ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಮೀಸಲಾತಿಯ ಟೌನ್‌ಶಿಪ್

Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಿರ್ದಿಷ್ಟ ಜಾತಿಗಳಿಗೆ ಸೀಮಿತವಾಗಿರುವ ವಸತಿ ಪ್ರದೇಶಗಳು ವರ್ತಮಾನದಲ್ಲಿ ಸೃಷ್ಟಿಯಾಗುತ್ತಿಲ್ಲ ಎಂಬ ಗ್ರಹಿಕೆಯನ್ನು ಸುಳ್ಳಾ ಗಿಸುವಂತೆ  ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮತ್ತು ಗುಡಿಬಂಡೆ ಬಳಿ ಎರಡು ಜಾತಿ ಆಧಾರಿತ ಟೌನ್‌ಶಿಪ್ ನಿರ್ಮಾಣ ಆರಂಭ ವಾಗಿದೆ. ಈಗಾಗಲೇ ಆಸಕ್ತರು ಅರ್ಜಿ ಸಲ್ಲಿಸಿದ್ದಾರೆ.

ಬಾಗೇಪಲ್ಲಿಯಲ್ಲಿ ಅಂದರೆ ಬೆಂಗಳೂರಿನಿಂದ ಸುಮಾರು 90 ಕಿ.ಮೀ.ದೂರದಲ್ಲಿ ವಿಶ್ವಗುರು ಬಸವೇಶ್ವರ ದಿವ್ಯಧಾಮ ಸಂಸ್ಥೆಯು `ಶರಣಾರ್ತಿ ಸಂಗಮ'ದ ಜೊತೆಗೂಡಿ `ರೇಣುಕಾ-ಬಸವೇಶ್ವರ ದಿವ್ಯಧಾಮ' ಎಂಬ ಟೌನ್‌ಶಿಪ್ ನಿರ್ಮಿಸುತ್ತಿದ್ದರೆ, ಸನಾತನ ಧರ್ಮ ಪರಿರಕ್ಷಣಾ ಟ್ರಸ್ಟ್ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ಕಿ.ಮೀ.ದೂರದಲ್ಲಿರುವ ಗುಡಿಬಂಡೆ ತಾಲ್ಲೂಕಿನ ವ್ಯಾಪ್ತಿಯಲ್ಲಿ `ಶಂಕರ ಅಗ್ರಹಾರಂ' ಎಂಬ ಟೌನ್‌ಶಿಪ್ ನಿರ್ಮಾಣಕ್ಕೆ ಮುಂದಾಗಿದೆ.

ಇವೆರಡೂ ಟ್ರಸ್ಟ್‌ಗಳು ತಮ್ಮದೇ ಆದ ವೆಬ್‌ಸೈಟ್‌ಗಳನ್ನು ಹೊಂದಿದ್ದು, ಟೌನ್‌ಶಿಪ್‌ಗಳ ಕುರಿತು ಸಮಗ್ರ ವಿವರಣೆ ನೀಡಿವೆ. ಟೌನ್‌ಶಿಪ್ ನಿರ್ಮಾಣ ಹೆಮ್ಮೆಯ ಯೋಜನೆ ಯೆಂದು ಹೇಳಿಕೊಂಡಿರುವ ಎರಡೂ ಟ್ರಸ್ಟ್‌ಗಳು ಈಗಾಗಲೇ ನೂರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿವೆ. ರೇಣುಕಾ ಬಸವೇಶ್ವರ ದಿವ್ಯಧಾಮದಲ್ಲಿ ನಿವೇಶನ ಪಡೆದು ಮನೆಕಟ್ಟುವುದಕ್ಕೆ ಬೇಕಿರುವ ಮುಖ್ಯ ಮತ್ತು ಏಕೈಕ ಅರ್ಹತೆ ಜಾತಿಯಲ್ಲಿ ಲಿಂಗಾಯತ ರಾಗಿರುವುದು. ಹಾಗೆಯೇ ಶಂಕರ ಅಗ್ರಹಾರಂನಲ್ಲಿ ನಿವೇಶನಗಳು ಕಡ್ಡಾಯವಾಗಿ ಬ್ರಾಹ್ಮಣರಿಗೆ ಮೀಸಲು.

ವಿಶ್ವಗುರು ಬಸವೇಶ್ವರ ದಿವ್ಯಧಾಮ ಸಂಸ್ಥೆಯ ಟ್ರಸ್ಟಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಕಲ್ಯಾಣ್ ಅವರು ಹೇಳುವಂತೆ  `ಹೆಸರಿಗೆ ಇದನ್ನು ಟೌನ್‌ಶಿಪ್ ಎಂದು ಕರೆದರೂ ಇಡೀ ಪ್ರದೇಶವನ್ನು ನಾವು `ರೇಣುಕಾ-ಬಸವೇಶ್ವರ ದಿವ್ಯಧಾಮ' ಎಂಬ ಪವಿತ್ರ ಧಾರ್ಮಿಕ ಕ್ಷೇತ್ರವನ್ನು ನಿರ್ಮಿಸುತ್ತೇವೆ. ಅಲ್ಲಿ ಜನವಸತಿ ಇರುವುದಲ್ಲದೇ ಧಾರ್ಮಿಕ ಕ್ಷೇತ್ರದ ವಾತಾವರಣವೂ ಇರುತ್ತದೆ.

ಒಂದೇ ಜಾತಿ ಸಮುದಾಯದವರ ಟೌನ್‌ಶಿಪ್ ನಿರ್ಮಾಣ ಮಾಡುವುದರಿಂದ ನಾವು ಯಾವ ಅಪರಾಧವನ್ನೂ ಮಾಡುತ್ತಿಲ್ಲ. ಒಂದೇ ಜಾತಿಯವರು ಒಂದು ಕಡೆಯಿದ್ದರೆ, ಅದರಲ್ಲಿ ತಪ್ಪೇನಿದೆ? ಬೇರೆ ಬೇರೆ ಜಾತಿ-ಧರ್ಮದವರು ತಮ್ಮದೇ ಆದ ಬಡಾವಣೆಗಳನ್ನು ಹೊಂದಿರು ವಾಗ, ನಮ್ಮದೇ ಆದ ಟೌನ್‌ಶಿಪ್ ಹೊಂದಿವು ದರಲ್ಲಿ ದೋಷವೇನಿದೆ. ಟೌನ್‌ಶಿಪ್‌ನಲ್ಲಿ 2ರಿಂದ 3 ಸಾವಿರ ಕುಟುಂಬಗಳಿಗೆ ನಿವೇಶನ ಇಲ್ಲವೇ ಮನೆ ಲಬ್ಯವಾಗುತ್ತದೆ'

`ಇದು ಕಡ್ಡಾಯವಾಗಿ ನಮ್ಮ ಲಿಂಗಾಯಿತ ಜಾತಿಯವರಿಗೆ ಮಾತ್ರ. ಲಿಂಗಾಯಿತ ಉಪಜಾತಿ ಯವರಿಗೆ ಇಲ್ಲಿ ವಾಸಿಸಲು ಅವಕಾಶ ಇರುತ್ತದೆ. ನಿವೇಶನ ಅಥವಾ ಮನೆ ಬೇಕಾದವರು ಆರಂಭದಲ್ಲಿ ಜಾತಿಗೆ ಸಂಬಂಧಿಸಿದಂತೆ ದಾಖಲೆ ಪತ್ರ ನೀಡಿದರೆ ಮತ್ತು ಅದೇ ಜಾತಿಯವರೆಂದು ಸಾಬೀತು ಪಡಿಸಿದರೆ ಸಾಕು. ನಂತರದ ದಿನಗಳಲ್ಲಿ ಅವರ ಜೀವನ ಪದ್ಧತಿ, ಚಲನ-ವಲನಗಳ ಆಧಾರಗಳ ಮೇಲೆ ಅವರು ನಮ್ಮ ಜಾತಿಯವರು ಎಂದು ದೃಢಪಡುತ್ತದೆ. ಅವರು ಆಯಾ ಮಠದ ಭಕ್ತರು ಆಗಿರುವುದರಿಂದ ಅವರ ಗುರುತು ಮತ್ತು ಪರಿಚಯವೂ ಸುಲಭವಾಗುತ್ತದೆ.

ಒಂದು ವೇಳೆ, ಅವರು ಅನ್ಯಜಾತಿಯವರಾಗಿದ್ದರೆ, ವಿಷಯವನ್ನು ಟ್ರಸ್ಟ್ ಗಮನಕ್ಕೆ ತರಲಾಗುವುದು. ಟ್ರಸ್ಟ್‌ನ ಸದಸ್ಯರು ಅಗತ್ಯ ಪರಿಶೀಲನೆ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಅವರನ್ನು ಟೌನ್‌ಶಿಪ್‌ನಿಂದ ಹೊರ ಹಾಕಲೂಬಹುದು ಅಥವಾ ಬೇರೆ ರೀತಿಯ ಕ್ರಮವನ್ನೂ ಸಹ ತೆಗೆದು ಕೊಳ್ಳಬಹುದು' ಎಂದು ಕಲ್ಯಾಣ್ ಹೇಳುತ್ತಾರೆ.

`ಈ ಟೌನ್‌ಶಿಪ್‌ಗೆ ಸರ್ಕಾರ ಅಥವಾ ಇನ್ನಿತರ ಸಂಘಸಂಸ್ಥೆಗಳಿಂದ ಯಾವುದೇ ರಿತಿಯ ಅಡ್ಡಿ-ಆತಂಕ ಬರುವುದಿಲ್ಲ ಎಂಬ ವಿಶ್ವಾಸವಿದೆ. ಈ ಟೌನ್‌ಶಿಪ್ ನಿರ್ಮಾಣದ ಹಿಂದೆ ತುಮಕೂರಿನ ಸಿದ್ದಗಂಗಾಮಠದ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದವಿದೆ.  ಅಲ್ಲದೇ ಜಾತಿ ಸಮುದಾಯದ ಪ್ರಮುಖರೆಲ್ಲ, ಟೌನ್‌ಶಿಪ್ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ನಮ್ಮ ಗುರಿಯಲ್ಲಿ ಯಶಸ್ವಿ ಯಾಗುತ್ತೇವೆ ಎಂಬ ವಿಶ್ವಾಸವಿದೆ. ಮುಂದಿನ ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಟೌನ್‌ಶಿಪ್ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಳ್ಳಲಿದೆ' ಎಂಬ ಭರವಸೆ ಕಲ್ಯಾಣ್ ಅವರದ್ದು.

ಸನಾತನ ಧರ್ಮ ಪರಿರಕ್ಷಣಾ ಟ್ರಸ್ಟ್ ಟೌನ್‌ಶಿಪ್ ಮೂಲಕ `ಶಂಕರ ಅಗ್ರಹಾರಂ' ಎಂಬ ಗ್ರಾಮವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಬ್ರಾಹ್ಮಣ ಅಗ್ರಹಾರ ಸಂಪ್ರದಾಯವನ್ನು ಉಳಿಸಿ-ಬೆಳೆಸಬೇಕೆಂಬ ಉದ್ದೇಶ ಹೊಂದಿರುವ ಈ ಟ್ರಸ್ಟ್‌ನ ಸದಸ್ಯರು ವೇದಶಾಲೆ, ಯಜ್ಞಶಾಲೆ ಮತ್ತು ಗೋಶಾಲೆಯನ್ನು ಟೌನ್‌ಶಿಪ್ ಆವರಣದಲ್ಲಿ ನಿರ್ಮಿಸಲು ಬಯಸಿದ್ದಾರೆ. ಇಲ್ಲಿಯೂ ಕೂಡ ಬ್ರಾಹ್ಮಣರು ಮತ್ತು ಆ ಸಮುದಾಯದ ಉಪಜಾತಿ ಯವರಿಗೆ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶವಿದೆ.

`ಗುರು ಶಂಕರಾಚಾರ್ಯರ ಕಾಲದ ಅಗ್ರಹಾರದ ವಾತಾವರಣವನ್ನು ಪುನಃ ಸ್ಥಾಪಿ ಸಲು ಉದ್ದೇಶಿಸಿದ್ದೇವೆ. ಬ್ರಾಹ್ಮಣ ಸಮುದಾಯದ ಮಹತ್ವವನ್ನು ಯಥಾರೀತಿ ಕಾಪಾಡುವ ಮತ್ತು ಆಚರಣೆಯನ್ನು ಪರಿಪಾಲಿಸುವ ಉದ್ದೇಶದಿಂದ `ಶಂಕರ ಅಗ್ರಹಾರಂ'ನಲ್ಲಿ ಹೆಲ್ತ್ ಸಿಟಿ ನಿರ್ಮಿಸುವುದರ ಜೊತೆಗೆ ವೃದ್ಧಾಶ್ರಮ ಮುಂತಾದ ಸೌಲಭ್ಯ ಕಲ್ಪಿಸಲಾಗುವುದು. ವೈದಿಕ ಆಚರಣೆ ಪರಿಪಾಲನೆಯಾಗುವುದರ ಜೊತೆಗೆ ನಮ್ಮದೇ ಆದ ಆಚಾರ-ವಿಚಾರಗಳನ್ನು ಎತ್ತಿ ಹಿಡಿಯಲು ಮತ್ತು ಕಾಪಾಡಲು ಸಹಕಾರಿ ಯಾಗುತ್ತದೆ. ವೈದಿಕ ಗ್ರಾಮದ ಮಾದರಿಯಲ್ಲಿ ಟೌನ್‌ಶಿಪ್ ನಿರ್ಮಾಣಗೊಳ್ಳುತ್ತದೆ' ಎಂದು ಟ್ರಸ್ಟ್‌ನ ವ್ಯವಸ್ಥಾಪಕ ಸತೀಶ್ ಹೇಳುತ್ತಾರೆ.

`ನಮ್ಮ ಟ್ರಸ್ಟ್‌ನ ಮುಖ್ಯಸ್ಥ ಡಾ. ವಿ.ಪಿ.ರಾವ್ ಅವರು ಶೃಂಗೇರಿ ಶಾರದಾಪೀಠದ ಗುರುಗಳ ಮಾರ್ಗದರ್ಶನದಲ್ಲಿ ಟೌನ್‌ಶಿಪ್ ನಿರ್ಮಿಸು ತ್ತಿದ್ದಾರೆ. ಅರ್ಜಿ ಸ್ವೀಕರಿಸುವ ಮುನ್ನ ಅರ್ಜಿ ದಾರರು ಬ್ರಾಹ್ಮಣರು ಹೌದೇ ಎಂಬುದನ್ನು  ಪರಿಶೀಲಿಸುತ್ತೇವೆ. ಕುಟುಂಬದ ಹಿನ್ನೆಲೆ, ಉದ್ಯೋಗ, ಜೀವನ ಪದ್ಧತಿ ಮುಂತಾದವುಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತೇವೆ. ಅರ್ಜಿ ದಾರರು ಬ್ರಾಹ್ಮಣರೇ ಎಂಬುದು ಖಚಿತವಾದ ನಂತರವಷ್ಟೇ ಅವರ ಅರ್ಜಿಯನ್ನು ಮಂಜೂರು ಮಾಡುತ್ತೇವೆ.

ಒಂದು ವೇಳೆ ಬೇರೆ ಜಾತಿಯವರು ಟೌನ್‌ಶಿಪ್‌ನಲ್ಲಿ ನುಸುಳಿಕೊಂಡು ವಂಚಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ಅವರನ್ನು ಟೌನ್‌ಶಿಪ್‌ನಿಂದ ಹೊರಹಾಕಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ' ಎಂದು ಅವರು ಹೇಳುತ್ತಾರೆ.

`ಅನ್ಯ ಜಾತಿ ಸಮುದಾಯದವರು ನಮಗೆ ಮೋಸ ಮಾಡದ ರೀತಿಯಲ್ಲಿ ಮಾನದಂಡಗಳನ್ನು ಸಿದ್ಧ ಪಡಿಸಿದ್ದೇವೆ. ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗಲೇ ಅವರು ಬ್ರಾಹ್ಮಣರು ಹೌದೇ ಅಥವಾ ಇಲ್ಲವೇ ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಲಾಗದಿದ್ದರೆ ಮತ್ತು ಕೆಲವಾರು ಪ್ರಶ್ನೆಗಳಿಗೆ ಅವರು ಉತ್ತರ ನೀಡಲು ಸಾಧ್ಯವಾಗದಿದ್ದರೆ, ಅವರು ಬ್ರಾಹ್ಮಣರಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಣ್ಣ ಅಳುಕು ಅಥವಾ ಸಂಶಯ ಬಂದರೂ ಟೌನ್‌ಶಿಪ್‌ನಲ್ಲಿ ಇರಲು ಅವಕಾಶ ಕೊಡುವುದಿಲ್ಲ' ಎಂದು ಅವರು ಸ್ಪಷ್ಟಪಡಿಸುತ್ತಾರೆ.

`ಒಕ್ಕಲಿಗರು, ದಲಿತರು ಮುಂತಾದವರು ತಮ್ಮ ಜಾತಿ ಮತ್ತು ತಮ್ಮ ಪ್ರಮುಖರ ಹೆಸರುಗಳಲ್ಲಿ ಭವನ ಅಥವಾ ಬಡಾವಣೆ ಕಟ್ಟಿಕೊಳ್ಳಬಹುದು. ಬ್ರಾಹ್ಮಣ ಸಮುದಾಯ ದವರು ಯಾಕೆ ಟೌನ್‌ಶಿಪ್ ನಿರ್ಮಿಸಿಕೊಳ್ಳ ಬಾರದು? ನಮ್ಮಲ್ಲೂ ಹಣ ಮತ್ತು ಸಂಪತ್ತಿದೆ. ಟೌನ್‌ಶಿಪ್ ಹೆಸರಿನಲ್ಲಿ ವಹಿವಾಟು ಮಾಡುವ ಅಥವಾ ಇನ್ನೊಬ್ಬರಿಗೆ ವಂಚಿಸುವ ದುರುದ್ದೇಶ ನಮಗಿಲ್ಲ.

ಲೆಕ್ಕಪತ್ರ ಮತ್ತು ಇತರ ವಹಿವಾಟು ಎಲ್ಲವೂ ಪಾರದರ್ಶಕ ವಾಗಿರುತ್ತದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಎಷ್ಟೆಲ್ಲ ಅಡಚಣೆ ಮಾಡಿದರೂ ಟೌನ್‌ಶಿಪ್ ನಿರ್ಮಾಣದಿಂದ ನಾವು ಹಿಂದೆ ಸರಿಯುವುದಿಲ್ಲ' ಎನ್ನುತ್ತಾರೆ ಸತೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT