ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿವಾದಿ ಜನಪ್ರತಿನಿಧಿಯಿಂದ ಜನತಂತ್ರಕ್ಕೆ ಅಪಾಯ

Last Updated 15 ಜೂನ್ 2012, 19:30 IST
ಅಕ್ಷರ ಗಾತ್ರ

ಚಾಮರಾಜನಗರ: `ಅಕ್ರಮವಾಗಿ ಹಣ, ಆಸ್ತಿ ಸಂಪಾದಿಸುವುದಷ್ಟೇ ಭ್ರಷ್ಟಾಚಾರವಲ್ಲ. ಜನಪ್ರತಿನಿಧಿಗಳು, ಅಧಿಕಾರಶಾಹಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುವುದು ಕೂಡ ಭ್ರಷ್ಟಾಚಾರವಾಗುತ್ತದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಭ್ರಷ್ಟಾಚಾರದಿಂದ ಹೊರತಾಗಿಲ್ಲ.
ಮಾಧ್ಯಮ ರಂಗವೂ ಈ ಸುಳಿಗೆ ಸಿಲುಕಿರುವುದರಿಂದ ಪ್ರಜಾಪ್ರಭುತ್ವಕ್ಕೆ ದೊಡ್ಡ ಆಪತ್ತು ಎದುರಾಗಿದೆ...~

-ಮೊದಲನೇ ವಿಧಾನಸಭೆಯ ಸದಸ್ಯರಾಗಿದ್ದ 91ವರ್ಷದ ಹಿರಿಯ ಜೀವ ಯು.ಎಂ. ಮಾದಪ್ಪ ಹೀಗೆಂದು ನೋವು ತೋಡಿಕೊಂಡು ಕ್ಷಣಕಾಲ ಪಕ್ಕದಲ್ಲಿದ್ದ ಪತ್ರಿಕೆಗಳತ್ತ ದೃಷ್ಟಿ ನೆಟ್ಟರು. ಬಳಿಕ ಸರ್ಕಾರದ ಅನುದಾನದಲ್ಲಿಯೇ         `ಪರ್ಸಂಟೇಜ್~ ಕೇಳುವ ಜನಪ್ರತಿನಿಧಿಗಳಿಂದ ಜನತಂತ್ರದ ಅಸ್ತಿತ್ವ ಉಳಿಯುತ್ತದೆಯೇ ಎಂಬ ಯಕ್ಷಪ್ರಶ್ನೆ ಮುಂದಿಟ್ಟರು.

ರಾಜ್ಯ ವಿಧಾನಸಭೆಗೆ ಇದೇ 18ಕ್ಕೆ 60 ವರ್ಷ ತುಂಬಲಿದೆ. ಅದರ ಸ್ಮರಣಾರ್ಥ ಹಮ್ಮಿಕೊಂಡಿರುವ ವಜ್ರಮಹೋತ್ಸವ ಸಮಾರಂಭದಲ್ಲಿ ಮಾದಪ್ಪ ಅವರನ್ನು ಸನ್ಮಾನಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ `ಪ್ರಜಾವಾಣಿ~ಯೊಂದಿಗೆ ಅವರು ರಾಜಕೀಯದ ಅನುಭವ ಹಂಚಿಕೊಂಡರು.

`ನಾನು ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೆ. ಒಂದು ನಯಾಪೈಸೆ ಖರ್ಚು ಮಾಡಲಿಲ್ಲ. ಜಿಲ್ಲೆಯ ರೇಷ್ಮೆ ಬೆಳೆಗಾರರು, ಮಾರಾಟಗಾರರ ಪರವಾಗಿ ಹೋರಾಟ ಮಾಡಿದೆ. ಸರ್ಕಾರದಿಂದ ಅವರಿಗೆ ಸೌಲಭ್ಯ ಕಲ್ಪಿಸಲು ಶ್ರಮಿಸಿದೆ. ಹೀಗಾಗಿ, ಅವರೇ ಚುನಾವಣೆಗೆ ನನ್ನನ್ನು ನಿಲ್ಲಿಸಿದರು. ತಮ್ಮದೇ ಖರ್ಚಿನಲ್ಲಿ ಪ್ರಚಾರ ಮಾಡಿದರು. ನಾನು ಒಂದು ದಿನವೂ ಪ್ರಚಾರಕ್ಕೆ ಹೋಗಲಿಲ್ಲ. ಜನಸೇವೆಯಿಂದ ಗೆಲುವು ಸಿಕ್ಕಿತು. ಈಗ ಅಂತಹ ವಾತಾವರಣ ಕಾಣಲು ಸಾಧ್ಯವೇ? ಈಗ  ಭ್ರಷ್ಟಾಚಾರ ಎಲ್ಲೆ ಮೀರಿದೆ. ಇದರಿಂದ ಜನತಂತ್ರಕ್ಕೆ ಅಪಾಯ ಕಟ್ಟಿಟ್ಟಬುತ್ತಿ~ ಎಂದರು ಮಾದಪ್ಪ.

ಚುನಾವಣೆಯಲ್ಲಿ ಹಣದ ಹಂಚಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಸ್ಥಳೀಯ ಸರ್ಕಾರದ ಮಟ್ಟದಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಹೀಗಾಗಿ, ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಧಕ್ಕೆಯಾಗಿದೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುತ್ತಿದೆಯೇ  ಎಂಬ ಅನುಮಾನ ಕಾಡುತ್ತಿದೆ. ದೇಶದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ಸೋತಿದೆ ಎಂದು ಅಸಮಾಧಾನ ತೋಡಿಕೊಂಡರು.

ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷ ನೈತಿಕತೆ ಉಳಿಸಿಕೊಂಡಿಲ್ಲ. ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳಿಗೂ ಈ ಮಾತು ಅನ್ವಯಿಸುತ್ತದೆ. ಶಾಸಕನಾಗುವ ವ್ಯಕ್ತಿಗೆ ಸೈದ್ಧಾಂತಿಕ ಹಿನ್ನೆಲೆ ಇರಬೇಕು. ಆದರೆ, ನಾವಿಂದು ಜಾತಿವಾದಿ ಜನಪ್ರತಿನಿಧಿಗಳನ್ನು ನೋಡುತ್ತಿದ್ದೇವೆ. ಅಂತಹವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಾಗಿದ್ದಾರೆ. ಕಷ್ಟಪಟ್ಟು ಪಡೆದ ಸ್ವಾತಂತ್ರ್ಯ ಅರ್ಥ ಕಳೆದುಕೊಳ್ಳುವ ಸ್ಥಿತಿಗೆ ಮುಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.

`ಅಧಿಕಾರಶಾಹಿ ಸ್ನೇಹಿ~  ಜನಪ್ರತಿನಿಧಿಗಳು: ಜನಪ್ರತಿನಿಧಿಗಳು `ಅಧಿಕಾರಶಾಹಿ ಸ್ನೇಹಿ~ ಗುಣ ಪ್ರದರ್ಶಿಸುತ್ತಿದ್ದಾರೆ. ಇದಕ್ಕಿಂತ ಅಪಾಯ ಬೇರೊಂದಿಲ್ಲ. ಸರ್ಕಾರ ಯಾವುದೇ ಬರಲಿ. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಅಂತಹ ವಾತಾವರಣವೇ ಕಣ್ಮರೆಯಾಗುತ್ತಿದೆ. ಜತೆಗೆ, ಜವಾಬ್ದಾರಿಯಿಂದ ಅಭಿವೃದ್ಧಿ ಕಾಮಗಾರಿಗಳ ಉಸ್ತುವಾರಿ ಮಾಡುವುದು ಸಚಿವರ ಹೊಣೆಯಾಗಬೇಕು ಎಂಬ ಸಲಹೆ ಮುಂದಿಟ್ಟರು.

ಶಾಸಕರಿಗೆ ಅಧ್ಯಯನದ ಕೊರತೆ: ಈಗಿನ ಶಾಸಕರಿಗೆ ಅಧ್ಯಯನದ ಕೊರತೆಯಿದೆ. ಅಧಿವೇಶನದಲ್ಲಿ ಭಾಗವಹಿಸುವುದೇ ಕೆಲವರಿಗೆ ತ್ರಾಸ. ಗ್ರಂಥಾಲಯಕ್ಕೆ ಹೋಗಿ ಈ ಹಿಂದಿನ ಶಾಸನಸಭೆಯಲ್ಲಿ ನಡೆದಿರುವ ಚರ್ಚೆಗಳನ್ನು ಓದಿ ಅರ್ಥೈಸಿಕೊಳ್ಳುವವರು ವಿರಳ. ಅಧಿವೇಶನದಲ್ಲಿ ನಡೆಯುವ ಎಲ್ಲ ಚರ್ಚೆಯಲ್ಲೂ ಶಾಸಕರು ಭಾಗವಹಿಸಬೇಕು. ನಮ್ಮ ಅವಧಿಯಲ್ಲಿ ಎಲ್ಲ ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಜತೆಗೆ, ಅಧ್ಯಯನಶೀಲರಾಗಿದ್ದರು. ಈಗ ಅಂತಹ ಜನಪ್ರತಿನಿಧಿಗಳನ್ನು ಕಾಣುವುದು ಅಪರೂಪವಾಗಿದೆ ಎಂದು ಮಾದಪ್ಪ ನೋವು ತೋಡಿಕೊಳ್ಳುತ್ತಾರೆ.

ರಾಜಕೀಯ ಹಿನ್ನೋಟ: ಮಾದಪ್ಪ ಅವರದು ಸರಳಜೀವನ. ಸಜ್ಜನಿಕೆಯ ರಾಜಕಾರಣಿಯಾದ ಅವರ ಹುಟ್ಟೂರು ಚಾಮರಾಜನಗರ ತಾಲ್ಲೂಕಿನ ಉಡಿಗಾಲ. ಅವರಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಇಂದಿಗೂ ಸ್ವಚ್ಛ ರಾಜಕಾರಣದ ಮೌಲ್ಯ ಪ್ರತಿಪಾದಿಸುವ ಅವರು, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಧೀಮಂತ ನಾಯಕ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಬಳಿಕ ಅವರು ಬೆಳಗಾವಿಗೆ ಕಾನೂನು ಪದವಿಯ ಅಧ್ಯಯನಕ್ಕೆ ತೆರಳಿದರು. ಆ ವೇಳೆ ಆರಂಭವಾಗಿದ್ದ ವಿಶಾಲ ಕರ್ನಾಟಕದ ಹೋರಾಟದ ಸೆಳೆತಕ್ಕೆ ಸಿಲುಕಿದರು. ಕರ್ನಾಟಕ ಏಕೀಕರಣ ಹೋರಾಟಕ್ಕಾಗಿ ಜಿಲ್ಲೆಯಲ್ಲಿ ಏಕೀಕರಣ ಸಮಿತಿ ಸ್ಥಾಪಿಸಿದ ಹಿರಿಮೆಯೂ ಅವರಿಗಿದೆ. ತಮಿಳುನಾಡಿನ ತಾಳವಾಡಿ ಫಿರ್ಕಾದಲ್ಲಿ ಪ್ರಥಮ ಬಾರಿಗೆ ಕನ್ನಡಿಗರ ಸಮಾವೇಶ ಮಾಡಿದ್ದು ಅವರ ಹೆಗ್ಗಳಿಕೆ.

1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾ ಸಮಾಜವಾದಿ ಪಕ್ಷ(ಪಿಎಸ್‌ಪಿ)ದಿಂದ ಅಂದಿನ ಮೈಸೂರು ರಾಜ್ಯ ವಿಧಾನಸಭೆಗೆ ಪ್ರವೇಶಿಸಿದರು. ಪುನಃ 1957ರಲ್ಲಿ ವಿಧಾನಸಭೆಗೆ ಆಯ್ಕೆಯಾದರು. 1962ರ ಚುನಾವಣೆಯಲ್ಲಿ ಏಕಸದಸ್ಯ ವಿಧಾನಸಭಾ ಕ್ಷೇತ್ರವಾಗಿ ಪರಿವರ್ತನೆಗೊಂಡ ಚಾಮರಾಜನಗರ ಕ್ಷೇತ್ರದಿಂದ ಪುನರಾಯ್ಕೆ ಬಯಸಿದ ಅವರಿಗೆ ಸೋಲು ಎದುರಾಯಿತು. 1962-63ರಲ್ಲಿ ಪಿಎಸ್‌ಪಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿತು. ಆಗ ಮಾದಪ್ಪ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ದಿ. ಎಸ್. ನಿಜಲಿಂಗಪ್ಪ ಅವರ ಅನುಯಾಯಿಯಾಗಿದ್ದ ಅವರು ಕಾಂಗ್ರೆಸ್ ಇಬ್ಭಾಗವಾದಾಗ ಸಂಸ್ಥಾ ಕಾಂಗ್ರೆಸ್‌ಗೆ ಸೇರಿದರು. ದಿ. ಇಂದಿರಾ ಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದ ವೇಳೆ ಜಯಪ್ರಕಾಶ ನಾರಾಯಣ ಅವರ ನೇತೃತ್ವದ ಜನತಾಪಕ್ಷಕ್ಕೆ ಸೇರಿದರು. 1979ರಲ್ಲಿ ಅಂದಿನ ಮೈಸೂರು ಜಿಲ್ಲಾ ಗ್ರಾಮಾಂತರ ಜನತಾಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1985ರವರೆಗೂ ಅಧ್ಯಕ್ಷರಾಗಿ ಸೇವೆ ಮುಂದುವರಿಸಿದ ಅವರು, ಬಳಿಕ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದರು.

ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವೇರ್‌ಹೌಸ್ ಕಾರ್ಪೋರೇಷನ್ ನಿರ್ದೇಶಕರಾಗಿಯೂ ದುಡಿದಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಬಾಬು ಜಗಜೀವನರಾಂ ಅವರು ಸಚಿವರಾಗಿದ್ದಾಗ ಅವರ ಖಾತೆಯಡಿ ರಚಿಸಿದ್ದ ಕೃಷಿ ಸಹಕಾರ ಸೊಸೈಟಿ, ಕೃಷಿ ಹಾಗೂ ಕಾರ್ಮಿಕ ಸಲಹಾ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಹುಟ್ಟೂರಿನ ಬಗ್ಗೆ ಅವರಿಗೆ ಅಪಾರ ಪ್ರೀತಿ. ಜಿಲ್ಲೆಯ ಚಿಕ್ಕಹೊಳೆ ಜಲಾಶಯ ನಿರ್ಮಾಣಕ್ಕೆ ಹೋರಾಟ ಆರಂಭಿಸಿದ್ದ ಇವರ ಸೇವೆಯನ್ನು ಅಚ್ಚುಕಟ್ಟು ಪ್ರದೇಶದ ರೈತರು ಇಂದಿಗೂ ಸ್ಮರಿಸುತ್ತಾರೆ. ಉಡಿಗಾಲಕ್ಕೆ ಬಂದಾಗ ಮನೆಯಲ್ಲಿರುವ ನೂರು ವರ್ಷ ಹಳೆದಾದ ಮಂಚದಲ್ಲಿ ವಿಶ್ರಮಿಸಿಕೊಳ್ಳುವುದೇ ನನಗೆ ಖುಷಿ ಕೊಡುತ್ತದೆ. ಇದು ನನ್ನಪ್ಪ ನನಗೆ ನೀಡಿದ ದೊಡ್ಡ ಆಸ್ತಿ ಎಂದು ನಸುನಗುತ್ತಾರೆ. ಸದ್ಯಕ್ಕೆ ಅವರು ಮೈಸೂರಿನಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT