ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಮಾರುಕಟ್ಟೆ ಸಂಭ್ರಮ ಬೇಡ

Last Updated 13 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದಲ್ಲಿ ಭಾಷಾ ಸೌಹಾರ್ದ ವಾತಾವರಣ ಮೂಡಬೇಕಾದರೆ ಜನತೆ ಜಾಗತಿಕ ಮಾರುಕಟ್ಟೆ ಬಗೆಗಿನ ಸಂಭ್ರಮವನ್ನು ಬಿಟ್ಟು ಬಿಡಬೇಕು~ ಎಂದು ಹಿರಿಯ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಮಾಲ್ ಸಂಸ್ಕೃತಿಯ ಪ್ರಭಾವ ತೀವ್ರವಾಗಿರುವ ಈ ಸಂದರ್ಭದಲ್ಲಿ ಬಜಾರ್ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಪರಿಣಾಮವಾಗಿ ಭಾಷೆ ಕೂಡ ಸೊರಗುತ್ತದೆ. ಹಾಗಾಗಿ ಮಾಲ್ ಸಂಸ್ಕೃತಿಯ ಬದಲಿಗೆ ಸ್ಥಳೀಯ ಸಂಸ್ಕೃತಿ ಆಚರಣೆಗೆ ಒತ್ತು ನೀಡಬೇಕು. ಆಗ ಎಲ್ಲ ಪ್ರಾದೇಶಿಕ ಭಾಷೆಗಳು ಬೆಳೆಯುತ್ತವೆ~ ಎಂದರು.

`ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಸಂದರ್ಭದಲ್ಲಿ ನಾನು ಸಾಕಷ್ಟು ಕನ್ನಡಿಗರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಕೆಲವರು ಕನ್ನಡ ದ್ರೋಹಿ ಎಂದೆಲ್ಲಾ ನಿಂದಿಸಿದರು. ಆದರೆ ಕೋಮು ಸೌಹಾರ್ದ, ಭಾಷಾ ಸೌಹಾರ್ದ ಉಳಿಯಬೇಕಾದರೆ ಈ ರೀತಿಯ ಎಲ್ಲ ವಿರೋಧಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಯಾರನ್ನೂ ಓಲೈಸಲು ಯತ್ನಿಸಬಾರದು~ ಎಂದು ಹೇಳಿದರು.

`ಭಾಷೆ ವಿಷಯಕ್ಕೆ ಸಂಬಂಧಪಟ್ಟಂತೆ ಮನೆ ಭಾಷೆ, ಬೀದಿ ಭಾಷೆ, ಅಟ್ಟದ ಭಾಷೆ ಮುಖ್ಯವೆನಿಸುತ್ತದೆ. ಅಟ್ಟದ ಭಾಷೆ ಅಂದರೆ ವ್ಯವಹಾರಕ್ಕಾಗಿ ಬಳಸುವ ಇಂಗ್ಲಿಷ್ ಭಾಷೆ. ಅಟ್ಟದ ಭಾಷೆಯಷ್ಟೇ ಬೀದಿ ಭಾಷೆ ಕೂಡ ಮುಖ್ಯ. ಆದರೆ ಮಾರ್ಕೆಟ್ ಸಂಸ್ಕೃತಿಯಿಂದಾಗಿ ಈ ಬೀದಿ ಭಾಷೆ ಸೊರಗುತ್ತಿದೆ~ ಎಂದರು.

ಸ್ಥಳೀಯ ಭಾಷೆ ಕಲಿಯಬೇಕು: `ಪ್ರತಿಯೊಬ್ಬರು ತಾವು ನೆಲೆಸಿರುವ ಪ್ರದೇಶದ ಭಾಷೆಯನ್ನು ಕಲಿಯಬೇಕು. ಹಾಗೆಯೇ ತಮಗೆ ಇಷ್ಟವಾದ ಭಾಷೆಯ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರಬೇಕು. ಆಗಮಾತ್ರ ಭಾಷಾ ಸೌಹಾರ್ದ ಮೂಡಲು ಸಾಧ್ಯ~ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, `ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 30 ಕವಿಗಳು, 25 ಮಂದಿ ವಿದ್ವಾಂಸರೂ ಸೇರಿದಂತೆ 12 ಭಾಷೆಯ ಪಂಡಿತರು ಪಾಲ್ಗೊಂಡಿದ್ದಾರೆ. ಆದರೆ, ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದಿರುವುದು ಬೇಸರ ಮೂಡಿಸಿದೆ~ ಎಂದು ವಿಷಾದ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕಾ.ತ. ಚಿಕ್ಕಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT