ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ನೆಲೆಯಲ್ಲಿ ಸಚಿನ್ ಅದೆಷ್ಟು ಪ್ರಸ್ತುತ ?

ಕ್ರೀಡಾ ಸಂವಾದ
Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸಚಿನ್ ತೆಂಡೂಲ್ಕರ್ ನಿವೃತ್ತಿಯ ಬಗ್ಗೆ ಗಂಭೀರ ಚರ್ಚೆ ನಡೆಸುವ ಮಂದಿಯನ್ನು ಕಂಡು ನನಗೆ ನಗೆ ಬರುತ್ತಿದೆ. ಜಗತ್ತಿನಲ್ಲಿ ಕ್ರಿಕೆಟ್ ಸಾಕಷ್ಟು ಜನಪ್ರಿಯವಾಗಿರುವ ದೇಶಗಳೇ ಬೆರಳೆಣಿಕೆಯಷ್ಟು.

ಭಾರತ, ಶ್ರೀಲಂಕಾ, ಪಾಕಿಸ್ತಾನ ಅಷ್ಟೇ. ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲಿ ಕ್ರಿಕೆಟ್ ಜನಪ್ರಿಯವಿದ್ದರೂ, ಅಲ್ಲಿ ಹೆಚ್ಚು ಜನ ನೋಡುವುದು, ಆಡುವುದು ಮತ್ತು ಜಾಹೀರಾತು ಕಂಪೆನಿಗಳಿಗೆ ಹೆಚ್ಚು ಆಕರ್ಷಣೆ ಎನಿಸಿರುವುದು ಫುಟ್‌ಬಾಲ್ ತಾನೆ.

ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಷ್ಟೇ ಸುದ್ದಿ ಮಾಡುವ ಹಾಲೆಂಡ್, ಐರ್ಲೆಂಡ್‌ನಂತಹ ದೇಶಗಳನ್ನು ನಮ್ಮ ದೇಶದ ಯಾವುದೇ ರಾಜ್ಯದ ತಂಡಗಳೂ ಸೋಲಿಸಿ ಬಿಡುತ್ತವೆ. ಪರಿಸ್ಥಿತಿ ಈ ರೀತಿ ಇರುವಾಗ `ಹಾಳೂರಿಗೆ ಉಳಿದವನೇ ಗೌಡ' ಎಂಬಂತಿದೆ ನಮ್ಮ ದೇಶದ ಕ್ರಿಕೆಟ್ ಪರಿಸ್ಥಿತಿ.

ಭಾರತದಲ್ಲಿಯೂ ಈಗ ಜನರನ್ನು ಐಪಿಎಲ್ ಕ್ರಿಕೆಟ್ ಪಂದ್ಯಗಳತ್ತ ಆಕರ್ಷಿಸಲು ಚಿಯರ್‌ಗರ್ಲ್ಸ್‌ಗಳನ್ನು ಬಳಸಿಕೊಳ್ಳುತ್ತಿರುವುದನ್ನು ಕಂಡಾಗ ಕ್ರಿಕೆಟ್ ಸಂಘಟಕರ ಬಗ್ಗೆ ಅನುಕಂಪ ಮೂಡುತ್ತಿದೆ.

ಈ ನಾಡಿನ ಮಾಧ್ಯಮದ ಮಂದಿಗೆ ಇಂತಹದ್ದೊಂದು ಕ್ರಿಕೆಟ್ ಬಗ್ಗೆ ಅದೇಕೆ ಇಷ್ಟೊಂದು ಮೋಹವೋ ನನಗಂತೂ ಅರ್ಥವಾಗುತ್ತಿಲ್ಲ.

220 ದೇಶಗಳಲ್ಲಿ ಬಹಳಷ್ಟು ಜನಪ್ರಿಯವಿರುವ ಫುಟ್‌ಬಾಲ್‌ನಂತಹ ಕ್ರೀಡೆಗಳ ಬಗ್ಗೆ ಮಹತ್ವ ಕೊಡುವುದನ್ನು ಬಿಟ್ಟು, ಭಾರತ ಮತ್ತು ಇನ್ನೊಂದು ದೇಶದಲ್ಲಿ ನಡೆಯೋ ಕ್ರಿಕೆಟ್ ಬಗ್ಗೆ ಪುಟಗಟ್ಟಲೆ ಸುದ್ದಿಗಳು ಪ್ರಕಟವಾಗುತ್ತವೆಯಲ್ಲವೇ. ಇನ್ನು ಈ ಕ್ರಿಕೆಟ್ ಅಬ್ಬರದಲ್ಲಿ ಕಬಡ್ಡಿ, ವಾಲಿಬಾಲ್‌ಗಳಂತಹ ಆಟಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ.

ಅದೇನೇ ಇರಲಿ, ಬಿಯರ್, ಕೆಂಟಕಿ ಫ್ರೈಡ್ ಚಿಕನ್‌ಗಳಂತಹ ಪಾನೀಯ ಮತ್ತು ತಿನಿಸುಗಳ ಮಾರಾಟದ ಏಜೆಂಟರಂತೆ ಎದ್ದು ಕಾಣುವ `ಖ್ಯಾತ ಕ್ರಿಕೆಟಿಗ'ರು ನಮ್ಮ ವಿಶ್ವನಾಥನ್ ಆನಂದ್ ಅವರಷ್ಟು ಎತ್ತರದವರಂತೂ ಅಲ್ಲವೇ ಅಲ್ಲ. ಆನಂದ್ ಎಂದೂ ಅಂತಹ ಕಂಪೆನಿಗಳ `ಜಾಹೀರಾತು ವಸ್ತು'ವಂತೂ ಆಗಿಲ್ಲ ಬಿಡಿ. ಪರಿಸ್ಥಿತಿ ಈ ರೀತಿ ಇರುವಾಗ ಸಚಿನ್ ನಿವೃತ್ತಿ ಎನ್ನುವುದೊಂದು `ರಾಷ್ಟ್ರೀಯ ಸಂಗತಿ' ಎಂಬಂತೆ ನಾವು ಚರ್ಚಿಸುತ್ತಾ ಕೂರುವುದು ಬೌದ್ಧಿಕ ದಿವಾಳಿತನವಲ್ಲದೆ ಇನ್ನೇನು?
ಆರ್.ಜಿ. ಶ್ರೀಧರ, ಕ್ಲಬ್‌ರಸ್ತೆ, ಸೋಮವಾರಪೇಟೆ, ಕೊಡಗು ಜಿಲ್ಲೆ.

ಅವರದು ತಪ್ಪು ಲೆಕ್ಕಾಚಾರ
ಸಚಿನ್ ದೈತ್ಯ ಪ್ರತಿಭೆ. ಅವರಿಗೆ ಇದೀಗ ಸಂದಿಗ್ಧ ಕಾಲ. ಘಟಾನುಘಟಿಗಳ ಪರಿಣಾಮಕಾರಿ ಚೆಂಡುಗಳನ್ನು ಎದುರಿಸಿದ ಇವರು ಆಟದಲ್ಲಿ ಎಡವಿದ್ದು ಕಡಿಮೆ. ಆದರೆ ನಿವೃತ್ತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರ ಲೆಕ್ಕಾಚಾರ ತಪ್ಪಿದೆ. ಹಿಂದೆ ಭಾರತ ವಿಶ್ವಕಪ್ ಗೆದ್ದಾಗಲೇ ಸಚಿನ್ ನಿವೃತ್ತರಾಗಿಬಿಟ್ಟಿದ್ದರೆ ಅವರು ಬಲು ದೊಡ್ಡ ಹೀರೊ ಎನಿಸಿಬಿಡುತ್ತಿದ್ದರು. ಇನ್ನೂ ಕಾಲ ಮಿಂಚಿಲ್ಲ. ವಿದಾಯ ಹೇಳಲು ಇದು ಸಕಾಲ.
ಎಸ್.ಎಂ.ಖೋತ, ಅತ್ತಿಹಾಳ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ.

ಪ್ರತಿಭಾವಂತರಿಗೆ ಅವಕಾಶ ಸಿಗಬೇಕಲ್ಲ
ಹಿಂದೆ ಸಚಿನ್ ಆಡುತ್ತಿದ್ದಾರೆಂದರೆ ಪ್ರಸಿದ್ಧ ಬೌಲರ್‌ಗಳೂ ಹೆದರುತ್ತಿದ್ದರು. ಆದರೆ ಇವತ್ತು ಸಚಿನ್ ಸಾಮಾನ್ಯ ಆಟಗಾರರಂತೆ ವಿಕೆಟ್ ಒಪ್ಪಿಸುತ್ತಿರುವುದೊಂದು ವಿಪರ್ಯಾಸ. ಪ್ರತಿಭಾವಂತ ಆಟಗಾರರು ತೆರೆಯ ಹಿಂದೆ ಕುಳಿತಿದ್ದಾರೆ. ಪರಿಸ್ಥಿತಿ ಈ ರೀತಿ ಇರುವುದರಿಂದ ಸಚಿನ್ ನಿವೃತ್ತಿ ಪ್ರಕಟಿಸುವ ಮೂಲಕ ಹಲವು ಪ್ರತಿಭಾವಂತರಿಗೆ ಅವಕಾಶ ಮಾಡಿಕೊಡಲಿ.
ಉತ್ತಮ್.ಎಂ.ಸಿಂಧೆ, ದಾಡಗಿ, ಭಾಲ್ಕಿ ತಾಲ್ಲೂಕು, ಬೀದರ ಜಿಲ್ಲೆ.

ಸಚಿನ್ ಇವತ್ತಿಗೂ ಕಳಸ
ತೇರಿಗೆ ಕಳಸವು ಅದೆಷ್ಟು ಶೋಭೆ ತರುವಂತಹದ್ದೋ, ಹಾಗೆ ಕ್ರಿಕೆಟ್‌ಗೆ ಸಚಿನ್ ಕಳಸವಿದ್ದಂತೆ. ಸಚಿನ್ ಆಟ ಇವತ್ತೂ ಫಳಫಳಿಸುತ್ತಿದೆ.  ವಯಸ್ಸಾಗಿರುವುದು `ಸಚಿನ್ ಡೇಟ್ ಆಫ್ ಬರ್ತ್'ಗೆ ಮಾತ್ರ. ಆದರೆ ಮಾಸ್ಟರ್ ಬ್ಲಾಸ್ಟರ್ ಬ್ಯಾಟ್ ಇವತ್ತಿಗೂ ಬೆಂಕಿಯಂತಿದೆ. ಇವತ್ತಿಗೂ ಭಾರತ ತಂಡಕ್ಕೆ ಅವರ ಅನಿವಾರ್ಯತೆ ಇದೆ. ಹೊಸಬರಿಗೆ ಅವರ ನೆರಳು, ಮಾರ್ಗದರ್ಶನ ಬೇಕೇ ಬೇಕು. ಅವರು ಇನ್ನಷ್ಟೂ ವರ್ಷ ಆಟ ಮುಂದುವರಿಸಲಿ.
-ಎನ್.ಹನುಮಂತಪ್ಪ, ಮಾಟೂರು, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ.

ನಿಮ್ಮ ಅನಿಸಿಕೆಯನ್ನು   ಈ ವಿಳಾಸಕ್ಕೆ ಬರೆಯಿರಿ.
ಸಂಪಾದಕರು, ಕ್ರೀಡಾ ಸಂವಾದ, ನಂ: 75, ಎಂ.ಜಿ. ರಸ್ತೆ, ಬೆಂಗಳೂರು 560001
email: kreede@ prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT