ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ-ಮತ ಭೇದವಿಲ್ಲದ ಮಹಾ ಶಿವರಾತ್ರಿ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶ್ರೀ ಖರ ನಾಮ ಸಂವತ್ಸರದ ಮಾಘ ಕಷ್ಣ ಚತುರ್ದಶಿ - 20 ಫೆಬ್ರವರಿ 2012
ಮಾಘ ಬಹುಳ ಚತುರ್ದಶಿ, ಮಹಾ ಶಿವರಾತ್ರಿ. ಶಿವನ ಆರಾಧನೆಗೆ ಪ್ರಶಸ್ತ ಮುಹೂರ್ತ. ಈ ಮಹಾ ಶಿವರಾತ್ರಿಯು ಬಹಳ ಶ್ರೇಷ್ಠವಾದುದು.

ಮಾಘ ಕಷ್ಣ ಚತುರ್ದಶ್ಯಾಂ ಆದಿ ದೇವೋ ಮಹಾನಿಶಿ
ಶಿವಲಿಂಗತಯೋದ್ಭೂತಃ ಕೋಟಿ ಸೂರ್ಯಸಮಪ್ರಭಃ
ತತ್ಕಾಲವ್ಯಾಪಿನೀ ಗ್ರಾಹ್ಯಾ ಶಿವರಾತ್ರಿ ವ್ರತೇ ತಿಥಿಃ

ಎಂಬ ಈಶಾನ್ಯ ಸಂಹಿತೆಯ ವಾಕ್ಯದಂತೆ ಮಹಾಶಿವರಾತ್ರಿಯಂದು ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ ಉದ್ಭವಿಸಿದನೆಂದು ತಿಳಿದು ಬರುತ್ತದೆ. ಇದಲ್ಲದೆ ಶಿವರಾತ್ರಿ ಶಿವನು ಹಾಲಾಹಲ ವಿಷ ಕುಡಿದ ದಿನವೆಂತಲೂ, ತಾಂಡವ ನತ್ಯ ಮಾಡಿದ ದಿನವೆಂತಲೂ ಹೇಳುತ್ತಾರೆ.

ಇಂದು, ವಿಶ್ವದ ಎಲ್ಲಾ ಶಿವಾಲಯಗಳಲ್ಲಿ, ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ, ಗೋಕರ್ಣ, ಯಾಣ, ಕಾಶಿ, ರಾಮೇಶ್ವರ ಮುಂತಾದ ತೀರ್ಥ ಕ್ಷೇತ್ರಗಳಲ್ಲಿ, ಲಕ್ಷ-ಲಕ್ಷ ಜನರು ಪೂಜೆ ಪುರಸ್ಕಾರ ಮಗ್ನರಾಗಿರುತ್ತಾರೆ.

ಶಿವರಾತ್ರಿ ಆಚರಣೆಯ ವಿಧಾನ: ಈ ದಿನ ಅರುಣೋದಯಕ್ಕೆ ಎದ್ದು ಸ್ನಾನ ಮಾಡಿ (ನದಿ, ಸಮುದ್ರ, ಸಂಗಮ ಸ್ನಾನ ಅತಿ ಶ್ರೇಷ್ಠವಾದುದು) ಶುಭ್ರ ವಸ್ತ್ರವನ್ನುಟ್ಟು  ಸಮಸ್ತ ಪಾಪ ನಿವಾರಣೆಗಾಗಿಯೂ, ಜ್ಞಾನ, ಮೋಕ್ಷ ಪ್ರಾಪ್ತಿಗಾಗಿಯೂ ಶಿವರಾತ್ರಿ ವ್ರತ ಆಚರಿಸುತ್ತೇನೆ  ಎಂದು ಸಂಕಲ್ಪ ಮಾಡಬೇಕು.

ತ್ರಯೋದಶಿಯಲ್ಲಿ ಒಪ್ಪತ್ತು ಊಟ, ಚತುರ್ದಶಿಯಂದು ಪೂರ್ಣ ನಿರಾಹಾರವಾಗಿದ್ದು, ಅಮಾವಾಸ್ಯೆಯಂದು ಪ್ರಸಾದ ಸ್ವೀಕರಿಸುವ ಮೂಕ ವ್ರತ ಸಂಪೂರ್ಣವನ್ನು ಮಾಡುತ್ತಾರೆ. ವಯೋವೃದ್ಧರು, ರೋಗಿಗಳು, ಸಣ್ಣ ಮಕ್ಕಳಾಗಿದ್ದಲ್ಲಿ ಕ್ಷೀರಾಹಾರ ಅಥವಾ ಫಲಾಹಾರ ಸ್ವೀಕರಿಸಬಹುದು.

ಪ್ರದೋಷ ಕಾಲಕ್ಕೆ ಶಿವಾಲಯಕ್ಕೆ ಹೋಗಿ ರಾತ್ರಿ ನಾಲ್ಕೂ ಯಾಮಗಳಲ್ಲೂ ರುದ್ರಾಭಿಷೇಕ ಪೂಜೆ, ಹರಿಕಥೆ, ಸತ್ಸಂಗಾದಿಗಳಲ್ಲಿ ಮಗ್ನರಾಗಬೇಕು.

ಶಿವ ಪೂಜೆಗೆ ಜಾತಿ-ಮತ, ಸ್ತ್ರೀ ಪುರುಷ ಭೇದವಿಲ್ಲ. ಎಂದಿದೆ ಈಶಾನ್ಯ ಸಂಹಿತೆ. ಸರ್ವಪಾಪಗಳನ್ನೂ ದೂರಮಾಡುವ ಈ ವ್ರತವನ್ನು ಜಾತಿ-ಮತ, ಸ್ತ್ರೀ-ಪುರುಷ ಎಂಬ ಭೇದವಿಲ್ಲದೆ ಅನನ್ಯ ಭಕ್ತಿಯಿಂದ ಧ್ಯಾನಿಸಿ ಜಾಗರಣೆ, ಉಪವಾಸ, ಅರ್ಚನೆ, ಅಭಿಷೇಕ ಶಿವ ಸಂಕೀರ್ತನಾದಿಗಳ ಮೂಲಕ ಮಹಾ ಶಿವರಾತ್ರಿಯನ್ನು ಆಚರಿಸುತ್ತಾರೆ.

ಪುರಾಣ ಪುಣ್ಯಕಥೆಗಳಲ್ಲಿ ತಿಳಿಸಿದಂತೆ ದೇವ ಲೋಕದ ಅಧಿಪತಿಗಳು, ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರಲ್ಲಿ ಯಾರು ಶ್ರೇಷ್ಠರು ಎಂದು ವಾದ-ವಿವಾದಕ್ಕೆ ಇಳಿದಾಗ ಅವರ ಮಧ್ಯ ಒಂದು ಲಿಂಗಾಕಾರದ ಕಂಬವು ಪ್ರಕಾಶಮಾನವಾಗಿ ಎದ್ದು ನಿಂತಿತು. 

ಒಂದು ಅಗೋಚರ ವಾಣಿಯು ಈ ಲಿಂಗದ ಆರಂಭ ಅಥವಾ ಕೊನೆಯ ಭಾಗವನ್ನು ಯಾರು ಕಂಡು ಹಿಡಿಯುವರೋ ಅವರೇ ಶ್ರೇಷ್ಠರು ಎಂದು ತಿಳಿಸಿದಾಗ ಅವರಲ್ಲಿ ಯಾರೂ ಕೂಡ ಅದನ್ನು ತಿಳಿಯಲಾಗದೇ, ಈ ಲಿಂಗಾಕಾರದಲ್ಲಿದ್ದ ಶಿವನನ್ನೇ ಶ್ರೇಷ್ಠನೆಂದು ಒಪ್ಪಿದರು.
 
ಇದು ಶಿವನೆಂದು ಪೂಜಿಸುವ ಲಿಂಗದ ಉದ್ಭವದ ಕಥೆ.ಮಾಘಮಾಸದ ಚತುರ್ದಶಿಯಂದು ಬರುವ ಈ ಮಹಾಶಿವರಾತ್ರಿ ಸಮಸ್ತರಿಗೂ ಸನ್ಮಂಗಳವನ್ನು ಉಂಟುಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT