ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ವಿದ್ಯುತ್‌ ಯೋಜನೆಯ ತೂಗುಕತ್ತಿ

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ನೆತ್ತಿಯ ಮೇಲೆ ಮತ್ತೆ ಕಿರು ಜಲವಿದ್ಯುತ್‌ ಯೋಜನೆಯ ಕತ್ತಿ ತೂಗಲಾರಂಭಿಸಿದೆ. ಜಿಲ್ಲೆಯಲ್ಲಿ 28 ಕಿರು ಜಲವಿದ್ಯುತ್‌ ಯೋಜನೆಗಳ ಪ್ರಸ್ತಾವವಿದ್ದು, ಏಳನ್ನು ರದ್ದುಗೊಳಿಸಿ ಉಳಿದ 21 ಯೋಜನೆಗಳನ್ನು ಸರ್ಕಾರ ಖಾಸಗಿ ಕಂಪೆನಿ­ಗಳಿಗೆ ಹಂಚಿಕೆ ಮಾಡಿದೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಈ ವಿಷಯ ಬಹಿರಂಗಗೊಳಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯೆ ತಾರಾ ಅನುರಾಧಾ ಅವರು ನವೆಂಬರ್‌ 28ರಂದು ಸದನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯ­ಮಂತ್ರಿ, 2003ರಿಂದ 2010 ಅವಧಿ­ಯಲ್ಲಿ 28 ಕಿರು ಜಲ ವಿದ್ಯುತ್‌ ಯೋಜನೆ ಸ್ಥಾಪನೆಗೆ ಖಾಸಗಿ ಕಂಪೆನಿ­ಗಳು ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರ 21 ಯೋಜನೆಗಳನ್ನು ಹಂಚಿಕೆ ಮಾಡಿದೆ. 11 ಹೊಸ ಯೋಜನೆಗಳು ಪರಿ­ಶೀಲನೆ­ಯಲ್ಲಿವೆ ಎಂಬ ವಿವರ ನೀಡಿದ್ದಾರೆ.

ಕಿರು ವಿದ್ಯುತ್‌ ಉತ್ಪಾದನಾ ಸ್ಥಾವರಗಳ ಹಂಚಿಕೆಯ ನಂತರದಲ್ಲಿ ಅನುಷ್ಠಾನ­ಗೊಳಿಸಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂ­ತ್ರಣ ಮಂಡಳಿ, ಸ್ಥಳೀಯ ಗ್ರಾಮ ಪಂಚಾಯ್ತಿ­ಗಳ ಅನುಮತಿ ಪಡೆಯ­ಲಾಗುತ್ತದೆ.

ಯೋಜನೆ ಅನುಷ್ಠಾನ­ದಿಂದ ಪರಿಸರದ ಮೇಲೆ ಆಗುವ ಪರಿ­ಣಾಮ­ಗಳ ಬಗ್ಗೆ ಇಂಧನ ಇಲಾಖೆ­ಯಿಂದ  ಯಾವುದೇ ಅಧ್ಯಯನ ನಡೆಸ­ಲಾ­ಗಿಲ್ಲ. ಉತ್ತರ ಕನ್ನಡ ಜಿಲ್ಲೆಯು ಪಶ್ಚಿಮ­ಘಟ್ಟ ವ್ಯಾಪ್ತಿಯಲ್ಲಿ ಬರುವು­ದರಿಂದ ಯೋಜನೆಗಳನ್ನು ಹಂಚಿಕೆ ಮಾಡುವ ಪೂರ್ವದಲ್ಲಿ ಅರಣ್ಯ ಇಲಾ­ಖೆಯ ನಿರಾಕ್ಷೇಪಣಾ ಪತ್ರ ಪಡೆದು, ನಂತರ ಹಂಚಿಕೆಯನ್ನು ಪರಿ­ಗಣಿಸ­ಲಾಗುವುದು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ­ಉತ್ತರಿಸಿದ್ದಾರೆ.

ಹಳ್ಳಿಗರಲ್ಲಿ ಆತಂಕ: ಜೊಯಿಡಾ ತಾಲ್ಲೂಕಿನ ದಬೇವಾಡಿ, ಮಾವಳಂಗಿ, ಕ್ಯಾಸಲ್‌­ರಾಕ್‌, ಯಲ್ಲಾಪುರ ತಾಲ್ಲೂ­ಕಿನ ಕೆಳಾಸಿ, ದುಗ್ಗನಬೈಲು, ಕಣ್ಣಿಗೇರಿ, ದಬ್ಬೇಸರ, ಕಿಲಾರಗದ್ದೆ, ರಾಮನಗರ, ದೇವಿ­ಜಡ್ಡಿ, ದುಗ್ಗನ­ಬೈಲು, ಜಕೆಕುಂಬ್ರಿ, ಭಟ್ಕಳ ತಾಲ್ಲೂಕಿನ ಹಲ್ಲುಕ್ಕಿ, ಅಂಕೋಲಾ ತಾಲ್ಲೂಕಿನ ಭೈರೆಕೊಪ್ಪ, ಹೊಸಕಂಬಿ, ಗದ್ದೆಹಳ್ಳಿ, ಕೋಟೆಬಾವಿ, ಕೊಂಕಿ, ಶಿರಸಿ ತಾಲ್ಲೂಕಿನ ಮುಸ್ಕಿ, ನರಸಕಲ್‌, ಹೊಸೂರು, ಗಣೇಶಪಾಲ್‌ ಗ್ರಾಮ­ಗಳಲ್ಲಿ ಪ್ರಸ್ತಾಪಿತ ಕಿರು ಜಲ ವಿದ್ಯುತ್‌ ಯೋಜನೆ­ಗಳನ್ನು ರಾಜ್ಯ ಸರ್ಕಾರ 19 ಖಾಸಗಿ ಕಂಪೆನಿಗಳಿಗೆ ಹಂಚಿಕೆ ಮಾಡಿದೆ. ಜಿಲ್ಲೆಯಲ್ಲಿ ಹರಿಯುವ ಕಾಳಿ, ಗಂಗಾವಳಿ, ಬೇಡ್ತಿ ನದಿಗಳು ಹಾಗೂ ಇವುಗಳ ಉಪನದಿ­ಗಳು, ಹಳ್ಳ­ಗಳಿಗೆ ಕಿರು ಅಣೆಕಟ್ಟು ನಿರ್ಮಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆ ಇದಾ­ಗಿದೆ.

ಕಿರು ಜಲವಿದ್ಯುತ್‌ ಯೋಜನೆ ಪ್ರಸ್ತಾವ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಪುನ­­ರಾ­­ವರ್ತನೆಯಾಗುವ ಕಿರು ಜಲ ವಿದ್ಯುತ್‌ ಯೋಜನೆಯ ಪ್ರಸ್ತಾವದಿಂದ ಹಳ್ಳಿಗರು ಆತಂಕಕ್ಕೆ ಒಳಗಾಗಿದ್ದಾರೆ. ಏಳು ತಿಂಗಳ ಹಿಂದೆ ಶಿರಸಿ ತಾಲ್ಲೂಕಿನ ಗಣೇಶಪಾಲ್‌ನಲ್ಲಿ ಪ್ರಸ್ತಾಪಿತ ಯೋಜನೆ ಸಮೀಕ್ಷೆಗೆ ಬಂದಿದ್ದ ಕಾರೆ ಪವರ್‌ ರಿಸೋರ್ಸ್ಸ್ ಕಂಪೆನಿಯ ಪ್ರತಿನಿಧಿ­ಗಳಿಗೆ ಸರ್ವೆ ನಡೆಸಲು ಅವಕಾಶ ನೀಡದೇ ಸ್ಥಳೀಯರು ವಾಪಸ್‌ ಕಳುಹಿಸಿದ್ದರು. ಮತ್ತೆ ಇದೇ ಕಂಪೆನಿಯವರು ಗುರುವಾರ ಗಣೇಶಪಾಲ್‌ಗೆ ಬಂದು ಸರ್ವೆ ನಡೆಸಲು ಪ್ರಯತ್ನಿಸಿದ್ದಾರೆ.

ಹೇಗೆ ಸಾಧ್ಯ?
ಡಾ.ಕಸ್ತೂರಿರಂಗನ್‌ ವರದಿಯು ಗುರುತಿಸಿರುವ ಪಶ್ಚಿಮ­ಘಟ್ಟ ಸೂಕ್ಷ್ಮ­ವಲಯ ಪ್ರದೇಶ­ದಲ್ಲಿ ಉತ್ತರ ಕನ್ನಡ ಜಿಲ್ಲೆ ಸಹ ಒಳಗೊಂಡಿದೆ. ಪ್ರಸ್ತಾಪಿತ ಎಲ್ಲ ಯೋಜನೆಗಳು ಸೂಕ್ಷ್ಮ­ವಲಯ ವ್ಯಾಪ್ತಿಯಲ್ಲಿ ಬರುತ್ತವೆ. ಅಲ್ಲದೇ ಪಶ್ಚಿಮಘಟ್ಟದಲ್ಲಿ ಅಣೆ­ಕಟ್ಟು ನಿರ್ಮಾಣಕ್ಕೆ ಅವಕಾಶ ನೀಡು­ವುದಿಲ್ಲವೆಂದು ಈ ಹಿಂದೆ­ಯೇ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಆದರೆ ಈಗ ಸರ್ಕಾರವೇ ಕಿರು ವಿದ್ಯುತ್‌ ಯೋಜನೆ ಹಂಚಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT