ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಲ ಜಲಲ ಜಲ ಧಾರೆ

Last Updated 29 ಜನವರಿ 2012, 19:30 IST
ಅಕ್ಷರ ಗಾತ್ರ

 ಸಂಗೀತ ಕಾರಂಜಿಗೆ ಕ್ಷಣಗಣನೆ...

ಬೆಂಗಳೂರಿನಲ್ಲಿ ಮನರಂಜನಾ ಕೇಂದ್ರಗಳಿಗೇನೂ ಕೊರತೆ ಇಲ್ಲ. ಊರು ಬೆಳೆದಂತೆ ಜನರಲ್ಲಿ ತಮ್ಮೂರಿನ ತಹತಹಿಕೆಯೂ ಹೆಚ್ಚುತ್ತದೆ. ಇಲ್ಲಿಯ ಕಟ್ಟಡ ಸಂಸ್ಕೃತಿಯಲ್ಲಿ ಉಸಿರುಗಟ್ಟಿದಂತಾದಾಗ ಬಹುತೇಕ ಕುಟುಂಬಗಳು ಉದ್ಯಾನದತ್ತ ಮುಖ ಮಾಡುತ್ತವೆ.

ಬುತ್ತಿ ಕಟ್ಟಿಕೊಂಡು ಉದ್ಯಾನಗಳಲ್ಲಿ ವನಭೋಜನ ಮಾಡಿ ತಮ್ಮೂರಿನ ಸೊಗಡು ನೆನಪಿಸಿಕೊಳ್ಳುವುದೇ ಇವರ ಪ್ರಯತ್ನ. ತಾಜಾ ಗಾಳಿಯನ್ನು ಆಸ್ವಾದಿಸುತ್ತ, ಮಕ್ಕಳಿಗೆ ಆಟವಾಡಿಸುತ್ತಾರೆ. ಮಕ್ಕಳೊಂದಿಗೆ ಕ್ವಾಲಿಟಿ ಟೈಮ್ ಕಳೆಯುತ್ತಾರೆ. ಮರದ ನೆರಳಲ್ಲಿ ತುಸು ದೂರ ಕೈ ಹಿಡಿದು ಸಂಗಾತಿಯೊಡನೆ ನಡೆಯುತ್ತಾರೆ. ಹಸಿರ ಸಿರಿಯಲ್ಲಿ ಟೋಪಿ ಸ್ವೆಟರ್‌ಗಳಿಂದ ತಾಪಮಾನ ಕಾಪಿಡುವ ಹಿರಿಯ ಜೀವಗಳೂ ತಂಪಿನಲ್ಲಿ ಮನವರಳಿಸಿಕೊಳ್ಳುತ್ತವೆ.

 ಮತ್ತೀಕೆರೆ ಸಮೀಪದ ಜಯಪ್ರಕಾಶ ನಾರಾಯಣ ಉದ್ಯಾನವೂ ಇದಕ್ಕೆ ಹೊರತಾಗಿಲ್ಲ. ಆದರೆ ಇಲ್ಲಿ ಬರುವವರಿಗೆ ಇಂದು (ಜ.30) ಸಂಭ್ರಮದ ಹನಿಸಿಂಚನವಾಗಲಿದೆ. ಇನ್ನು ಸಂಜೆವರೆಗೆ ಇದ್ದು ಹೋಗುವುದಲ್ಲ. ಸಂಜೆಯನ್ನೂ ಇಲ್ಲಿಯೇ ಕಳೆದುಹೋಗುವಂತೆ ಇಲ್ಲೊಂದು ನರ್ತಿಸುವ ಕಾರಂಜಿ ಆರಂಭವಾಗಲಿದೆ. ದಕ್ಷಿಣ ಭಾರತದಲ್ಲಿಯೇ ದೊಡ್ಡ ನೃತ್ಯ ಕಾರಂಜಿ ಎಂಬ ಹೆಗ್ಗಳಿಕೆಯೂ ಇದರದ್ದಾಗಿದೆ.

ಸುಮಾರು 40 ಅಡಿ ಎತ್ತರಕ್ಕೆ ಜಿಗಿಯುವ ಈ ಕಾರಂಜಿ ಏಳು ಬಗೆಯ ಜಲವರ್ಣ. 120 ಬಗೆಯಲ್ಲಿ ನರ್ತನ.  ಸತತ 20ನಿಮಿಷಗಳ ಪ್ರದರ್ಶನ. ಕಾರಂಜಿ ಎದುರಿಗೆ ಅರ್ಧ ವೃತ್ತಾಕಾರದ ರಂಗ ಮಂದಿರವಿದೆ. ಅಲ್ಲಿ ಸುಮಾರು 300 ಕಲಾವಿದರು ನೃತ್ಯಮಾಡುವಷ್ಟು ಜಾಗವಿದ್ದು, 1500 ಮಂದಿ ವೀಕ್ಷಿಸಬಹುದಾದ ಬೃಹತ್ ಆವರಣವಿದೆ. ಯಾರೂ ನಿರಾಶರಾಗಬೇಕಿಲ್ಲ. ಬಂದವರೆಲ್ಲರಿಗೂ ಪ್ರದರ್ಶನಕ್ಕೆ ಅವಕಾಶ ಸಿಕ್ಕೇಸಿಗುತ್ತದೆ. 

ದೇಶಭಕ್ತಿ ಮತ್ತು ನಾಡಪ್ರೇಮ ಸಾರುವ ಸುಮಧುರ ಗೀತೆಗಳು, ಜಾನಪದ ಹಾಗೂ ಹಿಂದಿ ಚಿತ್ರಗೀತೆಗಳ ಹಿನ್ನೆಲೆಯಲ್ಲಿ ಕಾರಂಜಿಯ ನೀರು ಚಿಮ್ಮಲಿದೆ. ಕಾರಂಜಿ ಆವರಣದಲ್ಲಿ ಗ್ರಾನೈಟ್ ಹಾಸು ಬಳಸಲಾಗಿದೆ. ಮಳೆ ಬಂದರೆ ಆಸರೆಗೆ ತಾತ್ಕಾಲಿಕ ತಂಗುದಾಣದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೂರುವರೆ ಕೋಟಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2ಕೋಟಿ ಅನುದಾನದಲ್ಲಿ ಈ ಬೃಹತ್ ಕಾರಂಜಿ ನಿರ್ಮಾಣ ಮಾಡಲಾಗಿದ್ದು ಇಂದು ಉದ್ಘಾಟನೆಯಾಗಲಿದೆ ಎನ್ನುತ್ತಾರೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ.

`ನಾನು ನಿತ್ಯ ಸಂಜೆ ಉದ್ಯಾನಕ್ಕೆ ಬರುತ್ತೇನೆ. ಒಂದೆರೆಡು ಗಂಟೆ ವಿಹರಿಸಿ ಹೋಗುತ್ತೇನೆ. ಈಗ ಕಾರಂಜಿಯಾಗಿರುವುದು ಮತ್ತಷ್ಟು ಖುಷಿ ನೀಡಿದೆ. ಸ್ನೇಹಿತರೊಂದಿಗೆ ಎಂಜಾಯ್ ಮಾಡಲು ಚೆನ್ನಾಗಿದೆ~ ಎನ್ನುತ್ತಾರೆ ನಳಿನಾ.

ಕಾರಂಜಿ ವೀಕ್ಷಣೆಗೆ 15ರೂ. ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದ್ದು, 10ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.

85 ಎಕರೆ ವಿಸ್ತೀರ್ಣದ ಈ ಉದ್ಯಾನಕ್ಕೆ ಸಂಗೀತ ನೃತ್ಯ ಕಾರಂಜಿಯಿಂದ ಮತ್ತಷ್ಟು ಮೆರಗು ಬಂದಂತೆ ಆಗಿದೆ.   

ತಿಂಗಳ ಶ್ರಮ
ಹದಿನೆಂಟು ಜನರ ತಂಡ ಮೂರು ತಿಂಗಳಲ್ಲಿ ಸಿದ್ಧಪಡಿಸಿರುವ ಕಾರಂಜಿ ರೂಪುರೇಷೆ ಸ್ವಂತ ಕಲ್ಪನೆಯಲ್ಲಿ ಮೂಡಿದೆ ಎನ್ನುತ್ತಾರೆ. ಬಿಲ್ಡಿಂಗ್‌ನೆಟ್‌ವರ್ಕ್ ಆಟೊ ನೇಷನ್ ಟೆಕ್ನಾಲಜಿಯ ಯೋಜನಾ ನಿರ್ದೇಶಕ ಎಂ.ಜೆ. ಶ್ರೀಧರ್. ಅಲ್ಲದೆ ಕಾರಂಜಿ ಮೋಟರ್‌ಗಳಿಗೆ ಸ್ವಾತಂತ್ರ್ಯ ನಿಯಂತ್ರಣವಿದೆ. ಏಕಕಾಲದಲ್ಲಿ ಸಂಗೀತ ಮತ್ತು ಕಾರಂಜಿ ಚಿಮ್ಮಲು ಕಂಪ್ಯೂಟರ್ ನಿಯಂತ್ರಣ ಮಾಡಲಾಗಿದೆ. ಇದರಿಂದಾಗಿ ವಿದ್ಯುತ್ ಉಳಿತಾಯ ಮಾಡಬಹುದು ಎನ್ನುತ್ತಾರೆ.

ರಾಜಭವನ್ ಸಮೀಪವಿರುವ ಇಂದಿರಾಗಾಂಧಿ ಸಂಗೀತ ಕಾರಂಜಿಗೆ ಹೋಲಿಸಿದರೆ ಬಹಳಷ್ಟು ವ್ಯತ್ಯಾಸಗಳಿವೆ ಎನ್ನುತ್ತಾರೆ. 1994ರಲ್ಲಿ ಆರಂಭವಾದ 60ಅಡಿ ಉದ್ದ, 15ಅಡಿ ಅಗಲವಿರುವ ಇಂದಿರಾಗಾಂಧಿ ಸಂಗೀತ ಕಾರಂಜಿಯಲ್ಲಿ 30ಫೌಂಟೇನ್‌ಗಳು, 165 ಲೈಟ್‌ಗಳಿವೆ. ಆದರೆ ಜೆ.ಪಿ. ಪಾರ್ಕಿನ ಕಾರಂಜಿಯಲ್ಲಿ 120ಫೌಂಟೇನ್‌ಗಳು, 120ಅಡಿ ಉದ್ದ, 40 ಅಡಿ ಅಗಲ ವಿಸ್ತಿರ್ಣವಿದೆ. ಹಾಗೂ 450 ಲೈಟ್‌ಗಳಿವೆ. ಜೊತೆಗೆ ನೂತನ ನಮೂನೆಯ ಕಾರಂಜಿಗಳಿವೆ ಎಂದು ವ್ಯತ್ಯಾಸ ಗುರ್ತಿಸುತ್ತಾರೆ. 450 ಲೈಟ್‌ಗಳು ಕಾರಂಜಿಗೆ ರಂಗು ತುಂಇಂದು ಕಾರಂಜಿ ಉದ್ಘಾಟನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ವಾರ್ಡ್ ನಂ.17ರ ಜೆ.ಪಿ.ಉದ್ಯಾನವನದಲ್ಲಿ ನಿರ್ಮಿಸಿರುವ ಸಂಗೀತ ನೃತ್ಯ ಕಾರಂಜಿ ಹಾಗೂ ಆಧುನಿಕ ಈಜುಕೊಳದ ಉದ್ಘಾಟನಾ ಸಮಾರಂಭ. ಉದ್ಘಾಟನೆ: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅಧ್ಯಕ್ಷತೆ: ಶಾಸಕ ಎಂ.ಶ್ರೀನಿವಾಸ್. ಅತಿಥಿ: ಮೇಯರ್ ಶಾರದಮ್ಮ. ಸ್ಥಳ: ವಾರ್ಡ್ ನಂ.17, ಜೆ.ಪಿ.ಉದ್ಯಾನವನ, ಮತ್ತಿಕೆರೆ. ಸಂಜೆ 6.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT