ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಳಿ ಉತ್ಪನ್ನ ರಫ್ತು ಹೆಚ್ಚಿಸುವ ಗುರಿ: ಸಚಿವ ಸಂಬಾಶಿವರಾವ್

Last Updated 4 ಜುಲೈ 2013, 20:10 IST
ಅಕ್ಷರ ಗಾತ್ರ

ಬೆಂಗಳೂರು: ಜವಳಿ ಉತ್ಪನ್ನಗಳ ರಫ್ತು ಗುರಿಯನ್ನು  3400 ಕೋಟಿ ಡಾಲರ್‌ಗಳಿಂದ 5000 ಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಜವಳಿ ಖಾ ಸಚಿವ ಡಾ. ಕೆ. ಸಂಬಾಶಿವರಾವ್ ತಿಳಿಸಿದರು.

ನಗರದ ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ ಜವಳಿ ಉದ್ಯಮ ಸಂಘಟನೆಗಳ ಪದಾಧಿಕಾರಿಗಳು, ಸ್ಪಿನ್ನಿಂಗ್ ಮಿಲ್ ಸಂಸ್ಥೆ ಪದಾಧಿಕಾರಿಗಳು, ಗಾರ್ಮೆಂಟ್ ಉತ್ಪಾದಕರು ಹಾಗೂ ರಫ್ತುದಾರ ಸಂಘಟನೆಯ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದೇಶದಲ್ಲಿ 8500 ಕೋಟಿ ಡಾಲರ್ ಮೊತ್ತದ ಜವಳಿ ಉತ್ಪನ್ನಗಳು ತಯಾರಾಗುತ್ತಿವೆ. ಸದ್ಯಕ್ಕೆ 5 ಸಾವಿರ ಕೋಟಿ ಮೊತ್ತದ ಉಣ್ಣೆಯನ್ನು ರಫ್ತು ಮಾಡಲಾಗುತ್ತಿದೆ. ಕುರಿಗಳಿಗೆ ಇರುವ ರೋಗವನ್ನು ಗುಣಪಡಿಸಿದರೆ ಈ ಮೊತ್ತ 10 ಸಾವಿರ ಕೋಟಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ನುಡಿದರು.

ಹತ್ತಿ ಮಿಲ್ ಮಾಲೀಕರು ಬೆಲೆ ಏರುಪೇರಿನಿಂದ ಹಾನಿಗೊಳಗಾಗುತ್ತಿದ್ದಾರೆ. ಆದ್ದರಿಂದ 3 ತಿಂಗಳಿಗೆ ಬದಲು 9 ತಿಂಗಳಿಗೆ ಸಾಕಾಗುವಷ್ಟು ಹತ್ತಿ ಖರೀದಿಸುವಂತೆ ಸಲಹೆ ನೀಡಲಾಗಿದೆ ಎಂದರು.

ಇದಕ್ಕೆ ಅಂದಾಜು 20 ಸಾವಿರ ಕೋಟಿ ಬೇಕಾಗುತ್ತದೆ. ಈ ಮೊತ್ತಕ್ಕೆ ಶೇಕಡಾ 4ರಷ್ಟು ಬಡ್ಡಿ ವಿನಾಯಿತಿ ನೀಡಬೇಕು ಎಂದು ಹಣಕಾಸು ಸಚಿವರಿಗೆ ಕೋರಲಾಗಿದೆ. ವಿನಾಯಿತಿ ನೀಡಿದರೆ 400 ಕೋಟಿ ರೂಪಾಯಿ ಮಾತ್ರ ಹೊರೆಯಾಗಲಿದೆ ಎಂದು ತಿಳಿಸಿದರು.

ದೇಶದಲ್ಲಿ ಸದ್ಯಕ್ಕೆ 1.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಹಿಪ್ಪು ನೆರಳೆ ರೇಷ್ಮೆ ಬೆಳೆಯುವ ಪ್ರದೇಶವನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಕರ್ನಾಟಕ, ಮಧ್ಯಪ್ರದೇಶ ಮುಂತಾದ ಪ್ರದೇಶಗಳಲ್ಲಿ ರೇಷ್ಮೆ ಬೆಳೆಯಲು ಉತ್ತೇಜನ ನೀಡಲಾಗುವುದು ಎಂದರು.

ಕೈಮಗ್ಗ ನೇಕಾರರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಳೆದ ವರ್ಷ ನೇಕಾರರಿಗೆ ಪರಿಹಾರ ಮತ್ತು ಪುನಃಶ್ಚೇತನ ಕಾರ್ಯಕ್ರಮಗಳಿಗೆ 500 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ವರ್ಷವೂ 500 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ಕೈಮಗ್ಗಗಳನ್ನು ನಿಧಾನವಾಗಿ ಯಾಂತ್ರೀಕರಣಗೊಳಿಸಿ ಪೈಪೋಟಿ ಎದುರಿಸಲು ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಜವಳಿ ಉದ್ಯಮ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದು 300 ಮೆಗಾವ್ಯಾಟ್ ಉತ್ಪಾದನೆಗೆ ಅಲ್ಲಿನ ಉದ್ಯಮಿಗಳು ಮುಂದೆ ಬಂದರೆ ಶೇಕಡಾ 50ರಷ್ಟು ಪಾಲನ್ನು ಕೇಂದ್ರ ಸರ್ಕಾರ ಹೊಂದಲಿದೆ ಎನ್ನುವ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT