ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗರಿ ಪಾರ್ಕ್: ಅಭಿವೃದ್ಧಿ ಆರಂಭದಲ್ಲೇ ಪಾರ್ಶ್ವವಾಯು

Last Updated 10 ಜೂನ್ 2011, 10:00 IST
ಅಕ್ಷರ ಗಾತ್ರ

ಮಂಡ್ಯ: ಗುಣಮಟ್ವದ ಬೆಲ್ಲ ತಯಾರಿಕೆ ಮತ್ತು ಬೆಲ್ಲ ಉದ್ದಿಮೆಗೆ ಚೇತರಿಕೆ ನೀಡುವ ಸದುದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ವಿ.ಸಿ.ಫಾರಂನಲ್ಲಿರುವ ಬೆಲ್ಲದ ಪಾರ್ಕ್‌ನಲ್ಲಿ ಆಭಿವೃದ್ಧಿಗೆ ಆರಂಭದಲ್ಲಿಯೇ `ಪಾರ್ಶ್ವವಾಯು~ ಬಡಿದಿದೆ.

ಪಾರ್ಕ್‌ನಲ್ಲಿ ತಯಾರಾದ ಬೆಲ್ಲವು ಕರಗಿ ಹರಿದಿರುವ ಗುಣಮಟ್ಟ ಹೊಂದಿದ್ದರೆ, ಕಬ್ಬಿನ ರಸದ ಕೊಪ್ಪರಿಕೆಯಲ್ಲಿ ಕಪ್ಪೆ ಕಂಡುಬಂದಿದೆ. ಇದು, ರೂ. 8 ಕೋಟಿ ವೆಚ್ಚದಲ್ಲಿ ಅಸ್ತಿತ್ವಕ್ಕೆ ತಂದಿರುವ ಜಾಗರಿ ಪಾರ್ಕ್‌ನ ಮೂಲ ಉದ್ದೇಶಕ್ಕೆ ಪೆಟ್ಟು ನೀಡಿದ್ದರೆ, ಪಾರ್ಕ್‌ನ ಮೇಲ್ವಿಚಾರಣೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಕನ್ನಡಿ ಹಿಡಿದಿದೆ.

ಅಲ್ಲದೆ, ಪಾರ್ಕ್‌ನಲ್ಲಿ ಇರಿಸಲಾಗಿದ್ದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ನಾಪತ್ತೆಯಾಗಿವೆ. `ಈ ವಸ್ತುಗಳು ಕಾಣೆಯಾಗಿವೆ ಎಂಬುದನ್ನು ಖಚಿತ ಪಡಿಸಿರುವ ಪಾರ್ಕ್‌ನ ಮೇಲ್ವಿಚಾರಕ ಡಾ. ರಾಜಣ್ಣ, `ಇದೇ ಕಾರಣದಿಂದ ನೌಕರರ ಮಾರ್ಚ್ ತಿಂಗಳ ಸಂಬಳ ತಡೆಹಿಡಿಯಲಾಗಿದೆ~ ಎಂದು ಹೇಳಿದರು.

ತಮ್ಮನ್ನು ಸಂಪರ್ಕಿಸಿದ ಪ್ರಜಾವಾಣಿ ಜೊತೆಗೆ ಮಾತನಾಡಿದ ರಾಜಣ್ಣ, ಒಮ್ಮೆ ಈ ವಸ್ತುಗಳು ಕಳ್ಳತನ ಆಗಿವೆ ಎಂದು ಹೇಳಿದರು. ಇನ್ನೊಮ್ಮೆ, ಅವುಗಳನ್ನು ನೌಕರರೇ ಬೇರೆ ಕಡೆ ಇಟ್ಟಿರಬಹುದು. ಕಾಣಲಿಲ್ಲ ಎಂದರೆ ಕಳ್ಳತನ ಆಗಿದೆ ಎಂದು ಭಾವಿಸಬಹುದು ಎಂದು ಹೇಳಿದರು.

ಮಾಧ್ಯಮ ಪ್ರತಿನಿಧಿಗಳು ವೈಜ್ಞಾನಿಕ ತಂತ್ರಜ್ಞಾನದ ಜಾಗರಿ ಪಾರ್ಕ್‌ಗೆ ಭೇಟಿ ನೀಡಿದಾಗ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಪಾವತಿಯಾಗದ ವೇತನ, ಕಪ್ಪೆಗೆ `ಈಜುಕೊಳ~ವಾದ ಕೊಪ್ಪರಿಕೆ, ತಯಾರಾದ ಬೆಲ್ಲ ಗುಣಮಟ್ಟದ ಕೊರತೆಯಿಂದಾಗಿ ಕರಗಿ ಹರಿದಿರುವ ಲೋಪಗಳು ಬೆಳಕಿಗೆ ಬಂದವು.

ಈ ಲೋಪಗಳು ರಾಜ್ಯದಲ್ಲಿಯೇ ಪ್ರಥಮ ಎನ್ನಲಾದ ರಾಸಾಯನಿಕ ಮುಕ್ತವಾದ ಬೆಲ್ಲ ತಯಾರಿಕೆ ಉದ್ದೇಶದ ಜಾಗರಿ ಪಾರ್ಕ್‌ನ ಉದ್ದೇಶವನ್ನೇ ಹಾಳು ಮಾಡಿದ್ದರೆ, ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ಬೆಳಕಿಗೆ ತಂದಿದೆ.

ಡಾ. ರಾಜಣ್ಣ ಅವರು, `ಇದು ಪಾರ್ಕ್‌ನ ಏಳಿಗೆಯನ್ನು ಸಹಿಸದ, ಇಲ್ಲಿಂದ ಉತ್ತಮ ಬೆಲ್ಲ ಹೊರಬಂದರೆ ವಹಿವಾಟಿಗೆ ಧಕ್ಕೆ ಆಗಬಹುದು ಎಂಬ ಖಾಸಗಿ ವಲಯದ ಆತಂಕವು ಈ ಲೋಪಗಳ ಹಿಂದೆ ಕೆಲಸ ಮಾಡಿದೆ ಎಂದು ಆರೋಪಿಸುತ್ತಾರೆ.

ನೌಕರರಿಗೆ ವೇತನ ಪಾವತಿಯಾಗದ ಅಂಶದತ್ತ ಗಮನಸೆಳೆದಾಗ, ಅವರೆಲ್ಲಾ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು. ಮಾರ್ಚ್ ತಿಂಗಳ ವೇತನ ಪಾವತಿ ಮಾಡಿಲ್ಲ. ಇದಕ್ಕೆ ಪಾರ್ಕ್‌ನ ಕೆಲ ವಸ್ತುಗಳು ನಾಪತ್ತೆಯಾಗಿರುವುದು ಕಾರಣ. ಇದರ ಮೌಲ್ಯವೇ ಹತ್ತಿರ ಒಂದು ಲಕ್ಷ ರೂಪಾಯಿ ಎಂದರು.

`ನೌಕರರಿಗೆ ಅವುಗಳ ವಿವರ ನೀಡಲು ಕೇಳಲಾಗಿದೆ. ಒಂದು ಹಂತದಲ್ಲಿ ಅವು ಕಳ್ಳತನವಾಗಿವೆ ಎಂದು ಹೇಳಿದರಾದರೂ, ಅವು ಸ್ಥಳಾಂತರವಾಗಿವೆ. ನೌಕರರೇ ಅದನ್ನು ಬೇರೆ ಕೊಠಡಿಯಲ್ಲಿ ಇಟ್ಟಿರಬಹುದು. ಕಚೇರಿ ಒಳಗಿನ ವಿಷಯವಾದ್ದರಿಂದ ವಸ್ತುಗಳು ಕಾಣೆಯಾಗಿರುವ ಬಗೆಗೆ ಪೊಲೀಸ್ ದೂರು ದಾಖಲಿಸಿಲ್ಲ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ವಲಯ ಸಂಶೋಧನಾ ಕೇಂದ್ರದ ನಿರ್ದೇಶಕರು, ಆಡಳಿತ ವರ್ಗ ಇನ್ನಾದರೂ ಈ ಲೋಪಗಳತ್ತ ಪರಿಶೀಲಿಸಿ  ವಿಚಾರಣೆ ನಡೆಸಿದರೆ ಸತ್ಯಾಂಶ ಹೊರಬರುತ್ತದೆ. ಜೊತೆಗೆ, ಬೆಲ್ಲ ಉದ್ಯಮದ ಚೇತರಿಕೆಯ ಉದ್ದೇಶ ಹೊಂದಿದ ಪಾರ್ಕ್‌ನ ಗುರಿಯೂ ಬಹುಶಃ ಈಡೇರಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT