ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಯಲ್ಲಿ ಮನ ತಣಿಸಿದ ಸಂಗೀತ ಕಾರ್ಯಕ್ರಮ

Last Updated 23 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಆಲಮಟ್ಟಿ:  ಸುಮಾರು ಎರಡು ದಿನಗಳ ಕಾಲ ಹತ್ತಾರು ಮಹಾನ್ ಸಂಗೀತಗಾರರು ಯಲಗೂರೇಶ್ವರನ ಕಾರ್ತಿಕೋತ್ಸವದಲ್ಲಿ ಸಂಗೀತ ಸೇವೆ ಸಲ್ಲಿಸಿ, ಕೇಳುಗರ ಮನಸೂರೆ ಗೊಳ್ಳುವಂತೆ ಮಾಡಿದರು. ಯಲಗೂರದ ಶ್ರೀ ಯಲಗೂರೇಶ್ವರನ ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮಗಳು ಗಮನಸೆಳೆದವು. ಹರಿದಾಸ ಸಾಹಿತ್ಯ ಸಂಗೀತ ವೇದಿಕೆಯು ದಿ. ಭೀಮಸೇನ್ ಜೋಶಿ ವೇದಿಕೆಯಲ್ಲಿ ಏರ್ಪಡಿಸಿದ್ದ  ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಪುತ್ತೂರು ನರಸಿಂಹ ನಾಯಕ, ವಾರ್ತಾ ಇಲಾಖೆಯ ರಾಜ್ಯ ನಿರ್ದೇಶಕ ಮುದ್ದುಮೋಹನ,  ಸಂಗೀತ ಕಲಾವಿದೆ ಸಂಗೀತಾ ಕಟ್ಟಿ, ನಾರಾಯಣ ತಾಸಗಾಂವ, ಸಂತೋಷ ಗದ್ದನಕೇರಿ, ರಾಜೇಂದ್ರ ದೇಶಪಾಂಡೆ, ಆಂಜನಪ್ಪ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ, ಕೇಶವ ಜೋಶಿ ಅವರ ತಬಲಾ ವಾದನ  ಮನ ತಣಿಸಿತು. ಬಾಗಲಕೋಟೆಯ ನಟರಾಜ ವಿದ್ಯಾಲಯ ಪ್ರದರ್ಶಿಸಿದ ರೂಪಕವು ಗಮನ ಸೆಳೆಯಿತು.

ಬೆಂಗಳೂರಿನಿಂದ ಆಗಮಿಸಿದ್ದ ಹ.ರ. ನಾಗರಾಜ ಹಾಗೂ ಅವರ ಸಂಗಡಿಗರಿಂದ ನೃತ್ಯ ರೂಪಕಗಳು, ವಿವಿಧ ಭಂಗಿಗಳು ಎಲ್ಲರ ಮನ ತಣಿಸಿದವು. ಮುದ್ದು ಮೋಹನರ ಸಂಗೀತದ ನಿನಾದಕ್ಕೆ ಪಂಚಾಕ್ಷರಿ ಹಿರೇಮಠ ಅವರ ಹಾರ್ಮೋನಿಯಂ, ಶ್ರೀಧರ ಮಾಂಡ್ರೆ ಅವರ ತಬಲಾ, ಮಹೇಶ ಬಡಿಗೇರ ಅವರ ತಂಬೂರಿ ಜೊತೆಯಾಗಿ ದಾಸವಾಣಿ, ಸಂಗೀತಾ ಕಟ್ಟಿ ಅವರ ಶಾಸ್ತ್ರೀಯ ಸಂಗೀತವೂ ಸಂಗೀತ ಪ್ರೀಯರನ್ನು ತಲೆದೂಗಿಸಿತು.

ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸೇವೆಯನ್ನು ಪರಿಗಣಿಸಿ, ಶ್ರೇಷ್ಠ ಹಿರಿಯ ಸಂಗೀತ ಕಲಾವಿದ ಮಾಧವ ಗುಡಿ ಅವರಿಗೆ ‘ಯಲಗೂರೇಶ್ವರ ಅನುಗ್ರಹ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಾರಾಯಣ ಪರ್ವತಿಕರ, ಗೋಪಾಲ ಗದ್ದನಕೇರಿ, ಅನಂತ ಓಂಕಾರ, ನಾರಾಯಣ ಒಡೆಯರ, ಪ್ರಕಾಶ ಅಕ್ಕಲಕೋಟ, ಶ್ರೀ ಹರಿ ಗೊಳಸಂಗಿ, ಗುಂಡಣ್ಣ ಕುಲಕರ್ಣಿ, ನಾರಾಯಣ ತಾಸಗಾಂವ, ನರಸಿಂಹ ಆಲೂರ ಮೊದಲಾದವರಿದ್ದರು.

ರಥೋತ್ಸವ: ಭಾನುವಾರ ರಥೋತ್ಸವ ಸಹಸ್ರಾರು ಜನರ ಮಧ್ಯೆ ಸಂಭ್ರಮ ಸಡಗರದಿಂದ ಜರುಗಿತು. ರಥೋತ್ಸವದ ಮೊದಲು ಕಳಸದ, ಉತ್ಸವ ಹಾಗೂ ಹಗ್ಗದ ಮೆರವಣಿಗೆ ನಡೆಯಿತು.
ರಥೋತ್ಸವದ ಮುಂದೆ ಭಕ್ತರು ‘ಗೋವಿಂದ ಗೋವಿಂದ’ ಎಂದು ಹೇಳುತ್ತಾ ಭಾವ ಭಕ್ತಿಯನ್ನು ಮೆರೆದರು. ನೆರೆದ ಭಕ್ತರು ಉತ್ತತ್ತಿ, ಬಾಳೆಹಣ್ಣು ರಥಕ್ಕೆ ಎಸೆದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ದೇವಸ್ಥಾನದ ಅರ್ಚಕ ಯಲಗೂರದಪ್ಪ ಪೂಜಾರಿ, ಭೀಮಪ್ಪ ಪೂಜಾರಿ, ಗುಂಡಪ್ಪ ಪೂಜಾರಿ, ಚನ್ನಬಸು ಚೆನ್ನಿಗಾವಿ, ಭೀಮಣ್ಣ ಅವಟಗೇರ, ವಿ.ಎಚ್. ಗುಡ್ಡಪ್ಪನವರ, ಶ್ಯಾಮ ಪಾತರದ ಮೊದಲಾದವರು ನೇತೃತ್ವ ವಹಿಸಿದ್ದರು. ಸಂಜೆ ಹೊಂಡಪೂಜೆಯೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT