ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ-ಧರ್ಮ ಮೀರಿದ ಚೋಳರ ದೇಗುಲ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಜಾತಿ-ಧರ್ಮದ ಸಂಕೋಲೆ ರಾಜರ ಕಾಲದ ದೇವಾಲಯಗಳನ್ನೂ ಬಿಟ್ಟಿಲ್ಲ. ಆದರೆ ಇದಾವುದೇ ಸಂಕೋಲೆಗಳಿಗೆ ಸಿಲುಕದೆಯೇ ಪೂಜೆ ನೆರವೇರುತ್ತಿದ್ದ ದೇವಾಲಯವೊಂದು ತುಮಕೂರು ಜಿಲ್ಲೆಯಲ್ಲಿ ಯಾರ ಕಣ್ಣಿಗೂ ಬೀಳದೇ ಮೌನವಾಗಿ ಕುಳಿತಿದೆ!

ಜಿಲ್ಲೆಯ ಶೆಟ್ಟೀಕೆರೆ ಹೋಬಳಿಯ ಚಿಕ್ಕನಾಯಕನಹಳ್ಳಿಯ ತಿಪಟೂರಿನಲ್ಲಿರುವ `ಶ್ರೀ ಯೋಗಮಾಧವಸ್ವಾಮಿ ದೇವಾಲಯ' ಅವಸಾನದ ಅಂಚಿನಲ್ಲಿದೆ. ಬೇರೆ ಬೇರೆ ರಾಜರ ಆಡಳಿತದ ದಿನಗಳಲ್ಲಿ ನಮ್ಮಲ್ಲಿ ಸಾಕಷ್ಟು ದೇವಾಲಯಗಳ ನಿರ್ಮಾಣವಾಗಿದೆ.

ರಾಜನ ನೆನಪಿಗಾಗಿ ಅಥವಾ ಯಾವುದಾದರೂ ಶುಭ ಕಾರ್ಯದ ಸವಿನೆನಪಿಗಾಗಿ ದೇವಾಲಯಗಳನ್ನು ನಿರ್ಮಿಸುವ ಪದ್ಧತಿ ಅಂದು ಸಾಮಾನ್ಯವಾಗಿತ್ತು. ಈ ಎಲ್ಲಾ ಮಾತಿಗೆ ಜೀವಂತ ಸಾಕ್ಷಿ ಎನ್ನುವಂತೆ ರಾಜರಿಂದ ಕಟ್ಟಲ್ಪಟ್ಟ ಕೆಲವೊಂದು ದೇವಾಲಯಗಳು ಇವೆ.

ಈ ದೇವಾಲಯಗಳ ಪೈಕಿ ಇದೂ ಒಂದು. ಆದರೆ ಅವುಗಳು ಜೀರ್ಣೋದ್ಧಾರಗೊಳ್ಳದೆ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯ ನಾಮಫಲಕಗಳನ್ನು ನೇತಾಕಿಸಿಕೊಂಡು ಮೂಲೆಗುಂಪಾಗಿರುವುದು ಮಾತ್ರ ವಿಪರ್ಯಾಸ.

1261ರಲ್ಲಿ ಹೊಯ್ಸಳ ದೊರೆ ಮುಮ್ಮಡಿ ವೀರನರಸಿಂಹನ ದಂಡನಾಯಕ ಗೋಪಾಲ ಡಣಾಯಕನು ಅಗ್ರಹಾರವನ್ನು ನಿರ್ಮಿಸಿದನೆಂಬ ಮಾಹಿತಿಯನ್ನು ಇಲ್ಲಿರುವ ಶಾಸನಗಳು ಬಿಚ್ಚಿಟ್ಟಿವೆ. ಸಂಪೂರ್ಣ ಕಲ್ಲಿನಿಂದ ನಿರ್ಮಿಸಿದ ಈ ದೇವಾಲಯ ನಕ್ಷತ್ರಾಕಾರವಾಗಿರುವ ಮೂರು ಅಡಿ ಎತ್ತರದ ಜಗತಿಯ ಮೇಲೆ ಐದು ಸಾಲುಗಳಿವೆ. ಈ ಜಗತಿಯ ಮೇಲೆ ಗೋಡೆಯ ಪೀಠಿಕೆಯ ಐದು ಚಿತ್ರ ಪಟ್ಟಿಕೆಗಳಿವೆ.

ಇಲ್ಲಿನ ಮೂರು ಗರ್ಭ ಗುಡಿಗಳು ಪಶ್ಚಿಮದ ಶುಕನಾಸಿ, ಒಳಗಿನ ನವರಂಗ, ಪೂರ್ವದ ಒಂದು ಅಂಕಣದ ಮುಖ ಮಂಟಪ ಹೊಯ್ಸಳರ ಕಾಲದ್ದಾಗಿದ್ದು ಇಲ್ಲಿರುವ ಗರುಡ ಪೀಠ ತುಂಬಾ ಸುಂದರವಾಗಿದ್ದು ಗರುಡ ಪೀಠದ ಮೇಲೆ ಒಂಬತ್ತು ಅಡಿ ಎತ್ತರದ ಯೋಗ ಮಾಧವ ವಿಗ್ರಹವಿದೆ.

ಅಪರೂಪದ ಕಲಾಕೃತಿ
ಅಪರೂಪದ ಕಲಾತ್ಮಕ ದೇವಾಲಯ ಎಂಬ ಹೆಗ್ಗಳಿಕೆ ಇದರದ್ದು. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದ ಚೋಳರ ಕಾಲದ ಈ ದೇವಾಲಯ ತನ್ನ ಸರಳ ವಾಸ್ತು ಮತ್ತು ಅಪೂರ್ವ ಶಿಲ್ಪಗಳಿಂದಾಗಿ ವಿಶಿಷ್ಟವಾಗಿದೆ. 1969 ರಿಂದ ಪ್ರತಿ ವರ್ಷ ಭೀಮನ ಅಮವಾಸ್ಯೆಯ ದಿನ ಇಲ್ಲಿ ದೊಡ್ಡ ಪೂಜೆ ನಡೆಯುತ್ತದೆ.

ಇಂದಿಗೂ ಭೀಮನ ಅಮವಾಸ್ಯೆಯ ದಿನ ಇಲ್ಲಿ ಸಾವಿರಾರು ಜನರ ಸೇರುವಿಕೆಯೊಂದಿಗೆ ಪೂಜೆ, ಪುನಸ್ಕಾರ ನಡೆಯುತ್ತದೆ. ಇತರ ದಿನಗಳಲ್ಲೂ ದಿನದ ಎರಡು ಹೊತ್ತು ಪೂಜೆ ನಡೆಯುತ್ತಿದೆ.

ಈವರೆಗೆ ಈ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಪ್ರಾಚ್ಯವಸ್ತು ಇಲಾಖೆ ಕ್ರಮ ಕೈಗೊಳ್ಳದಿರುವುದು ಈ ಊರಿನ ಜನರಿಗೆ ಬೇಸರ ತಂದಿದೆ.

ಅಳಿವಿನಂಚಿನಲ್ಲಿರುವ ಈ ಅಪರೂಪದ ದೇವಾಲಯಕ್ಕೆ ಸೂಕ್ತ ವ್ಯವಸ್ಥೆಯನ್ನು ಕೈಗೊಂಡಲ್ಲಿ ಮುಂದೊಂದು ದಿನ ಇದೊಂದು ಅಪರೂಪದ ಪ್ರವಾಸಿತಾಣವಾಗುವುದರಲ್ಲಿ ಎರಡು ಮಾತಿಲ್ಲ.

ಚೋಳರ ಕಾಲದ ಈ ದೇವಾಲಯವನ್ನು ಮುಂದಿನ ದಿನಗಳಿಗೂ ಉಳಿಸುವ ಮಹತ್ ಜವಾಬ್ದಾರಿ ಪ್ರಾಚ್ಯವಸ್ತು ಇಲಾಖೆಯ ಕೈಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT