ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಬ್ಯಾಂಕಿಂಗ್ ವಹಿವಾಟು ಸರಿದಾರಿಗೆ

Last Updated 13 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಟೊರೆಂಟೊ (ಐಎಎನ್‌ಎಸ್):  ಜಾಗತಿಕ ಆರ್ಥಿಕ ಹಿಂಜರಿತದಿಂದ ವಹಿವಾಟು ಸ್ಥಗಿತಗೊಳಿಸಿದ್ದ ಪ್ರಪಂಚದ ಎರಡನೆಯ ಮೂರರಷ್ಟು ಬ್ಯಾಂಕುಗಳು ಮತ್ತೆ ಎಂದಿನಂತೆ ವಹಿವಾಟು ಪುನರಾರಂಭಿಸುವುದಾಗಿ ಹೇಳಿವೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಐಎಫ್) ಪರವಾಗಿ ಅರ್ನೆಸ್ಟ್ ಆ್ಯಂಡ್ ಯಂಗ್ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವಹಿವಾಟು ಸ್ಥಗಿತಗೊಳಿಸಿದ್ದ ಪ್ರಪಂಚದ ಪ್ರಮುಖ 62 ಬ್ಯಾಂಕುಗಳನ್ನು ಈ ಸಂಸ್ಥೆ ಸಂದರ್ಶಿಸಿದೆ. ಇದರಲ್ಲಿ ಶೇ 65ರಷ್ಟು ಬ್ಯಾಂಕುಗಳು ವಹಿವಾಟು ಪುನರಾರಂಭಿಸುವುದಾಗಿ ಹೇಳಿದರೆ, ಶೇ 32ರಷ್ಟು ಬ್ಯಾಂಕುಗಳು ತಾವಿನ್ನೂ ಆರ್ಥಿಕ ಮಗ್ಗಟ್ಟಿನಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿವೆ.

ಭಾರತದ ಐಸಿಐಸಿಐ, ಸಿಟಿಗ್ರೂಪ್, ಎಚ್‌ಎಸ್‌ಬಿಸಿ, ಮಾರ್ಗನ್ ಸ್ಟ್ಯಾನ್ಲಿ, ಅಮೆರಿಕದ ಬರ್ಕ್‌ಲೈಸ್ ಬ್ಯಾಂಕ್, ಐಎನ್‌ಜಿ, ಸ್ಕಾಟ್‌ಲೆಂಡ್‌ನ ರಾಯಲ್ ಬ್ಯಾಂಕ್, ಚೀನಾ ಬ್ಯಾಂಕ್ ಮತ್ತು ಕೆನಡಾದ ಪ್ರಮುಖ ಐದು ಬ್ಯಾಂಕುಗಳನ್ನು ಈ ಸಮೀಕ್ಷಾ ತಂಡ ಸಂದರ್ಶಿಸಿ ಮಾಹಿತಿ ಕಲೆ ಹಾಕಿದೆ. ಸಮೀಕ್ಷೆಯಲ್ಲಿ ಶೇ 50ರಷ್ಟು ಬ್ಯಾಂಕುಗಳು ತಾವು ಆರ್ಥಿಕ ಹಿಂಜರಿತದ ಕಾಲದಲ್ಲಿ  ತೀವ್ರ ಪರಿಣಾಮಗಳನ್ನು ಎದುರಿಸಿರುವುದಾಗಿ ಹೇಳಿವೆ. ಶೇ 32ರಷ್ಟು ಬ್ಯಾಂಕುಗಳು ಅಲ್ಪಮಟ್ಟಿಗಿನ ಮತ್ತು ಶೇ 20 ರಷ್ಟು ಬ್ಯಾಂಕುಗಳು ಮಾತ್ರ ತುಂಬಾ ಕಡಿಮೆ ಪರಿಣಾಮ ಎದುರಿಸಿದ್ದೇವೆ ಎಂದು ಹೇಳಿವೆ. 

‘ಸದ್ಯ ಜಾಗತಿಕ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಮಾರುಕಟ್ಟೆ ಕೂಡ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ವಹಿವಾಟು ಮರು ಪ್ರಾರಂಭಿಸುವ ಆಲೋಚನೆ ಹೊಂದಲಾಗಿದೆ ಎಂದು ಬ್ಯಾಂಕುಗಳು ಹೇಳಿವೆ. ಆದರೆ, ಶೇ 33ರಷ್ಟು ಬ್ಯಾಂಕುಗಳು ‘ಮಾರುಕಟ್ಟೆ ಅಸ್ಥಿರತೆಯ ಕುರಿತು ಆತಂಕ ವ್ಯಕ್ತಪಡಿಸಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮುಂದುವರೆದಿರುವ ರಾಜಕೀಯ ಅಸ್ಥಿರತೆ ಮತ್ತು ಮಾರುಕಟ್ಟೆ ಏರಿಳಿತಗಳಿಂದ ಬ್ಯಾಂಕಿಂಗ್ ವಹಿವಾಟು ವಿಸ್ತರಣೆ ಮತ್ತು ದೀರ್ಘಾವಧಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಿನ್ನಡೆ ಉಂಟಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ. 

ಆಡಳಿತಾತ್ಮಕ ಸುಧಾರಣೆ: ಆರ್ಥಿಕ ಹಿಂಜರಿತದ ನಂತರ ಬ್ಯಾಂಕುಗಳು ಆಡಳಿತಾತ್ಮಕ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿವೆ. ಶೇ 82ರಷ್ಟು ಬ್ಯಾಂಕುಗಳು ಇಂತಹ ಸಂಭಾವ್ಯ ಪರಿಣಾಮಗಳನ್ನು ಎದುರಿಸಲು ಹಲವು ದೂರದೃಷ್ಟಿಯ ಯೋಜನೆಗಳನ್ನು ಅಳವಡಿಸಿಕೊಂಡಿವೆ. ಶೇ 92ರಷ್ಟು ಬ್ಯಾಂಕುಗಳು ನಗದು ಹಣದ ನಿರ್ವಹಣೆ ನೀತಿ ಪರಿಷ್ಕರಣೆ ಮಾಡಿವೆ. ಶೇ 96ರಷ್ಟು ಬ್ಯಾಂಕುಗಳು ಹಣಕಾಸು ಮುಗ್ಗಟ್ಟು ನಿರ್ವಹಣೆ ಕ್ರಮಗಳನ್ನು ಹೆಚ್ಚಿಸಿವೆ ಎಂದು ಸಮೀಕ್ಷೆ ಹೇಳಿದೆ. ‘ಐಐಎಫ್’ ಪ್ರಪಂಚದಾದ್ಯಂತ 400 ಹಣಕಾಸು ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದ್ದು, ಆರ್ಥಿಕ ಹಿಂಜರಿತದ ನಂತರ ಬ್ಯಾಂಕುಗಳಿಗೆ ಮುಗ್ಗಟ್ಟು ನಿರ್ವಹಣೆ, ದೂರದೃಷ್ಟಿಯ ಹಣಕಾಸು ಕ್ರಮಗಳ ಬಗ್ಗೆ  ಸಲಹೆ ನೀಡುತ್ತಿದೆ. ಯೂರೋಪ್ ಮತ್ತು ಅಮೆರಿಕದ ಬ್ಯಾಂಕುಗಳು ಆರ್ಥಿಕ ಹಿಂಜರಿತದ ಕಾಲದಲ್ಲಿ ಹೆಚ್ಚು ನಷ್ಟವನ್ನು ಅನುಭವಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT