ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯರಾಮ್‌ಗೆ ಅಚ್ಚರಿಯ ಜಯ

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಗುವಾಂಗ್‌ಜೌ (ಪಿಟಿಐ): ಭಾರತದ ಅಜಯ್ ಜಯರಾಮ್ ಇಲ್ಲಿ ಆರಂಭವಾದ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಅಚ್ಚರಿಯ ಗೆಲುವಿನ ಮೂಲಕ ಎರಡನೇ ಸುತ್ತಿಗೆ ಮುನ್ನಡೆದರು. ಪಿ. ಕಶ್ಯಪ್ ಕೂಡಾ ಶುಭಾರಂಭ ಮಾಡಿದರು. ಅದರೆ ಮೊದಲ ದಿನ ಕಣಕ್ಕಿಳಿದ ಭಾರತದ ಇತರ ಎಲ್ಲ ಸ್ಪರ್ಧಿಗಳಿಗೆ ನಿರಾಸೆ ಉಂಟಾಗಿದೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಜಯರಾಮ್ 22-20, 17-21, 21-15 ರಲ್ಲಿ ವಿಶ್ವದ 12ನೇ ರ‍್ಯಾಂಕ್‌ನ ಆಟಗಾರ ಹಾಂಕಾಂಗ್‌ನ ವಿಂಗ್ ಕಿ ವೊಂಗ್ ಅವರಿಗೆ ಆಘಾತ ನೀಡಿದರು. 24ನೇ ರ‍್ಯಾಂಕ್ ಹೊಂದಿರುವ ಜಯರಾಮ್ ಆಕ್ರಮಣ ಹಾಗೂ ರಕ್ಷಣೆಯನ್ನು ಮೈಗೂಡಿಸಿಕೊಂಡು ಆಡಿ ಜಯ ತಮ್ಮದಾಗಿಸಿಕೊಂಡರು.

ಜಯರಾಮ್ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಪಾಬ್ಲೊ ಅಬಿಯಾನ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಇದೊಂದು ಉತ್ತಮ ಪಂದ್ಯವಾಗಿತ್ತು. ಗೆಲುವು ಪಡೆಯುವುದು ಸುಲಭವಲ್ಲ ಎಂದು ಅರಿತಿದ್ದೆ. ಆದ್ದರಿಂದ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡಿದೆ. ಷಟಲ್ ನಿಧಾನವಾಗಿ ಬರುತ್ತಿದ್ದ ಕಾರಣ ತಾಳ್ಮೆ ವಹಿಸಿದೆ' ಎಂದು ಜಯರಾಮ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್ ನಲ್ಲಿ 13ನೇ ಸ್ಥಾನದಲ್ಲಿರುವ ಕಶ್ಯಪ್ ಮೊದಲ ಸುತ್ತಿನಲ್ಲಿ ಪ್ರಯಾಸದ ಗೆಲುವು ಪಡೆದರು. ಅವರು 19-21, 21-14, 21-19 ರಲ್ಲಿ ಎಸ್ಟೋನಿಯದ ರೌಲ್ ಮಸ್ಟ್ ಅವರನ್ನು ಸೋಲಿಸಿದರು. ವಿಶ್ವ ರ‍್ಯಾಂಕಿಂಗ್ ನಲ್ಲಿ 98ನೇ ಸ್ಥಾನದಲ್ಲಿರುವ ರೌಲ್ ಸೋಲು ಅನುಭವಿಸುವ ಮುನ್ನ ಭಾರತದ ಆಟಗಾರನಿಗೆ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು.

ಕಶ್ಯಪ್ ಎರಡನೇ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಪೆಟ್ರ್ ಕೌಕಾಲ್ ವಿರುದ್ಧ ಪೈಪೋಟಿ ನಡೆಸುವರು.
ಆದರೆ ಭಾರತದ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದ ಸ್ಪರ್ಧಿಗಳಿಗೆ ಮೊದಲ ಸುತ್ತಿನಲ್ಲೇ ನಿರಾಸೆ ಉಂಟಾಯಿತು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತರುಣ್ ಕೋನ ಜೋಡಿ 18-21, 21-12, 19-21 ರಲ್ಲಿ ಜಪಾನ್‌ನ ಹಿರೊಕತ್ಸು ಹಶಿಮೊಟೊ ಹಾಗೂ ಮಿಯುಕಿ ಮಯೆದಾ ಕೈಯಲ್ಲಿ ಪರಾಭವಗೊಂಡಿತು.

ಅಪರ್ಣಾ ಬಾಲನ್ ಮತ್ತು ಅರುಣ್ ವಿಷ್ಣು 15-21, 17-21 ರಲ್ಲಿ ಚೀನಾ ತೈಪೆಯ ಮಿನ್ ಚುನ್ ಲಿಯಾವೊ- ಸಿಯಾವೊ ಹುವಾನ್ ಚೆನ್ ಎದುರು ಸೋಲು ಅನುಭವಿಸಿದರು.

ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್‌ನಲ್ಲಿ ನಿರಾಸೆ ಅನುಭವಿಸಿದರು. ಡೆನ್ಮಾರ್ಕ್‌ನ ಲಿನೆ ಡಾಮ್ಕಜಾಯೆರ್ ಕ್ರೂಸ್- ಮೇರಿ ರೋಪ್ಕೆ ಮೊದಲ ಸುತ್ತಿನ ಪಂದ್ಯದಲ್ಲಿ 21-23, 21-18, 21-17ರಲ್ಲಿ ಪ್ರದ್ನ್ಯಾ ಗಾದ್ರೆ ಮತ್ತು ಅಶ್ವಿನಿ ವಿರುದ್ಧ ಜಯ ಸಾಧಿಸಿದರು.

ಅಪರ್ಣಾ ಬಾಲನ್ ಮತ್ತು ಎನ್. ಸಿಕ್ಕಿ ರೆಡ್ಡಿ ಕೂಡಾ ಮೊದಲ ಸುತ್ತಿನಲ್ಲಿ ಮುಗ್ಗರಿಸಿದರು. ಅವರು 15-21, 17-21 ರಲ್ಲಿ ಇಂಗ್ಲೆಂಡ್‌ನ ಲಾರೆನ್ ಸ್ಮಿತ್- ಗ್ಯಾಬ್ರಿಯೆಲ್ ವೈಟ್ ಎದುರು ಪರಾಭವಗೊಂಡರು.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕಣದಲ್ಲಿರುವ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಅವರಿಗೆ ಮೊದಲ ಸುತ್ತಿನಲ್ಲಿ `ಬೈ' ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT