ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಮಾರಿದರೆ ಆತ್ಮಹತ್ಯೆಯೇ ದಾರಿ: ಪಾಟೀಲ್

Last Updated 25 ಜನವರಿ 2012, 4:30 IST
ಅಕ್ಷರ ಗಾತ್ರ

ಮೈಸೂರು: `ಹಣದ ಆಸೆಗೆ ಬಲಿಯಾಗಿ ರೈತರು ಜಮೀನು ಮಾರಾಟ ಮಾಡುತ್ತಿದ್ದಾರೆ. ಜಮೀನು ಮಾರಿದಲ್ಲಿ ಭವಿಷ್ಯದಲ್ಲಿ ಸಂಕಷ್ಟ ಎದುರಿಸಬೇಕಾ ಗುತ್ತದೆ. ಅಲ್ಲದೆ ಆತ್ಮವಿಶ್ವಾಸ ಕಳೆದುಕೊಳ್ಳುವ ರೈತರು ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ~ ಎಂದು ಕೃಷಿ ಮಿಷನ್ ಅಧ್ಯಕ್ಷ ಡಾ.ಎಸ್. ಎ.ಪಾಟೀಲ್ ಇಲ್ಲಿ ಕಿವಿಮಾತು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘ ಜೆಎಸ್‌ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ `ಪ್ರಸಕ್ತ ರೈತರ ಸಮಸ್ಯೆಗಳು- ಪರಿಹಾರ~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

`ದೇಶದ ಒಟ್ಟು ಜನಸಂಖ್ಯೆಯ ಶೇ 70 ಭಾಗ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಭೂಮಿ ಹೊಂದಿರುವ ಕೆಲ ರೈತರು ಒಕ್ಕಲುತನ ಬಿಟ್ಟಿದ್ದಾರೆ. ಮತ್ತೆ ಕೆಲವರು ಇತರರಿಗೆ ಗೇಣಿ ನೀಡಿದ್ದಾರೆ. ಭೂಮಿ ಬೆಲೆ ಗಗನಮುಖಿಯಾಗಿರುವುದರಿಂದ ಉಳ್ಳವರು ಜಮೀನು ಖರೀದಿಸಿ ಖಾಲಿ ಬಿಡು ತ್ತಿದ್ದಾರೆ. ಹಾಗಾಗಿ ಕೃಷಿಯಲ್ಲಿ ತೊಡಗಿಸಿಕೊಂಡ ಒಟ್ಟು ಜನಸಂಖ್ಯೆಯ ಬಗ್ಗೆ ಈಚಿನ ದಿನಗಳಲ್ಲಿ ನಿಖರ ಮಾಹಿತಿ ದೊರಕುತ್ತಿಲ್ಲ~ ಎಂದು ತಿಳಿಸಿದರು.

`ವರ್ಷದ 365 ದಿನಗಳು ರೈತರಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಯಲು ಭೂಮಿಯಲ್ಲಿ ವರ್ಷದಲ್ಲಿ 65 ದಿನ ಮಾತ್ರ ಕೆಲಸ ಇರುತ್ತದೆ. ಉಳಿದ ದಿನಗಳಲ್ಲಿ ರೈತರ ಬದುಕು ಹೇಳತೀರದು. ಇದರಿಂದ ರೈತರು ಪಟ್ಟಣಕ್ಕೆ ಗುಳೆ ಹೋಗುತ್ತಾರೆ. ಪಟ್ಟಣ ಪ್ರದೇಶದಲ್ಲಿ ದೊರಕುವ ಎಲ್ಲ ಸವಲತ್ತುಗಳನ್ನು ಗ್ರಾಮೀಣ ಭಾಗದಲ್ಲಿ ದೊರಕುವಂತೆ ಮಾಡಿದರೆ ಗುಳೆ ಹೋಗುವುದನ್ನು ತಪ್ಪಿಸಬಹುದು~ ಎಂದು ಸಲಹೆ ನೀಡಿದರು.

`ಮಳೆ-ಬೆಲೆ ಅನಿಶ್ಚಿತತೆಯಿಂದ ರೈತ ಕಂಗಾಲಾಗಿದ್ದಾನೆ. ಅವಿದ್ಯಾವಂತ ರೈತರಿಗೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ಸು ಕಾಣಲು ಸಾಧ್ಯವಾಗುತ್ತಿಲ್ಲ. ವಿದ್ಯಾವಂತ ಯುವಕರು ಅವಿದ್ಯಾವಂತ ರೈತರಿಗೆ ಆಧುನಿಕ ಕೃಷಿ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ರೈತರಿಗೆ ಪೂರಕವಾಗಿ ಕೃಷಿ ಮಿಷನ್ ಕೆಲಸ ಮಾಡುತ್ತಿದೆ~ ಎಂದು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಮಾತನಾಡಿ, `ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತರಿಗೆ ಪೊಳ್ಳು ಭರವಸೆಗಳನ್ನು ನೀಡುತ್ತಿವೆ. ರೈತರ ಹಿತ ಕಾಯುವ ಬಗ್ಗೆ ಸರ್ಕಾರಗಳು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ರೈತರ ಸಮಸ್ಯೆಗಳನ್ನು ಅರಿತು ಪರಿಹಾರ ಒದಗಿಸದೆ ಅನ್ಯಾಯ ಎಸಗುತ್ತಿವೆ~ ಎಂದು ಕಿಡಿಕಾರಿದರು.

`ಎಸ್‌ಎಪಿ ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತಿವೆ. ಆಂಧ್ರಪ್ರದೇಶದಲ್ಲಿ ಬತ್ತಕ್ಕೆ ಬೆಂಬಲ ದೊರಕದೆ ಅಲ್ಲಿನ ರೈತರು ಬತ್ತ ಬೆಳೆಯುವುದನ್ನೇ ಸ್ಥಗಿತಗೊಳಿಸಿದ್ದಾರೆ. ಗೊಬ್ಬರಗಳ ಬೆಲೆ ಮೂರು ಪಟ್ಟು ಹೆಚ್ಚಿದೆ.

ಇದರಿಂದ ರೈತ ಕಂಗಾಲಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಗಳು ಮತ್ತಷ್ಟು ಜಟಿಲವಾಗಲಿವೆ. ದೇಶದಲ್ಲಿ ಭ್ರಷ್ಟಾ ಚಾರ, ಲೂಟಿಕೋರರನ್ನು ಸನ್ಮಾನಿಸಲಾಗುತ್ತಿದೆ ಹೊರತು ದೇಶದ ಅನ್ನದಾತನನ್ನು ಗುರುತಿಸಿ ಗೌರ ವಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಕಾಯಕ ಯೋಗಿಗಳಾದ ವಿಜಾಪುರ ಜಿಲ್ಲೆಯ ರೈತ ಡಾ.ಮಲ್ಲಣ್ಣ ನಾಗರಾಜ್, ಬಾಗಲಕೋಟೆ ಜಿಲ್ಲೆಯ ಚಂದ್ರಶೇಖರ ನಿಂಬರಗಿ, ತಾಲ್ಲೂಕಿನ ಹೊಮ್ಮರಗಳ್ಳಿಯ ಪ್ರೇಮಮ್ಮ ಅವರನ್ನು ಸನ್ಮಾನಿಸಲಾಯಿತು. ರೈತ ಧ್ವನಿ ಮೂರನೇ ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಕೃಷಿ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ, ತೋಟಗಾರಿಕೆ ಇಲಾಖೆಯ ದೊಡ್ಡಕನ್ನೇಗೌಡ, ಬೆಂಗಳೂರಿನ ಐಎಸ್‌ಇಸಿ ನಿರ್ದೇಶಕ ಡಾ.ಆರ್.ಎಸ್.ದೇಶಪಾಂಡೆ, ಐಐಟಿ ನಿವೃತ್ತ ಪ್ರಾಂಶುಪಾಲ ಗೋಪಾಲ್, ರಾಜಣ್ಣ, ಟಿ.ವಿ.ಗೋಪಿನಾಥ್, ರೈತ ಧ್ವನಿ ಪತ್ರಿಕೆ ಉಪ ಸಂಪಾದಕ ಎಂ.ಬಿ.ಚೇತನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT