ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿ ನಿರ್ಲಕ್ಷ್ಯಕ್ಕೆ ಮೇಯರ್ ಆಕ್ರೋಶ

Last Updated 13 ಸೆಪ್ಟೆಂಬರ್ 2011, 19:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಸ್ತೆಗಳು ಹಾಳಾಗಿರುವುದಕ್ಕೆ ಸಂಬಂಧಪಟ್ಟಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದ ಮೇಯರ್ ಪಿ. ಶಾರದಮ್ಮ ಅವರು ಮಂಗಳವಾರ ಜಲಮಂಡಳಿ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶಿವಾಜಿನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ಅವರು ಜಲಮಂಡಳಿ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು.

ಎಂ.ಜಿ.ರಸ್ತೆ ಬಳಿಯ ಕಾಮರಾಜ ರಸ್ತೆಗೆ ಭೇಟಿ ನೀಡಿ ಅವರು ಪರಿಶೀಲನೆ ಆರಂಭಿಸಿದರು. ಕಾಮರಾಜ ರಸ್ತೆ ಹಾಗೂ ಡಿಕನ್ಸನ್ ರಸ್ತೆ ಕೂಡುವ ಜಂಕ್ಷನ್ ಹಾಳಾಗಿರುವ ಬಗ್ಗೆ ಮೇಯರ್ ಅಧಿಕಾರಿಗಳಿಂದ ವಿವರ ಪಡೆದರು.

`ಹಲವು ಬಾರಿ ಈ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ. ಆದರೆ ನಿರಂತರವಾಗಿ ಜಲಮಂಡಳಿಯ ಕೊಳವೆ ಒಡೆದು ನೀರು ಹರಿಯುವುದರಿಂದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ~ ಎಂದು ಪಾಲಿಕೆ ಆಧಿಕಾರಿಗಳು ಹೇಳಿದರು.

ಆಗ ಮೇಯರ್, `ಕೊಳವೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಶನಿವಾರದೊಳಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳಬೇಕು. ಸೋಮವಾರದಿಂದ ಪಾಲಿಕೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಿದೆ~ ಎಂದರು.
ನಂತರ ವೀರಪಿಳ್ಳೈ ಸ್ಟ್ರೀಟ್, ಕಾಮರಾಜ ರಸ್ತೆ, ಆರ್ಮ್‌ಸ್ಟ್ರಾಂಗ್ ರಸ್ತೆಗಳಿಗೆ ಭೇಟಿ ನೀಡಿದ ಅವರು, ರಸ್ತೆಬದಿ ಚರಂಡಿಗಳೇ ಇಲ್ಲದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

`ರಸ್ತೆಬದಿಯಲ್ಲಿ ಚರಂಡಿಗಳೇ ಇಲ್ಲ. ಹಾಗಾಗಿ ಸಾಧಾರಣ ಮಳೆ ಸುರಿದರೂ ಮ್ಯಾನ್‌ಹೋಲ್‌ಗಳಿಂದ ನೀರು ಹೊರಬಂದು, ಮನೆಗಳಿಗೆ ನುಗ್ಗುತ್ತದೆ. ಮ್ಯಾನ್‌ಹೋಲ್‌ನಿಂದ ನಿತ್ಯ ಚರಂಡಿ ನೀರು ಹೊರ ಬರುವುದರಿಂದ ಪರದಾಡುವಂತಾಗಿದೆ~ ಎಂದು ಸ್ಥಳೀಯರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, `ಕಟ್ಟಡಗಳ ಮೇಲೆ ಬೀಳುವ ಮಳೆ ನೀರು ಹರಿಯುವ ಕೊಳವೆಗಳನ್ನು ಒಳಚರಂಡಿ ಕೊಳವೆಗೆ ಸಂಪರ್ಕಿಸಲಾಗಿದೆ. ಇದರಿಂದ ಮಳೆ ಸುರಿದಾಗ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿದು ತೊಂದರೆಯಾಗುತ್ತಿದೆ~ ಎಂದರು.

`ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ಜಲಮಂಡಳಿ ಅಧಿಕಾರಿಗಳು ಕೈಗೊಳ್ಳುತ್ತಿಲ್ಲ. ಇದರಿಂದ ಪಾಲಿಕೆ ನಿಂದನೆಗೆ ಗುರಿಯಾಗಬೇಕಿದೆ. ಮಳೆ ನೀರು ಒಳ ಚರಂಡಿ ಕೊಳವೆ ಸೇರದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು~ ಎಂದು ಸೂಚಿಸಿದರು.

ಕಾಮರಾಜ ರಸ್ತೆಯಲ್ಲಿ ಶುಭಾಂಜಲಿ ಗಾರ್ಮೆಂಟ್ಸ್ ಮಳಿಗೆಯಿರುವ ವಾಣಿಜ್ಯ ಸಮುಚ್ಚಯದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ಮಳಿಗೆಗಳನ್ನು ನಿರ್ಮಿಸಿ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ಅಲ್ಲದೇ ಸಂಬಂಧಪಟ್ಟ ಎಂಜಿನಿಯರ್‌ಗಳ ವಿರುದ್ಧ ಕ್ರಮ ಜರುಗಿಸುವಂತೆ ಆದೇಶಿಸಿದರು.

ಮೇಯರ್‌ಗೆ ಮುತ್ತಿಗೆ: ಆರ್ಮ್‌ಸ್ಟ್ರಾಂಗ್ ರಸ್ತೆಯಲ್ಲಿ ಸುಮಾರು 300 ಮೀಟರ್ ಉದ್ದ ಮಳೆ ನೀರು ಕಾಲುವೆಯ ತಡೆಗೋಡೆಯನ್ನು ಕೆಡವಿ, ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮೇಯರ್ ಅವರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಸ್ಥಳೀಯರು ಅವರಿಗೆ ಮುತ್ತಿಗೆ ಹಾಕಿದರು.

`ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ತೀವ್ರ ತೊಂದರೆಯಾಗುತ್ತಿದೆ. ನಿರಂತರವಾಗಿ ದುರ್ನಾತ ಬೀರುತ್ತದೆ. ಮಳೆ ಸುರಿದಾಗ ಚರಂಡಿ ನೀರು ಮನೆ- ಮಳಿಗೆಗಳಿಗೆ ನುಗ್ಗುತ್ತದೆ. ಇಲ್ಲಿಗೆ ಬಂದು ಪರಿಶೀಲನೆ ನಡೆಸಿದ ಹಲವರು ಆಶ್ವಾಸನೆ ನೀಡಿದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ಮೇಯರ್, `ಸ್ಥಳೀಯರ ಸಮಸ್ಯೆ ಅರ್ಥವಾಗಿದೆ. ಸುಳ್ಳು ಭರವಸೆ ನೀಡುವುದಿಲ್ಲ. ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಳಿಸಿರುವ ಗುತ್ತಿಗೆದಾರರಿಗೆ ಕೆಲಸ ಮುಂದುವರಿಸುವಂತೆ ಸೂಚಿಸಲಾಗುವುದು. ಇಲ್ಲದಿದ್ದರೆ ಬೇರೆ ಗುತ್ತಿಗೆದಾರರಿಗೆ ಈ ಕಾಮಗಾರಿಯನ್ನು ವರ್ಗಾಯಿಸಿ ಶೀಘ್ರವಾಗಿ ಮುಗಿಸಲು ಆದೇಶಿಸಲಾಗುವುದು~ ಎಂದರು.

ಪರಿಶೀಲನಾ ಭೇಟಿ ಮುಂದುವರಿದಂತೆ ಶಾಸಕ ಆರ್. ರೋಷನ್ ಬೇಗ್, `ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಮಳಿಗೆದಾರರು ಸಾಕಷ್ಟು ನಾಮಫಲಕಗಳು, ಜಾಹೀರಾತು ಫಲಕಗಳನ್ನು ಅಳವಡಿಸಿದ್ದಾರೆ. ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಸರಿಯಾಗಿ ಕರ್ತವ್ಯ ನಿರ್ವಹಿಸದ ಶಿವಾಜಿನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು~ ಎಂದು ಕೋರಿದರು.

ನಾಲಾ ರಸ್ತೆಯಲ್ಲಿ ಮಳೆ ನೀರು ಕಾಲುವೆಗೆ ಕಾಂಕ್ರಿಟ್ ಮೇಲ್ಛಾವಣಿ ನಿರ್ಮಿಸಿದ ಪಾಲಿಕೆ ಅದರ ಮೇಲೆ ಸುಮಾರು 100 ಮಳಿಗೆಗಳನ್ನು ಕಟ್ಟಿ ಹಂಚಿಕೆ ಮಾಡಿದೆ. ಆದರೆ ಕಾಲುವೆಯಲ್ಲಿ ಹೂಳು ಸಂಗ್ರಹವಾಗಿರುವುದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, `ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು~ ಎಂದು ಭರವಸೆ ನೀಡಿದರು.

ಬಳಿಕ ರಸೆಲ್ ಮಾರುಕಟ್ಟೆ ಪ್ರದೇಶದಲ್ಲೂ ಪರಿಶೀಲನೆ ನಡೆಸಿದ ಮೇಯರ್, ಮಾರುಕಟ್ಟೆ ಸಮೀಪ ಪಾಲಿಕೆಗೆ ಸೇರಿದ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನಿರ್ಮಾಣ ಕುರಿತು ಚಿಂತಿಸಲಾಗುವುದು ಎಂದರು. ಉಪ ಮೇಯರ್ ಎಸ್. ಹರೀಶ್, ಪಾಲಿಕೆ ಸದಸ್ಯ ಶಕೀಲ್ ಅಹಮ್ಮದ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT