ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರಾಸಂಧನ ತಾರಾಬಲ!

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಂಬರೀಷ್, ರವಿಚಂದ್ರನ್, ಜಗ್ಗೇಶ್, ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಪ್ರೇಮ್‌ಕುಮಾರ್, ಗಣೇಶ್- ಹೀಗೆ  ದೊಡ್ಡ ತಾರಾಬಳಗವು ಕತ್ರಿಗುಪ್ಪೆ ಬಳಿಯ ವಿಜಯ್ ಮನೆಯ ಹತ್ತಿರವಿದ್ದ ರಾಮ್‌ರಾವ್ ಆಟದ ಬಯಲಿನಲ್ಲಿ ಜಮೆಗೊಂಡಿದ್ದರು. ಯಾವುದೋ ಹೋರಾಟಕ್ಕೋ, ಚಳವಳಿಗೋ, ಡಬ್ಬಿಂಗ್ ತಡೆಯುವ ಉದ್ದೇಶಕ್ಕೋ ಅವರೆಲ್ಲಾ ಸೇರಿರಬಹುದೇ ಎಂದು ದೂರದಿಂದಲೇ ಅವರನ್ನು ಕಂಡ ಕೆಲವರು ಗುಸುಗುಸು ಮಾತಾಡಿಕೊಂಡರು. ಆದರೆ, ಅವರೆಲ್ಲಾ ಬಂದದ್ದು, ನಿಂದದ್ದು, ಮಾತಾಡಿದ್ದು `ಜರಾಸಂಧ~ನನ್ನು ಮೆಚ್ಚಿಸಲು ಅರ್ಥಾತ್ `ಜರಾಸಂಧ~ ಆಡಿಯೋ ಬಿಡುಗಡೆ ಮಾಡಲು! ಎಲ್ಲರಿಗೂ ಅಂದು ಆ ಮೈದಾನದಲ್ಲೇ ಗಣೇಶನ ಹಬ್ಬ.

`ನಾವು ಕರೆದಾಗ ಗಣೇಶನ ಹಬ್ಬದ ದಿನವಾದರೂ ಬರಲು ಎಲ್ಲರೂ ಒಪ್ಪಿದರು. ಶಿವರಾಜ್‌ಕುಮಾರ್ ಮೊದಲೇ ಬರಲಾಗದ ಕಾರಣ ತಿಳಿಸಿದರು. ಬರುತ್ತೇವೆ ಎಂದು ಹೇಳಿ ಯಾರೂ ಬರದೇಹೋಗಲಿಲ್ಲ. ಇದು ಚಿತ್ರರಂಗದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ.

ಒಂದು ಚಿತ್ರವನ್ನು ಚಿತ್ರರಂಗದ ಮುಂಚೂಣಿಯ ಇತರೆ ಎಲ್ಲಾ ನಾಯಕರು ಬೆಂಬಲಿಸುವುದೇ ಒಳ್ಳೆಯ ಬೆಳವಣಿಗೆ. ಈ ರೀತಿ ಪ್ರೋತ್ಸಾಹ ಕೊಡುವ ಪದ್ಧತಿ ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ವ್ಯಾಪಕವಾಗುತ್ತಿದೆ. ಆಡಿಯೋ ಬಿಡುಗಡೆ ಸಮಾರಂಭವನ್ನು ಚಿತ್ರದ ಪ್ರಚಾರದ ಚಿಮ್ಮುಹಲಗೆಯಾಗಿಸಿ ಕೊಳ್ಳುವುದು ಅಲ್ಲಿ ಮಾಮೂಲು. ನಾವು ಕೂಡ ಅಂಥದ್ದೇ ಪ್ರಯತ್ನ ಮಾಡೋಣ ಎಂದುಕೊಂಡು ಎಲ್ಲರನ್ನೂ ಒಂದೆಡೆ ಸೇರಿಸಿದೆವು. ಇದು ಮರೆಯಲಾಗದ ಅನುಭವ~- ನಿರ್ದೇಶಕ ಶಶಾಂಕ್ ಹೀಗೆ ಪುಳಕಿತರಾಗಲು ಕಾರಣವಿದೆ. ಚಿತ್ರರಂಗದ ಸಮಸ್ಯೆಯ ವಿಷಯ ಬಂದಾಗಲೇ ಒಗ್ಗೂಡದ ನಾಯಕರು ಹೀಗೆ ಆಡಿಯೋ ಬಿಡುಗಡೆಗೆ ಒಂದೇ ವೇದಿಕೆ ಹತ್ತುವುದು ಅಪರೂಪವೇ ಸರಿ.

ಅಂಬರೀಷ್ ಆ ಜಾಗಕ್ಕೆ ಹಿಂದೆ ಬಂದಿದ್ದ ಸಂದರ್ಭ ನೆನಪಿಸಿಕೊಂಡು ವಿಜಯ್‌ಗೆ ಒಳಿತಾಗಲಿ ಎಂದು ಹಾರೈಸಿದರು. ನಾಯಕಿಯರು ತಮ್ಮ ಭುಜದ ಮೇಲೆ ಕೂರುವುದೇ ಇಲ್ಲ. ಆದರೆ, ಎಲ್ಲರೂ ವಿಜಯ್ ಹೆಗಲೇರುತ್ತಾರೆ. ಇದರ ಗುಟ್ಟೇನು ಎಂದು ಪ್ರಶ್ನೆ ಹಾಗೂ ಕುತೂಹಲದ ನೋಟ ಬೀರಿದವರು ನಟ ಸುದೀಪ್. ಮಕ್ಕಳು ಹಾಳಾದರೆ ಅದಕ್ಕೆ ತಂದೆ-ತಾಯಿಯೇ ಹೊಣೆ ಎಂದು ಜಗ್ಗೇಶ್ ನೀತಿಪಾಠ ಹೇಳಿದರೆ, ರವಿಚಂದ್ರನ್ ತಮ್ಮದೇ ವ್ಯಂಗ್ಯದ ಕತ್ತಿ ಹೊರತೆಗೆದರು. `ನಿನ್ನನ್ನು ಹೊಗಳಬೇಕೋ, ತೆಗಳಬೇಕೋ~ ಎನ್ನುತ್ತಾ ಅವರು ವಿಜಯ್ ಕಡೆಗೆ ನೋಟ ಬೀರಿದಾಗ ಅನೇಕರು ನಕ್ಕರು. ಉಳಿದ ನಟರದ್ದು ನಗೆಬೆರೆತ ಹಾರೈಕೆ.

ಸುದೀಪ್ ಹಾಗೂ ಪುನೀತ್ ಅಚ್ಚುಕಟ್ಟಾಗಿ ಡಬ್ ಮಾಡುವುದರ ಗುಟ್ಟು ತಮಗೆ ಗೊತ್ತಾಗಬೇಕು ಎಂದು ವಿಜಯ್ ಅಹವಾಲು ಸಲ್ಲಿಸಿದರು. ಆ ಗುಟ್ಟು ತಿಳಿದರೆ ತಾವೂ ಸುಧಾರಿಸಿಕೊಳ್ಳುವುದು ಸಾಧ್ಯವೆಂಬುದು ಅವರ ಉದ್ದೇಶ.

ನಿರ್ಮಾಪಕರಾದ ಬಿ.ಕೆ.ಗಂಗಾಧರ್‌ಬಸವರಾಜು ಎಲ್ಲಾ ಸಂಭ್ರಮವನ್ನೂ ಕಣ್ತುಂಬಿಕೊಳ್ಳುತ್ತಾ ಸುಖಿಸಿದರು. ಗಣೇಶನ ಹಬ್ಬದ  ಆ ದಿನ ತಾರಾಬಳಗದ ದರ್ಶನ ಪಡೆಯಲು ಬಂದುಹೋಗುತ್ತಿದ್ದವರೂ ಅಸಂಖ್ಯ. ಅಂದಹಾಗೆ, ಆಕಾಶ್ ಆಡಿಯೋ `ಜರಾಸಂಧ~ ಸೀಡಿಗಳನ್ನು ಮಾರುಕಟ್ಟೆ ಮಾಡಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT