ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಪ್ರದಾ ಕೈ ಹಿಡಿದೀತೆ ಬಿಜ್ನೋರ್‌?

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬಿಜ್ನೋರ್‌: ‘ಜಯಪ್ರದಾ ರಾಜ­ಕೀಯ ಯಾತ್ರೆ ಮುಂದುವರಿ­ಯುತ್ತ­ದೆಯೇ?’ ಎನ್ನುವುದು ಉತ್ತರ ಪ್ರದೇಶ ರಾಜಕೀಯ ವಲಯದಲ್ಲಿ ಪ್ರಮುಖ ಚರ್ಚೆ ವಿಷಯ.

ಈ ಬಹುಭಾಷಾ ತಾರೆ ಈಗ ಪಕ್ಷ ಮತ್ತು ಕ್ಷೇತ್ರ ಎರಡನ್ನೂ ಬದಲಾ­ಯಿಸಿ­ದ್ದಾರೆ. ಕಳೆದೆರಡು ಚುನಾವಣೆ­ಯಲ್ಲಿ ರಾಂಪುರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿ­ದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಸಮಾಜ­ವಾದಿ ಪಕ್ಷ ತೊರೆದು ರಾಷ್ಟ್ರೀಯ ಲೋಕದಳ ಸೇರಿದ್ದಾರೆ. ನೆರೆಯ ಬಿಜ್ನೋರ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ರಾಂಪುರದಿಂದ ಸ್ಪರ್ಧಿಸಿದರೆ ಸೋಲಾಗಬಹುದೆಂಬ ಭಯ ಅವರ ಈ  ವಲಸೆಗೆ ಕಾರಣ. 2004 ಮತ್ತು 2009ರ ಚುನಾವಣೆಯಲ್ಲಿ ಗೆಲುವಿನ  ಅಂತರ ಕಡಿಮೆ ಆಗಿದ್ದರಿಂದ ಅವರು ಹೆದರಿದ್ದಾರೆ. ಮೊದಲ ಸಲ 90 ಸಾವಿರ ಮತಗಳ ಅಂತರ ಕಾಯ್ದು­ಕೊಂಡಿದ್ದರು. ಕಳೆದ ಚುನಾವಣೆ ಅಂತರ 30 ಸಾವಿರಕ್ಕೆ ಕುಸಿದಿತ್ತು.

ರಾಂಪುರ ಸಮಾಜವಾದಿ ಪಕ್ಷದ ಪ್ರಭಾವಿ ನಾಯಕ ಅಜಂಖಾನ್‌ ಅವರ ರಾಜಕೀಯ ಅಖಾಡ. 2009ರ ಚುನಾವಣೆಯಲ್ಲೇ ಜಯಪ್ರದಾಗೆ ಟಿಕೆಟ್‌ ಕೊಡುವುದು ಬೇಡ ಎಂದು ಖಾನ್‌ ಪಟ್ಟು ಹಿಡಿದಿದ್ದರು. ಆದರೂ ಹೇಗೋ ಟಿಕೆಟ್‌ ಪಡೆದು ಅವರು ಗೆದ್ದರು. ಆದರೆ, ಇಬ್ಬರ ನಡುವಿನ ಮನಸ್ತಾಪ ಬೆಳೆಯುತ್ತಾ ಹೋಗಿದ್ದ­ರಿಂದ ಬಾಲಿವುಡ್‌ನ ಈ  ನಟಿ ಅನಿವಾರ್ಯವಾಗಿ ಪಕ್ಷ ತ್ಯಜಿಸಿದ್ದಾರೆ.

ಎನ್‌.ಟಿ. ರಾಮರಾವ್‌ ಎರಡು ದಶಕದ ಹಿಂದೆ  ಜಯಪ್ರದಾ ಅವರಿಗೆ ರಾಜಕೀಯ ದೀಕ್ಷೆ ಕೊಟ್ಟಿದ್ದರು. ಎನ್‌ಟಿಆರ್‌ ಅಳಿಯ ಚಂದ್ರಬಾಬು ನಾಯ್ಡು ಸ್ವತಃ ಮಾವನಿಗೇ ‘ಕೊಕ್‌’ ಕೊಟ್ಟಾಗ ಜಯಪ್ರದಾ ಅವರ ನಿಷ್ಠೆ ಬದಲಾಯಿತು. ಜಯಪ್ರದಾ ಅವ­ರನ್ನು ನಾಯ್ಡು ರಾಜ್ಯಸಭೆಗೆ ಆರಿಸಿ ಕಳಿಸಿದರು.  ಆದರೆ, ನಾಯ್ಡು ಜತೆ ಸಂಬಂಧ ಹಳಸಿದ್ದರಿಂದ ಅವರು ರಾಜಕೀಯ ಭವಿಷ್ಯ ಹುಡುಕಿಕೊಂಡು ಉತ್ತರ ಪ್ರದೇಶಕ್ಕೆ ವಲಸೆ ಬಂದರು. ಸಮಾಜವಾದಿ ಪಕ್ಷದಲ್ಲಿ ಆಸರೆ ಪಡೆದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಆರ್‌ಎಲ್‌ಡಿ ನಡುವೆ ಸೀಟು ಹೊಂದಾಣಿಕೆ ಆಗಿದೆ. ಬಿಜ್ನೋರ್‌ ಕ್ಷೇತ್ರವನ್ನು ಕಾಂಗ್ರೆಸ್‌ ಮಿತ್ರ ಪಕ್ಷಕ್ಕೆ ಬಿಟ್ಟಿದೆ. ಈ ಕ್ಷೇತ್ರದಿಂದ ಜಯಪ್ರದಾ ಅದೃಷ್ಟ ಪಣಕ್ಕಿಟ್ಟಿದ್ದಾರೆ. ಪ್ರತಿ ದಿನ ಎಸ್‌ಯುವಿ ವಾಹನದಲ್ಲಿ ಕುಳಿತು ಹಳ್ಳಿಹಳ್ಳಿಗೆ ಹೋಗುತ್ತಿದ್ದಾರೆ. ಜನರ ಗುಂಪು ಕಂಡ ಕಡೆ ಕೈಬೀಸಿ, ಮುಗು­ಳ್ನ­ಗುತ್ತಾರೆ. ಆಕರ್ಷಕ ಮಾತಿ­ನಿಂದ ಮತದಾರರನ್ನು ಸೆಳೆಯುತ್ತಿ­ದ್ದಾರೆ.

ಭಾರತೀಯ ಜನತಾ ಪಕ್ಷ ಭರತೇಂದು ಅವರಿಗೆ ಟಿಕೆಟ್‌ ನೀಡಿದೆ. ಮೊದಲು ರಾಜೇಂದರ್‌ ಚೌಧರಿ ಅವರ ಹೆಸರನ್ನು ಪ್ರಕಟಿಸಲಾಗಿತ್ತು. ರಾಜಕೀಯ ಒತ್ತಡದಿಂದಾಗಿ ಕೊನೆ ಗಳಿಗೆಯಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ರಾಜೇಂದರ್‌ ಅವರ ಬಗ್ಗೆ ಕ್ಷೇತ್ರದ ಮತದಾರರು ಮೆಚ್ಚುಗೆ ಮಾತುಗಳನ್ನು ಆಡುತ್ತಾರೆ. ಅವರೇ ಈ ಚುನಾವಣೆಗೆ ನಿಂತಿದ್ದರೆ ರಂಗು ಬರುತ್ತಿತ್ತು ಎಂಬ ಅಭಿಪ್ರಾಯ ಇಲ್ಲಿ ಕೇಳಿಬರುತ್ತದೆ.

ಭರತೇಂದು ಮುಜಫ್ಫರ್‌ನಗರ ಗಲಭೆ ವೇಳೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಹೊತ್ತಿ­ದ್ದಾರೆ. ಈ ಸಂಬಂಧ ಜೈಲಿಗೂ ಹೋಗಿ ಬಂದಿದ್ದಾರೆ. ಬಹುಜನ ಸಮಾಜ ಪಕ್ಷದ ಮಲೂಕ್‌ ನಾಗರ್‌, ಸಮಾಜ­ವಾದಿ ಪಕ್ಷದ ಹಾಜಿ ಶಹಾನವಾಜ್‌ ರಾಣಾ ಮತ್ತು ಎಎಪಿಯ ಡಾ.ಗೌರವ್‌ ಚೌಹಾಣ್‌ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬಿಜ್ನೋರ್‌ ಲೋಕಸಭಾ ಕ್ಷೇತ್ರ­ದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆ­ಯಲ್ಲಿ­ದ್ದಾರೆ. ಎರಡನೇ ಸ್ಥಾನದಲ್ಲಿ ದಲಿತರಿದ್ದಾರೆ. ಗುಜ್ಜರರು, ಜಾಟರು ಮತ್ತಿತರ ಜಾತಿಗಳ ಜನರೂ ಇದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಉಳಿದ ಕ್ಷೇತ್ರಗಳಂತೆ ಇಲ್ಲಿಯೂ ಎಲ್ಲ ಹಿಂದೂ ಮತಗಳನ್ನು ಒಗ್ಗೂಡಿಸಲು ಬಿಜೆಪಿ ಪ್ರಯತ್ನಿಸು­ತ್ತಿದೆ. ಜಾಟ್‌ ಮತ್ತು ಮುಸ್ಲಿಂ ಮತ­ಗಳನ್ನು ಪಡೆಯಲು ಆರ್‌ಎಲ್‌ಡಿ ಕಸರತ್ತು ನಡೆಸಿದೆ. ಬಿಎಸ್‌ಪಿ ತನ್ನ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿದೆ. ಮುಸ್ಲಿಂ ಮತಗಳು ಬರಬಹುದೆಂಬ ವಿಶ್ವಾಸ­ದಲ್ಲಿದೆ. ಎಸ್‌ಪಿ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಹೊಂದಾ­ಣಿಕೆಗೆ ಪ್ರಯತ್ನಿಸುತ್ತಿದೆ.

ಪಟ್ಟಣದಲ್ಲಿ ಮೊಬೈಲ್‌ ದುರಸ್ತಿ ಅಂಗಡಿ ಇಟ್ಟುಕೊಂಡಿರುವ ಮನೋಜ್‌ ಕುಮಾರ್‌ ಅವರು ಬಿಜ್ನೋರ್‌ ವಾತಾವರಣವನ್ನು ಸಂಕ್ಷಿಪ್ತ­ವಾಗಿ ವಿಶ್ಲೇಷಿಸುತ್ತಾರೆ. ‘ಮುಜಫ್ಫರ್‌ನಗರ ಪಕ್ಕದಲ್ಲಿದೆ. ಆದರೆ, ಅದರ ಪರಿಣಾಮ ಈ ಚುನಾವಣೆ ಮೇಲೆ ಆಗುವುದಿಲ್ಲ. ಮುಸ್ಲಿಮರು ಬಿಜೆಪಿಗೆ ವೋಟು ಕೊಡು­ವುದಿಲ್ಲ. ಬಿಜೆಪಿಗೆ ಪ್ರಬಲ ಪೈಪೋಟಿ ಕೊಡುವ ಪಕ್ಷದ ಪರ ನಿಲ್ಲುತ್ತಾರೆ. ಮೋದಿ ಬೆಂಬಲಿಸುವ ಜನರೂ ಇದ್ದಾರೆ. ಆದರೆ, ಬಿಜೆಪಿ ಟಿಕೆಟ್‌ ಹಂಚಿಕೆ ಗೊಂದಲದಲ್ಲಿ ಸಿಕ್ಕಿ­ಕೊಂಡು ಒದ್ದಾಡುತ್ತಿದೆ. ರಾಜೇಂದರ್‌ ಅವರಿಗೆ ಒಳ್ಳೆ ಹೆಸರಿದೆ. ಭರತೇಂದು ಅವರನ್ನು ಜನ ಇಷ್ಟಪಡುವುದಿಲ್ಲ’ ಎಂದು ಮನೋಜ್‌ ಕುಮಾರ್‌ ಹೇಳುತ್ತಾರೆ.

ಸಮಾಜವಾದಿ ಪಕ್ಷದ ಶಹಾನ­ವಾಜ್‌ ಸ್ಥಳೀಯ ವ್ಯಕ್ತಿ. ಉಕ್ಕು, ಕಾಗದದ ಕಾರ್ಖಾನೆ ಒಳಗೊಂಡಂತೆ ಅನೇಕ ಉದ್ಯಮಗಳನ್ನು ಹೊಂದಿ­ದ್ದಾರೆ. ಒಳ್ಳೆಯ ಹಿನ್ನೆಲೆಯಿಂದ   ಬಂದವರು. ಜನರ ಸಮಸ್ಯೆ ಕೇಳು­ತ್ತಾರೆ. ಸುಲಭವಾಗಿ ಕೈಗೆ ಸಿಗುತ್ತಾ­ರೆಂದು ಅವರ ಸಹೋದರ ಸಾಸೀರ್‌ ಚೌಧರಿ ಪ್ರತಿಪಾದಿಸುತ್ತಾರೆ. ಆದರೆ, ಪಟ್ಟಣದ ಹಿರಿಯ ವಕೀಲ ಸುಭಾಷ್‌­ಚಂದ್ರ ಅವರು ನಾಸೀರ್‌ ಚೌಧರಿ ಅವರ ಮಾತು ಒಪ್ಪುವುದಿಲ್ಲ.

‘ಬಿಜ್ನೋರ್‌­ನಲ್ಲಿ ಮೋದಿ ಪ್ರಭಾವ ಕಡಿಮೆ ಇದೆ. ಎಸ್‌ಪಿ ಜೋರಾಗಿರು­ವಂತೆ ಕಾಣುತ್ತಿದೆ. ಈ ಪಕ್ಷದ ಅಭ್ಯರ್ಥಿ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಬಿಜ್ನೋರ್‌ ಚುನಾವಣೆ ಪ್ರಮುಖ­ವಾಗಿ ಜಾತಿ ಆಧಾರದ ಮೇಲೆ ನಿಂತಿದೆ. ಆದರೆ, ಅಭಿವೃದ್ಧಿ ವಿಷಯವೂ ಅಷ್ಟೇ ಮುಖ್ಯವಾಗಲಿದೆ. ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಾಣಬೇಕಿದೆ’ ಎನ್ನುತ್ತಾರೆ ಹಿರಿಯ ವಕೀಲ.

ಬಿಜ್ನೋರ್‌ಗೂ ಬಿಎಸ್‌ಪಿಗೂ ಬಿಡಿಸ­ಲಾಗದ ನಂಟಿದೆ. ಬಹುಜನ ಸಮಾಜ ಪಕ್ಷ ಕಟ್ಟುವ ಆಲೋಚನೆ ಹುಟ್ಟಿದ್ದು ಈ ಪಟ್ಟಣದಲ್ಲೇ. ಮಾಯಾವತಿ ಅವರ ತಾಯಿ ಇಲ್ಲೇ ಕೆಲಸದಲ್ಲಿದ್ದರು. ಮಾಯಾವತಿ 1985ರ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿದ್ದರು. ಆಗ ಮೀರಾ ಕುಮಾರ್‌ ಆಯ್ಕೆ ಆಗಿದ್ದರು ಎಂದು ಬಿಎಸ್‌ಪಿ ಪೂರ್ಣಾವಧಿ ಕಾರ್ಯಕರ್ತ ಸಂಕ್ರಾಮ್‌ ಸಿಂಗ್‌ ನೆನಪು ಮಾಡಿಕೊಳ್ಳುತ್ತಾರೆ.

ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಸರ್ಕಾರವಿದ್ದಾಗ ಮಾಯಾವತಿ ಉತ್ತಮ ಆಡಳಿತ ನೀಡಿದ್ದಾರೆ. ಗೂಂಡಾ­ಗಳು, ಕ್ರಿಮಿನಲ್‌ಗಳು ಇರಲಿಲ್ಲ. ದುಷ್ಟರು ರಾಜ್ಯ ಬಿಟ್ಟು ಹೋಗಿದ್ದರು. ಅನೇಕರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ಅಖಿಲೇಶ್‌ ರಾಜ್ಯದಲ್ಲಿ ಗೂಂಡಾಗಳದ್ದೇ ದರ್ಬಾರು ಎಂದು ರಾಂ ರತನ್‌ ಗಾಂಧೀಜಿ ಮತ್ತು ಮನೋಜ್‌ ಕುಮಾರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT