ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯಗಳಲ್ಲಿ ನೀರಿನ ಕೊರತೆ

ಮುಂಗಾರು ಮಳೆ ವೈಫಲ್ಯ
Last Updated 4 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ 15 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರಾಜ್ಯ ಅತ್ಯಧಿಕ ಪ್ರಮಾಣದ ನೀರಿನ ಕೊರತೆ ಎದುರಿಸುತ್ತಿದೆ. ಪ್ರಸಕ್ತ ಸಾಲಿನ ಮುಂಗಾರು ಮಳೆಯ ವೈಫಲ್ಯದ ಪರಿಣಾಮ ರಾಜ್ಯದ ಜಲಾಶಯಗಳ ನೀರಿನ ಸಂಗ್ರಹದ ಪ್ರಮಾಣದಲ್ಲಿ ಈ ಬಾರಿ ಶೇಕಡ 45ರಷ್ಟು ಕೊರತೆ ಎದುರಾಗಿದೆ.

ಸದ್ಯ ರಾಜ್ಯದ 13 ಜಲಾಶಯಗಳಿಗೆ ಬರುತ್ತಿರುವ ನೀರಿನ ಒಟ್ಟು ಒಳಹರಿವಿನ ಪ್ರಮಾಣ 95,48,638 ಕ್ಯೂಸೆಕ್ ಇದೆ. ಹಿಂದಿನ ವರ್ಷಗಳ ಸರಾಸರಿಗೆ ಹೋಲಿಸಿದರೆ ಈ ಅವಧಿಯಲ್ಲಿ ಒಳಹರಿವಿನ ಒಟ್ಟು ಪ್ರಮಾಣ 1,73,16,129 ಕ್ಯೂಸೆಕ್ ಇರಬೇಕಿತ್ತು. ಐದು ವರ್ಷಗಳಲ್ಲಿ ಈ ಬಾರಿ ಅತಿ ಕಡಿಮೆ ಒಳಹರಿವು ದಾಖಲಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿ-ಅಂಶಗಳ ಪ್ರಕಾರ, ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಹದಿನೈದು ವರ್ಷಗಳಲ್ಲಿ ಅತಿ ಕಡಿಮೆ ನೀರು ಸಂಗ್ರಹವಿದೆ. ಮುಖ್ಯವಾಗಿ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಮಟ್ಟ ತೀರಾ ಕಡಿಮೆ ಇದೆ. ಹಾರಂಗಿ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯದ ಶೇಕಡ 12ರಷ್ಟು ಮಾತ್ರ ನೀರಿದೆ. ಹೇಮಾವತಿ ಜಲಾಶಯದಲ್ಲಿ ಈ ಪ್ರಮಾಣ ಶೇ 22ರಷ್ಟು ಇದೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ ಶೇ 29ರಷ್ಟು ನೀರಿದ್ದರೆ, ಕಬಿನಿ ಜಲಾಶಯದಲ್ಲಿ ಶೇ 33ರಷ್ಟು ನೀರಿನ ಸಂಗ್ರಹವಿದೆ.

ಬರಪೀಡಿತ ತಾಲ್ಲೂಕುಗಳ ಸಂಖ್ಯೆ 157ಕ್ಕೆ ಏರಿದೆ. ತಮಿಳುನಾಡಿಗೆ ನೀರು ಬಿಟ್ಟ ಪರಿಣಾಮ ಕೊರತೆ ಹೆಚ್ಚಾಗಿದೆ. ಈ ವಿಪತ್ತಿನ ಜೊತೆಗೆ ಮುಂದಿನ ಆರು ತಿಂಗಳಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ 213 ನಗರಗಳ ಕುಡಿಯುವ ನೀರಿನ ಸಮಸ್ಯೆಯನ್ನೂ ಸರ್ಕಾರ ಎದುರಿಸಬೇಕಿದೆ.

ಈ ಸಂಕಷ್ಟವನ್ನು ಬಗೆಹರಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ಕಾರ್ಯತಂತ್ರ ರೂಪಿಸುವಲ್ಲಿ ನಿರತವಾಗಿದೆ. ನೀರಿನ ಮೂಲಗಳ ಹುಡುಕಾಟ ನಡೆದಿದೆ. ಹೆಚ್ಚುತ್ತಿರುವ ನೀರಿನ ಕೊರತೆಯ ಸಮಸ್ಯೆಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳಲು ಸಜ್ಜಾಗುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಮೌಖಿಕ ಸೂಚನೆ ನೀಡಿದೆ. `ನೀರಿನ ಕೊರತೆ ದೊಡ್ಡ ಪ್ರಮಾಣದಲ್ಲಿ ಏರುತ್ತಿದೆ.

ಈ ಮಧ್ಯೆ ಹೆಚ್ಚು ನೀರನ್ನು ಬಯಸುವ ಬೆಳೆಗಳಿಗೆ ರೈತರು ಒಲವು ತೋರುತ್ತಲೇ ಇದ್ದಾರೆ. ನಗರ ಪ್ರದೇಶಗಳಲ್ಲೂ ನೀರಿನ ಮಿತ ಬಳಕೆಯ ಬಗ್ಗೆ ಜಾಗೃತಿ ಇಲ್ಲ. ದೊಡ್ಡ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಇನ್ನೊಂದೆಡೆ ರಾಜ್ಯದಲ್ಲಿರುವ ಕೊಳವೆ ಬಾವಿಗಳಲ್ಲಿ ಶೇ 21ರಷ್ಟು ಕಾರ್ಯನಿರ್ವಹಿಸುತ್ತಿಲ್ಲ' ಎನ್ನುತ್ತಾರೆ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ವಿ.ಎಸ್. ಪ್ರಕಾಶ್.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ರೂ 402 ಕೋಟಿ  ವೆಚ್ಚದಲ್ಲಿ ನೀರು ಪೂರೈಕೆ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಿಯಾಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದಿಂದ ರೂ 286 ಕೋಟಿ  ಹೆಚ್ಚುವರಿ ಅನುದಾನವನ್ನೂ ಕೋರಿದೆ. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸಲು ರೂ 251 ಕೋಟಿ  ವೆಚ್ಚ ಮಾಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಸಹಾಯಧನ ನೀಡಲು ಮತ್ತು ಮೇವು ಪೂರೈಸಲು ರೂ 250 ಕೋಟಿ ಅನುದಾನದ ನಿರೀಕ್ಷೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT