ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪ್ರಮಾಣಪತ್ರ ಜೀವಿತಾವಧಿಗೆ ವಿಸ್ತರಣೆ

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ಇಲಾಖೆಯ ವತಿಯಿಂದ ವಿತರಿಸುವ ಆದಾಯ ಪ್ರಮಾಣ ಪತ್ರಗಳ ಬಳಕೆಯ ಅವಧಿಯನ್ನು ಐದು ವರ್ಷಕ್ಕೆ ಮತ್ತು ಜಾತಿ ಪ್ರಮಾಣ ಪತ್ರದ ಬಳಕೆ ಅವಧಿಯನ್ನು ಜೀವಿತಾವಧಿಗೆ ವಿಸ್ತರಿಸಲಾಗಿದೆ. ಪ್ರವರ್ಗ (ಕೆಟಗರಿ) ಪ್ರಮಾಣ ಪತ್ರಗಳ ಬಳಕೆ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಲಾಗಿದೆ.

`ಆದಾಯ, ಜಾತಿ ಮತ್ತು ಪ್ರವರ್ಗ ಪ್ರಮಾಣ ಪತ್ರಗಳ ಬಳಕೆ ಅವಧಿ ಒಂದು ವರ್ಷಕ್ಕೆ ಸೀಮಿತವಾಗಿತ್ತು. ಅದನ್ನು ವಿಸ್ತರಿಸಲು ಈಗಾಗಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಳಕೆ ಅವಧಿಯ ವಿಸ್ತರಣೆಯನ್ನು  ಪ್ರಮಾಣ ಪತ್ರಗಳಲ್ಲೇ ಮುದ್ರಿಸಲಾಗುವುದು' ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆದಾಯ, ಜಾತಿ ಮತ್ತು ಪ್ರವರ್ಗ ಪ್ರಮಾಣ ಪತ್ರಗಳ ಮೂಲ ಪ್ರತಿಗಳ ಬದಲಿಗೆ ಛಾಯಾಪ್ರತಿಗಳಿಗೆ ಮಾನ್ಯತೆ ನೀಡಲಾಗುವುದು. ಈ ಅಂಶವನ್ನು ಪ್ರಮಾಣಪತ್ರದಲ್ಲಿ ಮುದ್ರಿಸಲಾಗುವುದು. ಉದ್ಯೋಗಕ್ಕಾಗಿ ಪಡೆಯುವ ಜಾತಿ ಹಾಗೂ ಪ್ರವರ್ಗ ಪ್ರಮಾಣ ಪತ್ರಗಳನ್ನು ಮಾತ್ರ ಆಯಾ ಸಂದರ್ಭದಲ್ಲಿ ಪಡೆಯಬೇಕಾಗುತ್ತದೆ ಎಂದರು.

ಜಾತಿ, ಪ್ರವರ್ಗ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಿದ ತಕ್ಷಣವೇ ವಿತರಿಸುವಂತಹ `ಓವರ್ ದಿ ಕೌಂಟರ್ ಸರ್ವಿಸ್' ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಜಿಲ್ಲೆಯ ಎಲ್ಲ ಜನರ ಜಾತಿ, ಪ್ರವರ್ಗ ಹಾಗೂ ಆದಾಯಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತದೆ. ಅರ್ಜಿ ಬಂದ ತಕ್ಷಣ ಸ್ಥಳದಲ್ಲೇ ಪರಿಶೀಲಿಸಿ, ಪ್ರಮಾಣಪತ್ರ ಮುದ್ರಿಸಿ ವಿತರಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯೋಜನೆ  ಜಾರಿಗೊಳಿಸಲಾಗಿದೆ ಎಂದು ಭೂಮಾಪನ ಮತ್ತು ಭೂ ದಾಖಲೆಗಳ ಆಯುಕ್ತ ವಿ. ಪೊನ್ನುರಾಜ್ ತಿಳಿಸಿದರು
.
ದೂರು ಪರಿಹಾರ ಯೋಜನೆ: ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಗೆ ಸಂಬಂಧಿಸಿದ ದೂರುಗಳ ಪರಿಹಾರಕ್ಕೆ ಯೋಜನೆಯೊಂದನ್ನು ರೂಪಿಸಲಾಗಿದೆ. ಭೂಮಾಪನ, ಭೂ ದಾಖಲೆಗಳ ತಿದ್ದುಪಡಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರವಾಣಿ ಮೂಲಕವೇ ದೂರು ನೀಡಬಹುದು. ಇದಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗುವುದು. ಅಲ್ಲಿ ದೂರುಗಳನ್ನು ಧ್ವನಿ ಮುದ್ರಿಸಿಕೊಳ್ಳಲಾಗುವುದು. ಅದರ ಆಧಾರದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT