ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾ ಭದ್ರತೆಗೆ ಕ್ರಮ ಕೈಗೊಳ್ಳಿ: ವಿಶೇಷ ಕೋರ್ಟ್

Last Updated 21 ಸೆಪ್ಟೆಂಬರ್ 2011, 9:15 IST
ಅಕ್ಷರ ಗಾತ್ರ

ಬೆಂಗಳೂರು, (ಪಿಟಿಐ): ಘೋಷಿತ ಆದಾಯ ಮೂಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹೊಂದಿದ್ದಾರೆಂಬ ಆರೋಪ ಹೊತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಪ್ರಕರಣದಲ್ಲಿ ಅವರು ಅಕ್ಟೋಬರ್ 20 ರಂದು ಇಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದು ಅಂದು ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವಂತೆ ಇಲ್ಲಿನ ವಿಶೇಷ ನ್ಯಾಯಾಲಯ  ತನ್ನ ಸಿಬ್ಬಂದಿಗೆ ಸೂಚಿಸಿದೆ.

ಭದ್ರತೆಯ ಕುರಿತು ಸರ್ಕಾರಕ್ಕೆ ಪತ್ರ ಬರೆದು  ಅಕ್ಟೋಬರ್ 10ರೊಳಗೆ ಅದರಿಂದ  ಉತ್ತರ ಪಡೆಯುವಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಂ.ಮಲ್ಲಿಕಾರ್ಜುನಯ್ಯ ಅವರು ಬುಧವಾರ ನ್ಯಾಯಾಲಯದ ವಿಶೇಷ ಅಧಿಕಾರಿಗೆ ಸೂಚನೆ ನೀಡಿದರು.

ವಿಶೇಷ ನ್ಯಾಯಾಲಯದಲ್ಲಿ  ಅಕ್ರಮ ಆಸ್ತಿ ಕುರಿತಂತೆ ಅಕ್ಟೋಬರ್ 20 ರಂದು ವಿಚಾರಣೆ ನಡೆಯಲಿದ್ದು ಅಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಉಪಸ್ಥಿತರಿರಬೇಕೆಂದು  ಸೆಪ್ಟೆಂಬರ್ 12 ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ಜಯಲಲಿತಾ ಪರ ವಕೀಲ ಕೆ.ಕುಂದಸ್ವಾಮಿ ಅವರು, ಸುಪ್ರೀಂ ಕೋರ್ಟ್ ಆದೇಶ ಪ್ರತಿಯನ್ನು  ಬುಧವಾರ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ  ಹಾಜರುಪಡಿಸಿ, ಜಯಲಲಿತಾ ನ್ಯಾಯಾಲಯಕ್ಕೆ ಹಾಜರಾಗುವಾಗ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಭದ್ರತೆ ಕೈಗೊಳ್ಳಲು ಕ್ರಮ ಜರುಗಿಸಬೇಕೆಂದು ಕೋರಿದ್ದರು.

ಸದ್ಯಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಝಡ್ ಶ್ರೇಣಿಯ ಭದ್ರತೆ ನೀಡಲಾಗುತ್ತಿದೆ. ಅವರು ನ್ಯಾಯಾಲಯಕ್ಕೆ ಹಾಜರಾಗುವಾಗ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಈಗಾಗಲೇ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 10 ಕ್ಕೆ ಮುಂದೂಡಲಾಗಿದೆ.

ಜಯಲಲಿತಾ ಮತ್ತು ಅವರ ಸಂಬಂಧಿಗಳು ಕಳೆದ 1991 ರಿಂದ 1996ರ ವರೆಗಿನ ಅವಧಿಯಲ್ಲಿ ಘೋಷಿತ ಆದಾಯ ಮೂಲಕ್ಕಿಂತ ಹೆಚ್ಚವರಿಯಾಗಿ 66 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಆರೋಪದ ಪ್ರಕರಣದ ವಿಚಾರಣೆ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT