ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಜಗಳ: ಗುಂಡಿನ ದಾಳಿ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಮೀನು ವಿಷಯವಾಗಿ ಜಗಳವಾಡಿದ ವ್ಯಕ್ತಿಯೊಬ್ಬರು ಎದುರಾಳಿಯ ಮೇಲೆ ಬಂದೂಕಿನಿಂದ ಗುಂಡಿನ ದಾಳಿ ನಡೆಸಿರುವ ಘಟನೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮಂಗಳವಾರ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವ ಮಟಾಮ್‌ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ನಡೆಸಿದ ಆರೋಪಿ ಮಂಜುನಾಥರೆಡ್ಡಿ ಮತ್ತು ಆತನ ತಂದೆ ಅನಂತರಾಮರೆಡ್ಡಿ ಪರಾರಿಯಾಗಿದ್ದಾರೆ. ಆರೋಪಿಯ ತಾಯಿ ಯಶೋದಮ್ಮ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಒಂದೂವರೆ ಎಕರೆ ಜಮೀನಿನ ಒಡೆತನದ ವಿಷಯವಾಗಿ ಮಟಾಮ್‌ರೆಡ್ಡಿ ಮತ್ತು ಮಂಜುನಾಥರೆಡ್ಡಿ ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮಂಜುನಾಥರೆಡ್ಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆ ಜಮೀನನ್ನು ಆನಂದ್‌ಕುಮಾರ್ ಎಂಬುವರಿಗೆ ಮಾರಾಟ ಮಾಡಿದ್ದರು.

ಸೆ.27ರಂದು ಆನಂದ್‌ಕುಮಾರ್ ಅವರನ್ನು ಭೇಟಿ ಮಾಡಿದ್ದ, ನಾರಾಯಣರೆಡ್ಡಿ ಜಮೀನಿನ ಅಸಲಿ ದಾಖಲೆಗಳನ್ನು ಅವರಿಗೆ ತೋರಿಸಿ ಬಂದಿದ್ದರು. ಆದರೆ, ಆ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸದ ಆನಂದ್‌ಕುಮಾರ್, ಮಂಗಳವಾರ ಸಂಜೆ ಐದು ಗಂಟೆ ಸುಮಾರಿಗೆ ಜಮೀನಿಗೆ ಬೇಲಿ ಹಾಕಿಸುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ನಾರಾಯಣರೆಡ್ಡಿ ಮತ್ತು ಮಟಾಮ್‌ರೆಡ್ಡಿ ಕಾರ್ಯ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದರು. ಆಗ ಸ್ಥಳದಲ್ಲೇ ಇದ್ದ ಮಂಜುನಾಥ್‌ರೆಡ್ಡಿ, ಅವರ ಮೇಲೆ ಒಂದು ಸುತ್ತು ಗುಂಡು ಹಾರಿಸಿದರು. 

ಗುಂಡು ಮಟಾಮ್‌ರೆಡ್ಡಿ ಅವರ ಬಲಗಾಲನ್ನು ಸೇರಿದೆ. ಈ ವೇಳೆ ಸಹೋದರನನ್ನು ರಕ್ಷಿಸಲು ಮುಂದಾದ ನಾರಾಯಣರೆಡ್ಡಿಗೆ ಆರೋಪಿ ಬಂದೂಕಿನಿಂದ ತಲೆಗೆ ಒಡೆದಿದ್ದಾನೆ. ಅವರ ತಲೆಗೆ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT