ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತಿ ಯಾತ್ರೆ: ವಿವೇಕ ಮಂತ್ರ ಪಠಣ

Last Updated 12 ಸೆಪ್ಟೆಂಬರ್ 2013, 5:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಬುಧವಾರ ಎಲ್ಲೆಲ್ಲೂ ’ವಂದೇ ಮಾತರಂ’ ’ಭಾರತ್‌ ಮಾತಾ ಕೀ ಜೈ’ ಜಯಘೋಷ, ಸ್ವಾಮಿ ವಿವೇಕಾನಂದರ ಭಾವಚಿತ್ರವುಳ್ಳ ಟೀ ಶರ್ಟ್, ಅವರ ’ಯುವಕರೇ, ಏಳಿ  ಎದ್ದೇಳಿ, ಗುರಿ ಮುಟ್ಟು­-ವವರೆಗೂ ನಿಲ್ಲದಿರಿ’ ಎಂಬ ಘೋಷವಾಕ್ಯ ಹೊಂದಿದ್ದ ಟೋಪಿಯನ್ನು ಧರಿಸಿದ್ದವರು ಕಂಡು ಬರುತ್ತಿದ್ದರು. ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ವಿವೇಕ ಮ್ಯಾರಥಾನ್ ಹೆಸರಲ್ಲಿ ನಡೆದ ’ಭಾರತ ಜಾಗೃತಿ ಯಾತ್ರೆ’ಯಲ್ಲಿ ಕಂಡು ಬಂದ ದೃಶ್ಯಗಳಿವು.

ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ನಿಮಿತ್ತವಾಗಿ ಹಾಗೂ ವಿವೇಕಾನಂದರು ಮಾಡಿದ ಪ್ರಸಿದ್ಧ ಚಿಕಾಗೋ ಭಾಷಣಕ್ಕೆ ಸೆಪ್ಟೆಂಬರ್‌11ಕ್ಕೆ 120 ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ’ವಿವೇಕ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಬುಧ­ವಾರ ಬೆಳಿಗ್ಗೆ  ನಗರದ 6 ಕಡೆಯಿಂದ ವಿವೇಕ ಮ್ಯಾರಥಾನ್ ಗೆ ಚಾಲನೆ ನೀಡಲಾಯಿತು. ಪಿ.ಸಿ. ಜಾಬಿನ್‌ ಕಾಲೇಜು ಮುಂಭಾಗದಿಂದ ಬೆಳಿಗ್ಗೆ 10.30ಕ್ಕೆ ಸಂಸದ ಪ್ರಹ್ಲಾದ ಜೋಶಿ, ಐಎಂಎಸ್ಆರ್ ಕಾಲೇಜಿನ ಪ್ರಾಚಾರ್ಯ ಪ್ರಸಾದ ರೂಡಗಿ ಮತ್ತಿತರರು ಭಾರತ ಜಾಗೃತಿ ಓಟಕ್ಕೆ ಚಾಲನೆ ನೀಡಿದರು. ಮಾಜಿ ಮುಖ್­ಯಮಂತ್ರಿ ಜಗದೀಶ ಶೆಟ್ಟರ್ ಕೇಶ್ವಾಪುರದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಡಾ. ಎನ್.ಎಸ್. ಹಿರೇಮಠ, ಮಹದೇವ ಕರಮರಿ, ನಂದಕುಮಾರ ಅಚ್ಯುತ್ ಲಿಮೆಯೆ, ನಾರಾಯಣದಾಸ ಪಾಠಕ್, ಅರವಿಂದ ಕುಬಸದ, ರಮೇಶ ಭಾಫಣಾ ಆಯಾ ಭಾಗದ ಜಾಥಾಗಳನ್ನು ಉದ್ಘಾಟಿಸಿದರು.

4500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಗಣ್ಯರು ಈ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನದ ವೇಳೆಗೆ ಎಲ್ಲರೂ ನೆಹರು ಮೈದಾನದಲ್ಲಿ ಸೇರಿದರು.  ಅಲ್ಲಿ ಜರುಗಿದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಮಧ್ಯಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಗೋಪಾಲ ಮಾತನಾಡಿ, ’ದೇಶದ ಉಜ್ವಲ ಭವಿಷ್ಯ ಯುವಕರ ಕೈಯಲ್ಲಿದೆ. ಯುವಕರು ಸತ್ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಉಗ್ರವಾದ, ಮತಾಂತರ, ಅಸ್ಪೃಶ್ಯತೆ, ಜಾತೀಯತೆ ಮತ್ತು ಆಕ್ರಮಣ ಎದುರಿಸುವ ಶಕ್ತಿ ನಮ್ಮ ಯುವಕರಲ್ಲಿದೆ. ಸ್ವಾರ್ಥ, ಕೀರ್ತಿ, ಪ್ರಸಿದ್ಧಿಗೆ ಬಲಿಯಾಗದೆ ಸಮಾಜ ಕೆಲಸಕ್ಕೆ, ತ್ಯಾಗಕ್ಕೆ ಯುವಕರು ಸಿದ್ಧರಾಗಬೇಕು’ ಎಂದು ಕರೆ ನೀಡಿದರು.

ಮೊದಲು ರಘುವೀರಾನಂದ ಸ್ವಾಮೀಜಿ ಸ್ವಾಮಿ ವಿವೇಕಾನಂದರ ಕುರಿತು ಗೀತೆ ಹಾಡಿದರು. ಡಾ. ಎನ್.ಎಸ್. ಹಿರೇಮಠ, ನಾರಾಯಣದಾಸ ಪಾಠಕ್, ಉದ್ಯಮಿ ಮಹದೇವ ಕರಮರಿ, ಅಚ್ಯುತ್ ಲಿಮೆಯೆ, ಡಾ. ರಘು ಅಕ್ಮಚಿ, ಕೆಪಿಎಸ್ ಸಿ ಮಾಜಿ ಸದಸ್ಯ ಮಾ. ನಾಗರಾಜ,  ವಿನಾಯಕ ತಲಗೇರಿ ಉಪಸ್ಥಿತರಿದ್ದರು. ಸಂದೀಪ ಬೂದಿಹಾಳ ಸ್ವಾಗತಿಸಿ ಪರಿಚಯಿಸಿದರು. ಜಯತೀರ್ಥ ಕಟ್ಟಿ ನಿರೂಪಿಸಿದರು. ವೆಂಕಟೇಶ ಪೂಜಾರ ವಂದಿಸಿದರು. ಕೊನೆಯಲ್ಲಿ ವಂದೇ ಮಾತರಂ ಗೀತೆ ಹಾಡಲಾಯಿತು.

ಧಾರವಾಡ ವರದಿ
’ನೂರಾರು ಹೃದಯಿ ಯುವಕ, ಯುವತಿಯರು ಭೋಗ ಮತ್ತು ಸುಖ ಸೌಕರ್ಯಗಳ ಲಾಲಸೆಯನ್ನು ತೊರೆದು, ದಾರಿದ್ರ್ಯ ಮತ್ತು ಅಜ್ಞಾನದಲ್ಲಿ ಮುಳುಗಿರುವ ಕೋಟಿಗಟ್ಟಲೇ ಭಾರತೀಯರ ಏಳ್ಗೆಗಾಗಿ ಶಕ್ತಿಮೀರಿ ದುಡಿಯಬೇಕಿದೆ' ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿಯ ಕಡಪಾ ಮೈದಾನದಲ್ಲಿ ವಿವೇಕಾ­ನಂದರ 150ನೇ ಜನ್ಮ ವರ್ಷದ ಸಾರ್ಧಶ್ಯತಿ ಸಮಿತಿಯು ಬುಧವಾರ ಆಯೋಜಿಸಿದ್ದ ಭಾರತದ ಯುವ ಜನತೆಯ ಜಾಗೃತಿಗಾಗಿ ವಿವೇಕ ಓಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ’ಕಾಷಾಯ ವಸ್ತ್ರ ಧರಿಸಿ, ಕಾವಿ ಪೇಟ ಸುತ್ತಿ, ತಮ್ಮ ಧೀರ, ಗಂಭೀರ ವಾಣಿಯಿಂದ ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ ನೆಲದ ಸಂತಾನ ನಾವು ಎನ್ನಲು ಹೆಮ್ಮೆ ಪಡಬೇಕು. ಜಗತ್ತಿಗೆ ಸಹಿಷ್ಣುತೆಯನ್ನು, ಸರ್ವ ಧರ್ಮ ಸಮ ಭಾವವನ್ನು, ಸಕಲ ಧರ್ಮಗಳೂ ಸತ್ಯ ಮತ್ತು ಶ್ರೇಷ್ಠ ಎಂದು ನಂಬಿದ, ವಿಶ್ವವೇ ಒಂದು ಗ್ರಾಮ ಎಂದು ಬೋಧಿಸಿದ ಸ್ವಾಮಿ ವಿವೇಕಾನಂದರು ನಮಗೆ ಆದರ್ಶವಾಗಿರಲಿ' ಎಂದರು.

ಸಮಿತಿ ಸಂಯೋಜಕ ಡಾ.ಜಗದೀಶ ಬಾರಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹರ್ಷವರ್ಧನ ಶೀಲವಂತ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣ ಓದಿದರು. ಶ್ರೀಧರ ನಾಡಿಗೇರ, ಶರಣು ಅಂಗಡಿ, ಕೆ.ಎಸ್.ಜಯಂತ, ಪ್ರವೀಣ ಪ್ಯಾಟಿ, ಪಾಲಿಕೆ ಸದಸ್ಯರಾದ ಸಂಜಯ ಕಪಟಕರ, ಶಿವು ಹಿರೇಮಠ, ರವಿ ಯಲಿಗಾರ, ಪ್ರಶಾಂತ ಕುಲಕರ್ಣಿ, ಅನೂಪ ದೇಶಪಾಂಡೆ, ಆರ್.ಕೆ.ಕುಲಕರ್ಣಿ, ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರಡ್ಡಿ, ಕ.ವಿ.ವಿ. ಮಾಜಿ ಕುಲಸಚಿವ ಡಾ.ಜಿ.ಬಿ.ನಂದನ ಮತ್ತಿತರರು ಇದ್ದರು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ: ವಿದ್ಯಾಕೇಂದ್ರದ ಸಹಯೋಗದಲ್ಲಿ ಬುಧವಾರ ಮುಮ್ಮಿಗಟ್ಟಿ ಗ್ರಾಮದಲ್ಲಿ ’ವಿವೇಕಾನಂದ ದೌಡ’ ಓಟದ ಸಮಾರೋಪ ನಡೆಯಿತು. ಸಂಸ್ಕೃತ ಅಧ್ಯಾಪಕ ವಿನಾಯಕ ಭಟ್ಟ ಮಾತನಾಡಿ, ’ವಿವೇಕಾನಂದ ಅತ್ಯಂತ ಕಿರಿಯ ಅಂದರೆ 38ನೇ ವಯಸ್ಸಿಗೆ ನಿಧನ ಹೊಂದಿದರು. ಆದರೆ ಅವರು ಬೋಧಿಸಿದ ಬೋಧನೆಗಳು ಎಂದಿಗೂ ಚಿರಸ್ಥಾಯಿ’ ಎಂದರು.

ಕಾರ್ಯಕ್ರಮದ ನಿಮಿತ್ಯ ವಿದ್ಯಾ ಕೇಂದ್ರದ ಮಕ್ಕಳು ಶಾಲೆಯಿಂದ ಮುಮ್ಮಿಗಟ್ಟಿ ಗ್ರಾಮದವರೆಗೆ ಓಟದಲ್ಲಿ ಭಾಗವಹಿಸಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಮಾವೇಶಗೊಡರು. ಓಟದುದ್ದಕ್ಕೂ ಮಕ್ಕಳು ವಿವಿಧ ಘೋಷಣೆ­ಗಳನ್ನು ಕೂಗಿದರು. ಓಟದಲ್ಲಿ ವಿದ್ಯಾಕೇಂದ್ರದ ಶಿಕ್ಷಕ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮುಮ್ಮಿಗಟ್ಟಿಯ ಸರ್ಕಾರಿ ಶಾಲೆಗಳ ಶಿಕ್ಷಕ ಸಿಬ್ಬಂದಿ, ವಿದ್ಯಾ ಕೇಂದ್ರದ ಪ್ರಾಚಾರ್ಯೆ ಅನೀತಾ ರೈ ಇದ್ದರು. ಎಂ.ಕುಮಾರ ಪ್ರಾರ್ಥಿಸಿದರು. ಅಧೀಕ್ಷಕ ಶ್ರೀಧರ ಜೋಶಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT