ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಹಾದಿಗೆ ಮರಳುವ ವಿಶ್ವಾಸದಲ್ಲಿ ಆರ್‌ಸಿಬಿ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಒಂದು ವಾರದ ಅವಧಿಯಲ್ಲಿ ತವರಿನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಇವೆರಡರಲ್ಲೂ ಗೆಲುವು ಪಡೆಯುವುದು ನಮ್ಮ ಗುರಿ~

- ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ಡೇನಿಯಲ್ ವೆಟೋರಿ ಕೆಲ ದಿನಗಳ ಹಿಂದೆ ಈ ಮಾತುಗಳನ್ನಾಡಿದ್ದರು. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು 47 ರನ್‌ಗಳ ಸೋಲು ಅನುಭವಿಸಿದ ಬಳಿಕ ಅವರು ಹೀಗೆ ನುಡಿದಿದ್ದರು.

ವೆಟೋರಿ ಹೇಳಿದ್ದ ಆ ಎರಡು ಪಂದ್ಯಗಳಲ್ಲಿ ಮೊದಲನೇ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ. ಆರ್‌ಸಿಬಿಗೆ ಎದುರಾಳಿಯಾಗಿ ನಿಂತಿರುವುದು ಕಿಂಗ್ಸ್ ಇಲೆವೆನ್  ಪಂಜಾಬ್. ವೆಟೋರಿಯ ಮಾತು ನಿಜವಾಗಲಿದೆಯೇ ಎಂಬ ಪ್ರಶ್ನೆ ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ.

ಐಪಿಎಲ್‌ನ ಐದನೇ ಅವತರಣಿಕೆಯ ಆರಂಭಕ್ಕೆ ಮುನ್ನ ಬಲಿಷ್ಠ ತಂಡದಂತೆ ಕಾಣುತ್ತಿದ್ದ ಆರ್‌ಸಿಬಿ ಇದೀಗ ಒಂದು `ಸಾಮಾನ್ಯ~ ತಂಡ ಎನಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್‌ನ ಇದುವರೆಗಿನ ಪಯಣವನ್ನು ನೋಡಿದರೆ ಮಿಶ್ರ ಫಲಿತಾಂಶ ಕಂಡುಬರುತ್ತದೆ. ನಾಲ್ಕು ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ಅಷ್ಟೇ ಪಂದ್ಯಗಳಲ್ಲಿ ಸೋಲು ಎದುರಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ವೆಟೋರಿ ಬಳಗ ಈಗ ಒಂಬತ್ತು ಪಾಯಿಂಟ್‌ಗಳನ್ನು ಹೊಂದಿದೆ.

ಇನ್ನು ಮುಂದೆ ಎದುರಾಗುವ ಪ್ರತಿ ಸೋಲು ಆಟಗಾರರ ಮೇಲಿನ ಒತ್ತಡವನ್ನು ಹೆಚ್ಚಿಸಲಿದೆ. ಮಾತ್ರವಲ್ಲ `ಪ್ಲೇ ಆಫ್~ ಹಂತ ಪ್ರವೇಶದ ಹಾದಿ ಮತ್ತಷ್ಟು ಕಠಿಣ ಎನಿಸಲಿದೆ. ಈ ಕಾರಣ ಬುಧವಾರ ತಂಡ ಎಲ್ಲ ವಿಭಾಗಗಳಲ್ಲೂ ಚೇತರಿಕೆಯ ಪ್ರದರ್ಶನ ನೀಡಿ ಗೆಲುವು ಪಡೆಯುವುದು ಅನಿವಾರ್ಯ.

ಬ್ಯಾಟಿಂಗ್‌ನಲ್ಲಿ ವಿದೇಶಿ ಆಟಗಾರರನ್ನೇ ನೆಚ್ಚಿಕೊಂಡಿರುವುದು ತಂಡದ ದೌರ್ಬಲ್ಯ ಎನ್ನಬಹುದು. ಇಂದು ಕೂಡಾ ತಂಡ ವೆಸ್ಟ್‌ಇಂಡೀಸ್‌ನ ಆಕ್ರಮಣಕಾರಿ ಆಟಗಾರ ಕ್ರಿಸ್ ಗೇಲ್ ಅವರನ್ನೇ ಅವಲಂಬಿಸಬೇಕಿದೆ. ಗೇಲ್ ವಿಫಲರಾದರೆ ಎಬಿ ಡಿವಿಲಿಯರ್ಸ್ ಮತ್ತು ತಿಲಕರತ್ನೆ ದಿಲ್ಶಾನ್ ದೊಡ್ಡ ಮೊತ್ತ ಗಳಿಸುವುದು ಅಗತ್ಯ. ಏಕೆಂದರೆ `ದೇಸಿ~ ಆಟಗಾರರಾದ ವಿರಾಟ್ ಕೊಹ್ಲಿ, ಸೌರಭ್ ತಿವಾರಿ ಹಾಗೂ ಮಯಾಂಕ್ ಅಗರ್‌ವಾಲ್ ಗೆಲುವಿಗೆ ಕೊಡುಗೆ ನೀಡಲು ವಿಫಲರಾಗುತ್ತಿದ್ದಾರೆ.

ಮಿಂಚಿನ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳಿಗೆ ತಲೆನೋವಾಗಿ ಕಾಡಬೇಕಿದ್ದ ಕೊಹ್ಲಿ ತಂಡಕ್ಕೆ `ಭಾರ~ವಾಗಿ ಪರಿಣಮಿಸುತ್ತಿರುವುದು ದುರದೃಷ್ಟ ಅನ್ನಬೇಕು. ಭಾರತ ತಂಡದ ಆಸೀಸ್ ಪ್ರವಾಸ ಹಾಗೂ ಏಷ್ಯಾ ಕಪ್ ಟೂರ್ನಿಯಲ್ಲಿ ಈ ಬ್ಯಾಟ್ಸ್‌ಮನ್ ಅದ್ಭುತ ಫಾರ್ಮ್‌ನಲ್ಲಿದ್ದರು. ಆದರೆ ಐಪಿಎಲ್‌ನಲ್ಲಿ ಅವರು ಆಡಿರುವ ಎಂಟು ಇನಿಂಗ್ಸ್‌ಗಳಿಂದ ಪೇರಿಸಿರುವುದು 147 ರನ್ ಮಾತ್ರ. ಕೇವಲ ಒಂದು ಅರ್ಧಶತಕ ಇದರಲ್ಲಿ ಒಳಗೊಂಡಿದೆ.

ಈ ಪಂದ್ಯದಲ್ಲೂ ಆರ್‌ಸಿಬಿ ಆಡಳಿತಕ್ಕೆ ಅಂತಿಮ ಇಲೆವೆನ್‌ನ ಆಯ್ಕೆ ತಲೆನೋವಾಗಿ ಪರಿಣಮಿಸಿದೆ. ಬೌಲಿಂಗ್ ವಿಭಾಗವನ್ನು ಬಲಪಡಿಸಲು ಮುತ್ತಯ್ಯ ಮುರಳೀಧರನ್‌ಗೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ. `ವಿದೇಶದ ಮೂವರು ಬ್ಯಾಟ್ಸ್‌ಮನ್ ಮತ್ತು ಒಬ್ಬ ಬೌಲರ್‌ಗಷ್ಟೇ ಅಂತಿಮ ಇಲೆವೆನ್‌ನಲ್ಲಿ ಅವಕಾಶ~ ಎಂದು ವೆಟೋರಿ ಮಂಗಳವಾರ ನುಡಿದರು. ಈ ಕಾರಣ ಶ್ರೀಲಂಕಾದ ಸ್ಪಿನ್ನರ್‌ಗೆ ಸ್ಥಾನ ಲಭಿಸುವ ಸಾಧ್ಯತೆ ಕಡಿಮೆ.

ಆತ್ಮವಿಶ್ವಾಸದಲ್ಲಿ `ಕಿಂಗ್ಸ್~: ಟೂರ್ನಿಯ ಆರಂಭದಲ್ಲಿ ಪರದಾಟ ನಡೆಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಧಾನವಾಗಿ      ಫಾರ್ಮ್‌ಗೆ ಮರಳುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನೀಡಿದ್ದ ಪ್ರದರ್ಶನವೇ ಅದಕ್ಕೆ ಸಾಕ್ಷಿ. ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಕಳೆದ ಬಾರಿಯ ಚಾಂಪಿಯನ್ನರ ವಿರುದ್ಧ ಏಳು ರನ್‌ಗಳ ಜಯ ಪಡೆದಿತ್ತು. ಇಲ್ಲೂ ಗೆಲುವಿನ ಓಟ ಮುಂದುವರಿಸುವುದು ಪಂಜಾಬ್‌ನ ತಂಡದ ಗುರಿ.

ಆದರೆ ಆ್ಯಡಮ್ ಗಿಲ್‌ಕ್ರಿಸ್ಟ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ತಂಡಕ್ಕೆ ಹಿನ್ನಡೆ ಉಂಟುಮಾಡಿದೆ. ಕಳೆದ ಕೆಲ ಪಂದ್ಯಗಳಲ್ಲಿ ಗಿಲ್‌ಕ್ರಿಸ್ಟ್ ಬದಲು ಡೇವಿಡ್ ಹಸ್ಸಿ ತಂಡವನ್ನು ಮುನ್ನಡೆಸಿದ್ದರು. ಬುಧವಾರ ಕೂಡಾ ಗಿಲ್‌ಕ್ರಿಸ್ಟ್ ಕಣಕ್ಕಿಳಿಯುವುದಿಲ್ಲ.

ಈ ಕಾರಣ ಬ್ಯಾಟಿಂಗ್‌ನಲ್ಲಿ ಹಸ್ಸಿ, ಶಾನ್ ಮಾರ್ಷ್ ಮತ್ತು ಮನ್‌ದೀಪ್ ಸಿಂಗ್ ಅವರನ್ನೇ ನೆಚ್ಚಿಕೊಳ್ಳಬೇಕಿದೆ. ಈ ಮೂವರು 200ಕ್ಕೂ ಅಧಿಕ ರನ್ ಪೇರಿಸಿದ್ದಾರೆ. ರ‌್ಯಾನ್ ಹ್ಯಾರಿಸ್ ಆಗಮನದ ಕಾರಣ ತಂಡದ ಬಲ ಹೆಚ್ಚಿರುವುದು ನಿಜ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 25 ರಂದು ನಡೆಯಬೇಕಿದ್ದ ಆರ್‌ಸಿಬಿ- ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇಂದಿನ ಪಂದ್ಯ ಮಳೆಯಿಂದ ಕೊಚ್ಚಿಕೊಂಡು ಹೋಗಲಿಕ್ಕಿಲ್ಲ ಎಂಬ ನಿರೀಕ್ಷೆ ಅಭಿಮಾನಿಗಳದ್ದು.
 ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT