ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಾಖರ್ಚಿನ ಪಟ್ಟಿಯಲ್ಲಿ ಲೋಪ: ವಾಗ್ವಾದ

Last Updated 10 ಡಿಸೆಂಬರ್ 2013, 8:02 IST
ಅಕ್ಷರ ಗಾತ್ರ

ಹೊಳೆನರಸೀಪುರ:  ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಜಮಾ ಖರ್ಚಿನ ಪಟ್ಟಿಯಲ್ಲಿದ್ದ ಲೋಪದೋಷ­ಗಳನ್ನು ಪತ್ತೆ ಹಚ್ಚಿ ಕೂಗಾಡಿ, ರಂಪಾಟ ಮಾಡಿದ ಘಟನೆ ನಡೆಯಿತು.

ಸಭೆ ಪ್ರಾರಂಭವಾಗುತ್ತಿದ್ದಂತೆ ಹಿಂದಿನ ಸಭೆಯ ನಡವಳಿಕೆಗಳನ್ನು ಸರ್ವಾನುಮತದಿಂದ ಅಂಗೀಕರಿಸ­ಲಾಯಿತು ಎಂಬುದನ್ನು ರೆಕಾರ್ಡ್‌ ಮಾಡಲು ಸಭೆಯ ಅನುಮತಿ ಕೋರುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರಾದ ರಾಘವೇಂದ್ರ, ಸುಮಿತ್ರಾದೇವಿ, ಚೈತ್ರಾ, ಜಯಕಾಂತಮ್ಮ, ಶೋಭಾ ಹಾಗೂ ಪಕ್ಷೇತರ ಸದಸ್ಯ ರಂಗನಾಥ್‌ ಹಿಂದಿನ ಸಭೆಯಲ್ಲಿ ನಾವು ಹಲವಾರು ವಿಷಯಗಳಿಗೆ ವಿರೋಧ ವ್ಯಕ್ತಪಡಿಸಿ­ದ್ದೇವೆ.

ನಮ್ಮ ವಿರೋಧವನ್ನು ದಾಖಲಿಸಿ ನಂತರ ರೆಕಾರ್ಡ್‌ ಮಾಡಿ ಎಂದು ಕೂಗಾಡಿ ವೇದಿಕೆಯ ಮುಂಭಾಗ ಬಂದು ಧರಣಿ ನಡೆಸಿದರು. ವಿರೋಧವನ್ನು ದಾಖಲಿಸುವ ಭರವಸೆ ನೀಡಿದ ನಂತರ ಮುಷ್ಕರ ಕೈ ಬಿಟ್ಟು ಸಭೆ ನಡೆಯಲು ಅನುವು ಮಾಡಿಕೊಟ್ಟರು.
ಇಂದಿನ ಸಭೆಗೆ ನೀಡಿದ್ದ ಜಮಾ ಖರ್ಚಿನ ಪಟ್ಟಿಯಲ್ಲಿ ಒಬ್ಬರಿಗೇ ಎರಡೆರೆಡು ಬಾರಿ ಹಣ ನೀಡಿರುವ, ಕೆಲಸವನ್ನೇ ಮಾಡದೆ ಇರುವ ವಾರ್ಡ್‌ಗಳ ಹೆಸರನ್ನು ನಮೂದಿಸಿ ಹಣ ನೀಡಿರುವ ವಿವರಣೆಗಳಿದ್ದವು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ಹಾಗೂ ಪಕ್ಷೇತರ ಸದಸ್ಯ ರಂಗನಾಥ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಸಂಬಂಧಪಟ್ಟ ಎಂಜಿನಿಯರ್‌ ಹಾಗೂ ಸಿಬ್ಬಂದಿಯಿಂದ ದಾಖಲೆಗಳನ್ನು ತರಿಸಿ ಪರಿಶೀಲನೆ ನಡೆಸಿದ ಮುಖ್ಯಾಧಿಕಾರಿ ಕೆಲವು ಕಡೆ ತಪ್ಪು ಮುದ್ರಣವಾಗಿದೆ ಎಂದು ಉತ್ತರಿಸಿದರು.

ಲಕ್ಷ್ಮೀ ಎಲೆಕ್ಟ್ರಿಕಲ್ಸ್‌ ಎಂಟರ್‌ಪ್ರೈಸಸ್‌ಗೆ ಅವರಿಗೆ ಸ್ವಚ್ಛತಾ ಕಾರ್ಯನಿರ್ವಹಣೆ ಮಾಡಿದ ಬಿಲ್‌ ಪಾವತಿ 2,60,831ರೂಪಾಯಿ ಎಂದು ಜಮಾಖರ್ಚಿನ ಪಟ್ಟಿಯಲ್ಲಿ­ಇದ್ದುದನ್ನು ಆಕ್ಷೇಪಿಸಿದ ಜೆಡಿಎಸ್‌ ಸದಸ್ಯ ಎ. ಶ್ರೀಧರ್‌ ಎಲೆಕ್ಟ್ರಿಕಲ್‌ ಅಂಗಡಿಯವರು ಹೇಗೆ ಸ್ವಚ್ಛತಾ ಕಾರ್ಯಕ್ಕೆ ಟೆಂಡರ್‌ ಹಾಕುತ್ತಾರೆ? ಅವರ ಟಿನ್‌ ನಂಬರ್‌ ಏನು? ಅವರು ಸರ್ಕಾರಕ್ಕೆ ತೆರಿಗೆ ಪಾವತಿಸು­ತ್ತಿದ್ದಾರೆಯೇ? ಎಂದು ಕೇಳಿ ದಾಖಲೆಗಳನ್ನು ಪರಿಶೀಲಿಸಿದಾಗ ಏಜೆನ್ಸಿ ಅವರು ಟಿನ್‌ ನಂಬರ್‌ ಇಲ್ಲದ ಬಿಲ್‌ ನೀಡಿದ್ದನ್ನು ಆಕ್ಷೇಪಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು.

ಸೂರನಹಳ್ಳಿ ಜಮೀನು ರೈತರ ವಶದಲ್ಲಿದ್ದರೂ ದಾಖಲೆಯಲ್ಲಿ ಪುರಸಭೆ ವಶದಲ್ಲಿದೆ ಎನ್ನುವುದನ್ನು ತೋರಿಸಿ ಇದರ ಅಭಿವೃದ್ಧಿಗೆ ಹಣ ಬಿಡುಗಡೆಗೆ ನಿರ್ಧಾರ ತೆಗೆದುಕೊಳ್ಳುವ ವಿಷಯ ಬಂದಾಗ ಆಕ್ಷೇಪಿಸಿದ ಕಾಂಗ್ರೆಸ್‌ ಸದಸ್ಯರು ಪ್ರಕರಣ ನ್ಯಾಯಾಲಯದಲ್ಲಿದೆ. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ನಮ್ಮ ಆಕ್ಷೇಪವಿದೆ ಎಂದು ರೆಕಾರ್ಡ್‌ ಮಾಡಿ ಎಂದರು. ಕೆಲವು ಗುತ್ತಿಗೆದಾರರಿಗೆ ಬಿಲ್‌ ನೀಡುವ ವಿಚಾರದಲ್ಲಿ ಆಡಳಿತ ಜೆಡಿಎಸ್‌ ಸದಸ್ಯರ ನಡುವೆಯೇ ವಾಗ್ವಾದ ನಡೆಯಿತು. ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT