ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಕ್ಷಾಮ: ನೀರಿನ ಅಭಾವ ನಿವಾರಣೆಗೆ ಸಲಹೆ

Last Updated 6 ಜನವರಿ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು: `ನಗರದ ಜನಸಂಖ್ಯೆ ವಾರ್ಷಿಕವಾಗಿ ಸರಾಸರಿ ಶೇ 4ರಷ್ಟು ಏರಿಕೆಯಾಗುತ್ತಿದ್ದು, 2020ರ ವೇಳೆಗೆ ನಗರದಲ್ಲಿ ಜಲ ಕ್ಷಾಮ ಕಾಣಿಸಿಕೊಳ್ಳುವ ಲಕ್ಷಣ ಕಾಣುತ್ತಿದೆ. ಹಾಗಾಗಿ ನೀರಿನ ಅಭಾವ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ~ ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ಹೇಳಿದರು.

ಶಂಕರಪುರದ ಸಾಹಿತ್ಯ ಸಂಘವು ನಗರದ  ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಿವಂಗತ ವಿ.ಎಸ್. ಕೃಷ್ಣಯ್ಯರ್ ಅವರ 90ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

 `2020ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ ಸುಮಾರು 1.40 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಆ ಹೊತ್ತಿಗೆ ನೀರಿನ ತೀವ್ರ ಅಭಾವ ಸೃಷ್ಟಿಯಾಗುವ ಸಂಭವವಿದೆ. ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ~ ಎಂದರು.

`ನಗರದಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. `ಮೆಟ್ರೊ~ ರೈಲು ಸೇವೆಯಿಂದ ಸಂಚಾರ ಸಮಸ್ಯೆ ಬಗೆಹರಿಯಲಿದೆ ಎಂಬ ಭ್ರಮೆ ಬೇಡ. `ಮೆಟ್ರೊ~ ರೈಲು ಸೇವೆ ಪರಿಣಾಮಕಾರಿಯಾಗಿ ಬಳಕೆಯಾಗಬೇಕಾದರೆ ಇನ್ನೂ 15 ವರ್ಷಗಳಾದರೂ ಬೇಕು~ ಎಂದು ಹೇಳಿದರು.

 `ಕೃಷ್ಣಯ್ಯರ್ ನುಡಿದಂತೆ ನಡೆದ ಅಪರೂಪದ ರಾಜಕಾರಣಿ. ಅವರ ಆದರ್ಶ ಗುಣಗಳಲ್ಲಿ ಕೆಲವನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಸದ್ಯದಲ್ಲೇ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗುವುದು~ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, `ಬೆಂಗಳೂರು ಮತ್ತು ರಾಜ್ಯದ ಅಭಿವೃದ್ಧಿಗೆ ಕೃಷ್ಣಯ್ಯರ್ ಅವರ ಕೊಡುಗೆ ಅಪಾರ. ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಾಗುವಲ್ಲಿ ಕೃಷ್ಣಯ್ಯರ್ ಪಾತ್ರ ಪ್ರಮುಖವಾಗಿತ್ತು. ಅವರ ಆದರ್ಶ ರಾಜಕೀಯ ಜೀವನ ಎಲ್ಲ ರಾಜಕಾರಣಿಗಳಿಗೆ ಮಾದರಿ ಎನಿಸಿದೆ~ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಮಾತನಾಡಿ, `ಕೃಷ್ಣಯ್ಯರ್ ಅಪರೂಪದ ಆದರ್ಶ ರಾಜಕಾರಣಿಯಾಗಿದ್ದರು. ಸರ್ಕಾರಕ್ಕಿಂತ ಮೊದಲೇ ಪಾಲಿಕೆ ಆಡಳಿತದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದರು. ದಲಿತರ ಹಿತಕ್ಕಾಗಿ ಶ್ರಮಿಸಿದ ಅವರು ಜನಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು~ ಎಂದರು.

ಇದೇ ಸಂದರ್ಭದಲ್ಲಿ `ವಿಶ್ವಭೂಪಟದಲ್ಲಿ ಬೆಂಗಳೂರು~ ವಿಷಯ ಕುರಿತು ಉಪನ್ಯಾಸ ನೀಡಿದ ಐಐಎಂಬಿ ಪ್ರಾಧ್ಯಾಪಕ ಪ್ರೊ. ಅಶ್ವಿನ್ ಮಹೇಶ್, `ಬೆಂಗಳೂರು ಶ್ರೇಷ್ಠ ನಗರವಾಗಿ ರೂಪುಗೊಳ್ಳಬೇಕಾದರೆ ಅಭಿವೃದ್ಧಿ ಕಾರ್ಯಗಳಲ್ಲಿ ಜನರು ಪಾಲ್ಗೊಳ್ಳಬೇಕು. ಇಲ್ಲದಿದ್ದರೆ ಉತ್ತಮ ನಗರವಾಗಿ ಹೊರಹೊಮ್ಮಲು ಸಾಧ್ಯವಿಲ್ಲ~ ಎಂದರು.

ಬಡ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹೊ. ಶ್ರೀನಿವಾಸಯ್ಯ, ಕೃಷ್ಣಯ್ಯರ್ ಅವರ ಪತ್ನಿ ಸುಮಿತ್ರಾ ಕೃಷ್ಣಯ್ಯರ್, ಮಾಜಿ ಮೇಯರ್ ಪಿ.ಆರ್. ರಮೇಶ್, ಪಾಲಿಕೆ ಸದಸ್ಯ ಎ.ಎಚ್. ಬಸವರಾಜು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT