ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಎಲ್ಲೆ ಮೀರಿದ ಸೂಫಿ ಸಂತರು

Last Updated 3 ಜನವರಿ 2011, 6:30 IST
ಅಕ್ಷರ ಗಾತ್ರ

ಸವಣೂರ: ‘ಕಂದಾಚಾರ, ಮತ ದ್ವೇಷಗಳೇ ಧರ್ಮದ ಸ್ವರೂಪ ಪಡೆಯುತ್ತಿರುವ ಇಂದಿನ ಸಂದರ್ಭದಲ್ಲಿ  ವರ್ಗ, ವರ್ಣ ಭೇದ ಇಲ್ಲದೇ ಮನುಷ್ಯ ಪ್ರೇಮದಲ್ಲಿ ದೈವತ್ವವನ್ನು ಕಾಣುವ, ಸಹಜತೆಯ ಬದುಕನ್ನು ಹುಡುಕುವ ಸೂಫಿ ಪಂತ ನೊಂದ ಜನರ ಬದುಕಿನ ನಡುವೆ ಅರಳಿನಿಂತಿದೆ’ ಎಂದು ಸಾಹಿತಿ ಎ.ಎಸ್ ಮಕಾನದಾರ್ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಕಾರ್ಯಕ್ರಮದ ಅಡಿ ಪಟ್ಟನದ ಬಾರಗಾಹೆ ಹಜ್ರತ್ ಸೈಯದ್ ಅಹ್ಮದಮಿಯಾ ಖಾದ್ರಿ ವ, ಸೈಯ್ಯದ್ ವಾರಿಸ್‌ಮಿಯಾ ಖಾದ್ರಿ ಶಹೀದ್ ಸಾದಾತೆ ದರ್ಗಾದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೂಫಿ ಶರಣರು ಹಾಗೂ ಭಾವೈಕ್ಯತೆಯ ಕುರಿತು ಅವರು ಉಪನ್ಯಾಸ ನೀಡಿದರು.

ಸೂಫಿ ಸಂತರು ಜಾತೀಯತೆಯ ಎಲ್ಲೆಗಳನ್ನು ಮೀರಿದವರು. ಅವಧೂತ ಮಾರ್ಗಿಗಳು. ವಿಧಿಯ ಗಾಳಿ ಬೀಸಿದಂತೆ ಸಾಗಿ ಬಂದವರು. ತಮ್ಮದೇ ಆದ ಅನುಭವ ಪಂಥವನ್ನು ರೂಪಿಸಿಕೊಂಡವರು. ಕವಿಗಳು, ವಿದ್ವಾಂಸರು, ವಿರಕ್ತರು, ಅನ್ವೇಷಕರೂ ಆಗಿರುವ ಸೂಫಿಗಳು, ನಾಡಿನ ಸಾಹಿತ್ಯ ಸಂಗೀತ ಕಲೆಗಳಿಗೂ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ ಎಂದರು.ಸವಣೂರಿನಲ್ಲಿ 35 ಕ್ಕೂ ಹೆಚ್ಚು ಸೂಫೀ ಸಂತರ ಇತಿಹಾಸ ಇದ್ದು, ಈ ಸಂತರ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕಾದ ಅಗತ್ಯವಿದೆ ಎಂದು ತಿಳಿಸಿದ ಮಕಾನದಾರ್, ಜಿಲ್ಲೆಯ ಹಲವಾರು ಸೂಫಿ ಸಂತರ ಸಂಕ್ಷಿಪ್ತ ವಿವರಣೆಗಳನ್ನು, ಅವರ ಜೀವನ ಸಾಧನೆ, ಮಾರ್ಗವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಡಾ. ಭೂಮಿಗೌಡ ಅವರು, ಸೌಹಾರ್ದತೆ ಮನುಷ್ಯನ ಮೂಲ ಆಶಯಗಳಾಗಬೇಕು ಎಂದರು. ದರ್ಗಾದ ಪೀಠಾಧಿಕಾರಿ ಸಜ್ಜದಾನಶೀನ್ ಸಯ್ಯದಶಾ ಮಹ್ಮದ ಜಿಲಾನಿ ಪೀರಾ ಹುಸೇನಿ ಖಾದ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದರ್ಗಾದ ಗುರು ವಿಜಾಪುರದ ಸಯ್ಯದಶಾ ಮೊಹ್ಮದ ಮಂಜೂರ ಅಹ್ಮದ ಖಾದ್ರಿ ಮಾತನಾಡಿದರು.

ಸಯ್ಯದ ಶಾ ಮಹ್ಮದ ರಹಿಮಾನ ಖಾದ್ರಿ ಅವರ ದತ್ತಿ ನಿಧಿಯ ಅಡಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ ವಹಿಸಿದ್ದರು. ಖಾನ್‌ಚಾಚಾ, ಎಮ್.ಎನ್ ಚಿಲಕವಾಡ, ಎಮ್.ಎ ಜಹಗೀರದಾರ, ಸಿ.ಜಿ ಪಾಟೀಲ, ಬಸವರಾಜ ಪಾಟೀಲ, ಸಿ.ಎನ್. ಲಕ್ಕನಗೌಡ್ರ, ಎನ್.ಎನ್. ಬಸನಾಳ ಇದ್ದರು. ಹಜರೇಸಾಬ ನದಾಫ್ ಸ್ವಾಗತಿಸಿದರು. ಚಂದ್ರಶೇಖರ ಕುಳೇನೂರ ನಿರ್ವಹಿಸಿದರು. ಬಸವರಾಜ ಚಳ್ಳಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT