ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಹೂಡಿಕೆದಾರರಿಗಾಗಿ ದೇಶೀ ಹೂಡಿಕೆಯ ತ್ಯಾಗ

ಆರ್ಥಿಕ ಸುಧಾರಣೆಗೆ 25 -9
Last Updated 17 ಆಗಸ್ಟ್ 2016, 20:04 IST
ಅಕ್ಷರ ಗಾತ್ರ

ಡಾ. ಮನಮೋಹನ್ ಸಿಂಗ್ ಅವರು ಜಾಗತೀಕರಣದ ಪ್ರಕ್ರಿಯೆ ಆರಂಭಿಸಿ 25 ವರ್ಷಗಳು ಸಂದಿವೆ. 1991ಕ್ಕಿಂತ ಮೊದಲಿನ ಕಾಲಘಟ್ಟದಲ್ಲಿ ದೇಶದಲ್ಲಿ ಸರ್ಕಾರದ ನಿಯಂತ್ರಣ ಇತ್ತು, 1991ರ ನಂತರದ ಕಾಲಘಟ್ಟದಲ್ಲಿ ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಯ ನಿಯಂತ್ರಣ ಇದೆ ಎಂಬುದು ಬಹುತೇಕರು ಒಪ್ಪಿರುವ ವಿಚಾರ. ಆದರೆ ಈ ಸರಳ ವಿಭಜನೆಯು ಹಲವಾರು ಅಹಿತಕರ ಸಂಗತಿಗಳನ್ನು ಮುಚ್ಚಿಡುತ್ತದೆ.

ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಸರ್ಕಾರಿ ವೆಚ್ಚದ ಪಾಲು ಕಡಿಮೆಯಾಗಿಲ್ಲ. ಸಾರ್ವಜನಿಕ ವಲಯವು ಖಾಸಗೀಕರಣಕ್ಕೆ ತೆರೆದುಕೊಂಡಿದ್ದು ತೀರಾ ಸೀಮಿತ ಪ್ರಮಾಣದಲ್ಲಿ. ಬಹುಪಾಲು ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ಆಗಿಲ್ಲ. ಸರ್ಕಾರದ ಹಗರಣಗಳ ಪ್ರಮಾಣ ಬೃಹತ್ ಪ್ರಮಾಣದಲ್ಲಿ ಏರಿದೆ. ‘ಸರ್ಕಾರಿ’ ಎನ್ನುವುದರಿಂದ ‘ಖಾಸಗಿ’ ಎಂಬಲ್ಲಿಗೆ ಆಗಿರುವ ಸ್ಥಿತ್ಯಂತರ ಮಾತ್ರವಲ್ಲದೆ, ಇನ್ನೂ ಹೆಚ್ಚಿನದು ಸಂಭವಿಸಿದೆ ಎಂಬುದು ಸ್ಪಷ್ಟ. ಕಳೆದ 25 ವರ್ಷಗಳ ಅವಧಿಯಲ್ಲಿ ಭಾರತೀಯ ಆರ್ಥಿಕ ವ್ಯವಸ್ಥೆಗೆ ಏನಾಗಿದೆ ಎಂಬುದನ್ನು ತಿಳಿಯಲು ಕೆಲವು ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕು.

1991ರ ಸುಧಾರಣೆಗಳ ಹಿಂದೆ ಇದ್ದಿದ್ದು ಬಾಕಿ ಪಾವತಿಯ ತೀವ್ರ ಬಿಕ್ಕಟ್ಟು ಎಂಬುದು ಹಳಬರಿಗೆ ನೆನಪಿನಲ್ಲಿರಬಹುದು. ದಶಕಗಳಿಂದ ಅನುಸರಿಸಿಕೊಂಡು ಬಂದ ರಕ್ಷಣಾತ್ಮಕ ಕ್ರಮಗಳ ಕಾರಣದಿಂದ ಭಾರತದ ಉತ್ಪಾದಕರು ಹಾಗೂ ಸೇವಾ ಕಂಪೆನಿಗಳ ಸಾಮರ್ಥ್ಯ ಕುಗ್ಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ತಾಕತ್ತು ಕಡಿಮೆಯಾಗಿತ್ತು. ಅಗತ್ಯ ಪ್ರಮಾಣದ ವಿದೇಶಿ ವಿನಿಮಯ ಗಳಿಸುವ ಶಕ್ತಿ ರಫ್ತಿಗೆ ಇರಲಿಲ್ಲ. ಇದೇ ವೇಳೆ, ಹಲವಾರು ಮೂಲಗಳಿಂದ ಆಮದು ಹೆಚ್ಚಿಸಬೇಕಾದ ಒತ್ತಡ ಇತ್ತು. ಅಲ್ಪ ಪ್ರಮಾಣದ ಬೆಳವಣಿಗೆ ಕೂಡ ಅತ್ಯಧಿಕ ಪ್ರಮಾಣದ ತೈಲೋತ್ಪನ್ನಗಳನ್ನು ಬೇಡುತ್ತಿತ್ತು. ಇದರಿಂದಾಗಿ ತೈಲ ಆಮದು ಹೆಚ್ಚುತ್ತಿತ್ತು. ಅಲ್ಲಿ, ಇಲ್ಲಿ ಹೊಸ ರೀತಿಯ ಬೆಳವಣಿಗೆ ಕಂಡುಬಂದಿದ್ದೂ ಇತ್ತು. ಈ ಕ್ಷೇತ್ರಗಳಿಗೆ ಆಮದು ಹೆಚ್ಚಿಸಬೇಕಿತ್ತು. ಸಾಫ್ಟ್‌ವೇರ್‌ನ ಪ್ರಮುಖ ರಫ್ತುದಾರ ಆಗಲು ಭಾರತ ಹಾರ್ಡ್‌ವೇರ್‌ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಬೇಕಿತ್ತು. ಆಮದು ಹೆಚ್ಚಿ, ರಫ್ತು ಕುಗ್ಗುತ್ತ ಬಂದಾಗ ಭಾರತ ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿತು.

ಈ ಪರಿಸ್ಥಿತಿಗೆ ಡಾ. ಮನಮೋಹನ್ ಸಿಂಗ್ ಅವರು ಆರಂಭದಲ್ಲಿ ನೀಡಿದ ಪ್ರತಿಕ್ರಿಯೆ ಸರಳವಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳು ಸ್ಪರ್ಧಾತ್ಮಕ ಆಗಬೇಕು ಎಂದಾದರೆ, ಅವು ದೇಶಿ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದನ್ನು ಕಲಿಯಬೇಕು. ಆಂತರಿಕ ಮಾರುಕಟ್ಟೆಯಲ್ಲಿ ಸ್ಪರ್ಧಾ ಮನೋಭಾವ ಹೆಚ್ಚಿಸುವ ಉದ್ದೇಶದಿಂದ ಕಾರಿನಂತಹ ನಿರ್ದಿಷ್ಟ ಉತ್ಪನ್ನಗಳ ಆಮದಿನ ಮೇಲಿದ್ದ ನಿಯಂತ್ರಣಗಳನ್ನು ಸಡಿಲಗೊಳಿಸಲಾಯಿತು. ಜಗತ್ತಿನ ಅತ್ಯುತ್ತಮ ಉತ್ಪನ್ನಗಳ ಜೊತೆ ಸ್ಪರ್ಧಿಸುವಾಗ, ಭಾರತದ ಉತ್ಪನ್ನಗಳು ತಾವಾಗಿಯೇ ಹೆಚ್ಚು ಸ್ಪರ್ಧಾತ್ಮಕ ಆಗುತ್ತವೆ ಎಂಬುದು ಡಾ. ಸಿಂಗ್ ಅವರಿಗೆ ಮನವರಿಕೆ ಆಗಿತ್ತು. ಅದು ಸಾಧ್ಯವಾದಾಗ ನಮ್ಮ ರಫ್ತು ಹೆಚ್ಚಾಗಿ, ದುರ್ಬಲ ರೂಪಾಯಿ ಮೌಲ್ಯಕ್ಕೆ ದೀರ್ಘಾವಧಿಯ ಪರಿಹಾರವೊಂದು ಸಿಗುತ್ತಿತ್ತು.

ಆದರೆ, ದುರದೃಷ್ಟವಶಾತ್ ಎಲ್ಲವೂ ಅಂದುಕೊಂಡಂತೆ ಆಗಲಿಲ್ಲ. ಕೆಲವು ಸಂದರ್ಭಗಳಲ್ಲಿ ವಿದೇಶಿ ಕಂಪೆನಿಗಳಿಗೆ ತನ್ನನ್ನು ಮಾರಿಕೊಳ್ಳುವುದೇ ಸರಳ ಮಾರ್ಗ ಎಂದು ಭಾರತೀಯ ಉದ್ದಿಮೆ ಆಲೋಚಿಸಿತು. ಥಮ್ಸ್‌ ಅಪ್‌ ಕಂಪೆನಿ ಕೋಕಾ–ಕೋಲಾ ಕಂಪೆನಿಗೆ ಮಾರಾಟವಾಯಿತು. ಮಾರುತಿ ಕಂಪೆನಿಯಲ್ಲಿ ನಿರ್ಣಾಯಕ ಪ್ರಮಾಣದ ಷೇರುಗಳು ಸುಜುಕಿ ಪಾಲಾದವು. ಅಲ್ಲದೆ, ವಿದೇಶಿ ಉತ್ಪನ್ನಗಳು ನಮ್ಮ ಮಾರುಕಟ್ಟೆಯಲ್ಲಿ ದೊರೆಯಲು ಆರಂಭಿಸಿದ ನಂತರ, ಉತ್ಪನ್ನಗಳ ಬೆಲೆ ಎಲ್ಲ ಸಂದರ್ಭಗಳಲ್ಲೂ ಕಡಿಮೆ ಆಗಲಿಲ್ಲ. ವಿದೇಶಿ ಕಂಪೆನಿಗಳು ಹೆಚ್ಚಿನ ಉತ್ಪನ್ನಗಳನ್ನು ಡಾಲರ್‌ ಲೆಕ್ಕದಲ್ಲಿ ಆಮದು ಮಾಡಿಕೊಂಡು, ಭಾರತೀಯ ಮಾರುಕಟ್ಟೆಯಲ್ಲಿ ರೂಪಾಯಿ ಲೆಕ್ಕದಲ್ಲಿ ಮಾರಿ ಹಣ ಸಂಪಾದಿಸಬೇಕಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಂತೆಲ್ಲಾ, ವಿದೇಶಿ ಕಂಪೆನಿಗಳು ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸಬೇಕಿತ್ತು.

ಇದರ  ಪರಿಣಾಮ ತಯಾರಿಕಾ ಕ್ಷೇತ್ರದ ಮೇಲೆ ಆಯಿತು. ತಯಾರಿಕಾ ಕ್ಷೇತ್ರದಲ್ಲಿ ಹೊಸ ಅವಕಾಶಗಳಿಗೆ ಸಂಬಂಧಿಸಿದಂತೆ ಕೆಲವು ಅಪವಾದಗಳು ಇದ್ದಿರಬಹುದು. ಆದರೆ ಉತ್ಪನ್ನಗಳ ಬೆಲೆ ಎಷ್ಟು ಹೆಚ್ಚಾಯಿತೆಂದರೆ, ಅದೇ ಮಾದರಿಯ ಕಡಿಮೆ ಬೆಲೆಯ ಇನ್ನೊಂದು ಉತ್ಪನ್ನಕ್ಕೆ ಹೊಸದೊಂದು ಮಾರುಕಟ್ಟೆ ಸೃಷ್ಟಿಯಾಯಿತು. ಪೆಪ್ಸಿ ಕಂಪೆನಿ ಬಿಡುಗಡೆ ಮಾಡಿದ ಆಲೂಗಡ್ಡೆ ಚಿಪ್ಸ್‌ಗಳ ಬೆಲೆ ಅದೆಷ್ಟು ದುಬಾರಿಯಾಗಿತ್ತೆಂದರೆ, ‘ಹಾಟ್ ಚಿಪ್ಸ್’ ಹೆಸರಿನ ಅಂಗಡಿಗಳು ದೊಡ್ಡ ಸಂಖ್ಯೆಯಲ್ಲಿ ಆರಂಭಗೊಳ್ಳಲು ಅವಕಾಶ ಸೃಷ್ಟಿಯಾಯಿತು. ಆದರೆ ಇಂಥ ಅವಕಾಶಗಳ ಸಂಖ್ಯೆ ತೀರಾ ಕಡಿಮೆಯಾಗಿತ್ತು. ದೇಶದ ಜಿಡಿಪಿಯಲ್ಲಿ ತಯಾರಿಕಾ ವಲಯದ ಪಾಲು ನಿಂತ ನೀರಿನಂತೆ ಆಗಲು ಶುರುವಾಯಿತು.

ಜಿಡಿಪಿಯಲ್ಲಿ ಕೃಷಿ ವಲಯದ ಪಾಲು ತೀವ್ರವಾಗಿ ಇಳಿಯುತ್ತಿದ್ದರೂ, ತಯಾರಿಕಾ ವಲಯದ ಪಾಲು ಹೆಚ್ಚಲಿಲ್ಲ. ಭಾರತದಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ನಿಂತಿದ್ದು ನೀರಾವರಿಯ ಮೇಲೆ. ನೀರಿನ ಲಭ್ಯತೆ ಕಡಿಮೆಯಾದಂತೆ, ಕೃಷಿ ವಲಯದಲ್ಲಿ ದೊಡ್ಡ ಪ್ರಮಾಣದ ಬೆಳವಣಿಗೆ ಸಾಧ್ಯವಾಗಲಿಲ್ಲ. ಹಸಿರು ಕ್ರಾಂತಿ ತಂತ್ರಜ್ಞಾನವನ್ನು ಅತಿಯಾಗಿ ಬಳಸಿಕೊಂಡ ಪರಿಣಾಮವಾಗಿ, ಮಣ್ಣಿನ ಆರೋಗ್ಯಕ್ಕೆ ಧಕ್ಕೆಯಾಯಿತು. ಬೇರೆಡೆಗಳಲ್ಲಿ ಸಾಧ್ಯವಾದ ಉತ್ಪಾದನಾ ಪ್ರಮಾಣಕ್ಕಿಂತಲೂ ಭಾರತದ ಕೃಷಿ ಕ್ಷೇತ್ರದ ಉತ್ಪಾದನೆಯಲ್ಲಿ ಕುಸಿತ ಆದಾಗ, ಜಿಡಿಪಿಯಲ್ಲೂ ಕೃಷಿಯ ಪಾಲು ಕುಸಿಯುವುದು ಸಹಜವಾಗಿತ್ತು.

ತಯಾರಿಕಾ ವಲಯವು ಚೀನಾಕ್ಕಿಂತ ಕಡಿಮೆ ವೇಗದಲ್ಲಿ ಬೆಳೆಯುತ್ತಿದ್ದರೂ, ಕೃಷಿ ಕ್ಷೇತ್ರ ಒತ್ತಡದಲ್ಲಿದ್ದರೂ, ಬೆಳವಣಿಗೆ ಸಾಧಿಸಲು ಗಣನೀಯ ಅವಕಾಶಗಳಿದ್ದವು. ವೆಚ್ಚಗಳನ್ನು ಡಾಲರ್‌ ಲೆಕ್ಕದಲ್ಲಿ ಮಾಡಿ, ಆದಾಯವನ್ನು ರೂಪಾಯಿ ಲೆಕ್ಕದಲ್ಲಿ ಪಡೆದವರು ದುರ್ಬಲ ರೂಪಾಯಿ ಮೌಲ್ಯದಿಂದ ತೊಂದರೆಗೆ ಒಳಗಾದ ವಿದ್ಯಮಾನಕ್ಕೆ ಇನ್ನೊಂದು ಮುಖವೂ ಇತ್ತು. ಖರ್ಚುಗಳನ್ನು ರೂಪಾಯಿಗಳಲ್ಲಿ ಮಾಡಿ, ಆದಾಯವನ್ನು ಡಾಲರ್‌ಗಳಲ್ಲಿ ಪಡೆಯುವ ಅವಕಾಶ ಇದ್ದವರು, ರೂಪಾಯಿ ಅಪಮೌಲ್ಯದಿಂದ ಲಾಭ ಮಾಡಿಕೊಂಡರು. ಆರಂಭಿಕ ಹಂತದಲ್ಲಿ ಇಂಥ ಲಾಭ ಪಡೆದಿದ್ದು ಬೆಂಗಳೂರಿನಂಥ ನಗರಗಳಲ್ಲಿದ್ದ ಗಾರ್ಮೆಂಟ್‌ ಉದ್ದಿಮೆ. ತೀರಾ ಈಚೆಗೆ ಬಾಂಗ್ಲಾದೇಶ ಮತ್ತಿತರ ದೇಶಗಳಿಂದ ಎದುರಾದ ಸ್ಪರ್ಧೆಯು ಗಾರ್ಮೆಂಟ್ ಉದ್ದಿಮೆಯ ಬೆಳವಣಿಗೆ ಮೇಲೆ ಮಿತಿ ಹೇರಿತು.

ಅದೃಷ್ಟವಶಾತ್‌, ಈ ವಿದ್ಯಮಾನದ ಲಾಭವು ಗಾರ್ಮೆಂಟ್‌ ಉದ್ದಿಮೆಯನ್ನೂ ಮೀರಿ ಮುಂದಕ್ಕೆ ಹೋಯಿತು. ಡಾಲರ್‌ನಲ್ಲಿ ಸಂಪಾದಿಸಿ, ರೂಪಾಯಿಗಳಲ್ಲಿ ಖರ್ಚು ಮಾಡುವ ಅವಕಾಶದ ಅತಿದೊಡ್ಡ ಲಾಭ ಬಹುಶಃ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಿಕ್ಕಿತು. ಈ ಪರಿಸ್ಥಿತಿಯ ದೊಡ್ಡ ಪ್ರಯೋಜನ ಬೆಂಗಳೂರಿಗೆ ದಕ್ಕಿತು.

ಮೈಸೂರಿನ ಮಹಾರಾಜರ ಕಾಲದಿಂದ ಇಲ್ಲಿ ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಬಂಡವಾಳ ಹೂಡಿಕೆ ಆಗಿದ್ದ ಕಾರಣ, ತಾಂತ್ರಿಕವಾಗಿ ಪರಿಣತರಾದ ಎಂಜಿನಿಯರ್‌ಗಳು ಸಿಕ್ಕರು. ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ ಕಂಪೆನಿಯು ಎಂಬತ್ತರ ದಶಕದ ಮಧ್ಯ ಭಾಗದಲ್ಲಿ ಬೆಂಗಳೂರಿನಲ್ಲಿ ಸಂವಹನ ಘಟಕ ಆರಂಭಿಸಿದಾಗ, ಎಂಜಿನಿಯರಿಂಗ್‌ ಮಾನವ ಸಂಪನ್ಮೂಲ ಅದಕ್ಕೆ ದಕ್ಕಿತು. ಇದಾದ ನಂತರದ ದಿನಗಳಲ್ಲಿ ಇತರ ಜಾಗತಿಕ ಕಂಪೆನಿಗಳು ಇಲ್ಲಿ ಕಾರ್ಯ ಆರಂಭಿಸಿದವು. ಬೆಂಗಳೂರಿನ ಐ.ಟಿ. ಉದ್ಯಮದ ಬೆಳವಣಿಗೆ ಚೆನ್ನಾಗಿಯೇ ಆಯಿತು.

ಇಲ್ಲಿನ ಸಂಪನ್ಮೂಲವನ್ನು ವಿಶ್ವದ ಪ್ರಮುಖ ಐ.ಟಿ. ಕಂಪೆನಿಗಳು ಬಳಸಿಕೊಳ್ಳಲು ಆರಂಭಿಸಿದವು. 1990ರ ದಶಕದ ಉದಾರೀಕರಣವು ಅವುಗಳಿಗೆ ಈ ಕೆಲಸವನ್ನು ಸುಲಭವಾಗಿಸಿತು. ಕೆಲಸವನ್ನು ಬೆಂಗಳೂರಿಗೆ ಹೊರಗುತ್ತಿಗೆ ನೀಡುವುದು ಜಗತ್ತಿನ ಗಮನ ಸೆಳೆಯಿತು. ಕೆಲವೇ ಅವಧಿಯಲ್ಲಿ, ಹೊರಗುತ್ತಿಗೆ ಕಾರಣಕ್ಕೆ ಅಮೆರಿಕದ ಐ.ಟಿ. ಉದ್ಯೋಗಿ ಕೆಲಸ ಕಳೆದುಕೊಳ್ಳುವ ಪ್ರಕ್ರಿಯೆಗೆ ‘ಬ್ಯಾಂಗಲೋರ್ಡ್‌’ ಎಂಬ ಹೆಸರು ಪ್ರಾಪ್ತಿಯಾಯಿತು.

ಸ್ಥಳೀಯ ಮಾನವ ಸಂಪನ್ಮೂಲ ಬಳಸಿಕೊಳ್ಳುವುದು ಸಾಧ್ಯವಾದ ನಂತರ, ಭಾರತೀಯ ಕಂಪೆನಿಗಳು ರೂಪಾಯಿ ಲೆಕ್ಕದಲ್ಲಿ ಖರ್ಚು ಮಾಡಿ, ಡಾಲರ್‌ ಲೆಕ್ಕದಲ್ಲಿ ಆದಾಯ ಗಳಿಸುವುದು ಆರಂಭವಾಯಿತು. ಬೆಂಗಳೂರಿನಲ್ಲಿ ಖಾದ್ಯ ತೈಲ ತಯಾರಿಕೆಯಲ್ಲಿದ್ದ, ನಂತರ ಹಾರ್ಡ್‌ವೇರ್‌ ಬಿಡಿಭಾಗ ತಯಾರಿಕೆಗೆ ಮುಂದಾಗಿದ್ದ ವಿಪ್ರೊ ಕಂಪೆನಿಯು ಈ ಮಾನವ ಸಂಪನ್ಮೂಲ ಬಳಸಿಕೊಳ್ಳಲು ಸಾಫ್ಟ್‌ವೇರ್‌ ಕ್ಷೇತ್ರಕ್ಕೆ ಜಿಗಿಯಿತು. ಹೊಸ ಹೊಸ ಕಂಪೆನಿಗಳು ಇಲ್ಲಿ ಬಂದವು, ಇನ್ಫೊಸಿಸ್‌ನಂತಹ ಕಂಪೆನಿಗಳು ಜಾಗತಿಕ ಮಟ್ಟಕ್ಕೆ ಬೆಳೆದವು. ಸುಧಾರಣೆಗಳಿಂದಾಗಿ ದೊರಕಿದ ಇನ್ನೊಂದು ಸಂಪನ್ಮೂಲವನ್ನು – ಅಂದರೆ, ಷೇರು ಪೇಟೆಯನ್ನು – ಈ ಕಂಪೆನಿಗಳು ಬಳಸಿಕೊಂಡವು.

1980ರಲ್ಲಿ ಭಾರತದಲ್ಲಿ ಷೇರು ಪೇಟೆ ಬೆಳೆಯಲು ಆರಂಭವಾಗಿತ್ತು. ಬ್ಯಾಂಕ್‌ಗಳ ರಾಷ್ಟ್ರೀಕರಣದ ನಂತರ ದೇಶದಲ್ಲಿ ಉಳಿತಾಯ ವಿಧಾನದಲ್ಲಿ ಬದಲಾವಣೆ ಕಂಡುಬಂದಿತ್ತು. ಅಂಚೆ ಕಚೇರಿ ಖಾತೆಗಳಲ್ಲಿ ಉಳಿತಾಯ ಮಾಡುತ್ತಿದ್ದ ಭಾರತೀಯ ಮಧ್ಯಮ ವರ್ಗ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು, ಉಳಿತಾಯ ಆರಂಭಿಸಿತ್ತು. ಬ್ಯಾಂಕ್‌ಗಳಲ್ಲಿನ ನಿಶ್ಚಿತ ಠೇವಣಿ ಮತ್ತು ಖಾಸಗಿ ಕೈಗಾರಿಕೆಗಳಲ್ಲಿನ ಹೂಡಿಕೆ ನಡುವಣ ವ್ಯತ್ಯಾಸ ತಿಳಿಯಾಗಲು ಆರಂಭವಾಯಿತು. ಠೇವಣಿ ಇಡುವ ಬದಲು ಷೇರು ಖರೀದಿ ಮೂಲಕ ಖಾಸಗಿ ವಲಯದಲ್ಲಿ ಮಧ್ಯಮ ವರ್ಗಕ್ಕೆ ಹೂಡಿಕೆಗೆ ಅವಕಾಶ ನೀಡಿದ ಕೈಗಾರಿಕೆಗಳನ್ನು ಧಿರೂಭಾಯ್ ಅಂಬಾನಿ ಮುನ್ನಡೆಸಿದರು. ಈ ಪ್ರವೃತ್ತಿ ಬೆಳೆಯುತ್ತಿದ್ದಂತೆ, ಪ್ರಾದೇಶಿಕ ಷೇರು ಪೇಟೆಗಳು ಚುರುಕಿನ ಬೆಳವಣಿಗೆ ಕಂಡವು.

ಹೊಸ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಷೇರು ಮಾರುಕಟ್ಟೆ ಮೂಲಕ ಬಂಡವಾಳ ಸಂಗ್ರಹಿಸಲು ಮುಂದಾದವು. ನಂತರ ಅವು ತಮ್ಮ ದೃಷ್ಟಿಯನ್ನು ಇನ್ನೂ ಮೇಲಕ್ಕೆ ನೆಟ್ಟವು. ಕೆಲವು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಕಂಪೆನಿಗಳನ್ನು ಖರೀದಿಸುವುದಕ್ಕಿಂತ ಅಲ್ಪಾವಧಿ ಲಾಭ ಗಳಿಕೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ನಮ್ಮ ಕಂಪೆನಿಗಳು ಇಂಥ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಹೊಸ ಮಾರ್ಗ ಕಂಡುಕೊಂಡವು. ಇಂಥ ಬಂಡವಾಳ ಆಕರ್ಷಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರವು ಷೇರು ಮಾರುಕಟ್ಟೆ ಸುಧಾರಣೆಗೆ ಮುಂದಾಯಿತು. ಇದರಿಂದಾಗಿ ಕಂಪೆನಿಗಳಿಗೆ ವಿದೇಶಿ ಸಾಂಸ್ಥಿಕ ಬಂಡವಾಳ ಆಕರ್ಷಿಸಲು ಸಾಧ್ಯವಾಗುತ್ತಿತ್ತು.

ಪ್ರಾದೇಶಿಕ ಷೇರು ಮಾರುಕಟ್ಟೆ ವ್ಯವಸ್ಥೆಯನ್ನು ಕೈಬಿಡಲಾಯಿತು. ಮುಂಬೈಯಲ್ಲಿರುವ ‘ಮುಂಬೈ ಷೇರು ಪೇಟೆ’ ಮತ್ತು ‘ರಾಷ್ಟ್ರೀಯ ಷೇರು ಪೇಟೆ’ ಮೇಲೆ ಗಮನ ಕೇಂದ್ರಿತವಾಯಿತು.

ಈ ಎರಡು ಷೇರು ಮಾರುಕಟ್ಟೆಗಳ ಕಾರ್ಯವನ್ನು ಸರಳಗೊಳಿಸುವ ಉದ್ದೇಶದಿಂದ, ಜಾಗತಿಕ ಹಣಕಾಸು ಸಂಸ್ಥೆಗಳ ಅಗತ್ಯಕ್ಕೆ ಅನುಗುಣವಾದ ಕಾರ್ಯವಿಧಾನ ಜಾರಿಗೊಳಿಸಲಾಯಿತು. ಆದರೆ ಈ ಕಾರ್ಯವಿಧಾನದಲ್ಲಿದ್ದ ಕೆಲವು ಅಂಶಗಳು, ಹಳೆಯ ಸಣ್ಣ ಹೂಡಿಕೆದಾರರಿಗೆ ಷೇರು ಪೇಟೆಯಲ್ಲಿ ಚಟುವಟಿಕೆ ನಡೆಸುವುದನ್ನು ಕಷ್ಟವಾಗಿಸುತ್ತದೆ ಎಂಬುದನ್ನು ಕಡೆಗಣಿಸಲಾಯಿತು.

(ಮುಂದುವರಿಯುವುದು)
(ಲೇಖಕರು ಬೆಂಗಳೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿ ಪ್ರೊಫೆಸರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT