ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಸ್ಕೊ: ಸಮಸ್ಯೆ ನಗ್ನಗೊಳಿಸಿದ ಸದಸ್ಯರು

Last Updated 19 ಫೆಬ್ರುವರಿ 2012, 8:05 IST
ಅಕ್ಷರ ಗಾತ್ರ

ಮೈಸೂರು: ನಗರ ನೀರು ಸರಬರಾಜು ವ್ಯವಸ್ಥೆಯನ್ನು ಜಸ್ಕೊದವರಿಗೆ ವಹಿಸಿ ದಾಗಿನಿಂದ ತಲೆದೋರಿರುವ ಸಮಸ್ಯೆ ಗಳನ್ನು ಪಾಲಿಕೆ ಸದಸ್ಯರು ಸಭೆಯಲ್ಲಿ ನಗ್ನಗೊಳಿಸಿದರು. ಕುಡಿಯುವ ನೀರು ಕುರಿತ ಚರ್ಚೆಯಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಯಿತು. ಸುಮಾರು ಮೂರು ತಾಸು ಸುದೀರ್ಘ ಚರ್ಚೆ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ತಮ್ಮ ವಾರ್ಡ್‌ಗಳ ಸಮಸ್ಯೆಯನ್ನು ಒಂದೊಂದಾಗಿ ಬಿಚ್ಚತೊಡಗಿದರು. ಇದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಆಗಾಗ್ಗೆ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಸಮಸ್ಯೆ ತಲೆದೋರಿರುವುದು ಜಸ್ಕೊದಿಂದ. ಹಾಗಾಗಿ ಸದಸ್ಯರು ಕಚ್ಚಾಡಿದರೆ ಕಾಲ ಹರಣವಾಗುತ್ತದೆ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದನ್ನು ಕೆಲ ಸದಸ್ಯರು ಅರಿತರು.

ನಂತರ ಎಲ್ಲರ ದೃಷ್ಟಿ ಜಸ್ಕೊ ಅಧಿಕಾರಿಯತ್ತ ನೆಟ್ಟಿತು. ಜಸ್ಕೊ ಕಂಪೆನಿಯನ್ನು ಮನೆಗೆ ಕಳುಹಿಸುವುದೇ ಲೇಸು. ಮೊದಲು ಇದ್ದದ್ದೇ ವಾಸಿ, ಇದೀಗ ಸಮಸ್ಯೆ ಬೆಟ್ಟದಷ್ಟಾಗಿದೆ. ವಾರ್ಡ್‌ನಲ್ಲಿ ಸದಸ್ಯರು ಓಡಾಡಲು ಆಗುತ್ತಿಲ್ಲ. ಕೆಲವರು ಮನೆ ಮುಂದೆ ಗಲೀಜು ನೀರು ಸುರಿದರೆ, ಮಹಿಳೆಯರು ಪೊರಕೆ ಹಿಡಿದು ಹೊಡೆಯಲು ಬರುತ್ತಿದ್ದಾರೆ. ನಾಗರಿಕರಿಗೆ ಮುಖ ತೋರಿಸಲು ಆಗುತ್ತಿಲ್ಲ. ಒಂದು ಟ್ಯಾಂಕ್ ನೀರನ್ನು ಕೊಡಿಸಲು ಆಗುತ್ತಿಲ್ಲ. ಜಸ್ಕೊ ನಮಗೆ ಬೇಡವೇ ಬೇಡ ಎಂದು ಬಹುತೇಕ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಈ ನಡುವೆ ಸದಸ್ಯ ಚಲುವೇಗೌಡ ಅವರು `ಜಸ್ಕೊ-ಪಾಲಿಕೆ ನಡುವೆ ಆಗಿ ರುವ ಒಪ್ಪಂದ ಪತ್ರವನ್ನು ಸಭೆಗೆ ಹಾಜರುಪಡಿ ಸಬೇಕು. ಯಾವ ರೀತಿ ಒಪ್ಪಂದವಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು~ ಎಂದು ಏರುಧ್ವನಿಯಲ್ಲಿ ಒತ್ತಾಯಿಸಿದರು. ಒಪ್ಪಂದ ಪತ್ರ ಮುಗಿದ ಕತೆ. ನಮಗೆ ಕುಡಿಯುವ ನೀರು ಬೇಕು ಅಷ್ಟೆ. ಜಸ್ಕೊ ಎಷ್ಟು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು.

ಜಸ್ಕೊ ಹಿರಿಯ ಅಧಿಕಾರಿ ಸುರೇಶ್‌ಕುಮಾರ್ ಶರ್ಮಾ ಅವರು ಜಸ್ಕೊದ ಯೋಜನೆ ಯಾವ ಹಂತದಲ್ಲಿ ಕೆಲಸ ಆಗುತ್ತಿದೆ, ಮುಂದಿನ ಯೋಜನೆಗಳೇನು ಎಂಬುದರ ಬಗ್ಗೆ ಆಂಗ್ಲ ಭಾಷೆಯಲ್ಲಿ ಹೇಳತೊಡಗಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಅವರು ಏನೇ ಹೇಳಿದರು ಅದನ್ನು ನಾವು ಒಪ್ಪುವುದಿಲ್ಲ. ನಮಗೆ ಸಮರ್ಪಕ ಕುಡಿಯುವ ನೀರು ಬೇಕಷ್ಟೆ ಎಂದು ಪಟ್ಟುಹಿಡಿದರು. ಇದಕ್ಕೆ ಶರ್ಮಾ ಅವರ ಬಳಿ ಉತ್ತರ ಇರಲಿಲ್ಲ.
ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲ ವಾರ್ಡ್‌ಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಬೇಕು. ಅಗತ್ಯ ಇರುವೆಡೆ ಬೋರ್‌ವೆಲ್‌ಗಳನ್ನು ತೆಗೆಸಬೇಕು ಎಂದು ಆಯುಕ್ತ ರಾಯ್ಕರ್ ಅವರು ಜಸ್ಕೊ ಅಧಿಕಾರಿಗೆ ಸೂಚಿಸಿದರು.

ಅಲ್ಲದೆ ಶಾಸಕರು, ಸಚಿವರು ಮತ್ತು ಜಸ್ಕೊ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ಕರೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಕುರಿತು ಮೇಯರ್ ಪುಷ್ಪಲತಾ  ನಿರ್ಣಯ ಮಂಡಿಸಿದರು.

`ಜಸ್ಕೊ ಮನೆಗೆ ಕಳುಹಿಸುವುದು ಸುಲಭವಲ್ಲ~
`ಜಸ್ಕೊ ನೀರು ಸರಬರಾಜಿನ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲವೆಂದು ಸಾರ್ವಜನಿಕರು ಸಾವಿರಾರು ದೂರು ನೀಡಿದ್ದಾರೆ. ಆದರೆ ಅದರಲ್ಲಿ ಅರ್ಧದಷ್ಟು ಮಾತ್ರ ಸಮಸ್ಯೆಯನ್ನು ಬಗೆಹರಿಸಲು ಜಸ್ಕೊಗೆ ಸಾಧ್ಯವಾಗಿದೆ. ಆರಂಭದಲ್ಲಿ ನೀರಿನ ಟ್ಯಾಂಕರ್‌ಗಳನ್ನು ನೀಡುತ್ತೇವೆಂದು ತಿಳಿಸಿದ್ದರು. ಆದರೆ ಟ್ಯಾಂಕರ್‌ಗಳನ್ನು ಒದಗಿಸುತ್ತಿಲ್ಲ~ ಎಂದು ಆಯುಕ್ತ ರಾಯ್ಕರ್ ತಿಳಿಸಿದರು.

`ಜಸ್ಕೊ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸರ್ಕಾರಕ್ಕೆ ಅನೇಕ ಬಾರಿ ಪತ್ರ ಬರೆದಿದ್ದೇನೆ. ನೋಟಿಸ್ ಜಾರಿ ಮಾಡಿದ್ದೇನೆ. ಸರ್ಕಾರ ಸಹ ಕಂಪೆನಿಯನ್ನು ಮನೆಗೆ ಕಳುಹಿಸುವಂತೆ ಸೂಚಿಸಿತ್ತು. ರೂ.162 ಕೋಟಿ ವೆಚ್ಚದ ನೀರಿನ ಸರಬರಾಜನ್ನು ವಹಿಸಿದ್ದೇವೆ. ಇವರನ್ನು ಅರ್ಧಕ್ಕೆ ಮನೆಗೆ ಕಳುಹಿಸಲು ಸುಲಭದ ಮಾತಲ್ಲ.
 

ಒಪ್ಪಂದದಂತೆ ಈ ವರ್ಷ ಕಾಯಲೇಬೇಕು. ಒಂದು ವೇಳೆ ಮನೆಗೆ ಕಳುಹಿಸಿದರೂ ಜಸ್ಕೊಗೆ ನೀಡಿದ ಹಣ ವ್ಯರ್ಥವಾಗುತ್ತದೆ. ಮುಂದೆ ಹೊಸದಾಗಿ ಬರುವ ಕಂಪೆನಿ ಎಲ್ಲವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವುದು ಕಷ್ಟ. ಜಸ್ಕೊ ಮುಂದೆ ಸರಿ ಹೋಗದಿದ್ದರೆ ಗಂಭೀರವಾಗಿ ಪರಿಗಣಿಸಿ ಪತ್ರ ಬರೆಯುತ್ತೇನೆ~ ಎಂದು ಸದಸ್ಯರಿಗೆ ತಿಳಿಸಿದರು.

`ಸರಿಯಾದ ನಿರ್ವಹಣೆ ಇಲ್ಲ~
`ಜಸ್ಕೊ ನೀರು ಸರಬರಾಜನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಸಾಕಷ್ಟು ದೂರುಗಳು ಬಂದಿವೆ. ಜನರೊಂದಿಗೆ ಕಂಪೆನಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಈಗಾಗಲೇ ಅನೇಕ ಬಾರಿ ನೋಟಿಸ್ ಜಾರಿ ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಒಪ್ಪಂದದಂತೆ ಜಸ್ಕೊದವರನ್ನು ಮಧ್ಯಂತರದಲ್ಲಿ ಬಿಡಿಸುವುದು ಕಷ್ಟ~
-ಸುಬ್ಬೇಗೌಡ;ಇಇ, ಕ.ನೀ.ಸ.ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT