ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಮರುಪೂರಣ ನೀರಿನ ಮಹಾಪೂರ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಈ ಬಾರಿಯೂ ಪರಿಸರ ಮುನಿಸಿಕೊಂಡಿದೆ. ಬಿಸಿಲಿನ ಝಳ ಹೆಚ್ಚಿದೆ. ಮಳೆ ಕಡಿಮೆ ಬೀಳುವ ಆತಂಕ ಎದುರಾಗಿದೆ. ಮಳೆ ಕಡಿಮೆಯಾದಾಗ ಅಂತರ್ಜಲ ಮಟ್ಟ ಕುಸಿಯುವುದು, ರೈತರು ಕೊಳವೆ ಬಾಯಿ ತೋಡಿಸುವುದು, ನೀರು ಬರದಿದ್ದರೆ ಇನ್ನೊಂದು, ಮತ್ತೊಂದು ಬಾವಿ... ಕೊನೆಗೆ ಸಾಲಗಾರರಾಗಿ ಕೃಷಿಯೇ ಬೇಡ ಎಂಬ ನಿಲುವಿಗೆ ಬರುವುದು ಸಹಜ.

ಇದನ್ನೆಲ್ಲ ಗಣನೆಗೆ ತೆಗೆದುಕೊಂಡು ಹೊಸ ಯೋಜನೆಯೊಂದನ್ನೆ ಜಾರಿಗೊಳಿಸಲಾಗಿದೆ. ಅದುವೇ ಜಲ ಮರುಪೂರಣ. ಬರಡು ಭೂಮಿ ಅಥವಾ ಅಂತರ್ಜಲ ಸಮಸ್ಯೆಯನ್ನು ಎದುರಿಸುವ ಯಾವುದೇ ಪ್ರದೇಶದ ಕೊಳವೆ ಬಾವಿಗಳಲ್ಲಿ ಮತ್ತೆ ಅಂತರ್ಜಲವನ್ನು ವೃದ್ಧಿಸುವ ಯೋಜನೆ ಇದು.

ರೈತರು ತಮ್ಮ ಕೊಳವೆ ಬಾವಿಯ ಸುತ್ತ ಸುಮಾರು 10 ಅಡಿ ಅಗಲ, 10 ಅಡಿ ಆಳದ ಇಂಗು ಗುಂಡಿಯನ್ನು ತೋಡಿ, ಕೊಳವೆ ಬಾವಿಗೆ ಹಾಕಿರುವ ಕೇಸಿಂಗ್ ಪೈಪ್‌ಗೆ ಅಲ್ಲಲ್ಲಿ 4ಮಿಲಿ ಮೀಟರ್ ವ್ಯಾಸದಲ್ಲಿ ರಂಧ್ರ ಮಾಡಬೇಕು. ಈ ರಂಧ್ರಗಳ ಸಂಖ್ಯೆ 150ನ್ನು ಮೀರಬಾರದು. ರಂಧ್ರಗಳ ಸುತ್ತ ಕೇಸಿಂಗ್ ಪೈಪ್‌ಗೆ ಅಕ್ವಾ ಮೆಷ್, ನೈಲಾನ್ ಮೆಷ್, ಸ್ಯಾಂಡ್ ಫಿಲ್ಟರ್ ಅಳವಡಿಸಬೇಕು. ಮೆಷ್ ಅನ್ನು ಸುತ್ತಲೂ ಅಲ್ಯುಮಿನಿಯಂ ತಂತಿ ಬಳಸಬೇಕು.

5 ಅಡಿ ಆಳದವರೆಗೆ ದಪ್ಪ ಕಲ್ಲು (ಬೋಡ್‌ರಸ್), ಅದರ ಮೇಲೆ 40 ಎಂ.ಎಂ ಜಲ್ಲಿ, ಅದರ ಮೇಲೆ 20ಎಂ.ಎಂ ಜಲ್ಲಿ ಹಾಕಬೇಕು. ನಂತರ ಹೈಡೆನ್ಸಿಟಿ ಪಾಲಿಥಿನ್ ಮ್ಯಾಟ್ ಹಾಸಬೇಕು. ಇದು ಗೆದ್ದಲು ನಿರೋಧಕವಾಗಿದ್ದರೆ ಸೂಕ್ತ. ಇದರ ಮೇಲ್ಭಾಗದಲ್ಲಿ ಎರಡು ಅಡಿ ದಪ್ಪದಲ್ಲಿ ದಪ್ಪ ಮರಳನ್ನು ಹಾಕಬೇಕು. ಇಂಗು ಗುಂಡಿಯ ಸುತ್ತ ಸಿಮೆಂಟ್‌ನಿಂದ ತಡೆಗೋಡೆಕಟ್ಟಿ ಮಳೆ ನೀರು ಸರಾಗವಾಗಿ ಬರುವಂತೆ ಮಾಡಬೇಕು. ಇಂಗು ಗುಂಡಿಗೆ ನೀರಿನ ಜತೆ ಕಸ-ಕಡ್ಡಿ ಬರದಂತೆ ಅಲ್ಲಲ್ಲಿ ವ್ಯವಸ್ಥೆ ಮಾಡಬೇಕು.

ಖರ್ಚು- ವೆಚ್ಚ
ಅಂತರ್ಜಲ ಮರು ಪೂರಣವನ್ನು ಸಿದ್ಧಗೊಳಿಸಲು ಸುಮಾರು 25-35 ಸಾವಿರ ರೂಪಾಯಿಗಳವರೆಗೆ ಖರ್ಚಾಗಬಹುದು. ರೈತರು ತಮ್ಮ ಜಮೀನಿನಲ್ಲಿ ಸೂಕ್ತವಾದ ಜಾಗ ಇದ್ದಲ್ಲಿ 40 ಅಡಿ ಉದ್ದ, 30/ 30 ಅಡಿ ಅಗಲ ಮತ್ತು10 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿ ಕೃಷಿ ಹೊಂಡದಿಂದ 3-4 ಇಂಚಿನ ಪೈಪ್‌ಗಳನ್ನು ಇಂಗು ಗುಂಡಿಗೆ ಸಂಪರ್ಕ ಮಾಡಿದರೆ ಅಂತರ್ಜಲ ನಿರೀಕ್ಷೆಗೂ ಮೀರಿ ಹೆಚ್ಚಾಗುವುದು. ನೀರು ಕೂಡ ರುಚಿಯಾಗಿ ಸಿಗುವುದು.

ಮೊಳಕಾಲ್ಮೂರು ತಾಲ್ಲೂಕಿನ ಮುತ್ತೆಗಾರಹಳ್ಳಿಯ ರೈತ ಮಹಾಬಲೇಶ್ವರಪ್ಪ ಅವರ ಜಮೀನಿನಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ ಅಂತರ್ಜಲ ಮರು ಪೂರಣ ಮಾಡಿದ್ದರಿಂದ 350 ಅಡಿ ಆಳಕ್ಕೆ ಇಳಿದಿದ್ದ ಅಂತರ್ಜಲ ಈಗ ಕೇವಲ 60 ಅಡಿ ಆಳದಲ್ಲಿ ದೊರೆಯುವಂತೆ ಮಾಡಿದ್ದಾರೆ. ಅದೇ ರೀತಿ ಬೀದರ್ ಜಿಲ್ಲೆಯ ಬಾಲ್ಕಿಯ ವಿಶ್ವನಾಥ ಸರಡಗಿ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕಾಳಘಟ್ಟ ಗ್ರಾಮದ ನಿಜಲಿಂಗಪ್ಪ ಅವರ ಜಮೀನಿನಲ್ಲಿ ದೇವರಾಜ ರೆಡ್ಡಿ ಅವರು ಮಾಡಿರುವ ಪ್ರಯೋಗಗಳು ಯಶಸ್ಸನ್ನು ನೀಡಿರುವುದು ಇದಕ್ಕೆ ಸಾಕ್ಷಿ.

ರೈತರು ತಮ್ಮ ಜಮೀನುಗಳಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸದಂತೆ ನಿರ್ಬಂಧದ ಕಾನೂನನ್ನು ಸರ್ಕಾರ ಜಾರಿಗೆ ತಂದಿರುವುದರಿಂದ ರೈತರಿಗೆ ಸರ್ಕಾರವೇ ಸೂಕ್ತ ಸಲಹೆ, ಸಹಕಾರ ನೀಡುವುದು ಒಳ್ಳೆಯದು. ಕೆಲವು ಕಡೆಗಳಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್‌ನಿಂದ ಅಂತರ್ಜಲ ಮರು ಪೂರಣಕ್ಕೆ ಸಾಲ ಸೌಲಭ್ಯ ನೀಡುತ್ತಿರುವುದು ಸಂತಸದ ವಿಷಯವೇ ಸರಿ.

ಇದರ ಜತೆ ಸರ್ಕಾರ ರೈತರಿಗೆ ಅಂತರ್ಜಲ ಮರು ಪೂರಣ ಅಭಿವೃದ್ಧಿಗೆ ಸಹಾಯಧನ ನೀಡಿದರೆ ರೈತರಿಗೆ ಸಹಾಯ ಮಾಡಿದಂತಾಗುತ್ತದೆ. ಜತೆಗೆ ನೀರಿನ ಸಮಸ್ಯೆಯಿಂದ ರೈತರು ಹೊರ ಬಂದು ನೆಮ್ಮದಿಯ ಬದುಕನ್ನು ನಡೆಸಬಹುದಾಗಿದೆ ಎಂಬುದು ಅಂತರ್ಜಲ ಸಂಶೋಧಕ ಎನ್.ಜೆ. ದೇವರಾಜ ರೆಡ್ಡಿ ಅವರ ಅಭಿಮತ. ಮಾಹಿತಿಗೆ ರೆಡ್ಡಿ ಅವರ ಸಂಖ್ಯೆ: 9448125498.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT