ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪ್ರಮಾಣ ಪತ್ರಕ್ಕೆ ನೂತನ ವ್ಯವಸ್ಥೆ

Last Updated 6 ಜನವರಿ 2011, 9:20 IST
ಅಕ್ಷರ ಗಾತ್ರ

ಶಿಕಾರಿಪುರ: ಜಾತಿ, ಆದಾಯ ಪ್ರಮಾಣ ಪತ್ರವನ್ನು ಒಂದೇ ದಿನದಲ್ಲಿ ನೀಡಲು ನೂತನ ವ್ಯವಸ್ಥೆ ಜಾರಿಗೊಳಿಸುವುದಾಗಿ ಜಿಲ್ಲಾಧಿಕಾರಿ ಪೊನ್ನುರಾಜ್ ಹೇಳಿದರು. ಪಟ್ಟಣದಲ್ಲಿ ಬುಧವಾರ ಕಂದಾಯ ಇಲಾಖೆ ಸಿಬ್ಬಂದಿಗೆ ನಡೆಸಿದ ತುರ್ತುಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಜನರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವಲ್ಲಿ ವಿಳಂಬವಾಗುತ್ತಿದ್ದು, ಜನರು ಕಚೇರಿಗೆ ಅಲೆಯುವಂತಾಗಿದೆ. ಈ ವ್ಯವಸ್ಥೆ ಸರಿಪಡಿಸುವ ಕೆಲಸಕ್ಕೆ ಅಧಿಕಾರಿಗಳು ಪ್ರತಿಮನೆಯ ಸರ್ವೆ ಕೆಲಸ ಕೈಗೊಳ್ಳಬೇಕಿದೆ ಎಂದರು. ಹೊಸ ವ್ಯವಸ್ಥೆಗಾಗಿ ಕಂದಾಯ ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಅದನ್ನು ಗಣಕೀಕೃತಗೊಳಿಸುವಂತೆ ಸೂಚಿಸಿದರು.


ಸಿಬ್ಬಂದಿಗಳು ವಿನೂತನ ವ್ಯವಸ್ಥೆಗೆ ಅಡ್ಡಿಯಾಗುವ ಹಲವು ಸಮಸ್ಯೆಗಳ ಕುರಿತು ಚರ್ಚಿಸಿ, ಅವುಗಳಿಗೆ ಜಿಲ್ಲಾಧಿಕಾರಿಯಿಂದ ಸಲಹೆ ಪಡೆದರು. ವಿನೂತನ ಯೋಜನೆ ಮಂಗಳೂರು ವ್ಯಾಪ್ತಿಯಲ್ಲಿ ಯಶಸ್ವಿಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಶೀಘ್ರದಲ್ಲಿ ಪ್ರಾರಂಭಿಸಲು ಅಧಿಕಾರಿಗಳು ಶ್ರಮಪಡಬೇಕು ಎಂದರು. ಸಭೆಯ ನಂತರ ಪುರಸಭೆ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಹತ್ತಾರು ವರ್ಷಗಳ ಹಿಂದೆಯೇ, ಸರ್ಕಾರಿ ಜಾಗ, ಕಂದಾಯ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿರುವ ಕುಟುಂಬದವರಿಗೆ ಹಕ್ಕುಪತ್ರ ನೀಡುವ ಕುರಿತು ಇರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಪಟ್ಟಣದ ಕುಂಬಾರಗುಂಡಿ, ಸರಸ್ವತಿಪುರ, ಸೋಸೈಟಿ ಕೇರಿ ಪ್ರದೇಶದಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ಕಳೆದ 30-40 ವರ್ಷಗಳ ಹಿಂದಿನಿಂದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಇವರಿಗೆ ಹಕ್ಕುಪತ್ರ ನೀಡುವುದಕ್ಕಾಗಿ ಇರುವ ಸಮಸ್ಯೆಗಳ ಬಗ್ಗೆ ಪುರಸಭೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸಮಸ್ಯೆ ಕುರಿತು ಜನರ ಅಹವಾಲನ್ನೂ ಕೇಳಿದ ಅವರು, ಸರ್ಕಾರ ಬಡವರಿಗೆ 20/30 ಅಳತೆಯ ನಿವೇಶನ ಮಾತ್ರ ನೀಡಲು ಅವಕಾಶವಿದ್ದು, ಹೆಚ್ಚಿನ ಅಳತೆಯಲ್ಲಿ ಮನೆ ನಿರ್ಮಿಸಿಕೊಂಡವರು ಸರ್ಕಾರಿ ದರದಂತೆ ಹೆಚ್ಚುವರಿ ಹಣ ನೀಡಬೇಕು ಎಂದು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜನರು ಸರ್ಕಾರದಿಂದ ಉಚಿತವಾಗಿ ನೀಡುವಂತೆ ಮನವಿ ಮಾಡಿದರು.

ಸಮಸ್ಯೆ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸಿ ತಿಂಗಳೊಳಗಾಗಿ ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆ ನೀಡಿದರು. ಪಟ್ಟಣದಲ್ಲಿನ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ನೀಡುವಂತೆ ಮುಖ್ಯಾಧಿಕಾರಿಗೆ ಆದೇಶಿಸಿದರು. ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಲತಾ ಮಂಜಪ್ಪ, ಉಪಾಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಟಿ.ಎಸ್. ಮೋಹನ್, ಸ್ಥಾಯಿಸಮಿತಿ ವಸಂತಗೌಡ್ರು ಸೇರಿದಂತೆ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT