ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಆಧಾರಿತ ತಾರತಮ್ಯ ಸರಿಯಲ್ಲ

ರತನ್ ಟಾಟಾ ಅಭಿಮತ
Last Updated 30 ಜನವರಿ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಅರ್ಹತೆಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗುವ ನಿಟ್ಟಿನಲ್ಲಿ ಜಾತಿ, ಮತ, ಧರ್ಮ ಆಧಾರಿತ ತಾರತಮ್ಯ ಸರಿಯಲ್ಲ' ಎಂದು ಟಾಟಾ ಸಮೂಹ ಸಂಸ್ಥೆಗಳ ವಿಶ್ರಾಂತ ಅಧ್ಯಕ್ಷ ರತನ್ ಟಾಟಾ, ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.

ಯಶಸ್ವಿ ವಾಣಿಜ್ಯೋದ್ಯಮಿಗಳನ್ನು ಒಂದೇ ಸೂರಿನಡಿ ಸೇರಿಸಿ ಅವರ ಮೂಲಕ ಇತರರನ್ನು ಉತ್ತೇಜಿಸುವ ಉದ್ದೇಶದಿಂದ `ವರ್ಧನೆಗೆ ತಿರುವು' ಚರ್ಚಾ ವಿಷಯದ ಮೇಲೆ ನಗರದ ದೇಶಪಾಂಡೆ ಪ್ರತಿಷ್ಠಾನ ಹಮ್ಮಿಕೊಂಡಿರುವ ಮೂರು ದಿನಗಳ ಅಂತರರಾಷ್ಟ್ರೀಯ ಸಮಾವೇಶ `ಅಭಿವೃದ್ಧಿ ಸಂವಾದ-2013' ಉದ್ಘಾಟನಾ ಸಮಾರಂಭದಲ್ಲಿ  ಅವರು ಮಾತನಾಡಿದರು.

`ಭಾವನೆಗಳು, ಕನಸುಗಳು ಸಾಕಾರಗೊಳ್ಳಲು ಪೂರಕವಾದ ವಾತಾವರಣವನ್ನು ಯುವಸಮೂಹ ಸೃಷ್ಟಿಸಿಕೊಳ್ಳಬೇಕು. ಅಮೆರಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಅರ್ಹತೆಗೆ ಅನುಗುಣವಾದ ಸಮಾನ ಅವಕಾಶ ಮುಖ್ಯ ಕಾರಣ' ಎಂದರು.

`ಸಮುದಾಯ ಮತ್ತು ಪರಿಸರದ ನಡುವೆ ಇರುವ ಕಾರ್ಪೊರೇಟ್ ಕಂಪೆನಿಗಳು ಲಾಭಾಂಶದಲ್ಲಿ ಒಂದಷ್ಟನ್ನು ದೇಣಿಗೆಯಾಗಿ ನೀಡಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಭಾಯಿಸಿದ್ದೇವೆ ಎಂದು ಸಮಾಧಾನಪಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ಅಂತಹ ಕಂಪೆನಿಗಳು ಸಮುದಾಯ ಸೇವೆಯಲ್ಲಿ ನೇರವಾಗಿ ತೊಡಗಿಕೊಳ್ಳಬೇಕು.

`ಸಿಎಸ್‌ಆರ್' ಯೋಜನೆಗಾಗಿ ಕಾರ್ಪೊರೇಟ್ ಕಂಪೆನಿಗಳು ವೆಚ್ಚ ಮಾಡುವ ಹಣಕ್ಕಿಂತಲೂ ಅವು ಅನುಷ್ಠಾನಗೊಳಿಸುವ ಪರಿಸರ, ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು ಹೆಚ್ಚು ಮಹತ್ವದ್ದು. ಕಂಪೆನಿಗಳು ತಾವಿರುವ ಪ್ರದೇಶದ ಸಮುದಾಯದ ಕಲ್ಯಾಣ ಅತಿಮುಖ್ಯ ಎಂದು ಪರಿಗಣಿಸಬೇಕು. ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ಕಂಪೆನಿಗಳು ನೇರವಾಗಿ ಭಾಗಿಯಾಗಬೇಕು ಮತ್ತು ವ್ಯಕ್ತಿಗತ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು' ಎಂದು ಅವರು ಆಶಿಸಿದರು.

ಕಾರ್ಯಕ್ರಮ ನಿರೂಪಿಸಿದ ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಗುರುರಾಜ ದೇಶಪಾಂಡೆ ಅವರ, `ಉದ್ಯಮಶೀಲ ಮತ್ತು ಅನ್ವೇಷಕನ ನಡುವಿನ ವ್ಯತ್ಯಾಸವೇನು' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರತನ್ ಟಾಟಾ, `ಅನ್ವೇಷಕನಲ್ಲಿ ಹೊಸ ಹೊಸ ಆಲೋಚನೆ, ಕಲ್ಪನೆಗಳಿರುತ್ತವೆ. ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವುದು ಉದ್ಯಮಶೀಲತೆ. ಈ ಎರಡೂ ಸಮ್ಮಿಲನಗೊಂಡರೆ ನಿಜವಾದ ಯಶಸ್ಸು ಸಾಧ್ಯ' ಎಂದರು.

ರಾಜಿ ಮಾಡಿಕೊಂಡಿಲ್ಲ: `ನೀವು ಎಂದಾದರೂ ರಾಜಿ ಮಾಡಿಕೊಂಡಿದ್ದೀರಾ?' ಎಂಬ ಪ್ರಶ್ನೆಗೆ, `ತತ್ವ, ಸಿದ್ಧಾಂತ, ಮೌಲ್ಯಗಳಿಗೆ ವಿರುದ್ಧವಾಗಿ ನಾನೆಂದೂ ರಾಜಿ ಮಾಡಿಕೊಂಡವನಲ್ಲ. ಸಿದ್ಧಾಂತಗಳ ತ್ಯಾಗದಿಂದ ಯಶಸ್ಸು ಸಾಧ್ಯ ಎಂಬುದು ಗೊತ್ತಿದ್ದರೂ ನಾನು ಆ ಕೆಲಸ ಮಾಡಿಲ್ಲ. ಅದರಿಂದ ನಷ್ಟವಾಗಿದೆ ಎಂದು ಅಂದುಕೊಳ್ಳುವುದೂ ಇಲ್ಲ' ಎಂದು ಹೇಳಿದರು.

`ಕಲ್ಪನೆ, ಆಲೋಚನೆಗಳನ್ನು ದೊಡ್ಡಮಟ್ಟದಲ್ಲಿ ಕಾರ್ಯರೂಪಕ್ಕಿಳಿಸಲು ಸಮರ್ಥ ತಂಡ ಜೊತೆಗಿರಬೇಕು' ಎಂದೂ ರತನ್ ನುಡಿದರು. ದೇಶಪಾಂಡೆ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಝಾ, ಡಾ. ನೀಲಂ ಮಹೇಶ್ವರಿ ಪ್ರತಿಷ್ಠಾನದ ಚಟುವಟಿಕೆಯ ಕುರಿತ ಮಾಹಿತಿ ನೀಡಿದರು.

ರೋಚಕ ಅನುಭವ
`ಅತಿ ದೊಡ್ಡ ಸಮೂಹ ಸಂಸ್ಥೆಯನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ ಖುಷಿಗಿಂತಲೂ ವಿಂಡ್ ಮಿಲ್ಸ್ ಮೇಲೆ ಅತಿವೇಗ ಮತ್ತು ಕಡಿಮೆ ಎತ್ತರದಲ್ಲಿ ಜೆಟ್ ವಿಮಾನ ಹಾರಾಟ ನಡೆಸುವುದು ರೋಮಾಂಚಕಾರಿ ಅನುಭವ' ಎಂದು ರತನ್ ಟಾಟಾ ಹೇಳಿದರು.

ನಿವೃತ್ತಿ ಬಳಿಕದ ದಿನಗಳ ಕುರಿತು ಮಾತನಾಡಿದ ಅವರು, `ನಿವೃತ್ತಿಯಾದ ಕೆಲವೇ ವಾರಗಳ ಕಾಲ ಇಷ್ಟು ವರ್ಷದಲ್ಲಿ ಸಿಗದೇ ಇದ್ದ ಸಂತಸವನ್ನು ನಾನು ಅನುಭವಿಸಿದೆ' ಎಂದೂ ಸಂಭ್ರಮ ಹಂಚಿಕೊಂಡರು.

`ಹದಿನೇಳನೇ ವಯಸ್ಸಿಗೆ ನಾನು ಪೈಲಟ್ ಆದೆ. ವಿಮಾನ ಹಾರಾಟ ನಡೆಸಿದ ಹಲವು ಸಂದರ್ಭಗಳಲ್ಲಿ ನಾನು ಸಾವಿನ ಸಮೀಪ ಹೋಗಿ ಬದುಕುಳಿದಿದ್ದೇನೆ. ಒಂದೇ ಎಂಜಿನ್ ಇರುವ ವಿಮಾನ ಎರಡು ಬಾರಿ ಕೈಕೊಟಿದ್ದರೂ ಇವತ್ತು ನಾನು ನಿಮ್ಮ ಮುಂದೆ ಇದ್ದೇನೆ' ಎಂದರು.

`ಸ್ನೇಹಿತರೊಬ್ಬರು ನನಗೆ ಟ್ವಿಟರ್ ಅಕೌಂಟ್ ತೆರೆದು ಕೊಟ್ಟಿದ್ದಾರೆ. ಹೀಗಾಗಿ ಅದರ ಮೂಲಕ ನನ್ನ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಮತ್ತು ಮಾಧ್ಯಮಗಳಿಗೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ನಾನು ಟ್ವೀಟ್ ಮಾಡುತ್ತೇನೆ. ನನ್ನ ನಿವೃತ್ತಿಯಿಂದ ನನ್ನ ಎರಡು ಶ್ವಾನಗಳು ಅತ್ಯಂತ ಹೆಚ್ಚು ಖುಷಿಪಟ್ಟಿವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT