ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯತೀರ್ಥ ಮೇವುಂಡಿ

ಕಿರಾಣಾ ಘರಾಣಾದ ಪ್ರತಿಭೆ
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ಧಾರವಾಡ ಸೀಮೆಯ ಮಣ್ಣಿನಲ್ಲಿ       ಸ್ವರವಿದೆ. ಸಂಸ್ಕೃತಿ ಇದೆ. ಒಟ್ಟಿನಲ್ಲಿ ಭಾರತವೇ ಇದೆ’. ಹಿರಿಯ ಹಿಂದೂಸ್ತಾನಿ ಗಾಯಕ ಪಂ.ಮಲ್ಲಿಕಾರ್ಜುನ ಮನಸೂರ ಅವರ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಭಾಗವಹಿಸಲು ಬಂದಿದ್ದ  ಪ್ರಸಿದ್ಧ ‘ವಿಚಿತ್ರ ವೀಣಾ’ ವಾದಕಿ ಡಾ.ರಾಗಿಣಿ ತ್ರಿವೇದಿ ಅವರು ಹೇಳಿದ ಈ ಮಾತು ಅಕ್ಷರಶಃ ಸತ್ಯ ಎನ್ನಲು ಕಾರಣ ಆಗಾಗ್ಗೆ ಇಲ್ಲಿ ಹುಟ್ಟಿಬರುವ ಸಂಗೀತ ಪ್ರತಿಭೆಗಳು.

ಪಂ.ಭೀಮಸೇನ ಜೋಶಿ ಅವರ ನಂತರ ಅವರ ಶಿಷ್ಯರಾದ ಶ್ರೀಪತಿ ಪಾಡಿಗಾರ ಅವರು ಜನಪ್ರಿಯ ಹಿಂದೂಸ್ತಾನಿ ಸಂಗೀತ ಪ್ರಕಾರವಾದ ಕಿರಾಣಾ ಘರಾಣಾವನ್ನು ಪೋಷಿಸಿ ಬೆಳೆಸಿದರು. ಅದನ್ನು ತಮ್ಮ ಶಿಷ್ಯ ಜಯತೀರ್ಥ ಮೇವುಂಡಿ ಅವರಿಗೂ ಧಾರೆಯೆರೆದರು. ಪರಿಣಾಮ ಸಂಗೀತ ಸಾಧನೆಗಾಗಿ ಮೇವುಂಡಿ ಅವರಿಗೆ ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ’ ನೀಡುವ ಪ್ರತಿಷ್ಠಿತ ‘ಉಸ್ತಾದ್‌ ಬಿಸ್ಮಿಲ್ಲಾ ಖಾನ್’ ಯುವ ಪುರಸ್ಕಾರ ಸಂದಿದೆ.

ಮೂಲತಃ ಹುಬ್ಬಳ್ಳಿಯವರೇ ಆದ ಜಯತೀರ್ಥ ಅವರು ಆರಂಭದಲ್ಲಿ ಅರ್ಜುನಸಾ ನಾಕೋಡ ಅವರಲ್ಲಿ ಶಿಷ್ಯತ್ವ ಪಡೆದು ಸಂಗೀತ ಸಾಧನೆ ಮಾಡಿದರು. ಬಿ.ಎ. ಮ್ಯೂಸಿಕ್‌ ಪದವಿ ಪಡೆದಿರುವ ಮೇವುಂಡಿ, ತಮ್ಮ ಮುಂದಿನ ದಾರಿ ಯಾವುದು ಎಂಬುದನ್ನು ಆಗಲೇ ಗುರುತಿಸಿಕೊಂಡಿದ್ದರು. ಕೇವಲ 41ನೇ ವಯಸ್ಸಿಗೆ ಅವರು ಮಾಡಿದ ಸಾಧನೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳು­ವಂಥದ್ದು. ಕಿರಾಣಾ ಘರಾಣಾ ಎಂಬ ‘ಸಂಗೀತ ಮರ’ದ ಟಿಸಿಲುಗಳನ್ನು ಇನ್ನಷ್ಟು ಹೆಚ್ಚಿಸಬೇಕೆಂಬ ಸಂಕಲ್ಪ ತೊಟ್ಟ ಅವರು ಈ ಕೆಲಸದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ.

ದೇಶದ ಪ್ರಖ್ಯಾತ ಸಂಗೀತ ಮಹೋತ್ಸವಗಳಾದ ಪುಣೆಯ ಸವಾಯಿ ಗಂಧರ್ವ ಮಹೋತ್ಸವ, ಗ್ವಾಲಿಯರ್‌ನ ತಾನ್‌ಸೇನ್‌ ಸಮಾರೋಹ, ಜಲಂಧರ್‌ನ ಹರವಲ್ಲಭ ಸಂಗೀತ ಮಹೋತ್ಸವ, ರಾಜಸ್ತಾನದ ಮೈಹರ್‌ನ ಅಲ್ಲಾವುದ್ದೀನ್‌ ಖಾನ್‌ ಸಂಗೀತ ಸಮಾರೋಹ ಸೇರಿದಂತೆ ದೇಶದ ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಗಾಯನ ಪ್ರಸ್ತುತಪಡಿಸಿದ್ದಾರೆ. ಕಳೆದ ತಿಂಗಳು ಮುಂಬೈನಲ್ಲಿ ಮೇರು ಗಾಯಕಿ ಲತಾ ಮಂಗೇಶ್ಕರ್‌ ಮೇವುಂಡಿ ಅವರ ಗಾಯನದ ಸಿಡಿ ಬಿಡುಗಡೆ ಮಾಡಿದರು. ಅಷ್ಟರ ಮಟ್ಟಿಗೆ ರಾಷ್ಟ್ರಮಟ್ಟದಲ್ಲಿ ಮೇವುಂಡಿ ಗುರುತಿಸಿಕೊಂಡಿದ್ದಾರೆ.

ಅದು 1995ರ ಮಾತು. ಸಂಗೀತದಲ್ಲಿ ಆಗಷ್ಟೇ ಬೆಳಕಿಗೆ ಬರುತ್ತಿದ್ದ ಜಯತೀರ್ಥ ಅವರು ಗೋವಾ ಆಕಾಶವಾಣಿಯ ನಿಲಯದ ಕಲಾವಿದರಾಗಿ ನೇಮಕವಾದರು. ಅವರ ಸಂಗೀತ ಸಾಧನೆಯನ್ನು ಗಮನಿಸುತ್ತಲೇ ಇದ್ದ ಪಂ.ಭೀಮಸೇನ ಜೋಶಿ ಅವರು ಮೇವುಂಡಿ ಅವರಿಗೆ ದೂರವಾಣಿ ಕರೆ ಮಾಡಿ, ಪುಣೆಯಲ್ಲಿ ನಡೆಯುವ ‘ಸವಾಯಿ ಗಂಧರ್ವ ಸಂಗೀತ ಮಹೋತ್ಸವ’ದಲ್ಲಿ ಹಾಡುವಂತೆ ಆಹ್ವಾನ ನೀಡಿದರು. ಧಾರವಾಡದ ಮಣ್ಣಿನಿಂದ ಬಂದ ಸಂಗೀತಗಾರ ಎಂದ ಮೇಲೆ ಕೇಳಬೇಕೇ? ಹಲವು ಪ್ರಶಸ್ತಿ, ಪುರಸ್ಕಾರಗಳು ಹುಡುಕಿಕೊಂಡು ಬರಲು ಆರಂಭಿಸಿದವು.

ಪಂ.ಜಸ್‌ರಾಜ್‌ ಅವರ ‘ಆರ್ಟ್‌–  ಆರ್ಟಿಸ್ಟ್‌’­ನೀಡುವ ‘ಯುವ ಸಂಗೀತ ಪುರಸ್ಕಾರ’­ವನ್ನು ಅಂದಿನ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಅವರಿಂದ ಪಡೆದಿರುವ ಮೇವುಂಡಿ ಅವರಿಗೆ, ಭೀಮಸೇನ ಜೋಶಿ ಅವರ ಹೆಸರಿನಲ್ಲಿ ನೀಡುವ ‘ಸ್ವರಭಾಸ್ಕರ ಪುರಸ್ಕಾರ’, ಪಂ.ಜಸ್‌ರಾಜ್‌ ಗೌರವ ಪುರಸ್ಕಾರ, ಪಂ.ಬಸವರಾಜ ರಾಜಗುರು ಪುರಸ್ಕಾರ, ಆದಿತ್ಯ ಬಿರ್ಲಾ ಸಂಗೀತ ಕಲಾ ಕಿರಣ ಪುರಸ್ಕಾರಗಳು ಸಂದಿವೆ.

ಬಿಲಾಸ್ ಖಾನಿ ತೋಡಿ, ಅಭೋಗಿ, ಕಾನಡಾ, ಬಸಂತ್, ಯಮನ್‌, ಮಾರ್ವಾ, ಲಲತ್‌ ಗುಣಕಲಿ, ಶುದ್ಧ ಸಾರಂಗತೆ ರಾಗಗಳಿರುವ ಹಿಂದೂಸ್ತಾನಿ ಗಾಯನವನ್ನು ಧ್ವನಿಮುದ್ರಿಸಿ ಸಂಗೀತ ಲೋಕಕ್ಕೆ ನೀಡಿದ್ದಾರೆ. ‘ರಂಗಬಾರೋ ಪಾಂಡುರಂಗ ಬಾರೊ’ ಎಂಬ ಹೆಸರಿನ ದಾಸರ ಪದಗಳ ಸಿಡಿ ಹಾಗೂ ‘ನಾರಾಯಣ ನಮೋ ನಮೊ’ ಸಿಡಿಯನ್ನೂ ಹೊರತಂದಿದ್ದಾರೆ. ತೋಡಿ, ಲಲತ್‌, ಮುಲ್ತಾನಿ, ಶುದ್ಧ ಕಲ್ಯಾಣ, ದರ್ಬಾರಿ ಕಾನಡಾ, ಮಾರ್ವಾ ಅವರ ನೆಚ್ಚಿನ ರಾಗಗಳು.

‘ಭಾರತರತ್ನತ್ರಯರಾದ ಪಂ.ಭೀಮಸೇನ ಜೋಶಿ, ಪಂ.ರವಿಶಂಕರ್‌, ಲತಾ ಮಂಗೇಶ್ಕರ್ ಅವರನ್ನು ಭೇಟಿಯಾಗಿದ್ದು ಜೀವನದ ಪ್ರಮುಖ ಮೈಲುಗಳಲ್ಲೊಂದು’ ಎಂದು ಸ್ಮರಿಸುವ ಜಯತೀರ್ಥ, ‘ನಾನು 21 ವರ್ಷದವನಾಗಿ­ದ್ದಾ­ಗಲೇ ಭೀಮಸೇನ ಜೋಶಿ ಅವರು ಪುಣೆಯಲ್ಲಿ 20 ಸಾವಿರ ಜನರೆದುರು ಹಾಡುವಂತೆ ಆಹ್ವಾನ ನೀಡಿದ ಘಟನೆ ನೆನಪಿನ ಬುತ್ತಿಯಿಂದ ಕರಗುವುದಿಲ್ಲ’ ಎನ್ನುತ್ತಾರೆ. ಹುಬ್ಬಳ್ಳಿಯಲ್ಲಿ ‘ಕಿರಣಾ ಸ್ಕೂಲ್‌ ಆಫ್‌ ಫೈನ್‌ ಆರ್ಟ್ಸ್’ ಸಂಸ್ಥೆಯನ್ನು ಆರಂಭಿಸುವ ಮೂಲಕ­, ಬೆಳಗಿನ ರಿಯಾಜ್‌ ಹೇಗೆ ಮಾಡಬೇಕು. ಉಸಿರು ಹೇಗೆ ಹಿಡಿಯಬೇಕು  ಎಂಬ ಬಗ್ಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ. 

ಕನ್ನಡದ ‘ಕಲ್ಲರಳಿ ಹೂವಾಗಿ’, ಮರಾಠಿಯ ‘ಆಜ್‌ ಚಾ ದಿವಸ್‌ ಮಾಜಾ’ ಸಿನಿಮಾದಲ್ಲಿ ಹಾಡಿರುವ ಜಯತೀರ್ಥ ಅವರ ಬಗ್ಗೆ ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್‌ ಸಂದರ್ಶನವೊಂದರಲ್ಲಿ, ‘ಕೇಳುಗರ ಮೈಯಲ್ಲಿ ವಿದ್ಯುತ್‌ ಸಂಚಾರವಾಗುವಂತೆ ಹಾಡುವ ಮೂಲಕ ಜಯತೀರ್ಥ ಅವರು ಇತರರನ್ನು ನಾಚಿಸುತ್ತಾರೆ’ ಎಂದಿದ್ದಾರೆ.

ಆಕಾಶವಾಣಿ ಹಾಗೂ ದೂರದರ್ಶನದ ‘ಎ’ ಗ್ರೇಡ್‌ ಕಲಾವಿದರಾಗಿರುವ ಮೇವುಂಡಿ ಅವರು ಹಿಂದೂಸ್ತಾನಿ ಗಾಯನದ ಜೊತೆ ಜೊತೆಗೆ ಸಂತ ವಾಣಿ, ದಾಸ ವಾಣಿ ಸಂಗೀತ ಪ್ರಕಾರದಲ್ಲಿ ಕೈಯಾಡಿಸಿದ್ದಾರೆ. ಪುತ್ರ ಲಲಿತ್‌ನನ್ನೂ ಸಂಗೀತದ ಸಾಧನೆಗೆ ಹಚ್ಚಿರುವ ಮೇವುಂಡಿ, ಬೆಂಗಳೂರಿನಲ್ಲಿಯೂ ಕಿರಾಣಾ ಘರಾಣಾ ಬೋಧಿ­ಸುವ ಶಾಲೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
-ಮನೋಜಕುಮಾರ್‌ ಗುದ್ದಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT