ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಿಂತ ನೀತಿ ಮುಖ್ಯ: ಚಾರುಕೀರ್ತಿ ಭಟ್ಟಾರಕ

Last Updated 26 ಮಾರ್ಚ್ 2011, 8:50 IST
ಅಕ್ಷರ ಗಾತ್ರ

ಕುಂದಾಪುರ: ಅವಿಭಜಿತ ದ.ಕ ಜಿಲ್ಲೆಯಲ್ಲಿರುವ ವಿವಿಧ ಜಾತಿ-ಮತ-ಪಂಥಗಳ ಜನರಿಂದಾಗಿ ಈ ಪ್ರದೇಶ ದೇಶದ ಅಖಂಡತೆ ಹಾಗೂ ವಿವಿಧತೆಯಲ್ಲಿನ ಏಕತೆಗಾಗಿ ಮಾದರಿಯಾಗಿದೆ ಎಂದು ಮೂಡುಬಿದಿರೆ ಜೈನ ಮಠದ ಯತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹೇಳಿದರು.

ಇಲ್ಲಿಗೆ ಸಮೀಪದ ಬಸ್ರೂರಿನ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಶಿಖರ ಪ್ರತಿಷ್ಠೆಯ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಪ್ರವಚನ ನೀಡಿದರು.ಅವಿಭಜಿತ ದ.ಕ ಜಿಲ್ಲೆಯ 32 ಪ್ರಾಚೀನ ಪಟ್ಟಣಗಳಲ್ಲಿ ವಿಶಿಷ್ಠತೆಯನ್ನು ಹೊಂದಿದ್ದ ಬಸ್ರೂರು 64 ಮಠಗಳನ್ನು ಹೊಂದಿ ಚರಿತ್ರೆಕಾರರ ಮನಸ್ಪಟಲದಲ್ಲಿ ಅವಿಸ್ಮರಣೀಯವಾಗಿ ಉಳಿದಿದೆ. ರೋಮ್ ಚಕ್ರವರ್ತಿಯ ಆಡಳಿತ ಕಾಲದಲ್ಲಿಯೆ ಪ್ರಸಿದ್ದಿಯನ್ನು ಹೊಂದಿದ್ದ ಬಸ್ರೂರಿನ ನೆಲದಲ್ಲಿ ಉತ್ಪನನ ನಡೆಸಿದರೆ ನಮ್ಮ ದೇಶದ ಹರಪ್ಪನ ಕಾಲದ ಹಾಗೂ ಅದರ ಹಿಂದಿನ ನಾಗರೀಕತೆಗಳ ಅಧ್ಯಯನ ನಡೆಸುವ ಅವಕಾಶಗಳಿವೆ ಎಂದರು.

ಆಧ್ಯಾತ್ಮ ಎನ್ನುವುದೆ ಶ್ರೇಷ್ಠವಾದುದು. ಮನುಷ್ಯನಲ್ಲಿ ಆಧ್ಯಾತ್ಮ, ವಿವೇಕ ಹಾಗೂ ವೈರಾಗ್ಯ ಎರಡೂ ಅವಿನಾಭಾವವಾಗಿರಬೇಕು. ಜೀವನದ ಬೇರೆ ಘಟ್ಟಗಳಿದ್ದರೂ ವಾನಪ್ರಸ್ಥಾಶ್ರಮದ ಹಂತದಲ್ಲಿ ಪ್ರತಿಯೊಬ್ಬರಿಗೂ ಜೀವನ ಸಾಕ್ಷಾತ್ಕಾರಗೊಳ್ಳಲಿದೆ. ಅಧ್ಯಾತ್ಮ, ಶೃದ್ಧೆ, ನಿರಾಂಡಂಭರ, ಸಾತ್ವಿಕ, ಸನ್ಯಾಸ, ಹಾಗೂ ಜ್ಞಾನಾರ್ಜನೆಯ ಸಂಕೇತಗಳನ್ನು ಹೊಂದಿರುವ ಪರಶಿವನ ಆರಾಧನೆಯಿಂದ ಜೀವನ ಸಾಕ್ಷಾತ್ಕಾರಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದ ಅವರು ಈ ಕಾರಣಕ್ಕಾಗಿಯೇ ದೇಶದ ಬೇರೆ ಯಾವ ಕಡೆಯಲ್ಲಿಯೂ ಇಲ್ಲದೆ ಇರುವಷ್ಟು ಶಿವಾಲಯಗಳು ದ.ಕ ಜಿಲ್ಲೆಯಲ್ಲಿ ಇವೆ ಎಂದು ಹೇಳಿದರು.

ಪ್ರವರ್ಧಮಾನ ಕಾಲದಲ್ಲಿ ರಾಕ್ಷಸರು ಇಲ್ಲ, ಆದರೆ ರಾಕ್ಷಸೀ ಗುಣಗಳನ್ನು ಹೊಂದಿರುವವರು ಇದ್ದಾರೆ. ಯಾವ ಜಾತಿಯವನು ಎನ್ನುವುದಕ್ಕಿಂತ ಯಾವ ನೀತಿಯವನು ಎನ್ನುವುದು ಮುಖ್ಯ. ಅಸಾಮಾನ್ಯನು ಎನ್ನುವ ಅಹಂಕಾರ ಹಾಗೂ ಸಾಮಾನ್ಯ ಎನ್ನುವ ಕೀಳಿರಿಮೆ ಎರಡು ಕೂಡ ಸಲ್ಲದು ಎಂದು ಕಿವಿಮಾತು ಹೇಳಿದ ಸ್ವಾಮೀಜಿಯವರು ಧಾರ್ಮಿಕ ನಂಬಿಕೆ, ಶೃದ್ದತೆ ಹಾಗೂ ಆಧ್ಯಾತ್ಮದ ಅನುಭವಗಳು ಮನುಷ್ಯನನ್ನು ಯೋಗ್ಯರನ್ನಾಗಿ ರೂಪಿಸುತ್ತದೆ ಎಂದರು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಎ.ಜಿ ಕುಂದರ್ ಕೋಟ, ಜಿ.ಸುರೇಶ್ ಶೆಟ್ಟಿ ಬಳ್ಳಾರಿ ಹಾಗೂ ಡಾ.ಬಾಲಕೃಷ್ಣ ಭಂಡಾರಿ ಅತಿಥಿಗಳಾಗಿದ್ದರು.
ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು.

ಟೀಚರ್ಸ್‌ ಕೋ ಅಪರೇಟಿವ್ ಬ್ಯಾಂಕಿನ ನಿರ್ದೇಶಕ ದಿನಕರ ಶೆಟ್ಟಿ ಬಸ್ರೂರು, ಉದ್ಯಮಿ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ, ಜಿ.ಪಂ ಸದಸ್ಯ ಪ್ರಕಾಶ ಮೆಂಡನ್, ಮಾಜಿ ಜಿ.ಪಂ ಸದಸ್ಯ ದೇವಾನಂದ ಶೆಟ್ಟಿ, ಕಿಶನ್ ಹೆಗ್ಡೆ, ಗ್ರಾ.ಪಂ ಅಧ್ಯಕ್ಷ ವಿಕಾಸ್ ಹೆಗ್ಡೆ, ಶೇಖರ ದೇವಾಡಿಗ, ರಾಜೇಂದ್ರ ಶೆಟ್ಟಿಗಾರ ಇದ್ದರು.                                                                                                                                                                                                                                                                                                                                                     
             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT