ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಸಾಮಾಜಿಕ ಸಂಸ್ಥೆಯಾಗಬೇಕು

Last Updated 20 ಜನವರಿ 2011, 6:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾತಿ ಎನ್ನುವುದು ಸಾಮಾಜಿಕ ಸಂಸ್ಥೆಯಾದಾಗ ಮಾತ್ರ ಆರೋಗ್ಯಪೂರ್ಣವಾಗಿರುತ್ತದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಡಾ.ಶಶಿಕಲಾ ಎಂ.ಎ. ಊರಣ್ಕರ್ ನುಡಿದರು.ಬುಧವಾರ ಪದವಿಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಸಮಾಜಶಾಸ್ತ್ರ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸನ್ನಿವೇಶದಲ್ಲಿ ಜಾತಿ ಸಾಮಾಜಿಕ ಸಂಸ್ಥೆಯಾಗಿ ಉಳಿದಿಲ್ಲ. ಜಾತಿ ಎನ್ನುವುದು ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕ ಸಂಸ್ಥೆಯಾಗಿ ಉಳಿದಿರುವುದರಿಂದ ಮಾರಕವಾಗಿ ಪರಿಣಮಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಾತಿ ಕುರಿತು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿದ ನ್ಯಾಯಾಧೀಶರು, ಜಾತಿಗೆ ಕಣ್ಣಿಲ್ಲ. ಆದರೆ, ಮಾತನಾಡುತ್ತದೆ. ಬಾಯಿ ಇಲ್ಲ. ಆದರೆ ಮಾತನಾಡುತ್ತದೆ. ತಲೆ ಇಲ್ಲ. ಆದರೂ ಲೆಕ್ಕಾಚಾರ ಹಾಕುತ್ತದೆ. ಸಂವಿಧಾನದ ಜಾತ್ಯತೀತ ಕಲ್ಪನೆ ತಿಳಿದುಕೊಳ್ಳಬೇಕಾದರೆ ಜಾತಿಯ ಕರಾಳ ಮುಖಗಳ ಸತ್ಯವೂ ಗೊತ್ತಿರಬೇಕು ಎಂದು ನುಡಿದರು.
ಜಾತಿವಾರು ಜನಗಣತಿ ಅಗತ್ಯವೇ ಎನ್ನುವ ಪ್ರಶ್ನೆಯೂ ಸಹ ಕಾಡುತ್ತಿದೆ. 

ದೇಶದಲ್ಲಿ ವಿಭಿನ್ನತೆ ಇರುವುದು ಸತ್ಯ. ಹಲವಾರು ಜಾತಿಗಳಿವೆ. ವಿಭಿನ್ನತೆಯಲ್ಲಿ ಏಕತೆ ಸಾಧಿಸಬೇಕು. ಆದರೆ, ನಾವೆಲ್ಲರೂ ಒಂದೇ ಜಾತಿ ಎಂದು ಪರಿಗಣಿಸಬಹುದೇ? ಒಂದೇ ಮನೆಯಲ್ಲಿನ ಒಂದೇ ಜಾತಿಯ, ಒಂದೇ ಕುಟುಂಬದಲ್ಲಿನ ಸದಸ್ಯರ ಸಾವಿರಾರು ವ್ಯಾಜ್ಯಗಳು ನ್ಯಾಯಾಲಯದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಜನಗಣತಿಯಲ್ಲಿ ಜಾತಿ ಪರಿಗಣಿಸದೇ ಹೋದರೆ ವಸ್ತು ಸ್ಥಿತಿಯಿಂದ ಪಲಾನಯವಾದವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾಜ ಎನ್ನುವುದು ಮನುಷ್ಯನ ಸಂಬಂಧಗಳ ನಡುವಿನ ಶಾಸ್ತ್ರೀಯವಾಗಿ ನೋಡುವ ಅಧ್ಯಯನ. ಮಾನವೀಯ ಸಂಬಂಧಗಳಿದ್ದರೆ ಸಮಾಜಶಾಸ್ತ್ರದ ವ್ಯಾಪ್ತಿಗೆ ಸೇರುತ್ತದೆ. ಸಂಬಂಧಗಳಲ್ಲಿ ವ್ಯವಹಾರ ಕುದುರಿದರೆ ಅರ್ಥಶಾಸ್ತ್ರದ ವಿಷಯದ ವ್ಯಾಪ್ತಿಗೆ ಬರುತ್ತದೆ. ಆದರೆ, ಇಂದು ಸಂಬಂಧಗಳು ಕಲಸುಮೇಲುಗರವಾಗುತ್ತಿವೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಸಂಬಂಧಗಳು ಕುಸಿಯುತ್ತಿರುವುದರಿಂದ ಸಮಾಜ ಅಧೋಗತಿಗೆ ತಲುಪುತ್ತಿದೆ ಎಂದು ನುಡಿದರು.

ವೇದಿಕೆ ಅಧ್ಯಕ್ಷ ಬಿ.ಆರ್. ಶಿವಕುಮಾರ್ ಮಾತನಾಡಿ, ಪಿಯು ಫಲಿತಾಂಶ ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ವೇದಿಕೆ ಸ್ಥಾಪಿಸಲಾಗಿದೆ. ಸಮಾಜವನ್ನು ವೈಜ್ಞಾನಿಕವಾಗಿ ನೋಡುವ ಮತ್ತು ಸಂಬಂಧಗಳನ್ನು ಕಟ್ಟಿಕೊಡುವ ವಿಷಯವಾಗಿರುವ ಸಮಾಜಶಾಸ್ತ್ರ ಎಲ್ಲವನ್ನೂ ಒಳಗೊಂಡಿದೆ. ಯಾವುದೇ ಒಂದು ವಿಷಯಕ್ಕೆ ಸೀಮಿತವಾಗಿಲ್ಲ ಎಂದು ಅಭಿಪ್ರಾಯಪಟ್ಟರು.

‘ಜಾತಿವಾರು ಜನಗಣತಿ ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡಿದ ‘ಪ್ರಜಾವಾಣಿ’ಯ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು, ಜಾತಿವಾರು ಜನಗಣತಿಯಿಂದ ಸಮಾಜ ಒಡೆಯುತ್ತದೆ ಎನ್ನುವುದು ಆಶ್ಚರ್ಯಕರ ಸಂಗತಿ. ಜಾತಿವಾರು ಜನಗಣತಿಯನ್ನು ಎಲ್ಲ ಆಯಾಮಗಳೊಂದಿಗೆ ಮಾಡಬೇಕು. ಜಾತಿವಾರು ಜನಗಣತಿಯಿಂದ ಮೀಸಲಾತಿ ಹೆಚ್ಚುತ್ತದೆ ಎನ್ನುವದು ಸಹ ತಪ್ಪುಕಲ್ಪನೆ ಮತ್ತು ಅಜ್ಞಾನ. ಶೇ. 50ರಷ್ಟು ಮೀಸಲಾತಿಯನ್ನು ಹೆಚ್ಚಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಮೀಸಲಾತಿಗೂ ಜಾತಿವಾರು ಜನಗಣತಿಗೂ ಹೋಲಿಕೆ ಮಾಡುವುದು ಸರಿ ಅಲ್ಲ ಎಂದು ನುಡಿದರು.

ಸರ್ಕಾರಕ್ಕೆ ಜಾತಿ ಆಧಾರಿತ ಯೋಜನೆಗಳಿವೆ. ಆದರೆ, ಜಾತಿಗಳ ಬಗ್ಗೆ ಸಮಗ್ರವಾದ ವಿವರ ಇಲ್ಲ. ಸಮಗ್ರ ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷೆ ಇಲ್ಲ. ಈ ಕಾರಣದಿಂದಲೇ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪದೇ ವಿಫಲವಾಗುತ್ತಿವೆ ಎಂದರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪ್ರಶ್ನೆ ಬಂದಾಗ ಸುಪ್ರೀಂ ಕೋರ್ಟ್ ಜಾತಿಗಳ ವೈಜ್ಞಾನಿಕ ಸಮೀಕ್ಷೆ ನಡೆದಿದೆಯೇ ಎಂದು ಸರ್ಕಾರಕ್ಕೆ ಕೇಳಿದಾಗ ತಬ್ಬಿಬ್ಬಾಗುವ ಪರಿಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಾತಿವಾರು ಜನಗಣತಿ ಮಾಡಬೇಕಾಯಿತು. ಹಿಂದುಳಿದ ಜಾತಿಗಳಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಲು ಜಾತಿವಾರು ಜನಗಣತಿ ನಡೆಯಬೇಕಾಗಿದೆ ಎಂದು ಪ್ರತಿಪಾದಿಸಿದರು.

‘ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ’ ಕುರಿತು ಉಪನ್ಯಾಸ ನೀಡಿದ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಗಂಗಾಧರ್ ಹಿರೇಮಠ್, ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಿಸಲು ನಮ್ಮ ಮನೋಭಾವ ಬದಲಾಯಿಸಿಕೊಳ್ಳಬೇಕು. ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಭ್ರಷ್ಟಾಚಾರ ತೊಡೆದುಹಾಕಲು ಜನಾಂದೋಲನವಾಗಬೇಕು ಎಂದು ಅಭಿಪ್ರಾಯಪಟ್ಟರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರವೀಂದ್ರ ಆರ್. ಕೊಣ್ಣುರು, ವೇದಿಕೆ ಕಾರ್ಯಾಧ್ಯಕ್ಷ ಯಾದವರೆಡ್ಡಿ, ಪ್ರಧಾನ ಕಾರ್ಯದರ್ಶಿ ಎನ್.ಆರ್. ನಾಗರಾಜಪ್ಪ, ಖಜಾಂಚಿ ಕೆ. ತಿಮ್ಮಪ್ಪ ಹಾಜರಿದ್ದರು. ದೊಡ್ಡಯ್ಯ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT