ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿ ಸಹಕಾರ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಜಪಾನಿನಲ್ಲಿ ಸುನಾಮಿಯಿಂದ ಅಣುವಿದ್ಯುತ್ ಸ್ಥಾವರಗಳಿಗೆ ಆಗಿರುವ ಹಾನಿಯ ಹಿನ್ನೆಲೆಯಲ್ಲಿ ಜಾಗತಿಕವಾಗಿ ಮೂಡಿದ ಜಾಗೃತಿ, ಈಚೆಗೆ ಭಾರತಕ್ಕೆ ಭೇಟಿ ನೀಡಿದ ಜರ್ಮನಿಯ ಛಾನ್ಸಲರ್ ಏಂಜೆಲಾ ಮರ್ಕೆಲ್ ಅವರ ಮಾತುಕತೆಯ ಸಂದರ್ಭದಲ್ಲಿಯೂ ಪ್ರತಿಧ್ವನಿಸಿದೆ.

ಮರ್ಕೆಲ್ ಅವರು ಭಾರತದಲ್ಲಿನ ಅಣುವಿದ್ಯುತ್ ಸ್ಥಾವರಗಳಲ್ಲಿ ವಿಕಿರಣ ಪ್ರಸರಣವನ್ನು ತಡೆಯುವ ಸುರಕ್ಷತಾ ಕ್ರಮಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಾದರೂ, ನವೀಕರಣಗೊಳ್ಳಬಹುದಾದ ಪರ್ಯಾಯ ಇಂಧನ ಉತ್ಪಾದನೆಯ ಸಂಶೋಧನೆಗಳಲ್ಲಿ ಹೆಚ್ಚಿನ ಸಹಕಾರಕ್ಕೆ ಒಲವು ತೋರಿರುವುದನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು.

ಇತರ ವಿಧಾನಗಳಿಗೆ ಹೋಲಿಸಿದರೆ ಅಣುವಿದ್ಯುತ್ ಅಗ್ಗವೆಂಬುದು ನಿಜವಾದರೂ, ಅಣುಸ್ಥಾವರಗಳಿಂದ ವಿಕಿರಣ ಪ್ರಸರಣ ಅಪಾಯದ ಸಾಧ್ಯತೆ ಇರುವುದನ್ನು ನಿರ್ಲಕ್ಷಿಸಲಾಗದು.

ಮುಂದಿನ ಒಂಬತ್ತು ವರ್ಷಗಳಲ್ಲಿ ದೇಶದ ಈಗಿನ ಅಣುವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ನಾಲ್ಕು ಪಟ್ಟು ಹೆಚ್ಚಿಸುವ ಮಹತ್ವಾಕಾಂಕ್ಷೆಯನ್ನು ಪ್ರಧಾನಿ ಮನಮೋಹನ್‌ಸಿಂಗ್ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದ್ದರೂ ಅದಕ್ಕೆ ಉತ್ತೇಜನಕಾರಿಯಾದ ಪ್ರತಿಕ್ರಿಯೆ ಮರ್ಕೆಲ್ ಅವರಿಂದ ವ್ಯಕ್ತವಾಗಿಲ್ಲ.

ಬದಲಿಗೆ ಜೈವಿಕ ಮೂಲಗಳಿಂದಲೋ, ಗಾಳಿಯಂತ್ರಗಳಿಂದಲೋ ವಿದ್ಯುತ್ ಉತ್ಪಾದಿಸುವುದಕ್ಕೆ ಸಹಕಾರ ಹೆಚ್ಚಿಸುವ ಭರವಸೆಯನ್ನು ನೀಡಿದ್ದಾರೆ.

ಜರ್ಮನಿಯನ್ನು ಅಣುವಿದ್ಯುತ್ ಮುಕ್ತ ದೇಶವನ್ನಾಗಿಸಲು ನಿರ್ಧಾರ ಕೈಗೊಂಡಿರುವ ಮರ್ಕೆಲ್, ಭಾರತದಲ್ಲಿ ಅಣುವಿದ್ಯುತ್ ಉತ್ಪಾದನಾ ವಲಯದ ಸುರಕ್ಷತೆಗೆ ತಾಂತ್ರಿಕ ನೆರವಿನ ಭರವಸೆ ನೀಡಿದ್ದಾರೆ. ಸುರಕ್ಷತೆಗೆ ಸಂಬಂಧಿಸಿದ ತಂತ್ರಜ್ಞಾನದ ಆಳವಾದ ಸಂಶೋಧನೆ ಜರ್ಮನಿಯಲ್ಲಿ ನಡೆದಿರುವುದರಿಂದ ಈ ಕುರಿತ ಸಹಕಾರ ಭಾರತಕ್ಕೆ ಪ್ರಯೋಜನಕಾರಿಯಾಗಲಿದೆ.

ಫುಕುಶಿಮಾ ದುರ್ಘಟನೆ ನಂತರ ಅಣುವಿದ್ಯುತ್ ಸ್ಥಾವರಗಳ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಇಂಥ ಚರ್ಚೆಗೆ ನಿರಾಸಕ್ತಿಯನ್ನೇ ಪ್ರಕಟಿಸುತ್ತಿದೆ. ಬದಲಾಗಿ, ಅಮೆರಿಕದೊಂದಿಗೆ ಮಾಡಿಕೊಂಡ ಪರಮಾಣು ಒಪ್ಪಂದವನ್ನು ಜಾರಿಗೊಳಿಸುವ ಉತ್ಸಾಹವನ್ನೇ ಪ್ರಕಟಿಸುತ್ತಿದೆ.

ಮಹಾರಾಷ್ಟ್ರದ ಜೈತಾಪುರದಲ್ಲಿ ವ್ಯಕ್ತವಾದ ಜನಾಕ್ರೋಶವನ್ನು ಪೊಲೀಸ್ ಬಲದಿಂದ ಹತ್ತಿಕ್ಕುವ ಯತ್ನವೂ ನಡೆದಿದೆ. ಇಂಥ ಉತ್ಸಾಹದ ಪ್ರತಿಕ್ರಿಯೆ ಅನವಶ್ಯಕ. ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಲಭ್ಯವಿರುವ ಎಲ್ಲ ಸಾಧ್ಯತೆಗಳನ್ನೂ ದೇಶದಲ್ಲಿ ಬಳಸಿಕೊಳ್ಳಲಾಗಿಲ್ಲ.

ಕರ್ನಾಟಕದಲ್ಲಿಯೇ ಮಂಜೂರಾತಿ ಪಡೆದ ನೂರಾರು ಕಿರು ಜಲವಿದ್ಯುತ್ ಯೋಜನೆಗಳು ಇನ್ನೂ ಕಾಗದದಲ್ಲಿಯೇ ಉಳಿದುಕೊಂಡಿವೆ. ಗಾಳಿಯಂತ್ರಗಳಿಂದ, ಜೈವಿಕ ಮೂಲಗಳಿಂದ ವಿದ್ಯುತ್ ಪಡೆಯುವ ತಂತ್ರಜ್ಞಾನದ ಅಳವಡಿಕೆಯ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ನಿರಾಸಕ್ತಿ ಇದೆ.

ಸೌರವಿದ್ಯುತ್ ಸಾಧ್ಯತೆಯನ್ನೂ ಪರಿಶೀಲಿಸುವ ಸಂಶೋಧನೆ ನಡೆದಿಲ್ಲ. ದೇಶದ ಅರ್ಧದಷ್ಟು ಭಾಗ ಉಷ್ಣವಲಯದ ವ್ಯಾಪ್ತಿಗೆ ಬರುವುದರಿಂದ ಸೌರವಿದ್ಯುತ್ ಉತ್ಪಾದನೆ ಕುರಿತಾಗಿ ಸಂಶೋಧನೆಗೆ ಅವಕಾಶವಿದೆ. ಇಂಥ ದೂರಗಾಮಿ ಪರಿಣಾಮದ ಚಿಂತನೆ ರಾಜಕೀಯ ನಾಯಕತ್ವಕ್ಕಿಲ್ಲ. ಸಿದ್ಧವಾದ ತಾಂತ್ರಿಕತೆಯನ್ನು ಅಳವಡಿಸಿಕೊಂಡು ತತ್ಕಾಲದ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ತರಾತುರಿಯನ್ನೇ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಪ್ರಕಟಿಸುತ್ತಿದೆ.

ಇಂಧನ ಕ್ಷೇತ್ರ ಮಾತ್ರವಲ್ಲ, ದೇಶದ ಅಭಿವೃದ್ಧಿಗೆ ಅವಶ್ಯಕವಾದ ಯಾವುದೇ ವೈಜ್ಞಾನಿಕ ಸಂಶೋಧನೆಗೆ ಮಾನವ ಸಂಪನ್ಮೂಲ ಇಲ್ಲವೇ ಪ್ರಯೋಗಾಲಯ ವ್ಯವಸ್ಥೆಯ ಕೊರತೆ ಇಲ್ಲ. ಆದರೆ, ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಇಚ್ಛಾಶಕ್ತಿ ರಾಜಕೀಯ ನಾಯಕತ್ವಕ್ಕಿಲ್ಲ. ಆದ್ದರಿಂದಲೇ ಮುಂದುವರಿದ ದೇಶಗಳೊಂದಿಗೆ ತಾಂತ್ರಿಕ ಸಹಕಾರ ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT