ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ನಿಘಂಟಿನ ಅಭಿವೃದ್ಧಿ ಕಾರ್ಯ ಆರಂಭ

Last Updated 23 ಜನವರಿ 2011, 19:55 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲೇ ವಿನೂತನವಾದ ಜಾನಪದ ನಿಘಂಟಿನ ಅಭಿವೃದ್ಧಿ ಕಾರ್ಯವು ಕರ್ನಾಟಕ ಜಾನಪದ ಅಕಾಡೆಮಿಯಲ್ಲಿ ಆರಂಭವಾಗಿದೆ. ಈ ಯೋಜನೆ ಪೂರ್ಣವಾಗಿ, ಜಾನಪದ ನಿಘಂಟು ಪುಸ್ತಕ ರೂಪದಲ್ಲಿ ಲಭ್ಯವಾದಾಗ ಕನ್ನಡದ ಲಕ್ಷಾಂತರ ಜಾನಪದ/ದೇಸಿ ಪದಗಳು ಅರ್ಥಸಹಿತ, ವ್ಯವಸ್ಥಿತವಾಗಿ ಒಂದೆಡೆ ಲಭ್ಯವಾಗಲಿವೆ.

 ಕನ್ನಡ ಜಾನಪದ ನಿಘಂಟು ಯೋಜನೆಯ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ‘ನಮ್ಮ ಅಸಂಖ್ಯ ಬರಹಗಾರರಿಗೆ ಕೆಲವು ಸಂದರ್ಭಗಳಲ್ಲಿ ಕನ್ನಡದ್ದೇ ಆದ ಪದ ಸಿಗದೆ ಅನಿವಾರ್ಯವಾಗಿ ಆಂಗ್ಲ ಭಾಷೆಯ ಪದ ಬಳಸಬೇಕಾದ ಪರಿಸ್ಥಿತಿ ಇದೆ. ಆದರೆ ಈ ಯೋಜನೆ ಪೂರ್ಣಗೊಂಡಾಗ ಈ ಸಂಕಷ್ಟ ಇಲ್ಲವಾಗಲಿದೆ’ ಎಂದರು.

ವಿನೂತನ ನಿಘಂಟು: ಈಗಾಗಲೇ ಲಭ್ಯವಿರುವ ಅನೇಕ ಕನ್ನಡ ನಿಘಂಟುಗಳಲ್ಲಿ ಲಕ್ಷಾಂತರ ದೇಸಿ ಪದಗಳ ಬಗ್ಗೆ ಮಾಹಿತಿ ಇಲ್ಲ.ಅದರಲ್ಲೂ ಕೆಲವೊಂದು ಪ್ರಾಂತ್ಯಕ್ಕೆ ಸೀಮಿತವಾದ ವಿಶಿಷ್ಟ ಪದಗಳ ಬಗ್ಗೆ ಸರಿಯಾದ ಮಾಹಿತಿಯೇ ನಮ್ಮ ಪದಕೋಶಗಳಲ್ಲಿ ಲಭ್ಯವಿಲ್ಲ.

 ಮುಟ್ಟಿದರೆ ಮುನಿ ಸಸ್ಯವನ್ನು ಒಂದು ಪ್ರದೇಶದಲ್ಲಿ ‘ಮುಟ್ಟಿದರೆ ಮುಚಕ’ ಎಂದು ಕರೆದರೆ ಇನ್ನೊಂದು ಪ್ರದೇಶದಲ್ಲಿ ‘ಪತಿವ್ರತೆ’ ಎಂದು ಕರೆಯುತ್ತಾರೆ. ಆದರೆ ಇಂಥ ವಿವಿಧ ದೇಸಿ ಪದಗಳ ಕುರಿತು ಸೂಕ್ತ ಮಾಹಿತಿ ನಿಘಂಟಿನ ರೂಪದಲ್ಲಿ ನಮ್ಮಲ್ಲಿ ಲಭ್ಯವಿಲ್ಲ. ಇಂಥ ದ್ದೊಂದು ನಿಘಂಟಿನ ಕೊರತೆಯನ್ನು ತುಂಬಲು ಜಾನಪದ ಅಕಾಡೆಮಿ ಈ ನಿಘಂಟು ರಚನೆಗೆ ಅಣಿಯಾಗಿದೆ.

ನಿಘಂಟಿನ ಅಗತ್ಯ ಕಂಡದ್ದು ಇಲ್ಲಿ: ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸುವ ಕನ್ನಡ ನುಡಿತೇರು ಕಾರ್ಯಕ್ರಮದ ಅಂಗವಾಗಿ ರಾಜ್ಯದ ವಿವಿಧೆಡೆ ಸಾಹಿತ್ಯಿಕ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಗೋಷ್ಠಿಗಳಲ್ಲಿ ಆಯಾ ಪ್ರದೇಶದಲ್ಲಿ ರೂಢಿಯಲ್ಲಿರುವ ವಿಶಿಷ್ಟ ಪದಗಳನ್ನು ಬಳಸಲಾಯಿತು.ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಯೂ ದೊರೆಯಿತು’ ಎಂದು ಚನ್ನಬಸಪ್ಪ ಅವರು ನಿಘಂಟು ರಚನೆ ಆರಂಭದ ಕುರಿತು ವಿವರಿಸುತ್ತಾರೆ.

‘ನಮ್ಮ ದೇಸಿ ಪದಗಳ ಅರ್ಥ ವಿವರಿಸುವ ಒಂದೆರಡು ನಿಘಂಟು ಕನ್ನಡದಲ್ಲಿ ಲಭ್ಯವಿವೆಯಾದರೂ ಅವು ಸಮಗ್ರವಾಗಿಲ್ಲ. ದೇಸಿ ಪದಗಳ ಅರ್ಥವನ್ನು ಸಮಗ್ರವಾಗಿ ವಿವರಿಸಬಲ್ಲ ನಿಘಂಟೊಂದು ಲಭ್ಯವಾದರೆ ನಮ್ಮ ಸಾಹಿತ್ಯದಲ್ಲಿ ಆ ಪದಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು. ಭಾಷೆಯ ಶ್ರೀಮಂತಿಕೆಗೆ ಇಂಥದ್ದೊಂದು ನಿಘಂಟಿನ ಅಗತ್ಯ ಬಹಳ ಇದೆ’ ಎಂದು ಅವರು ಹೇಳುತ್ತಾರೆ.

‘ಗೋಷ್ಠಿಯ ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ಸದಸ್ಯರಾದ ಡಾ. ರಂಗಾರೆಡ್ಡಿ ಕೋಡಿರಾಂಪುರ ಮತ್ತಿತರರ ಎದುರು ಇಂಥದೊಂದು ನಿಘಂಟಿನ ಅಗತ್ಯದ ಕುರಿತು ಮಾತುಕತೆ ನಡೆಸಿದೆ. ಚಂದ್ರು ಈ ಯೋಜನೆಗೆ ಒಪ್ಪಿಗೆ ಸೂಚಿಸಿದರು. ಯೋಜನೆಗೆ ಬೇಕಾದ 70 ಲಕ್ಷ ರೂಪಾಯಿಯನ್ನು ನೀಡುವುದಾಗಿ ತಿಳಿಸಿದರು. ಅದರಲ್ಲಿ 25 ಲಕ್ಷ ರೂಪಾಯಿ ಈಗಾಗಲೇ ಸಿಕ್ಕಿದೆ’ ಎಂದು ಮಾಹಿತಿ ನೀಡಿದರು.

 ‘ಅನಂತರ ಪ್ರೊ.ಜಿ.ವೆಂಕಟಸುಬ್ಬಯ್ಯ, ಡಾ.ಎಂ.ಎಂ. ಕಲಬುರ್ಗಿ ಮತ್ತು ಇನ್ನೂ ಅನೇಕ ವಿದ್ವಾಂಸರ ಜೊತೆ ನಿಘಂಟಿನ ಸ್ವರೂಪದ ಕುರಿತು ಚರ್ಚೆ ನಡೆಸಿದೆವು. ಅವರ ಸಲಹೆಯ ಮೇರೆಗೆ 15 ಮಂದಿಯ ನಿಘಂಟು ಸಂಪಾದನಾ ಸಮಿತಿಯನ್ನೂ ರಚಿಸಿದ್ದೇವೆ. 15 ಮಂದಿಯಲ್ಲಿ ಪ್ರತಿಯೊಬ್ಬರನ್ನೂ ಪ್ರಾದೇಶಿಕ ಪ್ರಾತಿನಿಧ್ಯದ ಮೇಲೆ ಆಯ್ಕೆ ಮಾಡಲಾಯಿತು. ಪ್ರತಿಯೊಬ್ಬ ಸದಸ್ಯರೂ ತಲಾ ಎರಡು ಜಿಲ್ಲೆಗಳನ್ನು ಪ್ರತಿನಿಧಿಸುತ್ತಾರೆ’ ಎಂದರು.

ಕ್ಷೇತ್ರ ಕಾರ್ಯಕರ್ತರು: ಸಂಪಾದನಾ ಸಮಿತಿಯ ಸದಸ್ಯರಿಗೆ ಸಹಾಯಕವಾಗಿ ಪ್ರತಿ ಜಿಲ್ಲೆಗಳಲ್ಲೂ ಕ್ಷೇತ್ರ ಕಾರ್ಯಕರ್ತರಿದ್ದಾರೆ.ಇವರು ಪ್ರತಿ ಹಳ್ಳಿಗೆ ತೆರಳಿ ಅಲ್ಲಿನ ಜನಪದ ಪದಗಳನ್ನು, ಅವುಗಳ ಅರ್ಥವನ್ನು ಸಂಗ್ರಹಿಸುತ್ತಾರೆ.ಆಯಾ ಪ್ರದೇಶದ ಸಾಹಿತ್ಯ ಕೃತಿಗಳಿಂದಲೂ ಜನಪದೀಯ ಪದ-ಅರ್ಥಗಳನ್ನು ಸಂಗ್ರಹಿಸಲಾಗುವುದು.

ಕಥೆ, ಕಾದಂಬರಿ, ಕಾವ್ಯಗಳಲ್ಲಿ ಹೇರಳವಾಗಿರುವ ಜಾನಪದ ಪದಗಳನ್ನೂ ಕಂಪ್ಯೂಟರ್‌ಗೆ ಉಣಿಸುವ ಕಾರ್ಯ ಕರ್ನಾಟಕ ಜಾನಪದ ಅಕಾಡೆಮಿಯಲ್ಲಿ ಭರದಿಂದ ಸಾಗುತ್ತಿದೆ. ‘ಕ್ಷೇತ್ರ ಕಾರ್ಯಕರ್ತರ ಮೂಲಕ ಕಳೆದ ಮೂರು ತಿಂಗಳಿನಲ್ಲಿ ಸುಮಾರು 1.5 ಲಕ್ಷ ಜನಪದ ಪದಗಳನ್ನು ಸಂಗ್ರಹಿಸಲಾಗಿದೆ.ಈ ಕಾರ್ಯದಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳ ಸಹಾಯವನ್ನು ಪಡೆದುಕೊಂಡಿದ್ದೇವೆ’ ಎಂದು ಚನ್ನಬಸಪ್ಪ ಅವರು ಮಾಹಿತಿ ನೀಡಿದರು.

ಮುಂದಿನ ಮೂರು ತಿಂಗಳಿನಲ್ಲಿ ಪದ ಸಂಗ್ರಹಣೆಯ ಕಾರ್ಯವನ್ನು ಮುಗಿಸುವ ಗುರಿ ಹೊಂದಲಾಗಿದೆ. ಈ ನಿಘಂಟು ಒಟ್ಟು ಮೂರು ಸಂಪುಟಗಳಲ್ಲಿ ಮುದ್ರಣವಾಗಲಿದೆ. ಮೊದಲ ಸಂಪುಟ ಏಪ್ರಿಲ್-ಮೇ ತಿಂಗಳಿನಲ್ಲಿ ಲೋಕಾರ್ಪಣಗೊಳ್ಳಲಿದೆ. ಇನ್ನುಳಿದ ಎರಡು ಸಂಪುಟಗಳು ಮುಂದಿನ 5-6 ತಿಂಗಳಿನಲ್ಲಿ ಬಿಡುಗಡೆಯಾಗಲಿವೆ.

‘ರಾಜ್ಯದಲ್ಲಿ ಮುಂದೆ ತಲೆ ಎತ್ತಲಿರುವ ಜಾನಪದ ವಿಶ್ವವಿದ್ಯಾಲಯಕ್ಕೆ ಒಂದು ಅಡಿಪಾಯದ ರೀತಿ ಈ ನಿಘಂಟು ಸಿದ್ಧವಾಗುತ್ತಿದೆ. ಇಷ್ಟು ಸಮಗ್ರ ಜಾನಪದ ನಿಘಂಟು ಕನ್ನಡದಲ್ಲಿ ಇದುವರೆಗೆ ಬಂದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT