ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಾತಿ ಕಟ್ಟುನಿಟ್ಟಾಗಿ ಇರುವುದಿಲ್ಲ'

Last Updated 26 ಮೇ 2013, 19:59 IST
ಅಕ್ಷರ ಗಾತ್ರ

ನಾವು ಸಣ್ಣವರಿದ್ದಾಗ ಮೇಲ್ಜಾತಿಯವರು ಕೆಳಜಾತಿಯವರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಇನ್ನು, ಜೊತೆಗೆ ಊಟ ಮಾಡುವುದಂತೂ ದೂರವೇ ಉಳಿಯಿತು. ಆದರೆ ಇಂದು ಕಾಲ ಬದಲಾಗಿದೆ. ಜಾತಿಯ ಕಟ್ಟುನಿಟ್ಟು ಕಡಿಮೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಆಹಾರ, ಮದುವೆ, ಶಿಕ್ಷಣ ಮತ್ತು ಸಂಪರ್ಕ.

ಬದಲಾದ ಕಾಲಘಟ್ಟದಲ್ಲಿ ವಿಭಿನ್ನ ಜಾತಿಯವರು ಒಂದೇ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದೇವೆ. ಅಂತರ್‌ಜಾತಿ ಮದುವೆಗಳು ನಡೆಯುತ್ತಿವೆ. ದಲಿತರು, ಕೆಳವರ್ಗದವರು ಶಿಕ್ಷಣ ಪಡೆದ ಪರಿಣಾಮ ಅವರೂ ಉದ್ಯೋಗ ಪಡೆಯುತ್ತಿದ್ದಾರೆ. ಇದು ಜಾತಿ ದೂರವಾಗಲು ಕಾರಣ. ಒಂದೇ ವೃತ್ತಿಯಲ್ಲಿರುವ ಹೆಣ್ಣು ಗಂಡುಗಳು ಮದುವೆಯಾಗುತ್ತಿದ್ದಾರೆ. ಅವರಿಗೆ ಜಾತಿ ಅಡ್ಡ ಬರುತ್ತಿಲ್ಲ.

ಆಹಾರ, ಮದುವೆ ವ್ಯವಸ್ಥೆ ಶಿಥಿಲವಾದಂತೆ ಜಾತಿ ವಿಷಯ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಭವಿಷ್ಯದಲ್ಲಿ ಜಾತಿಯೇ ಇಲ್ಲದಿರುವ ಪರಿಸ್ಥಿತಿ ಬರಬಹುದು. ಇದು ನೂರಾರು ವರ್ಷಗಳ ಮಾತು. ಇದಾಗದಿದ್ದರೂ ಜಾತಿಯ ಕಟ್ಟುನಿಟ್ಟಿನ ಪಾಲನೆಯಂತೂ ಇರುವುದಿಲ್ಲ.

ಕಪ್ಪು-ಬಿಳಿ ಎಂಬ ವರ್ಣ ತಾರತಮ್ಯವೂ ಕಡಿಮೆಯಾಗುತ್ತಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಿಳಿಯರು ಕರಿಯರನ್ನು ಮದುವೆಯಾಗುತ್ತಿದ್ದಾರೆ. ಅವರಿಗೆ ಜನಿಸುವ ಮಕ್ಕಳು ತೀರ ಬಿಳಿ ಅಲ್ಲದ, ಕಪ್ಪೂ ಅಲ್ಲದ ಬಣ್ಣದವರಾಗಿರುತ್ತಾರೆ.
-ಡಾ.ಎಂ.ಎಂ.ಕಲಬುರ್ಗಿ, ಸಂಶೋಧಕರು, ಧಾರವಾಡ .

ಇವತ್ತಿನ ವರ್ತಮಾನದಲ್ಲಿ ಜಾತಿ ಕಟು ವಾಸ್ತವ. ಅದು ನಮ್ಮ ಕಣ್ಣೆದುರೇ ಇರುವ ಕಟು ಸತ್ಯ. ಆದರೆ, ನಾವು ನಿರಾಶರಾಗಬೇಕಿಲ್ಲ. ಈಗಿನ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಿದೆ.

ಇಂತಹ ಸವಾಲುಗಳನ್ನು ಸ್ವೀಕರಿಸಬಲ್ಲ ಮಾನವೀಯ ಅಂತಃಕರಣದ ತುಡಿತ ಎಲ್ಲ ವ್ಯಕ್ತಿಗಳಲ್ಲೂ ಇದೆ. ಈಗ ಎಲ್ಲ ಕಡೆ ಜಾತಿ ವ್ಯವಸ್ಥೆ ಇದೆ. ಪೌರಕಾರ್ಮಿಕರ ಸ್ಥಿತಿಯನ್ನೇ ಗಮನಿಸಿದಾಗ ಜಾತಿಯ ಭೀಕರ ಚಿತ್ರಣ ಕಣ್ಣೆದುರಿಗೆ ಬರುತ್ತದೆ.ಜಾತಿ ವ್ಯವಸ್ಥೆ ಹೋಗಲಾಡಿಸಲು ಮನಸ್ಸಿನ ಪರಿವರ್ತನೆ ಆಗಬೇಕು ಹಾಗೂ ಸರ್ಕಾರ ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು.
-ದು. ಸರಸ್ವತಿ, ಸಾಮಾಜಿಕ ಹೋರಾಟಗಾರರು .

ಈಚಿನ ವರ್ಷಗಳಲ್ಲಿ ಜಾತಿಯ ಸಂಘಟನೆಗಳು ಹೆಚ್ಚುತ್ತಿವೆ. ನಮ್ಮ ಸಂಸ್ಕೃತಿ ಹಾಗೂ ಜಾತಿಯ ಆಸ್ಮಿತೆ ಉಳಿಸಿಕೊಳ್ಳಲು ಸಂಘಟನೆ ಅಗತ್ಯ ಎಂದು ಈ ಸಂಘಟನೆಗಳು ಘೋಷಿಸಿಕೊಳ್ಳುತ್ತಿವೆ. ಆದರೆ, ಸಂಪೂರ್ಣವಾಗಿ ಅವರು ಈ ಕೆಲಸ ಮಾಡುವುದಿಲ್ಲ. ಇದರ ನಡುವೆಯೂ ಎಳೆಪೀಳಿಗೆಗಳು ಜಾತಿಯ ಸೀಮೋಲ್ಲಂಘನೆ ಮಾಡುತ್ತಿವೆ. ಇದೊಂದು ಸಕಾರಾತ್ಮಕ ಬೆಳವಣಿಗೆ.

ಉದಾಹರಣೆಗೆ ಬಿಲ್ಲವ ಸಮುದಾಯದಲ್ಲೇ ಶೇ 10ರಷ್ಟು ಯುವಪೀಳಿಗೆಗಳು ಜಾತಿಯ ಗಡಿ ದಾಟಿವೆ. ಎಳೆ ಮನಸ್ಸುಗಳು ಹೊಸ ದಾರಿಯನ್ನು ಹುಡುಕುತ್ತವೆ. ಅವರಿಗೆ ನಾವೆಲ್ಲ ಬೆಂಬಲ ನೀಡಬೇಕು. ಇಂತಹ ಚಟುವಟಿಕೆಗೆ ವಿರೋಧ ಮಾಡುವುದು ಸರಿಯಲ್ಲ. ಸಮಾಜದಲ್ಲಿ ಜಾತ್ಯತೀತ ಮನೋಭಾವವೂ ಹೆಚ್ಚುತ್ತಿವೆ.

ಈ ಹಿಂದೆ ಜಾತಿಯನ್ನು ಗೌರವ, ಪ್ರತಿಷ್ಠೆ ಪ್ರಶ್ನೆ ಎಂದು ವಾದ ಮಾಡುತ್ತಿದ್ದವರು ಮೊಮ್ಮಕ್ಕಳ ಕಾಲದಲ್ಲಿ ಮೌನವಾಗಿರುವುದನ್ನು ಕಾಣಬಹುದು. ಹೆಚ್ಚುತ್ತಿರುವ ಅಂತರ್ಜಾತಿ ವಿವಾಹ ಪರಿವರ್ತನೆಯ ಒಂದು ಅಂಶ. ಈ ಚಲನೆ ಸಣ್ಣದು ಇರಬಹುದು. ಇಂತಹ ಸಣ್ಣ ಕೆಲಸವೇ ಜಾತಿ ವಿನಾಶಕ್ಕೆ ಶುಭ ಸೂಚನೆ. ಈ ಚಲನೆಗೆ ನಾವು ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ.
-ಬಿ.ಎಂ. ರೋಹಿಣಿ, ಹಿರಿಯ ಲೇಖಕಿ .

ಭಾರತದ ವಿಶಿಷ್ಟ ಗಣತಾಂತ್ರಿಕ ವ್ಯವಸ್ಥೆಯು ಜಾತಿಯನ್ನು ಸಾಂಸ್ಕೃತಿಕ ಘಟಕವಾಗಿ ಒಪ್ಪಿಕೊಳ್ಳುವುದರಿಂದ ಮತ್ತು ಆಧುನೀಕರಣಗೊಳ್ಳುತ್ತಿರುವ ಭಾರತೀಯ ಸಮಾಜವು ಜಾತಿಯನ್ನು ನಿರಶನಗೊಳಿಸುವ ಪ್ರಕ್ರಿಯೆಯಲ್ಲಿ ತನ್ನನ್ನು ಗಂಭೀರವಾಗಿ ತೊಡಗಿಸಿಕೊಳ್ಳದೇ ಇರುವುದರಿಂದ ಭವಿಷ್ಯದಲ್ಲಿ ಜಾತಿಯು ಹೊಸ ಹೊಸ ಅವತಾರಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಲೇ ಇರುತ್ತದೆ.
-ಪುರುಷೋತ್ತಮ ಬಿಳಿಮಲೆ, ಹಿರಿಯ ಚಿಂತಕ .

ಮನುಷ್ಯ ವರ್ಗದಲ್ಲಿ ಜಾತಿ ಅಥವಾ ಜಾತೀಯತೆ ಎನ್ನುವುದು ಎಷ್ಟೇ ಅನಪೇಕ್ಷಣೀಯ ಎಂದು ವಿಚಾರವಂತರು ಹೇಳಿದರೂ ಈ ಪದ್ಧತಿ ದೂರ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಜಾತಿಭೇದ ತೊಲಗಿಸಬಹುದಾದ ಸಂಗತಿ. ಜಾತಿ ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ.

ಭವಿಷ್ಯದಲ್ಲಿ ಜಾತಿಭೇದ ಕಿತ್ತು ಹಾಕಲು ಪ್ರಜ್ಞಾವಂತರು ಪ್ರಯತ್ನಪಡಬೇಕಿದೆ. ಮುಂದಿನ ಪೀಳಿಗೆಯ ಜನರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಜಾತಿ ಸೂಚಕಗಳನ್ನು ತೆಗೆಯಲು ಮನಸ್ಸು ಮಾಡಬೇಕು. ವ್ಯಕ್ತಿಯ ಹೆಸರಿನ ಜತೆಯಲ್ಲಿ ಬಂದಿರುವ ಉಪನಾಮಗಳನ್ನು ಸುಲಭದಲ್ಲಿ ಕಳೆದುಕೊಳ್ಳಬಹುದು.

ಅಂತರ್ಜಾತಿ ವಿವಾಹದ ಮೂಲಕ ತಕ್ಕಮಟ್ಟಿಗೆ ಜಾತೀಯತೆಯ ನಿವಾರಣೆ ಸಾಧ್ಯ. ಸಮಾಜಕ್ಕೆ ಮಾರ್ಗದರ್ಶನ ಮಾಡಲು ಪ್ರಜ್ಞಾವಂತರು ಸದಾ ಜಾಗೃತಶೀಲರಾಗಿ ವರ್ತಿಸಬೇಕು.
-ಅಮೃತ ಸೋಮೇಶ್ವರ, ಹಿರಿಯ ಸಾಹಿತಿ .

ಸರ್ಕಾರ ಹಾಗೂ ಜನರು ಒಗ್ಗೂಡಿ ಪ್ರಯತ್ನ ಮಾಡಿದರೆ ಭವಿಷ್ಯದಲ್ಲಿ ಜಾತೀಯತೆ ಕಡಿಮೆ ಮಾಡಬಹುದು. ಮಾನವೀಯತೆಯಲ್ಲಿ ನಂಬಿಕೆ ಇರುವವರು ನಿರಂತರ ಪ್ರಯತ್ನ ಮಾಡಿದರೆ ಈ ದಿಸೆಯಲ್ಲಿ ಯಶಸ್ಸು ಸಾಧ್ಯ.

ಜಾತಿ ವಿನಾಶವೇ ನಮ್ಮೆಲ್ಲರ ಗುರಿಯಾಗಬೇಕು. ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಶೋಷಣೆ ಹಾಗೂ ತಾರತಮ್ಯಕ್ಕೆ ಅವಕಾಶ ಕಲ್ಪಿಸಬಾರದು.
-ಪ್ರೊ.ಚಂದ್ರಶೇಖರ ಪಾಟೀಲ, ಬಂಡಾಯ ಸಾಹಿತಿ .

ಕರ್ನಾಟಕದಲ್ಲಿ ಮಧ್ಯಕಾಲದಲ್ಲಿ ಜಾತಿ ಪದ್ಧತಿ ಕ್ಲಿಷ್ಟವಾಗುತ್ತಾ ಹೋಗಿ ಜಾತಿಯೊಳಗೆ ಉಪಜಾತಿಗಳು ಬೆಳೆದು ಬಂದವು. ಪ್ರದೇಶವಾರು ಹಾಗೂ ಭಾಷಾವಾರು ಉಪಜಾತಿಗಳು ಹುಟ್ಟಿಕೊಂಡವು. ಇದಕ್ಕೆ ಜನರಲ್ಲಿ ಧರ್ಮದ ಬಗ್ಗೆ ಬೆಳೆದುಬಂದ ಸಂಕುಚಿತ ಭಾವನೆಯೇ ಕಾರಣ. ವಿಜಯನಗರದ ಅರಸು ಎಲ್ಲ ಜಾತಿ ಹಾಗೂ ಧರ್ಮಕ್ಕೆ ಬೆಂಬಲ ನೀಡಿದ್ದರಿಂದ ಆ ಕಾಲದಲ್ಲಿ ಜಾತಿ ವ್ಯವಸ್ಥೆ ಪ್ರಬಲ ಆಯಿತು.

ಸ್ವಾತಂತ್ರ್ಯನಂತರ ಸರ್ಕಾರದ ಪ್ರಯತ್ನದಿಂದಾಗಿ ಜಾತಿ ಭೇದಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಕೆಲವು ಜನರು ಹೆಸರಿನ ಜತೆಗೆ ಕುಲನಾಮ ಹಾಕುವುದನ್ನು ಬಿಟ್ಟರು. ಮತ್ತೆ ಬಂದ ಸರ್ಕಾರ ಜಾತಿ ಆಯೋಗ ರಚನೆ ಮಾಡಿದ್ದರಿಂದ ಜಾತೀಯತೆ ವ್ಯಾಪಕವಾಯಿತು.

ಜಾತಿ ವ್ಯವಸ್ಥೆ ಹೋಗಲಾಡಿಸಲು ಅಂತರ್ಜಾತಿ ವಿವಾಹವೇ ಏಕೈಕ ಪರಿಹಾರ. ಮೊದಲು ಪ್ರೇಮಿಗಳು ಮಾತ್ರ ಅಂತರ್ಜಾತಿಯ ವಿವಾಹವಾಗುತ್ತಿದ್ದರು. ಇದಕ್ಕೆ ಸಮಾಜ ವಿರೋಧ ವ್ಯಕ್ತಪಡಿಸುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ತಿಳಿವಳಿಕೆ ಉಳ್ಳ ಎಲ್ಲ ಸಮುದಾಯದ ಜನರು ಅಂತರ್ಜಾತಿ ವಿವಾಹ ಆಗುತ್ತಿದ್ದಾರೆ. ಅಂತರ್ಜಾತಿ ವಿವಾಹ ವ್ಯಾಪಕವಾದಾಗ ಜಾತಿ ಪದ್ಧತಿ ನಿರ್ಮೂಲನೆ ಆಗುತ್ತದೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು.
-ಪಾಲ್ತಾಡಿ ರಾಮಕೃಷ್ಣ ಆಚಾರ್, ಹಿರಿಯ ಸಾಹಿತಿ .

ಮನುಕುಲದ ಉತ್ಪಾದನಾ ವ್ಯವಸ್ಥೆಯು ಊಳಿಗಮಾನ್ಯ ವ್ಯವಸ್ಥೆಯಿಂದ ಮೊದಲ್ಗೊಂಡು ಇಂದಿನವರೆಗೆ ಸಾಮಾಹಿಕ-ಆರ್ಥಿಕ ಅಸಮಾನತೆಯನ್ನು ಕಾಯ್ದಿಟ್ಟುಕೊಂಡಿದೆ. ಜಾತಿಭೇದ, ವರ್ಣಭೇದ, ಮೇಲು-ಕೀಳು ಇತ್ಯಾದಿಗಳ ಹೆಸರಿನಲ್ಲಿ ಬಹುಪಾಲು ಜನರನ್ನು ಶೋಷಿಸಿ, ಉತ್ಪಾದನೆಯ ಫಲದಿಂದ ವಂಚಿಸಲಾಗುತ್ತಿರುವುದು ಮುಂದುವರಿಯುತ್ತಲೇ ಇದೆ.

ಉತ್ಪಾದನೆ-ಬಳಕೆಗಳಲ್ಲಿ ಅಸಮಾನತೆಯ ಈ ವ್ಯವಸ್ಥೆ ಮುಂದುವರಿಯುವವರೆಗೆ ಜಾತಿ ಮುಂತಾದ ಶೋಷಣೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳೂ ಬಲಿಷ್ಠವಾಗಿರುತ್ತವೆ. ಆದರೆ, ಈ ಶೋಷಿತ ವರ್ಗಗಳು ನಮ್ಮ ಸಂವಿಧಾನದಲ್ಲಿ ನೀಡಲಾಗಿರುವ ಭದ್ರತೆಯ ಬಲದಿಂದಾಗಿ ಇಂದು ಉತ್ತಮವಾದ ವಿದ್ಯಾಭ್ಯಾಸ ಮತ್ತು ಉದ್ಯೋಗವಕಾಶಗಳನ್ನು ಪಡೆಯಲು ಸಾಧ್ಯವಾಗಿರುವುದರಿಂದ ಭವಿಷ್ಯದಲ್ಲಿ ಅಸಮಾನತೆಗಳು ಸಾಕಷ್ಟು ಮಟ್ಟಿಗೆ ಕಡಿಮೆಯಾಗಬಹುದು.

ಜಾತಿ ವ್ಯವಸ್ಥೆಯನ್ನು ಉಳಿಸಲೆತ್ನಿಸುವವರು ಮತ್ತು ಅದರಿಂದ ಶೋಷಿಸಲ್ಪಡುತ್ತಿರುವವರ ನಡುವಿನ ಸಂಘರ್ಷದಲ್ಲಿ ಶೋಷಿತರ ಕೈ ಮೇಲಾಗುತ್ತಿರುವುದು ಸುಸ್ಪಷ್ಟವಾಗಿದೆ. ಜಾತಿಯ ಹೆಸರಿನಲ್ಲಿ ಶೋಷಿಸಲ್ಪಡುತ್ತಿರುವವರು ಶೈಕ್ಷಣಿಕವಾಗಿಯೂ, ಆರ್ಥಿಕವಾಗಿಯೂ ಸಬಲರಾದಂತೆ ವ್ಯಾವಹಾರಿಕ, ವೈವಾಹಿಕ, ಸಾಮಾಜಿಕ ಸಂಬಂಧಗಳಲ್ಲಿ ಜಾತಿಭೇದಕ್ಕೆ ನೆಲೆಯಿಲ್ಲದಂತಾಗುವ ದಿನಗಳು ಹೆಚ್ಚು ದೂರವಿಲ್ಲ. ಅದಕ್ಕಾಗಿ ಸಾಂವಿಧಾನಿಕ ಭದ್ರತೆಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕು.
-ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT