ ಅವರನ್ನು ಬೆದರಿಸಿ ಆ ಆಭರಣಗಳನ್ನು ದೋಚಬೇಕು ಎಂದು ಸಂಚು ರೂಪಿಸಿಕೊಂಡಿದ್ದ.

ಇದಕ್ಕಾಗಿ ಆಟೊ ಚಾಲಕ ಅಜಯ್‌ನ ನೆರವು ಕೋರಿದ್ದ. ಬಳಿಕ ಸಾದಿಕ್, ಕೆ.ಆರ್. ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತರಾದ ಫಾರೂಕ್ ಮತ್ತು ಇಲಿಯಾಸ್ ಅವರನ್ನು ಕರೆದುಕೊಂಡು ಬಂದಿದ್ದ. ಫಾರೂಕ್ ತನ್ನ ಗ್ರಾಮದಲ್ಲೇ ಟೀ ಅಂಗಡಿ ಇಟ್ಟುಕೊಂಡಿದ್ದ ಕೇವಲ್ ರಾಮ್‌ನನ್ನು ಗುಂಪಿನಲ್ಲಿ ಸೇರಿಸಿಕೊಂಡಿದ್ದ' ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಮೊದಲ ಸಂಚು ವಿಫಲ
`ಆರೋಪಿಗಳು ಜಬೀನಾ ಮತ್ತು ಅವರ ಕುಟುಂಬ ಸದಸ್ಯರ ಚಲನವಲವನಗಳನ್ನು ಗಮನಿಸಲು ಹಲವು ದಿನಗಳಿಂದ ವಿರಾಟ್‌ನಗರಕ್ಕೆ ಹೋಗಿ ಬರುತ್ತಿದ್ದರು. ನ.16ರ ಶುಕ್ರವಾರ ಮಧ್ಯಾಹ್ನ ಜಬೀನಾ ಪತಿ ಎಸ್.ಎಸ್.ಬಾಬು, ಮಕ್ಕಳಾದ ನದೀಂ ಮತ್ತು ಸಲೀಂ ಪ್ರಾರ್ಥನೆಗೆ ಹೋಗಿದ್ದರು. ಆಗ ದುಷ್ಕರ್ಮಿಗಳ ಗುಂಪು ಮನೆಗೆ ನುಗ್ಗಲು ಯತ್ನಿಸಿತ್ತು. ಆದರೆ, ಅದೇ ಸಮಯಕ್ಕೆ ಜಬೀನಾ ಸಂಬಂಧಿಕರು ಮನೆಗೆ ಬಂದಿದ್ದರಿಂದ ಅವರ ಮೊದಲ ಸಂಚು ವಿಫಲವಾಗಿತ್ತು. ಹೀಗಾಗಿ ನ.23ರ ಶುಕ್ರವಾರ ಕುಟುಂಬ ಸದಸ್ಯರು ಪ್ರಾರ್ಥನೆಗೆ ಹೋದಾಗ ಕೃತ್ಯ ನಡೆಸಲು ನಿರ್ಧರಿಸಿದ್ದರು' ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT