ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಬೆರಾದ ನವಿಲು; ಸ್ವಾಗತದ ಹೂ ಕುಂಭ

Last Updated 2 ಅಕ್ಟೋಬರ್ 2012, 4:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಇಂದಿರಾ ಗಾಜಿನ ಮನೆಯಲ್ಲಿ ಏರ್ಪಡಿಸಿರುವ ಫಲ-ಪುಷ್ಪ ಪ್ರದರ್ಶನದಲ್ಲಿ ಸ್ವಾಗತಿಸುವ ಹೂ ಕುಂಭ, ಅದರ ಎರಡೂ ಕಡೆ ವಿವಿಧ ಬಣ್ಣದ ಜರ್ಬೆರಾ ಹೂಗಳ 2 ನವಿಲುಗಳು ಈ ಬಾರಿಯ ಫಲ-ಪುಷ್ಪ ಪ್ರದರ್ಶನದ ಆಕರ್ಷಣೆಗಳು.

ಕತ್ತರಿಸಿದ ಹೂಗಳು, ಹಣ್ಣಿನ ವಿಭಾಗ, ತರಕಾರಿ ವಿಭಾಗ ಹಾಗೂ ಅಲಂಕಾರಿಕ ಗಿಡಗಳ ಜೋಡಣೆ ಹೀಗೆ ಒಟ್ಟು 4 ವಿಭಾಗಗಳಲ್ಲಿ ಫಲ-ಪುಷ್ಪ ಪ್ರದರ್ಶನ ನಡೆಯುತ್ತಿದೆ. ಈ 4 ವಿಭಾಗಗಳಲ್ಲಿ 150ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ.

ಗುಲಾಬಿ, ಡೇರೆ, ಚೆಂಡು, ಮಲ್ಲಿಗೆ, ಸೇವಂತಿಗೆ, ಮಲ್ಲಿಗೆ, ಗೆಲಾರ್ಡಿಯಾ (ಗಲಾಟೆ ಹೂ), ದಾಸವಾಳ, ಅಡಿಕೆ ಹೂ, ಆರ್ಕಿಡ್ ಮೊದಲಾದವು ಕತ್ತರಿಸಿದ ಹೂಗಳ ವಿಭಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಸಂಧ್ಯಾ ರಾಯ್ಕರ ಅವರ ಬೋನ್ಸಾಯ ಗಿಡಗಳು ಗಮನ ಸೆಳೆಯುತ್ತವೆ. ಸರ್ಪನ್ ಹೈಬ್ರಿಡ್ ಸೀಡ್ಸ್ ಕಂಪೆನಿಯು ಸುಮಾರು 200 ವಿವಿಧ ಹಸಿಮೆಣಸಿನಕಾಯಿ ತಳಿಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. `ಮೇಲ್ಛಾವಣಿಯಲ್ಲಿ ತರಕಾರಿ ಬೆಳೆಯಲು ಅನುಕೂಲ ವಾಗುವಂತೆ ಮಾಹಿತಿ ನೀಡಲಾಗುತ್ತದೆ.

 ಮೆಂತೆ, ಹಕ್ಕರಕಿ, ಕೆಂಪು ಮೂಲಂಗಿ, ಪಾಲಕ್, ಬೆಂಡೆಕಾಯಿ, ಬದನೆಕಾಯಿ, 15 ಅಡಿ ಎತ್ತರ ಬೆಳೆಯುವ ಟೊಮೆಟೊ ಪ್ರದರ್ಶನ ಇಲ್ಲಿದೆ. ಆಸಕ್ತರಿಗೆ ಪರಿಚಯ ನೀಡುತ್ತೇವೆ~ ಎನ್ನುತ್ತಾರೆ ಕಂಪೆನಿಯ ಕ್ಷೇತ್ರಾಧಿಕಾರಿ ಎಸ್.ಎಂ. ಬಾವಿಹಾಳ.

ಕೆಲಗೇರಿಯ ಬಸಪ್ಪ ಮಾಶಾಪುರ ಅವರು ಮಾಣಿ ಕಡ್ಡಿಯಿಂದ ಮಾಡಿದ ಆರತಿ ಸೆಟ್, ದೀಪಗಳ ಸಮೆ, ಬಕೆಟ್, ಟೋಪಿ, ಲಿಂಗ, ಕುಂಭ ಮೊದಲಾದವುಗಳನ್ನು ಮಾರಾಟಕ್ಕಿಡದೆ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಜೊತೆಗೆ ರೈತರು ಬೆಳೆದ ಪೇರಲ, ಚಿಕ್ಕು, ಸೀತಾಫಲ ಮೊದಲಾದವು ಇವೆ.

ಈ ಪ್ರದರ್ಶನಕ್ಕೆ ಹೋಗುವ ಮುನ್ನ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿ ಗುರುಮೂರ್ತಿ ಸಂಗ್ರಹಿಸಿದ 150 ಔಷಧೀಯ ಸಸ್ಯಗಳಿವೆ. ಇದರ ಪಕ್ಕದಲ್ಲಿ ಫಲ ಹಾಗೂ ಪುಷ್ಪಗಳ ಕುರಿತು ಮಾಹಿತಿ ನೀಡುವ ಹಾಗೂ ಮಾರಾಟ ಮಳಿಗೆಗಳಿವೆ. ಜೇನುಪೆಟ್ಟಿಗೆಗಳ ಮಾರಾಟ, ರಾಜಾ ಎಲ್. ದುರ್ಗಾ ಅವರ ಅಣಬೆ ಬೆಳೆ ಕುರಿತು ಮಾಹಿತಿ ಜೊತೆಗೆ ಮಾರಾಟ, ಬೆಂಗಳೂರಿನ ಆರತಿ ಅವರ ಹೂವಿನ ಬೀಜಗಳ ಮಾರಾಟ, ಆಹಾರ ಗುಣಮಟ್ಟ ಹಾಗೂ ತಾಜಾತನ ಕಾಪಾಡುವ ಟಪ್ಪರ್‌ವೇರ್ ಕಂಪೆನಿಯ ಪ್ಲಾಸ್ಟಿಕ್ ವಸ್ತುಗಳನ್ನು ಜಯಶ್ರೀ ಪಾಟೀಲ ಮಾರುತ್ತಿದ್ದಾರೆ.  

 ಇಂದು ಕೊನೆ ದಿನ: ಫಲ-ಪುಷ್ಪ ಪ್ರದರ್ಶನ ಮಂಗಳವಾರ ಮುಕ್ತಾಯಗೊಳ್ಳಲಿದೆ. ಬೆಳಿಗ್ಗೆ 8 ಗಂಟೆಯಿಂದಲೇ ಆರಂಭಗೊಂಡು ರಾತ್ರಿ 8ರ ವರೆಗೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT