ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ನೆನಪಿನ ಭಾಷೆ: ಡಾ. ಕಂಬಾರ

Last Updated 7 ಅಕ್ಟೋಬರ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: `ಯಾವುದೇ ಭಾಷೆಗೆ ಕನಸು ಹಾಗೂ ಭಾವನೆಗಳಿರಬೇಕು. ಇಂತಹ ಮೌಲ್ಯಗಳಿದ್ದರೆ ಅದು ಉತ್ತಮ ಭಾಷೆಯಾಗುತ್ತದೆ~ ಎಂದು ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಇಲ್ಲಿ ಅಭಿಪ್ರಾಯಪಟ್ಟರು.

ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಕಂಬಾರ ಸಂಭ್ರಮ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಇಂದಿನ ಭಾಷೆಯ ಪರಿಸ್ಥಿತಿಯ ಬಗ್ಗೆ ವಿಷಾದಿಸಿದ ಅವರು, ಜನಪದ ಮತ್ತು ವಚನ ಭಾಷೆಗೆ ವಯಸ್ಸಿಲ್ಲ. ವಚನವು ಕನಸಿನ ಭಾಷೆಯಾದರೆ, ಜಾನಪದ ಭಾಷೆ ನೆನಪಿನ ಭಾಷೆಯಾಗಿದೆ~ ಎಂದು ಹೇಳಿದರು.

ಭಾಷೆಯಲ್ಲಿ ಇಂತಹ ಸಮ್ಮಿಶ್ರಣಗಳು ಬೆರೆತಾಗ ಭಾಷೆಗೆ ಉತ್ತಮ ಸ್ಥಾನ ದೊರೆಯುತ್ತದೆ. ಈ ಗುಣಗಳಿಂದಲೇ ಜಾನಪದ ಮತ್ತು ವಚನ ಭಾಷೆಗಳು ಇಂದಿಗೂ ಆಧುನಿಕ ಭಾಷೆಯ ಸ್ಥಾನದಲ್ಲಿವೆ ಎಂದರು.

 ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿದ ನಾನು ಲಾವಣಿ ಹಾಗೂ ಬಯಲಾಟದ ಜತೆ ಬೆಳೆದು ಬಂದೆ. ಈ ಸನ್ನಿವೇಶಗಳೇ ನನ್ನನ್ನು ಕವಿಯಾಗಿ ಮಾಡಲು ಪ್ರಯತ್ನಿಸಿದ್ದು ಎಂದ ಅವರು, ಅದೇ ತಳಹದಿಯ ಮೇಲೆ ರಂಗಭೂಮಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಲು ಸ್ಫೂರ್ತಿಯಾಯಿತು. ವಿದೇಶದಲ್ಲಿ ಪಡೆದ ಒಂದೊಂದು ಅನುಭವಗಳೇ ಗ್ರಾಮೀಣ ಭಾಷೆ ಹಾಗೂ ರಂಗಭೂಮಿಗೆ ನೆಲೆ ಕಲ್ಪಿಸಲು ಪ್ರೇರಣೆಯಾಯಿತು ಎಂದು ನೆನೆದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, `ಇಂದಿನ ಚಿತ್ರರಂಗದ ಭಾಷೆ ಮುಜುಗರಕ್ಕೆ ಎಡೆಮಾಡಿಕೊಟ್ಟಿದೆ. ಇಂತಹ ಸನ್ನಿವೇಶದಲ್ಲಿ ಚಲನಚಿತ್ರ ರಂಗಕ್ಕೆ ಕಂಬಾರರಂತ ನಿರ್ದೇಶಕರ ಅವಶ್ಯಕತೆ ಇದೆ~ ಎಂದು ಅವರು ಹೇಳಿದರು.

`ರಂಗಭೂಮಿಗೆ ಹೊಸ ಆಯಾಮ ದೊರೆತಿದ್ದು ಕಂಬಾರರಿಂದಲೇ. ತಮ್ಮ ಅನೇಕ ಪ್ರಯೋಗಗಳ ಮೂಲಕ ರಂಗಕರ್ಮಿಗಳಿಗೆ ನೆಲೆ ಒದಗಿಸಿಕೊಡಲು ಕಾರಣರಾದವರು. 30 ದಶಕಗಳ ಹಿಂದಿನ ರಂಗಭೂಮಿಯ ವೈಭವನ್ನು ಮತ್ತೆ ಕಟ್ಟಲು ಕಂಬಾರರು ಪ್ರಯತ್ನಿಸಬೇಕು ಎಂದು ಕೋರಿದರು.

`ಕಂಬಾರರು ಜನಪದ ಭಾಷೆಯನ್ನು ಈ ಹೊತ್ತಿನ ಕಾಲಕ್ಕೆ ಒಗ್ಗಿಸಿಕೊಳ್ಳುವಂತೆ ಪ್ರಯತ್ನಿಸಿ ಯಶಸ್ಸು ಗಳಿಸಿದ ದೇಶೀ ಮಾಂತ್ರಿಕ. ಗಡಿನಾಡ ಭಾಷೆಯನ್ನು ಕನ್ನಡ ಲೋಕಕ್ಕೆ ಪರಿಚಯಿಸಿದ ಕೀರ್ತಿ ಕಂಬಾರರಿಗೆ ಸಲ್ಲಬೇಕು ಎಂದು ಸಾಹಿತಿ ಡಾ.ಎಲ್.ಹನುಮಂತಯ್ಯ ಹೇಳಿದರು.

ಚಿಂತಕರಾದ ಪ್ರೊ.ಜಿ.ಕೆ.ಗೋವಿಂದರಾವ್,  ಡಾ.ಕೆ.ಮರುಳಸಿದ್ದಪ್ಪ, ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಎಲ್.ಎನ್.ಮುಕುಂದರಾಜ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT