ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಪ್ರಶಸ್ತಿ ಪ್ರಕಟ ಆಯ್ಕೆ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯ 2011ರ ಸಾಲಿನ ಕ್ಷೇತ್ರ ತಜ್ಞ ಪ್ರಶಸ್ತಿಗಾಗಿ ಜಾನಪದ ವಿದ್ವಾಂಸರಾದ ಪ್ರೊ.ಸೂಗಯ್ಯ ಹಿರೇಮಠ ಮತ್ತು ಡಾ.ಮೀರಾಸಾಬಿಹಳ್ಳಿ ಶಿವಣ್ಣ ಆಯ್ಕೆಯಾಗಿದ್ದಾರೆ. ವಾರ್ಷಿಕ ಪ್ರಶಸ್ತಿಗಳಿಗೆ ಜಿಲ್ಲೆಗೆ ಒಬ್ಬರಂತೆ 30 ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

`ಹಿರೇಮಠ ಅವರಿಗೆ `ಡಾ.ಬಿ.ಎಸ್.ಗದ್ದಗಿಮಠ ಪ್ರಶಸ್ತಿ~ ಹಾಗೂ ಶಿವಣ್ಣ ಅವರಿಗೆ `ಡಾ.ಜೀ.ಶಂ.ಪರಮಶಿವಯ್ಯ ಪ್ರಶಸ್ತಿ~ ಲಭಿಸಿದೆ. ಈ ಪ್ರಶಸ್ತಿಯು ತಲಾ ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಜಿಲ್ಲಾವಾರು ಆಯ್ಕೆಯಾಗಿರುವ ಜಾನಪದ ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಸಾವಿರ ರೂಪಾಯಿ ನಗದು ಮತ್ತು ಫಲಕ ನೀಡಿ ಗೌರವಿಸಲಾಗುವುದು~ ಎಂದು ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಪ್ರಶಸ್ತಿಗೆ ಆಯ್ಕೆ ಮಾಡುವಾಗ ಹಿರಿಯ ಜನಪದ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಅಕಾಡೆಮಿ ಸದಸ್ಯರು ಆಯಾ ಭಾಗದ ಪ್ರತಿಭಾವಂತರನ್ನು ಗುರುತಿಸುವಲ್ಲಿ ನೆರವಾಗಿದ್ದಾರೆ. ಮಾರ್ಚ್ 3ರಂದು ಚಿತ್ರದುರ್ಗದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು~ ಎಂದು ಅವರು ಹೇಳಿದರು.
`ಅಕಾಡೆಮಿ ಸ್ಥಾಪನೆಯಾಗಿ 31 ವರ್ಷಗಳಾಗಿವೆ. ಅಕಾಡೆಮಿಯಿಂದ ಇದುವರೆಗೆ 75 ಕ್ಷೇತ್ರ ತಜ್ಞರು ಮತ್ತು 715 ಜನಪದ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. 76 ಗ್ರಂಥಗಳಿಗೆ ಬಹುಮಾನ ನೀಡಿದೆ. 135ಕ್ಕೂ ಹೆಚ್ಚು ಪ್ರಕಟಣೆಗಳನ್ನು ಮಾಡಿದೆ~ ಎಂದು ಅವರು ತಿಳಿಸಿದರು.

`ಜಾನಪದ ನಿಘಂಟುವಿನ ಮೂರು ಸಂಪುಟಗಳು ಮುಂದಿನ ತಿಂಗಳು ಬಿಡುಗಡೆ ಆಗಲಿವೆ. ಸಮಗ್ರ ಜಾನಪದ ಮತ್ತು ಯಕ್ಷಗಾನ ಸಾಹಿತ್ಯದ 100 ಸಂಪುಟಗಳ ಪೈಕಿ 45 ಬಿಡುಗಡೆ ಮಾಡಿವೆ, 8 ಮುದ್ರಣಗೊಳ್ಳುತ್ತಿವೆ~ ಎಂದು ಅವರು ವಿವರಿಸಿದರು.

`ಜನಪದ ಕಲಾವಿದರ ಕ್ಷೇಮ ನಿಧಿಗೆ ಸರ್ಕಾರ 20 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಸಾರ್ವಜನಿಕರಿಂದ 5 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ. ನನಗೆ ನೀಡುತ್ತಿದ್ದ ಗೌರವ ಧನ ಮತ್ತು ಭತ್ಯೆಗಳನ್ನು ಕ್ಷೇಮ ನಿಧಿಗೆ ನೀಡಿದ್ದೇನೆ. ಕನಿಷ್ಠ ಒಂದು ಕೋಟಿ ರೂಪಾಯಿ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿ ಹಣದಲ್ಲಿ ಕಷ್ಟದಲ್ಲಿರುವ ಕಲಾವಿದರಿಗೆ ಧನಸಹಾಯ ಮಾಡಬೇಕೆಂಬುದು ನಿಧಿಯ ಉದ್ದೇಶವಾಗಿದೆ~ ಎಂದು ಅವರು ಹೇಳಿದರು. ರಿಜಿಸ್ಟ್ರಾರ್ ಬಿ.ಎನ್.ಪರಡ್ಡಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT