ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿ ಕ್ರಷರ್‌ಘಟಕಕ್ಕೆ ಪ್ರತಿಭಟನೆ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಕುರುಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಜಲಹಳ್ಳಿಯಲ್ಲಿ ಜಲ್ಲಿ ಕ್ರಷರ್ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಗಾಜಲ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

`ಜಲ್ಲಿ ಕ್ರಷರ್ ಘಟಕದ ಸ್ಥಾಪನೆಯಿಂದ ಇಡೀ ಪರಿಸರ ಹಾಳಾಗುತ್ತದೆ. ಇಂತಹ ದುಷ್ಪರಿಣಾಮಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು~ ಎಂದು ಆಗ್ರಹಿಸಿದರು.

ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಕೆ.ಸಿ.ಶಂಕರೇಗೌಡ ಮಾತನಾಡಿ, `ಜಲ್ಲಿ ಕ್ರಷರ್ ಅಕ್ರಮ ಗಣಿಗಾರಿಕೆಗೆ ಆಸ್ಪದ ಮಾಡಿಕೊಡುತ್ತದೆ.

ಬೆಟ್ಟಗುಡ್ಡಗಳಿಂದ ಹರಿಯುವ ನೀರು ಮಲಿನಗೊಳ್ಳುತ್ತದೆ. ಇದರ ಪರಿಣಾಮ ಗಾಜಲಹಳ್ಳಿ ಮರುಭೂಮಿಯಾಗಿ ರೂಪುಗೊಳ್ಳಲಿದೆ. ಹಣ್ಣು, ತರಕಾರಿ, ಹಿಪ್ಪುನೇರಳೆ ಬೆಳೆಯುವ ರೈತರಿಗೆ ಸಮಸ್ಯೆಯಾಗಲಿದೆ ಎಂದು ಹೇಳಿದರು.

`ಗ್ರಾಮ, ಪರಿಸರಕ್ಕೆ ಧಕ್ಕೆ ಉಂಟು ಮಾಡುವಂತಹ ಜಲ್ಲಿ ಕ್ರಷರ್ ಘಟಕ ಸ್ಥಾಪನೆಗೆ ಗ್ರಾಮಸ್ಥರು ಒಪ್ಪುವುದಿಲ್ಲ. ಬದುಕನ್ನು ಬರಡಾಗಿಸಿಕೊಳ್ಳಲು ಇಚ್ಛಿಸುವುದಿಲ್ಲ. ಬೆಟ್ಟಗುಡ್ಡಗಳ ಸ್ಫೋಟದಿಂದ ತೊಂದರೆಯಾಗುತ್ತದೆ. ಗ್ರಾಮಸ್ಥರ ಆರೋಗ್ಯದೊಂದಿಗೆ ಚೆಲ್ಲಾಟ ಬೇಡ~ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಕುರುಬೂರು ಗ್ರಾ.ಪಂ. ಅಧ್ಯಕ್ಷ ವೆಂಕಟಸ್ವಾಮಿ, ಸದಸ್ಯರಾದ ಚಂದ್ರಕಲಾ, ಶಿವಣ್ಣ, ಪ್ರಭಾಕರ, ಮುಖಂಡರಾದ ರವಿ, ಮುನಿರಾಜು, ಗಂಗುಲಪ್ಪ, ಗಂಗಪ್ಪ, ಮುನಿಯಪ್ಪ, ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT