ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತ ಪ್ರವಾಸ: ನಖ್ವಿ ವ್ಯಂಗ್ಯ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೋಮು ಗಲಭೆಯಿಂದ ತತ್ತರಿಸಿರುವ ಮುಜಾ­ಫರ್‌­ನಗರಕ್ಕೆ ಪ್ರಧಾನಿ ಮನಮೋಹನ್‌ ಸಿಂಗ್‌, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಉಪಾಧ್ಯಕ್ಷ  ರಾಹುಲ್‌ ಗಾಂಧಿ ನೀಡಿರುವ ಭೇಟಿ­ಯನ್ನು ‘ಜಾತ್ಯತೀತ ಪ್ರವಾಸೋಧ್ಯಮ’ ಎಂದು ವ್ಯಂಗ್ಯವಾಡಿರುವ ಬಿಜೆಪಿ, ‘ಮತಬ್ಯಾಂಕ್ ರಾಜಕೀಯ’ ಮಾಡುವ ಬದಲು ಸಂತ್ರಸ್ತರ ಪುನರ್ವಸತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಕೋಮು ಗಲಭೆ ನಡೆದು ಒಂದು ತಿಂಗಳಾದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ನಿನ್ನೆ (ಭಾನುವಾರ) ಮುಜಾಫರ್‌­ನಗರಕ್ಕೆ ಭೇಟಿ ನೀಡಿದ್ದರು. ಸೋಮವಾರ ಮನಮೋಹನ್‌ ಸಿಂಗ್‌, ಸೋನಿಯಾ ಮತ್ತು ರಾಹುಲ್‌ ‘ಜಾತ್ಯತೀತ ಪ್ರವಾಸೋದ್ಯಮ’ ಕೈಗೊಂಡಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತರ್‌ ಅಬ್ಬಾಸ್‌ ನಖ್ವಿ ಅವರು ಟೀಕಿಸಿದ್ದಾರೆ.

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೋಮು ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದಿದ್ದಾರೆ.

ಉತ್ತರ­ಪ್ರದೇಶ ಸರ್ಕಾರದ ಕುಮ್ಮಕ್ಕಿ­ನಿಂದಲೇ ಗಲಭೆ ನಡೆದಿದೆ ಮತ್ತು ಗಲಭೆ ಕಾರಣರಾದ ದುಷ್ಕರ್ಮಿ­ಗಳಿಗೆ ಸರ್ಕಾರವೇ ರಕ್ಷಣೆ ನೀಡುತ್ತಿದೆ ಎಂದು ಆಪಾದಿಸಿದ್ದಾರೆ.

ಕೋಮು ಗಲಭೆಗೆ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳ ಸಮಾನ ಕೊಡುಗೆ ಇದೆ ಎಂದು ಟೀಕಿಸಿರುವ ಅವರು, ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯದಲ್ಲಿ ಏನಾದರೂ ಈ ರೀತಿ ಗಲಭೆಯಾಗಿದ್ದರೆ ಕಾಂಗ್ರೆಸ್‌ ದೊಡ್ಡ ರಾದ್ದಾಂತವನ್ನೇ ಮಾಡುತ್ತಿತ್ತು ಎಂದಿದ್ದಾರೆ.

ಮುಜಾಫರ್‌ನಗರದಲ್ಲಿ ಸಾವಿರಾರು ಜನರು ಪ್ರಾಣ ಭೀತಿಯಿಂದ ಮನೆ ಮಠಗಳನ್ನು  ತೊರೆದಿದ್ದಾರೆ.  ಆದರೂ ಸರ್ಕಾರ ಅವರ ರಕ್ಷಣೆಗೆ ಮತ್ತು ಪುನರ್ವಸತಿಗೆ ಮುಂದಾಗುತ್ತಿಲ್ಲ ಎಂದು ನಖ್ವಿ ಟೀಕಿಸಿದ್ದಾರೆ.

2002ರಲ್ಲಿ ಗುಜರಾತ್‌­ನಲ್ಲಿ ನಡೆದ ಕೋಮು ಗಲಭೆಯನ್ನು ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಇನ್ನೂ ದೊಡ್ಡ ಧ್ವನಿಯಲ್ಲಿ ಟೀಕಿಸುತ್ತಿವೆ. ಆದರೆ ಮುಜಾಫರ್‌ನಗರ ಮತ್ತು ಇತರ ಕಡೆಗಳಲ್ಲಿ ನಡೆದ ಕೋಮು ಗಲಭೆಯ ಬಗ್ಗೆ ಚಕಾರ­ವೆತ್ತುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂಬ ಕಾರಣ ನೀಡಿ ಕೇಂದ್ರ ಸಚಿವ ಅಜಿತ್‌ ಸಿಂಗ್‌ ಅವರಿಗೆ ಗಲಭೆಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡಲಿಲ್ಲ. ಆದರೆ ಪ್ರಧಾನಿ, ಸೂಪರ್‌ ಪ್ರಧಾನಿ ರಾಹುಲ್‌ ಮತ್ತು ಸೋನಿಯಾ ಅವರು ಅಲ್ಲಿಗೆ ಭೇಟಿ ನೀಡಿ ಗಾಯದ ಮೇಲೆ ಉಪ್ಪು ಸವರುತ್ತಿದ್ದಾರೆ ಎಂದು ನಖ್ವಿ ಟೀಕಿಸಿದ್ದಾರೆ.

ಗಲಭೆಪೀಡಿತ ಪ್ರದೇಶಕ್ಕೆ ಈ ಮೂವರು ಈಗ ಭೇಟಿ ನೀಡಿದ ಉದ್ದೇಶವಾದರೂ ಏನು ಎಂದು ಬಿಜೆಪಿ ಮುಖಂಡ ರವಿಶಂಕರ್‌
ಪ್ರಸಾದ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT