ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಯಲ್ಲಿ ಸಾಹಿತ್ಯದ ನವನೀತ ಹುಡುಕುತ್ತಾ...

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಳೆದ ಕೆಲವು ವರ್ಷಗಳಲ್ಲಿ `ಜೈಪುರ ಸಾಹಿತ್ಯೋತ್ಸವ~ (ಜೈಪುರ ಲಿಟರೇಚರ್ ಫೆಸ್ಟಿವಲ್- ಜೆಎಲ್‌ಎಫ್) ಒಂದು ಪ್ರತಿಷ್ಠಿತ ಸ್ಥಾನವನ್ನು ಗಳಿಸಿದ್ದು, ಅಂತರರಾಷ್ಟ್ರೀಯ ಲೇಖಕ ಸಮುದಾಯವನ್ನು ಒಂದೆಡೆಗೆ ಸೇರಿಸಿ ಸಂವಾದ ನಡೆಸುವುದರ ಜೊತೆಗೆ ಜಗತ್ತಿನ ಸಾಹಿತ್ಯಿಕ ಆಗುಹೋಗುಗಳ ಬಗ್ಗೆ ಚರ್ಚೆಯನ್ನು ನಡೆಸುವ ವೇದಿಕೆಯಾಗಿ ಪರಿಣಮಿಸಿದೆ.

ಕಳೆದ ವರ್ಷ 60 ಸಾವಿರಕ್ಕೂ ಹೆಚ್ಚು ಸಾಹಿತ್ಯ ಪ್ರೇಮಿಗಳನ್ನು ಆಕರ್ಷಿಸಿದ್ದ ಈ ಉತ್ಸವ, ಏಷ್ಯಾ ಖಂಡದಲ್ಲೇ ಇಂಥ ಅಭೂತಪೂರ್ವ `ಸಾಹಿತ್ಯ ಮೇಳ~ ಬೇರೆಲ್ಲಿಯೂ ಆಗಲು ಸಾಧ್ಯವಿಲ್ಲ ಎಂಬ ಹೆಗ್ಗಳಿಕೆಯನ್ನು ಗಳಿಸಿತ್ತು.

ಈ `ಮೇಳ~ದ ರೂವಾರಿಗಳಾದ ನಮಿತಾ ಗೋಖಲೆ, ವಿಲಿಯಂ ಡಾರ್ಲಿಂಪಲ್ ಮತ್ತು ಸಂಜಯ ರಾಮ್ ಅವರ ಬಗ್ಗೆ ಪತ್ರಿಕೆಯಲ್ಲಿ ಓದಿದಾಗ, ಈ ಮೇಳವನ್ನು ನೋಡಲು ಹೋಗುವ ನಮ್ಮ ತೀರ್ಮಾನ ಸರಿಯಾದದ್ದು ಎನಿಸಿತ್ತು. ಒಂದೂವರೆ ತಿಂಗಳು ಮೊದಲೇ, ಧಾರವಾಡದ ನಾಲ್ಕು ಸಾಹಿತ್ಯಾಸಕ್ತರು ಈ ಬಗ್ಗೆ ನಿರ್ಣಯಿಸಿ, ಪ್ರತಿನಿಧಿಗಳಾಗಿ ನಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದೆವು.
 
ಡಾ. ಗಿರಡ್ಡಿ ಗೋವಿಂದರಾಜ, ಡಾ. ಲೋಹಿತ ನಾಯ್ಕರ, ಡಾ. ಶಶಿಧರ ನರೇಂದ್ರ ಮತ್ತು ನಾನು ಒಟ್ಟಾಗಿ ಯೋಜನೆಯನ್ನು ರೂಪಿಸಿದ್ದೆವು. ಅದಕ್ಕೆ ಇನ್ನೊಂದು ಮಹತ್ವದ ಕಾರಣವೂ ಇತ್ತು. ಧಾರವಾಡದವರೇ ಆದ, ಗಿರೀಶ ಕಾರ್ನಾಡರು ಈ ಮೇಳದಲ್ಲಿ ಭಾಗವಹಿಸುತ್ತಿದ್ದುದು ನಮಗೆ ಹೆಮ್ಮೆಯ ವಿಷಯವಾಗಿತ್ತು. ಅವರೊಂದಿಗೆ ವಿಚಾರಿಸಿದಾಗ, `ಜೈಪುರದಲ್ಲಿ ವಸತಿ ವ್ಯವಸ್ಥೆ ಬಹಳ ದುಬಾರಿ~ ಎಂದು ಮುನ್ಸೂಚನೆ ನೀಡಿದ್ದರು. ಲೋಹಿತ ನಾಯ್ಕರ ಅವರ ಸಂಪರ್ಕದಿಂದಾಗಿ ನಮಗೆ ರಾಜಸ್ತಾನ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ವಸತಿಯ ವ್ಯವಸ್ಥೆಯಾಗಿತ್ತು.

2012ರ ಜನವರಿ 20ರಿಂದ 24ರವರೆಗೆ, ಐದು ದಿನಗಳ `ಈ ಸಾಹಿತ್ಯಿಕ ಮೇಳ~ ವೀಕ್ಷಿಸುವ ಉದ್ದೇಶದಿಂದ 20ರ ಬೆಳಿಗ್ಗೆ ಜೈಪುರ ತಲುಪಿದೆವು. ಪ್ರಯಾಣದುದ್ದಕ್ಕೂ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳುತ್ತ, ಅತೀವ ಮಂಜಿನಿಂದ ಗಾಡಿಯು ಮಂದಗತಿಯಿಂದ ಸಾಗುತ್ತಾ ಆಗ್ರಾ ತಲುಪುವ ಹೊತ್ತಿಗೆ 21 ತಾಸು ತಡವಾಗಿತ್ತು. ನಾವು ಕಾಯ್ದಿರಿಸಿದ್ದ ಆಗ್ರಾ-ಅಜ್ಮೀರ್ ಇಂಟರ್‌ಸಿಟಿ

ಎಕ್ಸ್‌ಪ್ರೆಸ್ ತಪ್ಪಿಹೋಯಿತು. ಹಾಗಾಗಿ, ಬಸ್ಸಿನಲ್ಲಿ 5 ತಾಸು ಪ್ರಯಾಣ ಮಾಡಿ ಬೆಳಿಗ್ಗೆ 11ಕ್ಕೆ ಜೈಪುರ ತಲುಪಿದೆವು. ಅಲ್ಲಿಂದ ಮುಂದೆ ಎಲ್ಲವೂ ಸುಗಮವಾಗಿತ್ತು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿದ್ದರಿಂದ, ಭದ್ರತಾ ತಪಾಸಣೆ ಮುಗಿದ ಕೂಡಲೇ ನಮಗೆ `ಎಂಟ್ರಿ ಪಾಸ್~ ಕೊಟ್ಟರು. ಅದನ್ನು ಕೊರಳಿಗೆ ಹಾಕಿಕೊಂಡು ಅಡ್ಡಾಡತೊಡಗಿದೆವು.

`ಜೈಪುರ ಸಾಹಿತ್ಯೋತ್ಸವ~ ನಗರದ ಒಂದು ಪ್ರಮುಖ ಹವೇಲಿಯಾದ `ದಿಗ್ಗಿ ಪ್ಯಾಲೇಸ್~ ಎಂಬ ಆವರಣದಲ್ಲಿ ಏರ್ಪಾಡಾಗಿತ್ತು. ಈ ಬೃಹತ್ ಆವರಣದಲ್ಲಿ 5 ವೇದಿಕೆಗಳನ್ನು ನಿರ್ಮಿಸಿದ್ದರು. ಈ ಐದೂ ವೇದಿಕೆಗಳಲ್ಲಿ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 7.30ರವರೆಗೆ ಸಮಾನಾಂತರವಾಗಿ ಏಕಕಾಲಕ್ಕೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದೊಂದು ವೇದಿಕೆಯಲ್ಲಿ ಪ್ರತಿ ದಿನ ಆರು ಗೋಷ್ಠಿಗಳು ಜರುಗುತ್ತಿದ್ದವು. ಅಂದರೆ ದಿನಕ್ಕೆ 30 ಗೋಷ್ಠಿಗಳು. ಐದು ದಿನಗಳಿಗೆ ಒಟ್ಟು 136 ಗೋಷ್ಠಿಗಳು. ಈ ಗೋಷ್ಠಿಗಳಲ್ಲದೇ `ಪುಸ್ತಕ ಬಿಡುಗಡೆ~ ಕಾರ್ಯಕ್ರಮಗಳೂ ಇದ್ದವು.

ಪ್ರತಿದಿನ ಸಂಜೆ 7.30 ರಿಂದ ರಾತ್ರಿ 10ರವರೆಗೆ `ಸಂಗೀತ ವೇದಿಕೆ~ಯ ಮೇಲೆ ಸಂಗೀತ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಕಾರ್ಯಕ್ರಮಗಳಿಗೆ ಪ್ರವೇಶವನ್ನು ಟಿಕೇಟು ಮೂಲಕ ನೀಡಲಾಗುತ್ತಿತ್ತು.

`ಜೆಎಲ್‌ಎಫ್~ನ ಪ್ರಮುಖ ಆಕರ್ಷಣೆ ಅಂತರರಾಷ್ಟ್ರೀಯ ಪ್ರಸಿದ್ಧ ಲೇಖಕರ ಸಮಕ್ಷಮ ದರ್ಶನ ಹಾಗೂ ಅವರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ಆದರೆ ನಮ್ಮ ಆಸಕ್ತಿಯನ್ನು ಒಂದೇ ಕಡೆಗೆ ಸೀಮಿತಗೊಳಿಸಬೇಕಾಗುತ್ತಿತ್ತು. ಹೀಗಾಗಿ ಈ ಜಾತ್ರೆಯಲ್ಲಿ ಕುಳಿತು ಕೇಳುವವರಿಗಿಂತ ಅಡ್ಡಾಡುವ ಜನರೇ ಜಾಸ್ತಿಯಾಗಿದ್ದರು. ಇದಕ್ಕೆ ಇನ್ನೊಂದು ಕಾರಣವೂ ಇದೆ. ಕುಳಿತುಕೊಳ್ಳಲು ಜಾಗವೇ ಸಿಗುತ್ತಿರಲಿಲ್ಲ! ಐದು ವೇದಿಕೆಯೂ ಸೇರಿದರೆ ಸುಮಾರು 1500-2000 ಜನರಿಗಷ್ಟೇ ಆಸನದ ವ್ಯವಸ್ಥೆ.

ಆದರೆ ಜಾತ್ರೆಯಲ್ಲಿ ಇರುವವರ ಸಂಖ್ಯೆ ಐದಾರು ಸಾವಿರ, ಪ್ರತಿದಿನಕ್ಕೆ. ಸಂಘಟಕರು ಈ ವಿಷಯದಲ್ಲಿ ವಿಫಲರಾದರೆಂದೇ ಹೇಳಬೇಕು. ಅಥವಾ ಇಷ್ಟೊಂದು ಜನರನ್ನು ಅವರು ನಿರೀಕ್ಷಿಸಿರಲಿಕ್ಕಿಲ್ಲ! ವೀಕ್ಷಕರಲ್ಲಿ ಹಿರಿಯರ ಜೊತೆಗೇ ಸಾಕಷ್ಟು ಯುವಕರೂ ಇದ್ದುದು ಆಶಾದಾಯಕ ಸಂಗತಿ. ಆದರೆ ಇಡೀ ಜಾತ್ರೆ ಕೇವಲ ಮೇಲ್ವರ್ಗಕ್ಕೆ ಮಾತ್ರ ಮೀಸಲಾದಂತೆ ತೋರಿತು.

ಜಾತ್ರೆಯನ್ನು ಸಂಘಟಕರು `ಕುಂಭ ಮೇಳ~ಕ್ಕೆ ಹೋಲಿಸಿದ್ದು ಸಮರ್ಪಕವಾಗಿದೆ. `ಕುಂಭ ಮೇಳ~ಕ್ಕೆ ಹೋಗಿ ಬಂದ ಸಮಾಧಾನ ದೊರೆಯಬಹುದು. ಆದರೆ ತೃಪ್ತಿ ದೊರಕುವುದಿಲ್ಲ. ಅಮೆರಿಕ, ಯುರೋಪ್, ಆಫ್ರಿಕಾ ಮುಂತಾದ ದೇಶಗಳಿಂದ ಅನೇಕ ಪ್ರತಿಭೆಗಳು ಇಲ್ಲಿ ಸೇರಿ ಸಂವಾದ ನಡೆಸಿದ್ದು ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ತಂದುಕೊಟ್ಟರೆ, ಭಾರತದ ಎಲ್ಲ ಮೂಲೆಗಳಿಂದಲೂ ಈ ಜಾತ್ರೆಯನ್ನು ಸವಿಯಲೆಂದು ಬಂದ ಸಾಹಿತ್ಯಾಸಕ್ತರು ಕೇವಲ ಬಾಯಿ ಚಪ್ಪರಿಸಿ ಹೋಗುವಂತಾಯಿತು.

`ಜೆಎಲ್‌ಎಫ್~ನಲ್ಲಿ ಚರ್ಚೆಯಾದ ವಿಷಯಗಳಲ್ಲಿ ಪುರಾಣ, ಧರ್ಮ, ಕಲೆ, ಸಾಹಿತ್ಯ, ಪುರಾತತ್ವ, ಶಿಲ್ಪಕಲೆ, ಸಂಗೀತ, ರಾಜಕಾರಣ, ಸಂಪರ್ಕ ಮಾಧ್ಯಮ ಮುಂತಾದ ವಿಷಯಗಳು ಸೇರಿದ್ದವು. ಆದರೆ ಪ್ರಮುಖವಾಗಿ ಜನರನ್ನು ಸೆಳೆಯಲು, ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರನ್ನು ಕೇಂದ್ರವಾಗಿರಿಸಿಕೊಂಡು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಂಘಟಕರು ಇಡೀ `ಸಾಹಿತ್ಯ ಜಾತ್ರೆ~ಯ ದಿಕ್ಕನ್ನು ತಪ್ಪಿಸಿದರು. ಈ ವಿವಾದ ಗಂಭೀರ ಸಾಹಿತ್ಯ ಚರ್ಚೆಯನ್ನು ನುಂಗಿ ಹಾಕಿತು.

ಸಿನಿಮಾದಿಂದ ರಾಜಕಾರಣದಿಂದ, ಮಾಧ್ಯಮದಿಂದ ಪ್ರಖ್ಯಾತರಾದ ಅನೇಕ ಘಟಾನುಘಟಿಗಳನ್ನು ಸಂಘಟಕರು ಕಲೆಹಾಕಿದ್ದರಿಂದ ಈ ಸಂವಾದಕ್ಕೆ ಸಹಜವಾಗಿಯೇ ಜಾತ್ರೆಯ ಸ್ವರೂಪ ಬಂದಿತ್ತು. ಕೆಲವರ ಹೆಸರುಗಳನ್ನು ಉದಾಹರಿಸುವುದಾದರೆ- ಮಾಧ್ಯಮ ಕ್ಷೇತ್ರದಿಂದ ಬರ್ಖಾ ದತ್, ರಾಜಕಾರಣದಿಂದ ಕಪಿಲ್ ಸಿಬಲ್, ಸಿನಿಮಾದಿಂದ ಗುಲ್ಜಾರ್, ಅನುಪಮ ಖೇರ್, ಸಂಗೀತ ವಲಯದಿಂದ (ಖವ್ವಾಲಿ, ಜಾನಪದ ಸಂಗೀತ, ಭಕ್ತಿಗೀತೆ, ಇಲೆಕ್ಟ್ರಾನಿಕ್ ಸಂಗೀತ, ವಿಶ್ವಸಂಗೀತದ ಮಾದರಿಗಳೂ ಸೇರಿ) ಪಂ. ವಿಷ್ಣುಮೋಹನ ಭಟ್, ಉಸ್ತಾದ್ ಅಲ್ತಾಫ್ ಹುಸೇನ್ ಸಾರಂಗ, ಮುಂತಾದವರು.

ಈ ಜಾತ್ರೆಯ ನಿಜವಾದ ಪ್ರಯೋಜನವಾದದ್ದು ಯುವಜನರ ಸಂವಾದ ಮತ್ತು ಕಮ್ಮಟಗಳಲ್ಲಿ. ಸಾಹಿತ್ಯದ ದೃಷ್ಟಿಯಿಂದ, ಲೇಖಕರ `ಸಾಹಿತ್ಯ ವಾಚನ~ ಮತ್ತು `ಕಾವ್ಯ ವಾಚನ~ಗಳ ಜೊತೆಗೆ ಪರಿಣತರೊಡನೆ ನಡೆದ `ಸಂವಾದ~ಗಳು ಪ್ರೇಕ್ಷಕರಿಗೆ ಸಾಕಷ್ಟು ಮಾಹಿತಿ ಒದಗಿಸಿದವು. ಭಾರತೀಯ ಭಾಷೆಗಳಲ್ಲಿ ನಡೆಯುತ್ತಿರಬಹುದಾದ ಸಂಗತಿಗಳ ಬಗ್ಗೆ, ಕೇವಲ ಇಂಗ್ಲಿಷ್ ಮೂಲಕ ಪ್ರಸಿದ್ಧರಾದ ಲೇಖಕರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿತ್ತು. ಇದು ಅನಿವಾರ್ಯವೂ ಕೂಡ.

ಅಂತರರಾಷ್ಟ್ರೀಯ ಖ್ಯಾತಿಯ ನಾಟಕಕಾರರಾದ ಟಾಮ್ ಸ್ಟಾಪ್ಪರ್ಡ್, ಡೇವಿಡ್ ಹೇರ್ ಅವರ ಜೊತೆಗೆ ಭಾರತೀಯ ನಾಟಕಕಾರರಾದ ಗಿರೀಶ ಕಾರ್ನಾಡರು ಮತ್ತು ಅಶ್ಘರ ವಜಾಹತ ಅವರ ನಾಟಕ ಪ್ರಪಂಚದ ಸಂವಾದ ಅಪೂರ್ವವಾಗಿತ್ತು. ಕನ್ನಡದ ಮತ್ತೊಬ್ಬ ಕವಿ ಎಚ್.ಎಸ್. ಶಿವಪ್ರಕಾಶ್ ಅವರು, `ಮೀರಾಬಾಯಿ ಮತ್ತು ಅಕ್ಕಮಹಾದೇವಿ~ಯರ ಜೀವನಗಳ ಮೇಲಿನ ಸಂವಾದ ನಿರ್ವಹಿಸಿದರು.

ಇನ್ನೊಂದೆಡೆಗೆ ಗಿರೀಶ ಕಾರ್ನಾಡರು ‘Speaking Memory : The Craft of Memoir’ ಎಂಬ ವಿಚಾರ ಸಂಕಿರಣದಲ್ಲಿ ಸುಧೀರ ಕಕ್ಕರ ಅವರೊಡನೆ ವೇದಿಕೆ ಹಂಚಿಕೊಂಡು, ತಮ್ಮ `ಆಡಾಡತ ಆಯುಷ್ಯ~ (ಆತ್ಮ ಕತೆಗಳು) ಕೃತಿಯ ಕೆಲವು ಭಾಗಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಓದಿದರು. ಈ ಕಾರ್ಯಕ್ರಮ ದರ್ಬಾರ್ ಹಾಲ್‌ನಲ್ಲಿ ನಡೆದದ್ದರಿಂದ ಅದನ್ನು ವೀಕ್ಷಿಸುವ ಅವಕಾಶ ದೊರೆಯಲಿಲ್ಲ. ಹೊರಗಡೆಗೆ ಸ್ಕ್ರೀನ್ ಪರದೆಯ ಮೇಲೆ ನೋಡಲು ಅವಕಾಶವಿರಲಿಲ್ಲ.

`ಜೆಎಲ್‌ಎಫ್~ನ ಈ ವರ್ಷದ ಇನ್ನೊಂದು ವಿಶೇಷ, ಉತ್ಸವದ ಪ್ರಾಯೋಜಕರು ಈ ವರ್ಷದಿಂದ `ದಕ್ಷಿಣ ಏಷ್ಯಾ ಪುರಸ್ಕಾರ 2012~ ಎನ್ನುವ ಬಹುಮಾನವನ್ನು ಘೋಷಿಸಿದ್ದು. ಬಹುಮಾನದ ಮೊತ್ತ 50 ಸಾವಿರ ಡಾಲರುಗಳು. (ಸ್ಪರ್ಧೆಗೆ ನಾಮಕರಣಗೊಂಡ ಕೃತಿಗಳ ಅಂತಿಮ ಪಟ್ಟಿಯಲ್ಲಿ ಯು.ಆರ್.ಅನಂತಮೂರ್ತಿ ಅವರ `ಭಾರತೀಪುರ~ವೂ ಇತ್ತು).
 
ಶ್ರೀಲಂಕಾದ ಶೇಹನ್ ಕರುಣ ತಿಲಕೆ ಎಂಬ ಬರಹಗಾರನ ಮೊದಲ ಕೃತಿ `ಇಜ್ಞಿಞ್ಠ~ ಎಂಬ ಕಾದಂಬರಿಗೆ ಪುರಸ್ಕಾರ ದೊರೆಯಿತು. ಆ ಕ್ಷಣದಿಂದ ಶೇಹನ್ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿ ಬಿಟ್ಟರು. ಏಕಾಏಕಿ ಎಲ್ಲರ ಕೇಂದ್ರ ವ್ಯಕ್ತಿಯಾದುದರಿಂದ ಆತ ಅನುಭವಿಸುತ್ತಿದ್ದ ಮುಜುಗರ ಕಣ್ಣಿಗೆ ಕಾಣಿಸುತ್ತಿತ್ತು.

ಜೈಪುರದಂಥ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳದಲ್ಲಿ ಈ ಸಾಹಿತ್ಯ ಜಾತ್ರೆ ಯೋಜಿಸಿದ್ದರಿಂದ, ಈ ಕಾರ್ಯಕ್ರಮವನ್ನು ಕೇಂದ್ರವಾಗಿರಿಸಿಕೊಂಡು, ಜೈಪುರವನ್ನು ನೋಡಲೆಂದೇ ಅನೇಕ ದೇಶಗಳಿಂದ ವಿದೇಶಿಯರು ಬಂದದ್ದರು. ಅವರು ನಗರವನ್ನು ಸುತ್ತಾಡಲು ಹೋಗುತ್ತಿದ್ದುದರಿಂದ ಕಾರ್ಯಕ್ರಮದ ಸ್ಥಳ ತುಂಬಿ ತುಳುಕುತ್ತಿದ್ದರೂ ತೊಂದರೆಯಾಗಲಿಲ್ಲ.
ಆದರೆ ಉತ್ಸವದುದ್ದಕ್ಕೂ ಸಲ್ಮಾನ್ ರಶ್ದಿ ಆಗಮನದ ಊಹಾಪೋಹಗಳಿಂದ ಅತಂಕ ತುಂಬಿ ತುಳುಕುತ್ತಿತ್ತು. ಕೆಲವು ಬರಹಗಾರರು ವಿವಾದಾಸ್ಪದ `ಸಟಾನಿಕ್ ವರ್ಸಸ್~ ಕೃತಿಯ ಕೆಲವು ಭಾಗಗಳನ್ನು ವೇದಿಕೆಯಿಂದ ಓದಿ ಬಿಟ್ಟದ್ದರಿಂದ, ವಿವಾದ ಉಲ್ಬಣವಾಗಿ ಆತಂಕ ಇಮ್ಮಡಿಗೊಂಡಿತು.

ಮುಂದಿನ ಉತ್ಸವಗಳಲ್ಲಿನ ಸಾಹಿತ್ಯಿಕ ಚರ್ಚೆಗಳಲ್ಲಿ ಗಂಭೀರವಾದ ಚರ್ಚೆಗೆ ಅವಕಾಶ ಮಾಡಿಕೊಡುವ ಜವಾಬ್ದಾರಿ ಸಂಘಟಕರದ್ದು. ಆದರೆ ಇತ್ತೀಚೆಗೆ ಜನಸಮುದಾಯವನ್ನು ಆಕರ್ಷಿಸುವಲ್ಲಿ, ಮಾಧ್ಯಮದವರ ದೃಷ್ಟಿಯನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ, ಸಂಘಟಕರು ವಿವಾದಾತ್ಮಕ ವಿಷಯಗಳನ್ನು ಪ್ರಮುಖವಾಗಿಸುತ್ತಾರೇನೋ ಎನ್ನುವ ಸಂಶಯ ಸಾಮಾನ್ಯ ಸಾಹಿತ್ಯಾಸಕ್ತರಲ್ಲಿ ಮೂಡಿದರೆ ತಪ್ಪೇನಿಲ್ಲ.

ಕನ್ನಡಿಗರಾದ, ಭಾರತೀಯರಾದ ನಾವು ಅಪೇಕ್ಷಿಸಿದ ಮಟ್ಟದ ಸಾಹಿತ್ಯಿಕ ಸಂವಾದವನ್ನು ಕಾಣದೇ ಕೇವಲ ದೊಡ್ಡ ದೊಡ್ಡ ವ್ಯಕ್ತಿಗಳ ದರ್ಶನದಿಂದ ತೃಪ್ತರಾಗಿ ಹಿಂತಿರುಗಬೇಕಾಯಿತು.

ಆದರೆ, ಕನ್ನಡದಲ್ಲಿ ಈ ರೀತಿಯ `ಸಾಹಿತ್ಯಿಕ ಸಂವಾದ~ವನ್ನು ಏರ್ಪಡಿಸಿ ಹೊಸ ಲೇಖಕರಿಗೆ ವೇದಿಕೆ ಒದಗಿಸಿಕೊಡುವ, ಅವರ ಕೃತಿಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಇಂಥ ಸಾಹಿತ್ಯ ಜಾತ್ರೆಯ ಅನಿವಾರ್ಯತೆಯನ್ನು  ಮನಗಂಡೆವು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT