ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ವಿವಾದ; ಮೂವರು ಸಹೋದರರ ಹತ್ಯೆ

ಮುಗಿಲು ಮುಟ್ಟಿದ ಆಕ್ರಂದನ; ಭದ್ರಾಪುರ ಗ್ರಾಮದಲ್ಲಿ ಭಯದ ವಾತಾವರಣ
Last Updated 16 ಜುಲೈ 2013, 11:03 IST
ಅಕ್ಷರ ಗಾತ್ರ

ಶಿವಮೊಗ್ಗ: ಅಲ್ಲಿ ಮೂರು ದೇಹ ಮೂರು ದಿಕ್ಕಿಗೆ ಬಿದ್ದಿದ್ದವು. ದೇಹಗಳ ಮೇಲೆ ಮಾರಾಕಾಸ್ತ್ರಗಳಿಂದ ಬರ್ಬರ ಹಲ್ಲೆ ನಡೆದಿತ್ತು. ಆ ತೋಟ ರಣರಂಗವಾಗಿತ್ತು. ಅಲ್ಲಿ ರಕ್ತಸಿಕ್ತ ಕತ್ತಿ, ಹರಿದ ಚಪ್ಪಲಿ, ರಕ್ತ ಚೆಲ್ಲಾಡಿತ್ತು.  

ಇದು ಭದ್ರಾವತಿ ತಾಲ್ಲೂಕು ಭದ್ರಾಪುರ ಗ್ರಾಮದ ತೋಟವೊಂದರಲ್ಲಿ ಸೋಮವಾರ ನಡೆದ ಮೂವರು ಸಹೋದರರ ಭೀಕರ ಹತ್ಯೆಯ ದೃಶ್ಯಾವಳಿ.

ಮನೆಯ ಆಧಾರಸ್ಥಂಭಗಳಂತಿದ್ದ ಮೂವರು ಸಹೋದರರನ್ನು ಕಳೆದುಕೊಂಡ ಮನೆಯವರ ಸ್ಥಿತಿ ನಿಜಕ್ಕೂ ಕರುಣಾಜನಕವಾಗಿತ್ತು. ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾರನ್ನೂ ಸಂತೈಸಲು ಆಗದ, ಧೈರ್ಯ ಹೇಳಲೂ ಆಗದ ಸ್ಥಿತಿ ಕುಟುಂಬದಲ್ಲಿ ನಿರ್ಮಾಣವಾಗಿತ್ತು.
ಸಹೋದರರ ಹೆತ್ತವರು, ಪತ್ನಿಯರು ಹಾಗೂ ಎಳೆ ಮಕ್ಕಳು ಎದೆಬಡಿದುಕೊಂಡು ಅಳುತ್ತಿದ್ದರು. ಇವರ ಜತೆ ಮೃತರ ಸಂಬಂಧಿಕರು, ಸ್ನೇಹಿತರಲ್ಲಿ ದುಃಖ ಕಟ್ಟೆ ಹೊಡೆದಿತ್ತು.

ಭೀಕರ ಹತ್ಯೆಯ ಛಾಯೆ ಇಡೀ ಭದ್ರಾಪುರ ಗ್ರಾಮದಲ್ಲಿ ಆವರಿಸಿದೆ. ಅಕ್ಷರಶಃ ಸೂತಕದ ವಾತಾವರಣ ಇದೆ. ಗ್ರಾಮಸ್ಥರಲ್ಲಿ ಭಯ, ಆತಂಕಗಳು ಮನೆಮಾಡಿವೆ. ಘಟನೆ ಬಗ್ಗೆ ಮಾತನಾಡುವುದಕ್ಕೂ ಗ್ರಾಮಸ್ಥರು ಹೆದರುತ್ತಿದ್ದರು.

ಚಂದ್ರು (38), ಪ್ರಕಾಶ್ (35) ಹಾಗೂ ರಮೇಶ (35) ಹತ್ಯೆಗೀಡಾದ ಸಹೋದರರು. ಸಹೋದರರೆಲ್ಲರಿಗೂ ವಿವಾಹವಾಗಿದೆ. ಮಕ್ಕಳೂ ಇದ್ದಾರೆ. ಮೂವರು ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿ ಮಾಡುತ್ತಿದ್ದು, ಸಹೋದರರು ತುಂಬು ಕುಟುಂಬಕ್ಕೆ ಅಧಾರವಾಗಿದ್ದರು.

ಘಟನೆ ಹಿನ್ನೆಲೆ: ಸಹೋದರರ ಜಮೀನಿಗೆ ಹೋಗುವ ರಸ್ತೆ ಮಧ್ಯೆ ಮಂಜಪ್ಪ ಎಂಬುವವರ ಅಡಿಕೆ ತೋಟವಿದ್ದು, ಈ ತೋಟದ ಮೂಲಕವೇ ಇವರು ಗದ್ದೆಗೆ ಹೋಗಬೇಕಿತ್ತು. ತೋಟದ ಮೂಲಕ ಓಡಾಡಲು ತೋಟದವರು ಅವಕಾಶ ನೀಡದಿದ್ದು ಹಲವು ವರ್ಷಗಳ ವಿವಾದಕ್ಕೆ ಕಾರಣವಾಗಿತ್ತು.

ಈ ಕುರಿತು ಹತ್ಯೆಗೀಡಾದ ಸಹೋದರರ ಹಾಗೂ ಮಂಜಪ್ಪ ಅವರ ಐವರು ಮಕ್ಕಳ ನಡುವೆ ಹೊಡೆದಾಟವೂ ನಡೆದಿತ್ತು. ಪ್ರಕರಣ ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.  

ಲಭ್ಯ ಮಾಹಿತಿ ಪ್ರಕಾರ ಸೋಮವಾರ ಮೂವರು ಸಹೋದರರು ಜಮೀನಿನಲ್ಲಿ ಭತ್ತ ನಾಟಿ ಮಾಡಲು ಪೂಭಾವಿಯಗಿ ಕೆಸರು ಗದ್ದೆ ಸಿದ್ಧತೆ ಮಾಡುತ್ತಿದ್ದರು.

ಇದೇ ವೇಳೆ ತೆಂಗಿನ ಕಾಯಿ ಕೀಳಲು ತೋಟಕ್ಕೆ ಆಗಮಿಸಿದ ದುಷ್ಕರ್ಮಿಗಳು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದರರಿಗೆ ವಿವಾದಿತ ತೋಟದ ಮೂಲಕ ಊಟ ತರುತ್ತಿದ್ದ ಚಂದ್ರು ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದು, ಇದನ್ನು ನೋಡಿದ ರಮೇಶ ಮತ್ತು ಪ್ರಕಾಶ ಗದ್ದೆಯಿಂದ ತೋಟಕ್ಕೆ ಆಗಮಿಸಿದ್ದಾರೆ. ಇವರನ್ನು ಕೂಡ ಹಂತಕರು ಕೊಚ್ಚಿ ಕೊಲೆ ಮಾಡಿದ್ದಾರೆ.

-ಎನ್.ನಾಗರಾಜ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT