ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಾತೀಯತೆ ದೇಶಕ್ಕೆ ಅತ್ಯಂತ ಅಪಾಯಕಾರಿ'

Last Updated 7 ಜನವರಿ 2013, 10:22 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಧರ್ಮ, ರಾಜಕಾರಣ, ಸಂಸ್ಕೃತಿ, ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲೂ ನೈತಿಕತೆ ಅಧಃಪತನಕ್ಕೆ ತಲುಪಿದೆ. ಎಲ್ಲವೂ ಭ್ರಷ್ಟವಾಗಿವೆ. ಸಮಾಜದಲ್ಲಿ ಭ್ರಷ್ಟಾಚಾರಿಗಳು, ಕುಬ್ಜರು, ದುಷ್ಟರು, ಅತ್ಯಾಚಾರಿಗಳು ತುಂಬಿಹೋಗಿದ್ದಾರೆ. ಸಮಾಜದ ಸ್ವಾಸ್ಥ್ಯದ ಬಗ್ಗೆ ಯೋಚಿಸುವವರು ಕಡಿಮೆಯಾಗಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದಿಸಿದರು.

ನಗರದಲ್ಲಿ ಭಾನುವಾರ ಡಾ.ಜೆ.ಪಿ.ಕೃಷ್ಣೇಗೌಡ ಅಭಿನಂದನಾ ಸಮಿತಿ, ಆಶಾಕಿರಣ ಚಾರಿಟಬಲ್ ಟ್ರಸ್ಟ್ ಮತ್ತು ಉದ್ಭವ ಪ್ರಕಾಶನ ಆಯೋಜಿಸಿದ್ದ ಡಾ.ಜೆ.ಪಿ.ಕೃಷ್ಣೇಗೌಡರಿಗೆ ನಾಗರಿಕ ಅಭಿನಂದನಾ ಸಮಾರಂಭದಲ್ಲಿ ಬೆಳವಾಡಿ ಮಂಜುನಾಥ ಸಂಪಾದಕತ್ವದ `ಆಶಾಕಿರಣ'  ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಸಾತ್ವಿಕ ಶಕ್ತಿಯ ನಿಷ್ಕಿಯತೆಯಿಂದಾಗಿ ತಾಮಸ ಶಕ್ತಿ, ದುಷ್ಟಶಕ್ತಿ ವಿಜೃಂಭಿಸಲಾರಂಭಿಸಿವೆ. ಆದರೆ, ಒಳ್ಳೆಯವರಿಗೂ ಕಾಲವಿದೆ, ಸಮಾಜದಲ್ಲಿ ಮನ್ನಣೆ ಇದೆ ಎನ್ನುವುದನ್ನು ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡರ ಜೀವನ, ಸಾಧನೆಗೆ ಸಂದ ನಾಗರಿಕ ಸಮ್ಮಾನ ಸಾಬೀತು ಪಡಿಸಿದೆ. ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಇಂತಹವರನ್ನು ಆದರ್ಶವಾಗಿ, ಮಾದರಿಯಾಗಿ ನಿಸ್ಸಂಶಯದಿಂದ ತೋರಿಸಬಹುದು.

ಇಡೀ ಸಮಾಜದ ಆರೋಗ್ಯ ಬಯಸಿದ ಆದರ್ಶ ವೈದ್ಯ ಎನಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವೈದ್ಯ ಸಾಹಿತಿ ಗುಲ್ಬರ್ಗದ ಡಾ.ಪಿ.ಎಸ್.ಶಂಕರ್ ಮಾತನಾಡಿ, ಕಲಿಸಿದ ಗುರುಗಳ ಮೇಲೆ ಗೌರವ ಕಡಿಮೆ ಯಾಗುತ್ತಿರುವ ಕಾಲಘಟ್ಟದಲ್ಲಿ ಗುರುಗಳ ಮೇಲೆ ಅಪಾರ ಪ್ರೀತಿ ಇಟ್ಟಿರುವ ಕೃಷ್ಣೇಗೌಡರ ವ್ಯಕ್ತಿತ್ವ ಸಮಾಜಕ್ಕೆ ಅನುಕರಣೀಯ ಎಂದು ಶ್ಲಾಘಿಸಿದರು.

ಗುರುಶಿಷ್ಯರ ನಡುವಿನ ಸಂಬಂಧದಲ್ಲಿ ಬಿರುಕು ಇಂದು ದೊಡ್ಡದಾಗುತ್ತಿದೆ. ಎಲ್ಲವನ್ನೂ ಜಾತಿಯ ಕನ್ನಡಕದಿಂದ ನೋಡುವ ಸ್ಥಿತಿಯೂ ಇದೆ. ಜಾತೀಯತೆ ದೇಶಕ್ಕೆ ಅತ್ಯಂತ ಅಪಾಯಕಾರಿ ಎಂದರು.ನಾಗರಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ  .ಜೆ.ಪಿ.ಕೃಷ್ಣೇಗೌಡ, ಹಿಂದೆ ಗುರು ಮುಂದೆ ಗುರಿ ಇದ್ದರೆ ಜೀವನ ಸುಗಮ. ನಾಲ್ಕು ಮಂದಿಗೆ ಸೇವೆ ಮಾಡಿದ ಫಲ ಸಾವಿರಾರು ಜನರು ಪ್ರೀತಿಯ ಅಭಿನಂದನೆಯ ಧಾರೆ ಎರೆಯುವಂತೆ ಮಾಡಿದೆ. ಜೀವನದ ಸಾರ್ಥಕತೆಯ ಕ್ಷಣವಿದು. ವಿವಿಧ ಪ್ರಶಸ್ತಿ, ಗೌರವ ಬಂದಿದ್ದರೂ ಊರಿನ ಜನ ಸಾಗರದ ಪ್ರೀತಿ-ವಿಶ್ವಾಸ ಅದೆಲ್ಲವನ್ನು ಮೀರಿಸಿದೆ ಎಂದರು.

ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠಾಧ್ಯಕ್ಷ ಗುಣನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಭಿನಂದನಾ ಗ್ರಂಥವನ್ನು ಸಂಪಾದಕ ಬೆಳವಾಡಿ ಮಂಜುನಾಥ ಪರಿಚಯಿಸಿದರು. ಕಾಫಿಬೆಳೆಗಾರ ಸಣ್ಣಸಿದ್ದೇಗೌಡ, ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಐ.ಎಂ.ಸಣ್ಣತಮ್ಮೇಗೌಡ, ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎ.ಈರೇಗೌಡ ಮಾತನಾಡಿದರು.
ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ನಗರಸಭೆ ಅಧ್ಯಕ್ಷ ಪ್ರೇಂಕುಮಾರ್ ಸೇರಿದಂತೆ ಜನಪ್ರತಿನಿಧಿ ಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಡಾ.ಜೆ.ಪಿ.ಕೃಷ್ಣೇಗೌಡ ದಂಪತಿಗೆ ನಾಗರಿಕ ಸನ್ಮಾನ ಮಾಡಿದರು.

ಡಾ.ಸಿ.ಕೆ.ಸುಬ್ಬರಾಯ ಮತ್ತು ದೀಪಕ್‌ದೊಡ್ಡಯ್ಯ ಗಣ್ಯರ ಸಂದೇಶ ವಾಚಿಸಿದರು. ಸಂಚಾಲಕರಾದ ಡಿ.ಎಚ್.ನಟರಾಜ್ ಸ್ವಾಗತಿಸಿ, ನಮನಾ ನಿರೂಪಿಸಿ,  ಕೆ.ಮೋಹನ್ ವಂದಿಸಿದರು. ನಾದಚೈತನ್ಯದ ರೇಖಾ ಪ್ರೇಮಕುಮಾರ್, ಕಲ್ಕಟ್ಟೆ ಪುಸ್ತಕ ಮನೆಯ ಎಚ್.ಎಂ.ನಾಗರಾಜರಾವ್ ರೈತ ಗೀತೆ ಹಾಡಿದರೆ, ಆಶಾಕಿರಣದ ಕಲಾವಿದರು ನಾಡಗೀತೆ ಹಾಡಿದರು. ಡಾ.ಶಂಕರ್‌ಪಾಟೀಲ್ ಮತ್ತು ನರಹಳ್ಳಿಬಾಲಸುಬ್ರಹ್ಮಣ್ಯ ಅವರಿಗೆ ಉದ್ಭವ ಪ್ರಕಾಶನದ ವತಿಯಿಂದ `ಉದ್ಭವಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT