ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯ ಜಯ ಜಯ ಜಯಹೇ...

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

`ಏನಯ್ಯ ತೆಪರೇಸಿ, ಏನಾದ್ರೂ ಸುದ್ದಿ, ಸಮಾಚಾರ ಕೇಳಾಣ ಅಂದ್ರೆ ಕೈಗೇ ಸಿಗಲ್ವಲ್ಲ ನೀನು? ಇದಕ್ಕಿದ್ದಂತೆ ಎಲ್ಲಿ ನಾಪತ್ತೆ ಆಗ್ತೀಯ?
`ತಮಿಳ್ನಾಡಿಗೆ ಹೋಗಿದ್ದೆ ಸಾ, ಅಲ್ಲೇ ಒಂದು ಹೆಣ್ಣು ನೋಡಿದೀನಿ, ಮದ್ವೆ ಆಗಾಣ ಅಂತ....~

`ಹೌದಾ? ಅದೇನು ತಮಿಳ್ನಾಡಲ್ಲಿ? ಯಾಕೆ, ನಮ್ಮಲ್ಲೇನು ಹೆಣ್ಣು ಸಿಗಲ್ಲ ಅಂತಾನಾ?~
`ಅದು ಹಂಗಲ್ಲ ಸಾ, ತಮಿಳ್ನಾಡಲ್ಲಿ ಮದುವೆ ಆಗೋರಿಗೆ ಮುಖ್ಯಮಂತ್ರಿ ಅಮ್ಮೊರು ಐವತ್ತು ಸಾವಿರ ರೊಕ್ಕ, ಚಿನ್ನದ ತಾಳಿ ಎಲ್ಲ ಕೊಡ್ತಾರಂತೆ. ಹೊಸ ಸಂಸಾರ ಶುರು ಮಾಡೋರಿಗೆ ಕಲರ್ ಟಿ.ವಿ, ಟಿ.ವಿ.ಗೆ ಕರೆಂಟು, ದ್ವಾಸೆ ಮಾಡಾಕೆ ಅಕ್ಕಿ, ಅಕ್ಕಿ ರುಬ್ಬೋಕೆ ಮಿಕ್ಸಿ...

ಹಿಂಗೆ ಏನೇನೋ ಸಿಗುತ್ತೆ ಅಂದ್ರು. ಅದ್ಕೆ ಅಲ್ಲಿ ಮದುವೆ ಮಾಡ್ಕಂಡು, ಅವರು ಕೊಡೋದ್ನೆಲ್ಲ ಇಸ್ಕಂಡು ಹೆಂಡ್ತಿ ಕರ‌್ಕಂಡು ಇಲ್ಲಿಗೆ ಬಂದು ಸಂಸಾರ ಮಾಡೋದು. ಇಲ್ಲಿ ಹೆಂಗಿದ್ರೂ ಯಡ್ಯೂರಪ್ಪನೋರು  ಹೆಂಡ್ತಿಗೆ ಸೀರೆ, ಹುಟ್ಟೋ ಮಗಳಿಗೆ ಭಾಗ್ಯಲಕ್ಷ್ಮಿ ಬಾಂಡು ಎಲ್ಲ ಕೊಡ್ತಾರೆ. ಎರಡೂ ಕಡೆ ಲಾಭ ಗಿಟ್ಟಿಸ್ಕೊಂಡು ಹೆಂಗೋ ಜೀವನ ಸಾಗ್ಸೋದು...~

`ಓ.... ದೊಡ್ಡ ಪ್ಲಾನೇ ಹಾಕ್ಕಂಡಿದೀಯ ಬಿಡು. ಅದಿರ‌್ಲಿ, ದೇಶದ ಸಮಾಚಾರ ಏನು, ಏನ್ಕತೆ?~

`ಸದ್ಯಕ್ಕೆ ಅಣ್ಣಾ ಮತ್ತು ಅಮ್ಮಂದಿರ ಸುದ್ದಿ ಬಿಟ್ರೆ ದೇಶದಾಗೆ ಏನೈತೆ ಸಾ, ಮೊನ್ನೆ ಬೆಂಗ್ಳೂರಾಗೆ ಅಣ್ಣಾ `ಹರಾಜೆ~ ಕಾರ‌್ಯಕ್ರಮಕ್ಕೋಗಿದ್ದೆ. ಅಲ್ಲಿ ನೋಡಿದ್ರೆ ಜನಾನೇ ಇರ‌್ಲಿಲ್ಲ....!~

`ಮಾರಾಯ, ಅವರು ಹರಾಜೆ ಅಲ್ಲ, ಹಜಾರೆ ಅಂತ. ನೀನು ಅವರ ಹೆಸರ‌್ನೇ ಹರಾಜು ಹಾಕಾಕೆ ಹೊಂಟೀಯಲ್ಲ?~

`ನಾ ಬೇಕೂಂತ್ಲೆ ಹರಾಜೆ ಅಂತ ಅಂದೆ ಸಾ. ದೀಪದ ಕೆಳಗೆ, ಅಲ್ಲಲ್ಲ... ಟೇಬಲ್ ಕೆಳಗೆ ಕತ್ಲು ಅನ್ನಂಗೆ ಭ್ರಷ್ಟಾಚಾರ ಓಡ್ಸಕೆ ಅಣ್ಣಾ ಹೋರಾಡ್‌ತಿದ್ರೆ ಅವರ ಭಾಷಣ ಕೇಳಾಕೆ ಸೀರೆ ಕೊಡ್ತೀವಿ, ರೊಕ್ಕ ಕೊಡ್ತೀವಿ ಬರ‌್ರಿ ಅಂತ ಜನಾನ ಕರ‌್ಕಂಡು ಬಂದಿದ್ರಂತೆ. ಹಿಂಗಾದ್ರೆ ಹೆಂಗೆ ಸಾ? ಅಣ್ಣಾರ ಹೆಸರ‌್ನ ಹರಾಜಾಕಿದಂಗೆ ಆಗ್ಲಿಲ್ವಾ?~

`ಈಗ ಅಣ್ಣಾ ಅವರ ಜೊತೆ ಯೋಗ ಗುರು ರಾಮದೇವ್ ಕೂಡ ಸೇರ‌್ಕಂಡಿದಾರಂತೆ ಅಲ್ವಾ? ವಿದೇಶದಾಗಿರೋ ಕಪ್ಪು ಹಣನ ವಾಪಸ್ ತರ‌್ಲೇಬೇಕು ಅಂತ ಕೇಂದ್ರ ಸರ‌್ಕಾರದ ಮುಂದೆ `ಭದ್ರ ಪದ್ಮಾಸನ~ ಹಾಕಿ ಕುಂತುಬಿಟ್ಟಾರಂತೆ? ಇವರಿಬ್ರ ಜೊತೆ ಎಲ್ಲ ಮಠಾಧೀಶರೂ ಸೇರಿ ಹೋರಾಡಿದ್ರೆ ಸರ‌್ಕಾರನ ಬಗ್ಗಿಸಬಹುದೇನಪ್ಪ...~
`ಒಳ್ಳೆ ಹೇಳಿದ್ರಿ ಸಾ, ಈಗ ಮಠಾಧೀಶರೇ ಸರ‌್ಕಾರದ ಮುಂದೆ ದುಡ್ಡಿಗೆ ಕೈ ಚಾಚ್ಕಂಡು ನಿಂತಿದಾರೆ, ಅವರು ಭ್ರಷ್ಟಾಚಾರ ಓಡುಸ್ತಾರಾ?~

`ಹಂಗಾದ್ರೆ ಜನ ದಂಗೆ ಏಳಬೇಕೇನಪ, ಮೊನ್ನೆ ಯಾರೋ ಲಕ್ಷ ಕೋಟಿ ರೊಕ್ಕ ತಿಂದೋರ ಮೇಲೆ ಚಪ್ಲಿ ಎಸೆದ್ರಲ್ಲ, ಅಂಗೆ ಮಾಡಬೇಕು ನೋಡು...!~
`ಅವನಾಗಿದ್ಕೆ ಚಪ್ಲಿ ಎಸೆದು ಬಂದಿದಾನೆ. ನಾನಾಗಿದ್ರೆ ಅಷ್ಟಕ್ಕೇ ಬಿಡ್ತಿರಲಿಲ್ಲ ಸಾ...~
`ಮತ್ತೇನ್ಮಾಡ್ತಿದ್ದೆ?~

`ಎಸೆದ ಚಪ್ಲೀನ ವಾಪಾಸ್ ಇಸ್ಕೊಂಡ್ ಬರ‌್ತಿದ್ದೆ. ಅಂಥೋರಿಗೆಲ್ಲ ಚಪ್ಲೀನ ಯಾಕ್ಸಾ ವೇಸ್ಟ್ ಮಾಡ್ಬೇಕು?~

`ಒಳ್ಳೆ ತಮಾಷೆ ಕಣಯ್ಯ, ಅದಿರ‌್ಲಿ, ಅದೇನೋ ಅಮ್ಮಂದಿರ ಸುದ್ದಿ ಅಂದ್ಯಲ್ಲ ಏನದು?~
`ಅದೇ ಸಾ, ದಕ್ಷಿಣದಲ್ಲಿ ಜೈಲಲಿತಮ್ಮ, ಉತ್ತರದಲ್ಲಿ ಸುಷ್ಮಮ್ಮ. ದಕ್ಷಿಣದ ಈ ಅಮ್ಮನ್ನ ಮಕ್ಕಳೇ ಕೈ ಹಿಡಿದು ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದ್ರೆ ಉತ್ತರದ ಆ ಅಮ್ಮ ತನ್ನನ್ನು ನಂಬಿದ ಮಕ್ಕಳನ್ನೇ ಕೈ ಬಿಟ್ಟು ಗಣಿ ಗುಂಡಿಗೆ ತಳ್ಳಿಬಿಟ್ರು ಅಂದೆ...!~

`ಓ ಹಾಗಾ? ನೀ ಹೇಳೋದೂ ಕರೆಕ್ಟೇ ಅನ್ನು. ಹಾಗೇ ಅಪ್ಪಂದಿರ ಕತೆ ಏನಿಲ್ವಾ?~
`ಯಾಕಿಲ್ಲ ಸಾ, ಉತ್ತರಕ್ಕೊಬ್ರು, ದಕ್ಷಿಣಕ್ಕೊಬ್ರು. ಅಲ್ಲಿ ಮೋದಿ, ಇಲ್ಲಿ ಯಡ್ಯೂರಪ್ಪ. ಇಬ್ರೂ ಬಿಜೆಪಿ ಮುಖ್ಯಮಂತ್ರಿಗಳೇ. ಇಬ್ರ ಗುರೀನೂ ಅಭಿವೃದ್ಧಿನೇ. ಆದ್ರೆ ಒಂದೇ ವ್ಯತ್ಯಾಸ...!~

`ಏನು?~
`ಮೋದಿ ಗಡ್ಡ ಬಿಟ್ಟಿದಾರೆ~
`ಇವರು?~
`ಬೋಳಿಸಿದಾರೆ!~
`ಇದ್ಯಾಕೋ ಸರಿ ಬರ‌್ಲಿಲ್ಲಪ್ಪ. ಉತ್ತರ-ದಕ್ಷಿಣಕ್ಕೆ ಇನ್ನೊಂದು ಉದಾಹರಣೆ ಕೊಡ್ತೀಯ?~

`ಕೊಡ್ತೀನಿ ಸಾ, ಉತ್ತರದಲ್ಲಿ ಮಮತ, ದಕ್ಷಿಣದಲ್ಲಿ ಅಮ್ಮ ಜೈಲಲಿತ. ಎಲ್ಲ ವಿಷಯದಲ್ಲೂ ಇಬ್ರೂ ಉತ್ತರ-ದಕ್ಷಿಣಾನೇ!~
`ಹೌದಾ? ಅದೇಗೆ?~

`ಹೇಗೆ ಅಂದ್ರೆ ಅಲ್ಲಿ ಖಾದಿ ಸೀರೆ, ಹವಾಯಿ ಚಪ್ಪಲಿ. ಕೊರಳು-ಕೈ ಎಲ್ಲ ಭಣ ಭಣ, ನಿರಾಭರಣ! ಹಾರ ಇಲ್ಲ, ತುರಾಯಿ ಇಲ್ಲ, ಸೆಕ್ಯುರಿಟಿ, ಬುಲೆಟ್ ಪ್ರೂಫ್ ಮೊದ್ಲೇ ಇಲ್ಲ. ಎಲ್ಲ ಸಾದಾ ಸೀದಾ. ಮುಗಿದ ಕೈ, ಬಾಗಿದ ತಲೆ, ಹೆಸರಲ್ಲೇ ಮಮತಾ!... ಇಲ್ಲಿ ದಕ್ಷಿಣದಲ್ಲಿ ಹತ್ತು ಸಾವಿರ ಸೀರೆ, ಮುನ್ನೂರು ಗೌನು, ನೂರೈವತ್ತು ಜತೆ ಚಪ್ಪಲಿ, ಕೆ.ಜಿ.ಗಟ್ಲೆ ಆಭರಣ, ಝಣ ಝಣ ಕಾಂಚಾಣ! ಮುಗಿದ ಕೈಯಾದ್ರೂ ಬಾಗಲೊಲ್ಲದ ತಲೆ! ಹೆಸರಲ್ಲೇ ಇದೆ `ಜೈ~ ಲಲಿತಾ!~

`ಕರೆಕ್ಟ್ ಕಣಯ್ಯ, ಇದ್ಕೇ ನಿನ್ ಜೊತೆ ಮಾತಾಡೋಕೆ ಖುಷಿ ನಂಗೆ. ಅಲ್ಲ, ಮಾತಿಗೆ ಕೇಳ್ತೀನಿ, ಹತ್ತು ಸಾವಿರ ಸೀರೆ ಅಂತೀಯ. ಒಂದು ಸೀರೇನ ಇವತ್ತು ಉಟ್ಕಂಡ್ರೆ ಮತ್ತೆ ಅದರ ಸರದಿ ಬರೋಕೆ ಹತ್ತು ಸಾವಿರ ದಿನ ಕಾಯ್ಬೇಕು. ಅಂದ್ರೆ ಇಪ್ಪತ್ತೇಳು ವರ್ಷ ಆಯ್ತಲ್ಲಯ್ಯೊ?~

`ಮತ್ತೆ? ಅಮ್ಮ ಅಂದ್ರೆ ಸುಮ್ನೆನಾ ಸಾ? ಮೂರನೇ ಸರ್ತಿ ಮುಖ್ಯಮಂತ್ರಿ ಆಗ್ತಿರೋದು. ಇಲ್ಲಿ ಪಾಪ ಯಡ್ಯೂರಪ್ಪನೋರು ಮೂರು ವರ್ಷಕ್ಕೇ ನಾಲ್ಕು ಸರ್ತಿ ವಿಶ್ವಾಸಮತ ಕೇಳ್ಕೊಂಡು ಕುರ್ಚಿ ಉಳಿಸ್ಕಳಾಕೆ ಎಷ್ಟು ಹೆಣಗಾಡ್ತಾ ಇದಾರೆ ನೀವೇ ನೋಡ್ತಿದೀರಲ್ಲ, ಅಂಥದ್ರಲ್ಲಿ ಕನ್ನಡನಾಡಿನ ಹೆಣಮಗಳೊಬ್ಳು ತಮಿಳ್ನಾಡಲ್ಲಿ ಮೂರು ಸಲ ಮುಖ್ಯಮಂತ್ರಿ ಆಗೋದು ಅಂದ್ರೆ ಸಾಮಾನ್ಯನಾ?~

`ನಿಜ ಕಣಯ್ಯ, `ಛಲದೋಳ್ ಜಯಲಲಿತಾನೇ~. ಅವರಿಗೆ ನಾವೂ ಒಂದ್ಸಲ ಜೈ ಅಂದ್ರೂ ತಪ್ಪಿಲ್ಲ. ಏನಂತೀಯ?~

`ನಿಮಗೆ ಒಂದು ತಮಾಷೆ ಹೇಳಲಾ? ಅಮ್ಮ ಆಗ್ಲೇ ತಮಿಳುನಾಡಿನ ಎಲ್ಲ ಸ್ಕೂಲು, ಗೌರ‌್ಮೆಂಟ್ ಆಫೀಸ್‌ಗಳಲ್ಲಿ ದಿನಾ `ಜನಗಣಮನ~ ಹಾಡೋದ್ನ ಕಡ್ಡಾಯ ಮಾಡಿದಾರಂತೆ.~`ಅರೆ, ಅದು ರಾಷ್ಟ್ರಗೀತೆ, ಎಲ್ಲರೂ ಹಾಡ್ಲೇಬೇಕಲ್ವಾ?~
`ಹಂಗಲ್ಲ ಸಾ, ಅದರ ಕೊನೇ ಸಾಲನ್ನ ಎರಡೆರಡು ಸಲ ಹಾಡಬೇಕು ಅಂತ ಹೇಳಿದಾರಂತೆ.~
`ಹೌದಾ? ಏನದು ಕೊನೇ ಸಾಲು?~
`ಜಯಹೇ....  ಜಯಹೇ....  ಜಯಹೇ.... ಜಯ ಜಯ ಜಯ ಜಯಹೇ....!~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT